ನುಗ್ಗೆ ಸೊಪ್ಪಿನ ಬಸ್ಸಾರು – ರಮಾ ಶಾಕ್ಯನುಗ್ಗೆ ಸೊಪ್ಪಿನ ಬಸ್ಸಾರು ಮತ್ತು ಮುದ್ದೆ ಇದ್ರೆ ಬಾಯಿಗೆ ಸ್ವರ್ಗ ಸುಖ. ಆ ಸ್ವರ್ಗಕ್ಕೆ ಕಿಚ್ಚು ಹೆಚ್ಚಿಸುವುದು ಹೇಗೆ ಎಂದು ನಳಪಾಕ ತಜ್ಞೆ ರಮಾ ಶಾಕ್ಯ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓಡುವುದಷ್ಟೇ ಅಲ್ಲ, ಮನೆಯಲ್ಲಿ ಮಾಡಿ ಫೋಟೋ ನಮ್ಮೊಂದಿಗೆ ಹಂಚಿಕೊಳ್ಳಿ….

ಮೊದಲಿಗೆ ತಾಜಾ ಹಸಿರು ನುಗ್ಗೆಯ ಎಲೆಗಳು ಮತ್ತು ಹೂವಿನ ಗೊಂಚಲನ್ನು ಕಡ್ಡಿಗಳಿಂದ ಬಿಡಿಸಿ ಸೋಸಿಕೊಳ್ಳುತ್ತೇನೆ. ಸೋಸಿದ ಸೊಪ್ಪನ್ನು ಬಕೀಟಿಗೆ ಹಾಕಿ ಒಳ್ಳೆ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳುತ್ತೇನೆ. ಈಗ ಎಸರು ಮಾಡುವ ಪಾತ್ರೆಯಲ್ಲಿ ಅರ್ಧ ಪ್ರಮಾಣ ನೀರು ತುಂಬಿಸಿ ತೊಗರಿಬೇಳೆಯನ್ನು ಬೇಯಲಿಡುತ್ತೇನೆ. ನೀರು ಎರಡು ಕುದಿ ಕುದಿದು ತೊಗರಿ ಬೇಳೆಯು ಮುಕ್ಕಾಲು ಭಾಗದಷ್ಟು ಬೆಂದ ಆಮೇಕಿಂಟ ನುಗ್ಗೆ ಸೊಪ್ಪನ್ನು ಹಾಕುತ್ತೇನೆ. ಪಾತ್ರೆ ಮೇಲೆ ಮುಚ್ಚಳ ಮುಚ್ಚದೆ ಕುದಿಯುನ ನೀರಿನೊಳಕ್ಕೆ ಸೌಟಿನಿಂದ ಸೊಪ್ಪನ್ನು ಅಮುಕಿ ಮುಳುಗಿಸಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸುತ್ತೇನೆ. ಹಸಿ ಮೆಣಸಿನಕಾಯಿಗಳನ್ನು ಹಂಚಿಕಡ್ಡಿಗೆ ಚುಚ್ಚಿ ಸರ ಏರಿಸಿ ಕುದಿಯುವ ನುಗ್ಗೆ ಸೊಪ್ಪಿನ ಮಧ್ಯಭಾಗದಲ್ಲಿರಿಸಿ ಸೌಟಿನಿಂದ ಅಮುಕಿ ಮುಳುಗಿಸಿ ಬೇಯಿಸಿಕೊಳ್ಳುತ್ತೇನೆ. ಬೇಳೆ-ಸೊಪ್ಪು-ಮೆಣಸಿನಕಾಯಿ ಬೆಂದ ಬಳಿಕ ಸಪ್ನೀರನ್ನು ಒಂದು ಪಾತ್ರೆಗೆ ಬಸಿದುಕೊಳ್ಳುತ್ತೇನೆ. ಬೆಂದ ಮೆಣಸಿನಕಾಯಿ ಸರವನ್ನು ಪ್ರತ್ಯೇಕವಾಗಿ ತೆಗೆದಿರಿಸಿಕೊಂಡು, ಸ್ವಲ್ಪ ಪ್ರಮಾಣದಷ್ಟು ಬೇಳೆಯನ್ನು ಸೊಪ್ಪಿನಿಂದ ಬೇರ್ಪಡಿಸಿ ತೆಗೆದುಕೊಳ್ಳುತ್ತೇನೆ.

