ಪದ್ಮಶ್ರೀ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾನೆ

ಪದ್ಮಶ್ರೀ ಪುರಸ್ಕೃತರಾದ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರದು 35 ವರ್ಷಗಳಷ್ಟು ಸ್ತನ ಕ್ಯಾನ್ಸರ್ ಶಸ್ತ್ರಕ್ರಿಯಾ ತಜ್ಞರಾಗಿ ಸುದೀರ್ಘ ಸೇವೆ‌. ಸೇವೆ ಮಾಡುವ ಸಲುವಾಗಿಯೇ ಅವಿವಾಹಿತರಾಗಿ ಉಳಿದ ತ್ಯಾಗಮಯಿ, ಅವರ ಆದರ್ಶಜೀವನದ ಕುರಿತು ಖ್ಯಾತ ಬರಹಗಾರರಾದ ಕೆ ರಾಜಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಾರ್ಥಕ ಸೇವೆಗಾಗಿ, ಅಪ್ರತಿಮ ಸಾಧಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರಿಗೊಂದು ಅಕ್ಷರ ನೀರಾಜನ.
ಡಾ. ವಿಜಯಲಕ್ಷ್ಮಿ ದೇಶಮಾನೆ ಕಡು ಬಡತನವೆಂಬ ಕೆಸರಿನಲ್ಲಿ ಅರಳಿದ ಕಮಲ. ಬೆಂಕಿಯಲ್ಲಿ ಅರಳಿದ ಹೂವು ಎಂದರೂ ಸರಿ. ದೇಶದ ಪ್ರಸಿದ್ಧ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರು. ಬೆಂಗಳೂರಿನ ಕಿದ್ವಾಯ್ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರಾಗಿದ್ದವರು.

ಹುಟ್ಟಿದ್ದು, ಬೆಳೆದಿದ್ದು ಕಲ್ಬುರ್ಗಿಯ ಕೊಳೆಗೇರಿಯೊಂದರಲ್ಲಿ. ಆದರ್ಶಗಳನ್ನೇ ಹಾಸಿ ಹೊದ್ದಿದ್ದ ಚಮ್ಮಾರ ಬಾಬುರಾವ್ ಅವರ ಹೆಮ್ಮೆಯ ಮಗಳು. ಅವರು ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೆ ಒಳಗಾಗಿದ್ದವರು. ಮನೆಯಲ್ಲಿ ಹತ್ತಿರ ಹತ್ತಿರ ಹತ್ತು ಮಂದಿ. ಒಂದು ಹೊತ್ತಿನ ತುತ್ತಿನ ಚೀಲಕ್ಕೂ ತತ್ವಾರ. ಆದರೂ ಬಾಬುರಾಯರು ಎದೆಗುಂದದೆ ತಮ್ಮ ಯಾವ ಮಗುವನ್ನೂ ಶಿಕ್ಷಣದಿಂದ ವಂಚಿತರನ್ನಾಗಿಸಲಿಲ್ಲ. ಬೆವರು ಬಸಿದು, ಅವರೆಲ್ಲರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಿದರು.

ಅಮ್ಮ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿದ್ದರು. ವಿಜಯಲಕ್ಷ್ಮಿ ತಮ್ಮ ಅಣ್ಣನ ಜೊತೆ ತಾವೂ ತಲೆಯ ಮೇಲೆ ತರಕಾರಿ ಬುಟ್ಟಿ ಹೊತ್ತು ಲಿಂಗಾಯತರ ವಾಡೆಗಳಲ್ಲಿ ಮಾರಾಟ ಮಾಡಿ ಕುಟುಂಬಕ್ಕೆ ಆಸರೆ ಆಗಿದ್ದುಂಟು. ಜಾಣೆ ವಿಜಯಲಕ್ಷ್ಮಿ ಎಂಬಿಬಿಎಸ್‌ಗೆ ಆಯ್ಕೆಯಾದರು. ಆದರೆ ಪ್ರವೇಶಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಮಗಳ ಎಂಬಿಬಿಎಸ್ ಪ್ರವೇಶಕ್ಕಾಗಿ ಅವರ ತಾಯಿ ತಮ್ಮ ಮಾಂಗಲ್ಯವನ್ನೇ ಮಾರಬೇಕಾಯಿತು. ಮುಂದೆ ನಡೆದದ್ದು ಪವಾಡ. ಡಾ. ವಿಜಯಲಕ್ಷ್ಮಿ ಅವರು ಈ ದೇಶದ ಖ್ಯಾತ ‘ಕ್ಯಾನ್ಸರ್ ಶಸ್ತ್ರವೈದ್ಯ’ರಲ್ಲಿ ಒಬ್ಬರಾಗಿ ರೂಪುಗೊಂಡರು. ಅತ್ಯಂತ ಶ್ರದ್ಧೆ ಮತ್ತು ಪರಿಣತಿಯನ್ನು ಬೇಡುವ ಸಂಕೀರ್ಣ ಕೌಶಲವದು. ಕ್ಯಾನ್ಸರ್‌ಗೆ ಶಸ್ತ್ರಕ್ರಿಯೆ ಎಂದರೆ ಸಾಮಾನ್ಯವಲ್ಲ. ಅಂತಹ ಕೈಚಳಕವನ್ನು ನಿರಂತರ ಅಭ್ಯಾಸದ ಮೂಲಕ ಸಿದ್ಧಿಸಿಕೊಂಡರು. 40 ವರ್ಷಗಳಿಂದ ಅಹರ್ನಿಶಿ, ರೋಗಿಗಳ ಸೇವೆಯಲ್ಲಿ ಕಳೆದಿದ್ದಾರೆ.

ಬಾಲ್ಯದಲ್ಲಿ ಇವರಿಗೆ ಶಿಕ್ಷಕಿ ಆಗಬೇಕೆಂಬ ಅದಮ್ಯ ಬಯಕೆ. ಆದರೆ ತಂದೆ ಬಾಬುರಾವ್‌‌ರಿಗೆ ಮಗಳು ವೈದ್ಯಳಾಗಬೇಕೆಂಬ ಹಂಬಲ. ಹುಟ್ಟಿನಿಂದ ತಮ್ಮ ಜನಾಂಗಕ್ಕೆ ಚಪ್ಪಲಿಗೆ ಸೂಜಿ ಸೇರಿಸಿ ಅಭ್ಯಾಸವಿದೆ. ಹಾಗಾಗಿ ಅಂಗಾoಗಗಳನ್ನೂ ಸೂಜಿಯ ಮೂಲಕ ಬೆಸೆಯಬಹುದು ಎಂಬ ಭರವಸೆಯಿತ್ತು. ಹಾಗಾಗಿ ಸರ್ಜನ್ ಆಗುವುದು ಕಷ್ಟವಲ್ಲ ಎಂದು ಭಾವಿಸಿ ವೈದ್ಯಳಾದೆ ಎನ್ನುವ ಡಾ. ವಿಜಯಲಕ್ಷ್ಮಿಯವರು ಸರಳತೆಗೇ ಪಾಠ ಹೇಳಬಲ್ಲಷ್ಟು ಸರಳಾತಿ ಸರಳ. ಮೂಲತಃ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರಿಂದ ಎಂಬಿಬಿಎಸ್‌ಗೆ ಸೇರಿದ ಆರಂಭದ ವರ್ಷದಲ್ಲಿ ಇವರು ಓದಿನಲ್ಲಿ ತುಸು ಹಿಂದೆಬಿದ್ದರು. ಅನಂತರದ ವರ್ಷಗಳಲ್ಲಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಪುರಸ್ಕಾರ, ಬಿರುದು-ಬಾವಲಿ, ಚಿನ್ನದ ಪದಕಗಳು ಬೇಡವೆಂದರೂ ಇವರ ಕದ ತಟ್ಟಿ ಕೊರಳ ಹಾರವಾದವು. ಇವರು ಬೇಡವೆಂದರೂ ಬಿಡದೆ ಸಿಂಗರಿಸಿದವು. ಇವರು ಅಕ್ಷರಶಃ ಸಿಂಗಾರ ಸಿರಿಯಾದರು!

ಮಹಿಳಾ ಶಿರೋಮಣಿ ಪ್ರಶಸ್ತಿ, ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದ ಸ್ವರ್ಣಪದಕ, ರಾಷ್ಟ್ರೀಯರತ್ನ ಪ್ರಶಸ್ತಿ, ಅಂತಾರಾಷ್ಟ್ರೀಯ ಉನ್ನತ ವೈದ್ಯ ಪ್ರಶಸ್ತಿ, ಅಮೆರಿಕದ ಬಯೋಗ್ರಾಫಿಕಲ್ ಸಂಸ್ಥೆಯಿಂದ ‘ವರ್ಷದ ನಾರಿ ಪ್ರಶಸ್ತಿ’ ಹೀಗೆ ಪಟ್ಟಿ ಉದ್ದವಾಗುತ್ತದೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಬೇಕಾದ ಎಲ್ಲ ಅರ್ಹತೆಯಿದೆ. ಮುಂದಿನ ದಿನಮಾನಗಳಲ್ಲಿ ಪದ್ಮ ಪ್ರಶಸ್ತಿಯೊಂದು ಇವರ ಮಡಿಲಿಗೆ ಸೇರಲಿ.

ದೇಶದ ಪ್ರತಿಷ್ಠಿತ ಬೆಂಗಳೂರಿನ ಕಿದ್ವಾಯ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದರು. ಅಲ್ಲಿ ಅವರದು 35 ವರ್ಷಗಳಷ್ಟು ಸುದೀರ್ಘ ಸೇವೆ‌. ಸ್ತನ ಕ್ಯಾನ್ಸರ್ ಶಸ್ತ್ರಕ್ರಿಯಾ ತಜ್ಞರಾಗಿ ಅವರು ಸಾಧಿಸಿರುವ ಕುಶಲತೆ ಕಂಡು ಭಾರತೀಯ ವೈದ್ಯ ಸಮೂಹವೇ ಬೆರಗಾಗಿದೆ. ಸೇವೆ ಮಾಡುವ ಸಲುವಾಗಿಯೇ ಅವಿವಾಹಿತರಾಗಿ ಉಳಿದ ತ್ಯಾಗಮಯಿ, ಈ ಅನುರಾಗಮಯಿ. ಜನಸೇವೆಯೇ ಜನಾರ್ದನ ಸೇವೆ ಎಂದು ಇಡಿಯಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವವರು.

ಇವರು ಎಂದೂ ಪ್ರಚಾರದ ಹಿಂದೆ ಬಿದ್ದವರಲ್ಲ. ತಮ್ಮ ಇಡೀ ಗಳಿಕೆಯನ್ನು ಸಮಾಜಕ್ಕೆ ಧಾರೆಯೆರೆದಿದ್ದಾರೆ. ನಿವೃತ್ತರಾದ ಅನಂತರ ಮಾಸಿಕ ವೇಳಾಪಟ್ಟಿ ಹಾಕಿಕೊಂಡು ಅದರಂತೆ ಸೇವೆಗೆ ತೊಡಗಿದ್ದಾರೆ. ತಿಂಗಳಲ್ಲಿ 15 ದಿನ ಕ್ಯಾನ್ಸರ್ ಸೊಸೈಟಿಗೆ, ಅನಂತರ ಮೂರು ದಿನ ಅಬಲಾಶ್ರಮಕ್ಕೆ. ಉಳಿದ ದಿನಗಳಲ್ಲಿ ಕ್ಯಾನ್ಸರ್ ಕುರಿತ ಜಾಗೃತಿ ಶಿಬಿರ, ಸಮಾಲೋಚನೆ, ಸಲಹಾಲೋಚನೆ, ಸಂಶೋಧನೆಗಳಿಗೆ.

ಹೀಗೆ ಘಳಿಗೆ-ಘಳಿಗೆಯೂ ಜನರಿಗೆ ಅಂಕಿತ. ಪ್ರತಿ ನಿಮಿಷವೂ ಸಮಾಜಸೇವೆಗೆ ಮುಡಿಪು. ಪ್ರತಿಯೊಂದು ಸೇವೆಯೂ ಮುಫತ್ತು. ಇವರ ನಿಷ್ಕಪಟ ನಗೆಯ ಮುಂದೆ, ಮೋನಾಲಿಸಳನ್ನು ಇಡಿಯಾಗಿ ನಿವಾಳಿಸಿ ಎಸೆಯಬೇಕು. ಇಂತಹವರು ನಮಗೆ ಪ್ರೇರಣೆ, ಮಾದರಿ ಹಾಗೂ ಆದರ್ಶವಾಗಬೇಕು. ಡಾ. ವಿಜಯಲಕ್ಷ್ಮಿ ದೇಶಮಾನೆ ನಮ್ಮ ಕಣ್ಣ ಮುಂದಿನ ಬೆಳಕು. ನಮ್ಮ ಸಮಾಜದ ಕಣ್ಣು ಮತ್ತು ಪ್ರಖರ ಬೆಳಕು.

ನಾಲ್ಕು ವರ್ಷದ ಹಿಂದೆ ಇವರೇ ಅಧ್ಯಕ್ಷರಾಗಿರುವ ಬೆಂಗಳೂರಿನ ಅಬಲಾಶ್ರಮ ಎಂಬ ಶತಮಾನ ದಾಟಿದ ಸಂಸ್ಥೆಯಲ್ಲಿ ನಡೆದ ಕನ್ನಡಪರ ಕಾರ್ಯಕ್ರಮದಲ್ಲಿ ಇವರ ಜತೆಗೆ ನಾನೂ ಒಬ್ಬ ಭಾಷಣಕಾರನಾಗಿದ್ದೆ. ಅವರ ಘನ ವ್ಯಕ್ತಿತ್ವದ ಬಗೆಗೆ ಒಂದೆರಡು ಮೆಚ್ಚು ಮಾತನ್ನು ಅವರ ಸಮ್ಮುಖದಲ್ಲಿಯೇ ಆಡಿದ ಸಂತೃಪ್ತಿ ನನ್ನದಾಯಿತು. ಅಂದು ಅವರ ಪ್ರಶಂಸೆ ಮತ್ತು ಆಶೀರ್ವಾದ ಗಳಿಸಿದ ತೃಪ್ತಿ ನನ್ನದು. ಒಂದರೆಕ್ಷಣ, “ಗಗನವು ಎಲ್ಲೋ ಭೂಮಿಯು ಎಲ್ಲೋ ಒಂದೂ ಅರಿಯೆ ನಾ” ಎಂಬ ಅನುಭವ.

ವೃತ್ತಿಯ ಜೊತೆಗೆ ಸೇವೆಯೂ ನಮ್ಮ ಆಯ್ಕೆಯಾಗಿರಲಿ. ಸೇವೆ ನಮ್ಮನ್ನು ವಿನೀತರನ್ನಾಗಿಸಿ, ಪುನೀತರನ್ನಾಗಿಸುತ್ತದೆ. ಪುಳಕಿತ ಭಾವವೊಂದು ಮನಸ್ಸನ್ನು …


  • ಕೆ ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು.

Leave a Reply

Home
Search
Menu
Recent
About
×