ಅಸಲಿಗೆ ನುಗ್ಗೆ ಸೊಪ್ಪಿನೆಸರು ತಯಾರಿಸುವಿಕೆಯ ಮುಖ್ಯ ಘಟ್ಟ ಈಗ ಪ್ರಾರಂಭವಾಗುತ್ತದೆ. ಒಗ್ಗರಣೆ ಬಟ್ಟಲಿಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಂಡು ಆಮೇಕಿಂಟ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು, ಸಣ್ಣಗೆ ಕತ್ತರಿಸಿದ್ದ ಈರುಳ್ಳಿ ಹಾಕಿ ಕೆಂಪಾಳ ಹುರಿದುಕೊಳ್ಳುತ್ತೇನೆ. ಇದೆಲ್ಲವನ್ನೂ ಬೆಂದ ಮೆಣಸಿನಕಾಯಿ, ಬೆಂದು ತೆಗೆದಿರಿಸಿದ್ದ ಬೇಳೆ, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಹುಣುಸೆ ಹುಳಿ, ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸಿಗೆ ಹಾಕಿ ಗರ್ರ್.ರ್ರ್ ಅಮ್ತಾ ರುಬ್ಬಿ ಚಟ್ಣಿ ಮಾಡಿಕೊಳ್ಳುತ್ತೇನೆ. ಬಸಿದು ಪ್ರತ್ಯೇಕವಾಗಿರಿಸಿಕೊಂಡ ಸೊಪ್ಪನ್ನು ಭದ್ರವಾಗಿ ಹಿಂಡಿ ಸಪ್ನೀರು ಬೇರ್ಪಡಿಸಿಕೊಂಡು, ಚಟ್ಣಿಯನ್ನು ಎಸರಿನ ಪಾತ್ರೆಯ ಸಪ್ನೀರಿನೊಂದಿಗೆ ಗುತ್ತನಾಗಿ ಮಿಶ್ರಣ ಮಾಡುತ್ತೇನೆ. ಈಗ ಬಸ್ಸಾರು ಸಿದ್ಧವಾಯಿತು. ಸೌಟಿನಿಂದ ಚೆನ್ನಾಗಿ ತಿರುಗಿಸಿ ಮದರಾಡಿ, ಬಳಿಕ ಅಂಗೈಗುಣಿಯಲ್ಲಿ ಚಮಚದಷ್ಟು ಎಸರು ತೆಗೆದುಕೊಂಡು ದೇವಸ್ಥಾನದ ತೀರ್ಥದಂತೆ ಹಿತವಾಗಿ ಸವಿದು ರುಚಿ ನೋಡುತ್ತೇನೆ. ಉಪ್ಪು ಹುಳಿ ಖಾರ ಸಮನಾಗಿರುವುದನ್ನು ದೃಢಪಡಿಸಿಕೊಂಡು ನಾಲಗೆ ಚಪ್ಪರಿಸುತ್ತೇನೆ.

ಎಸರನ್ನು ಮತ್ತೆ ಸ್ವಲ್ಪ ಸಣ್ಣ ಉರಿಯಲ್ಲಿ ಕಾಯಿಸುತ್ತೇನೆ. ಈ ಎಸರಿಗೆ ನಾನು ಒಗ್ಗರಣೆ ಕೊಡುವುದಿಲ್ಲ. ಒಗ್ಗರಣೆ ಕೊಡುವುದೇನಿದ್ದರೂ ಭದ್ರವಾಗಿ ಹಿಂಡಿ ಸಪ್ನೀರು ಬೇರ್ಪಡಿಸಿಕೊಂಡು ತೆಗೆದಿರಿಸಿದ ಸೊಪ್ಪಿಗೆ ಮಾತ್ರ. ಒಗ್ಗರಣೆ ಬಟ್ಟಲಿಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಂಡು ಆಮೇಕಿಂಟ ಸಾಸಿವೆ, ಸಣ್ಣಗೆ ಉತ್ತರಿಸಿದ ಈರುಳ್ಳಿ ಮತ್ತು ಜವಾರಿ ಒಣ ಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ತೆಂಗಿನಕಾಯಿ ತುರಿ, ಕೋಳಿ ಮೊಟ್ಟೆ, ಕೊತ್ತಂಬರಿ ಸೊಪ್ಪು ಕೆಂಪಾಳ ಹುರಿದುಕೊಂಡು, ಇದೆಲ್ಲವನ್ನೂ ಸೊಪ್ಪಿನೊಂದಿಗೆ ಮಿಶ್ರಣ ಮಾಡಿ ಪಾತ್ರೆಯಲ್ಲಿ ಚೆನ್ನಾಗಿ ಅಗ್ಗರಿಸುತ್ತೇನೆ, ಒಗ್ಗರಣೆ ಕೊಟ್ಟು ಅಗ್ಗರಿಸಿದ ನುಗ್ಗೆ ಸೊಪ್ಪು ತಿನ್ನಲು ಬಲು ರುಚಿಕರವಾಗಿರುತ್ತದೆ. ಈಗ ನುಗ್ಗೆ ಸೊಪ್ಪನ್ನು ನೆಂಚಿಕೊಂಡು ಬಸ್ಸಾರಿನೊಂದಿಗೆ ಬಿಸಿ ಬಿಸಿ ಮುದ್ದೆಯನ್ನು ಸವಿಯಲು ಬಲು ಹಿತಕರ. ಬೇಕೆನ್ನಿಸಿದರೆ ನಿಂಬೆ ಹುಳಿ ರಸವನ್ನು ಎಸರಿಗೆ ಹಿಂಡಿಕೊಳ್ಳಬಹುದು. ಬಸ್ಸಾರಿನೊಂದಿಗೆ ಸ್ವಲ್ಪ ಕೆನೆಮೊಸರು ಸೇರಿಸಿ ಅನ್ನ ಉಣ್ಣುವುದು ಸಹ ರುಚಿಕರ. ಊಟದ ಕೊನೆಗೆ ಒಂದೆರಡು ಸೌಟಿನಷ್ಟು ಬಸ್ಸಾರಿನಲ್ಲಿ ಎರಡು ತುತ್ತಿನಷ್ಟು ರಾಗಿಮುದ್ದೆಯನ್ನು ಅಂಬಲಿಯಂತೆ ನುಣ್ಣಗೆ ಕಲೆಸಿ ಹಾಲುಖೀರಿನಂತೆ ದಿಮ್ಮಲೆರಂಗ ಅಮ್ತಾ ಸವಿದರಂತೂ… ವಾಹ್!

ಹೀಗೆ ಹಳ್ಳಿಯ ಶೈಲಿಯಲ್ಲಿ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಬಸ್ಸಾರು ಅಂದರೆ ನನಗಿಷ್ಟ. ಮಕ್ಕಳು ಮತ್ತು ಬಸುರಿ-ಬಾಣ್ತಿಯರಿಗಿದು ಉತ್ತಮ ಪೌಷ್ಟಿಕ ಆಹಾರ. ಈ ಸೊಪ್ಪನ್ನು ತಿಂಗಳಿಗೆ ಎರಡು ಸಲವಾದರೂ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ನೀವೂ ತಯಾರಿಸಿ ಸವಿಯಿರಿ.


  • ರಮಾ ಶಾಕ್ಯ (ಗೃಹಿಣಿ, ನಳಪಾಕ ತಜ್ಞೆ)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW