ಡಿ.ವಿ.ಜಿ ಎಂದರೆ ತಕ್ಷಣ ನೆನಪಾಗುವುದು ಕನ್ನಡದ ಭಗವದ್ಗೀತೆ ಎನ್ನಿಸಿಕೊಂಡ ಮಂಕುತಿಮ್ಮನ ಕಗ್ಗ. ಮಾರ್ಚ್ ೧೭ ಡಿ.ವಿ.ಜಿ.ಅವರ ೧೩೮ ನೇ ವರ್ಷದ ಜನ್ಮದಿನದ ನೆನಪು. ಈ ವರ್ಷ ಡಿ.ವಿ.ಜಿ.ಯವರು ನಿಧನರಾಗಿ ೫೦ ವರ್ಷ. ಈ ಹಿನ್ನೆಲೆಯಲ್ಲಿ ಮರುಳ ಮುನಿಯನ ಕಗ್ಗದ ಮೂಲಕ ಅವರನ್ನು ಸ್ಮರಿಸೋಣ.
ಕನ್ನಡದ ಮೇರು ವ್ಯಕ್ತಿತ್ವ ಹಾಗೂ ಸಾಹಿತಿ ಗುಂಡಪ್ಪನವರು ಕನ್ನಡದ ಪ್ರಾತಃಸ್ಮರಣೀಯರು.ಶೈಕ್ಷಣಿಕವಾಗಿ ಹತ್ತನೆಯ ಇಯತ್ತೆಯನ್ನೂ ತೇರ್ಗಡೆಯಾಗದೆ. ಅದರಲ್ಲೂ ಕನ್ನಡದಲ್ಲೇ ಫೇಲಾದ ಗುಂಡಪ್ಪನವರು ಲೋಕಾನುಭವದ ಮೂಲಕ ಪಡೆದುಕೊಂಡ ಅರಿವಿನ ಹರಹು ಬಹಳ ವಿಶಾಲವಾದುದು. ಡಿ.ವಿ.ಜಿ ಎಂದರೆ ತಕ್ಷಣ ನೆನಪಾಗುವುದು ಕನ್ನಡದ ಭಗವದ್ಗೀತೆ ಎನ್ನಿಸಿಕೊಂಡ ಮಂಕುತಿಮ್ಮನ ಕಗ್ಗ. ಇದರ ಬಗ್ಗೆ ವಿಸ್ತಾರವಾದ ಸಂಕಿರಣಗಳು ,ಅಧ್ಯಯನಗಳು ನಡೆದಿವೆ. ಆದರೆ ಡಿ.ವಿ.ಜಿ.ಅವರ( ಅವರ ಮಗ ಡಾ.ಬಿ.ಜಿ.ಎಲ್. ಸ್ವಾಮಿಯವರೂ ಈ ಕೃತಿ ಪ್ರಕಟವಾದಾಗ ಬದುಕಿರಲಿಲ್ಲ) ಮರಣಾನಂತರ ಪ್ರಕಟವಾದ ಮರುಳ ಮುನಿಯನ ಕಗ್ಗ ಸಹ ವಿಶೇಷವಾದ ಕೃತಿ. ಮಾರ್ಚ್ ೧೭ ಡಿ.ವಿ.ಜಿ.ಅವರ ೧೩೮ ನೇ ವರ್ಷದ ಜನ್ಮದಿನದ ನೆನಕೆ. ಈ ವರ್ಷ ಡಿ.ವಿ.ಜಿ.ಯವರು ನಿಧನರಾಗಿ ೫೦ ವರ್ಷ. ಈ ಹಿನ್ನೆಲೆಯಲ್ಲಿ ಮರುಳ ಮುನಿಯನ ಕಗ್ಗದ ಮೂಲಕ ಅವರನ್ನು ಸ್ಮರಿಸೋಣ.
ಮಂಕುತಿಮ್ಮನ ಕಗ್ಗ ಕ್ಕಿಂತ ಮರುಳ ಮುನಿಯನ ಕಗ್ಗ ಗಾತ್ರದಲ್ಲಿ ಕಿರಿದು.ಮಂಕುತಿಮ್ಮನ ಕಗ್ಗದಲ್ಲಿ ೯೪೫ ಪದ್ಯ ಗಳಿದ್ದರೆ ಈ ಕಗ್ಗದಲ್ಲಿ ೮೨೫ ಪದ್ಯಗಳಿವೆ. ನೂರಾಇಪ್ಪತ್ತು ಪದ್ಯಗಳು ಕಡಿಮೆ. ಆದರೆ ಸತ್ವದಲ್ಲಿ ಮರುಳ ಮುನಿಯನ ಕಗ್ಗದ ಶಕ್ತಿಯೂ ಅಗಾಧ. ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ ಕೊರಗೆನ್ನೆದೆಯ ತಿತ್ತಿಯೊಳಗೆ ತುಂಬಿಹುದು.
ಸುರಿವೆನದನಿಲ್ಲಿ ಸಾಧುಗಳು ಸರಿಪೇಳರೇಂ
ಗುರುವಲೇ ಜಗ ನಮಗೆ – ಮರುಳ ಮುನಿಯ.
ತನ್ನ ತಾನು ಮಂಕುತಿಮ್ಮನ ತಮ್ಮ ಎಂದು ಕರೆದುಕೊಳ್ಳುವ ಮರುಳ ಮುನಿಯನ ಕಗ್ಗ ಅನುಸ್ಯೂತವಾಗಿ ಒಂದೇ ನಿರ್ದಿಷ್ಟ ಸಂಗತಿಗಳನ್ನು ಆಧರಿಸಿದ್ದಲ್ಲ. ಹಲವು ವಿಷಯಗಳ ಬಗ್ಗೆ ಬರೆದ ಹರಿಯುವ ಸ್ರೋತದಂತೆ ಈ ಕಗ್ಗ ಸಾಗಿದೆ (ಮಂಕುತಿಮ್ಮನ ಕಗ್ಗ ಸಹ ಹೀಗೆಯೇ)
ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ
ಮನನಾನುಸಂಧಾನಕಾದುದೀ ಕಗ್ಗ
ನೆನೆನೆಯುತಂದೊಂದು ಪದ್ಯವನದೊಮ್ಮೊಮ್ಮೆ
ಅನುಭವಿಸಿ ಚಪ್ಪರಿಸೊ – ಮರುಳ ಮುನಿಯ
ಡಿ.ವಿ.ಜಿ ಬಹಳ ಸ್ಪಷ್ಟವಾಗಿ ಇದು ವಿನೋದದ ಕಥೆಯಲ್ಲ ಹೃದಯರಸದ ಹರಿಯುವಿಕೆಯೂ ಅಲ್ಲ ಎಂದಿದ್ದಾರೆ. ಮರುಳ ಮುನಿಯನ ಕಗ್ಗ ಹೀಗಾಗಿಯೇ ಬದುಕು, ಸಮಾಜ, ಲೋಕದ ಜನರ ನಡಾವಳಿ, ಆಚರಣೆಗಳು ಅದರ ಸುತ್ತಮುತ್ತಲೇ ಸಂಚರಿಸುತ್ತದೆ.
ಕ್ಷಣಭಂಗುರದ ನಮ್ಮ ಜೀವಿತಾವಧಿಯಲ್ಲಿ ಕಾಣುವ ಮಾಯಾಪ್ರಪಂಚ ಮತ್ತು ನಮ್ಮನ್ನು ಆವರಿಸಿಕೊಳ್ಳುವ ಬಗೆ ಬಗೆಯ ವಾತ್ಸಲ್ಯ, ಪ್ರೀತಿ,ಹರ್ಷದ ಘಟ್ಟಗಳನ್ನು ಕವಿಯು
ತಿಳಿತಿಳಿಯಾಗಿ ತಿಳಿಸಿದ್ದಾರೆ.ಭ್ರಮಿತ ಲೋಕದ ಭಾವಗಳನ್ನು ತೆರೆದಿಡುತ್ತಾರೆ.
ತಾಯೊಲುಮೆ ಕಣ್ಣಾಗಿ ತಂದೆಯೊಳ್ನುಡಿಯಾಗಿ
ಪ್ರೇಯಸಿಯ ನಗುವಾಗಿ ಸುತಮಮತೆಯಾಗಿ
ಗಾಯನಕಲಾಕಾವ್ಯಶಾಸ್ತ್ರಾಭಿರುಚಿಯಾಗಿ
ಮಾಯೆ ಸುಳಿದಾಡುವಳೋ ಮರುಳ ಮುನಿಯ
ತಾಯಿ – ತಂದೆ ,ಪ್ರಿಯತಮೆ, ಪುತ್ರವಾತ್ಸಲ್ಯ ಜೊತೆಗೆ ಲಲಿತಕಲೆಗಳ ಆಸಕ್ತಿಗಳ ಆಡುಂಬೊಲದ ಈ ಮಾಯಾ ಪ್ರಪಂಚದಲ್ಲಿ ಎಲ್ಲವೂ ಸಂವೇದ್ಯವೇ ಆದರೆ ಇದು ಮಾಯೆಯ ಆಟ ಎಂಬ ದರ್ಶನ ಇಲ್ಲಿಯದ್ದು. ಸಮಾಜೋದ್ಧಾರ, ಸಮಾಜ ಸುಧಾರಣೆ, ಸುಧಾರಕರು ಅಂದಿನಿಂದ ಇಂದಿನವರೆಗೂ ಎಷ್ಟೆಷ್ಟೋ ಶ್ರಮವಹಿಸಿ ಸಾಮಾಜಿಕ ಲೋಪಗಳನ್ನು ನಿವಾರಿಸಲು ಯತ್ನಿಸಿದ್ದಾರೆ.ಆದರೆ ಅದು ಪೂರ್ಣ ಸಾಧ್ಯವಾಗಿಲ್ಲ ಎಂಬ ಅರಿವು ಮರುಳ ಮುನಿಯನದ್ದು.ಸಾಮಾಜಿಕ ಅಪಸವ್ಯಗ ಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬ ನಿಷ್ಠುರ ಸತ್ಯದ ಚಿಂತನೆಯನ್ನು ಕಗ್ಗ ವಿವರಿಸುತ್ತದೆ.
ಲೋಕವನು ತಿದ್ದಲಿಕ್ಕೆ ಹೊರಟು ಗೆದ್ದವರಾರು?
ಕಾಕುತ್ಸ್ಥನೇ ಕೃಷ್ಣನೇ ಬುದ್ಧ ಜಿನರೇ?
ಸಾಕ್ರಟೀಸ್ ಏಸು ಮೋಸೆಸ್ ಮೊಹಮ್ಮದರೇ?
ಸ್ವೀಕರಿಸಿತಾರನದು ಮರುಳ ಮುನಿಯ.
ಲಾಗಾಯ್ತಿನಿಂದ ಇಲ್ಲಿಯವರೆಗೂ ಅನೇಕಾನೇಕ ಮಹಾನು ಭಾವರು ಜಗತ್ತಿನ ತಪ್ಪುಗಳನ್ನು ಸರಿಪಡಿಸಲು ಕಷ್ಟಪಟ್ಟರೂ ಅದು ಕಾರ್ಯಸಾಧ್ಯವಾಗಿಲ್ಲ, ಲೋಕ ಬಹಳ ಮೊಂಡು. ಅದು ಯಾರನ್ನೂ, ಯಾರ ಮಾತುಗಳನ್ನೂ ಸರಿಯಾಗಿ ಅಳವಡಿಸಿಕೊಂಡಿಲ್ಲ ಎಂಬ ತಿರುಳು ಇಂದಿಗೂ ಪ್ರಸ್ತುತ.
ಡಿ.ವಿ.ಜಿ.ಭಾರತೀಯ ಮೌಲ್ಯಗಳನ್ನು ಕುಟುಂಬ ವ್ಯವಸ್ಥೆ ಯನ್ನು ಸದಾ ಗೌರವಿಸಿ ಅದರ ಅನಿವಾರ್ಯತೆ -ಔನ್ನತ್ಯ ಗಳನ್ನು ಪ್ರತಿಪಾದಿಸಿದವರು.ಪರಿವಾರದ ಬಾಳುವೆಯ ಮಹತ್ವವನ್ನು ಅವರು ಸದೃಢಪಡಿಸಿ ಹೀಗೆ ಹೇಳಿದ್ದಾರೆ.
ಜೀವನದ ವಿಸ್ತಾರಕೆ ಗಂಡುಹೆಣ್ಣಾವಶ್ಯ
ಭೂವಿಲಾಸದೊಲಿರ್ವರಾತ್ಮ ತಾ ಬೆಳಗುಂ
ಭಾವದನ್ಯನ್ಯೋನ್ಯದಿಂ ಬೆಳಗುವುದು ಆತ್ಮದ ರಾಜ್ಯ
ಪಾವನವೋ ಜೀವಕ್ಕೆ ಮರುಳ ಮುನಿಯ
ಲೋಕವನ್ನು ತಿದ್ದುವೆನೆಂಬ ಭ್ರಮೆಯಿಂದ ಹೊರಬಂದು ಬಾಳಬೇಕು
ಎನ್ನುವ ಇಂಗಿತ ಡಿ.ವಿ.ಜಿ ಅವರದ್ದು. ಜಗತ್ತನ್ನು ಬಿಟ್ಟು ಬಾಳುವುದು ತರವಲ್ಲ.ಬದಲು ನಮ್ಮನ್ನು ನಾವು ಮೊದಲು ತಿದ್ದುಕೊಂಡು ನಿರ್ಮಲವಾಗಿ ಅದೇ ಜಗತ್ತಿನಲ್ಲಿ ಬಾಳುವುದನ್ನು ಕಲಿಯುವಂತಾಗಲಿ ಎಂಬ ಸದಾಶಯದ ಕವಿ ಗುಂಡಪ್ಪನವರು
ಜಗವ ಬಿಡಲೇಕೆ? ಕಣ್ಣನು ತಿದ್ದುಕೊಳೆ ಸಾಕು
ಮುಗಿಲ ಕಂಡಾಗಿನನ ಮರೆಯದಿರೆ ಸಾಕು
ಮಘವಂತನೆಸೆದ ಬಿಲ್ಬಣ್ಣಗಳ ಹಿಂಬದಿಗೆ
ಗಗನವಿಹುದೆನೆ ಸಾಕು ಮರುಳ ಮುನಿಯ
ಜಗತ್ತನ್ನು ತ್ಯಜಿಸಿ ಪ್ರತ್ಯೇಕನಾಗಿ ಬಾಳುವಬದಲು ನಮ್ಮ ಧೂಳು ತುಂಬಿದ ಕಣ್ಣುಗಳನ್ನು ಶುದ್ಧಿಗೊಳಿಸಿ ಮುಗಿಲು , ಸೂರ್ಯರನ್ನು ಮರೆಯದೆ ಬಾಳೋಣ. ಮಘವಂತ (ಇಂದ್ರ)ನ ಬಾಣಗಳ ಹಿಂದೆಯೇ ಆಗಸ ಇದ್ದೇ ಇರುತ್ತದೆ ಎಂಬ ಸತ್ಯದ ಶಾಶ್ವತ ಅರಿವು ನಮಗಿರಲಿ ಅದೇ ಬಾಳಿನ ನಿಜ ಎಂಬ ದರ್ಶನ ಇಲ್ಲಿದೆ.
ಡಿವಿಜಿ ಬವಣೆಯ ಬಾಳನ್ನು ಅನುಭವಿಸಿದರೂ ತುಂಬು ಜೀವನೋಲ್ಲಾಸ ಜೀವನಸಮ್ಮುಖತೆಯ ಜೀವಿ.ನಿಸರ್ಗ ಸೃಷ್ಟಿಯ ಚೆಲುವನ್ನು ಸವಿಯದೆ ಇರಬೇಡ ಎಂಬ ಕರೆ ಕೊಡುವ ಅವರು ಜೀವನೋತ್ಸಾಹಕ್ಕೆ ,ನೈಸರ್ಗಿಕ ಸೌಂದರ್ಯ ಮತ್ತದರ ಅರ್ವಾಚೀನ ಸತ್ಯಗಳ ತೆರೆದಿರಿಸಿದ ಮುಕ್ತ ಸಂತೋಷದ ಅನುಭವಿಸುವಿಕೆಗೆ ಹುರಿದುಂಬಿಸು ತ್ತಾರೆ. ಪ್ರಕೃತಿಯ ಚೆಲ್ವಿಕೆಯನ್ನು ಅದರ ರಮಣೀಯವಾದ ಸುಭಗತೆಯನ್ನು ಅನುಭವಿಸುವ ಗುಣ, ಕಾವ್ಯ, ನಟನೆ, ಗಾಯನಗಳು ಗಾಢವಾಗಿ ಹೃದಯಸ್ಥವಾಗಬೇಕು.ಸದಾ ಈ ಮನೋಧರ್ಮವಿರಬೇಕು. ಅದೇ ಬಾಳಿನ ದೊಡ್ಡ ಹಿರಿಮೆ ಎಂಬ ಭಾವವನ್ನು ಗುಂಡಪ್ಪನವರು ಬಣ್ಣಿಸಿದ್ದಾರೆ.ಅದು ಹೀಗಿದೆ.
ನವಿಲವೋಲ್ ಸರಸಕಲೆ, ಗರಿಯವೋಲ್ ಭಾವಾರ್ಥ
ವಿವಿಧವರ್ಣವಿಲಾಸಚಿತ್ರವಿರದೊಡದೇಂ?\\
ಕವಿತಾಭಿನಯ ಗಾಯನಸ್ಪರ್ಶವೇದಿಯಾ
ಛವಿಸೋಕೆ ನೀಂ ಚಿನ್ನ ಮರುಳ ಮುನಿಯ.
ಮರುಳ ಮುನಿಯನ ಮನಸು ಸರಳ ಬಾಳ್ವೆಯ ಕನಸು
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು\\
ಕೆರೆಯಿನೆದ್ದಲೆಯೆರಚಿ ತಣಿವು ತುಂತುರನಿನಿತು
ಮರಳಿ ತೆರೆ ಸೇರ್ವುದಲ ಮರುಳ ಮುನಿಯ.
ಮರುಳ ಮುನಿಯನ ಮೂಲಕ ಹೆಚ್ಚಿನ ಬಯಕೆ ಹಂಬಲಗಳಿರದೆ ಸಂತೋಷ, ಪ್ರಾಮಾಣಿಕತೆ ವಿನಯ ಶಾಂತಿಗಳನ್ನು ಹೊಂದಿ ಬಾಳು ಸವೆಸುತ್ತಾ ಬದುಕಿನ ಅನುಭವದ ಸಾಗರದ ಅಲೆಗಳಂತೆ ತಮಗೆ ದೊರೆತುದ ಷ್ಟನ್ನೇ ಹನಿಹನಿಗಳಾಗಿ ಇಷ್ಟಿಷ್ಟೇ ನೀಡಿದೆ ಎನ್ನುತ್ತಾರೆ ಡಿ.ವಿ.ಜಿ. ಈ ಎಲ್ಲಾ ಅನುಭವಗಳ ಸಾರದ ಅಲೆಗಳೂ ಮರಳಿ ಸಮುದ್ರವನ್ನೇ ಸೇರುತ್ತವೆ ಎಂಬ ಕವಿಗೆ ಮರುಳ ಮುನಿಯನ ಕಗ್ಗದ ವಿಸ್ತಾರದ ಬಗ್ಗೆಯೂ ಚೆನ್ನಾಗಿ ಅರಿವಿದೆ. ಈ ಪ್ರಜ್ಞಾಪೂರ್ವಕ ಚಿಂತನೆಯನ್ನೇ ಅವರು
ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ದಾಳಿ
ಉಗ್ಗು ಬಾಯ್ಚಪಲವಿದು ಮರುಳ ಮುನಿಯ.
ಮರುಳ ಮುನಿಯನ ಮೂಲಕ ಇಷ್ಟೆಲ್ಲ ಜೀವನದರ್ಶನ ಮಾಡಿಸಿಯೂ ಕವಿಗೆ ಸರ್ವ ಪ್ರಶ್ನೆಗಳಿಗೂ ಉತ್ತರಿಸಲಾಗದ ಅನಂತ ನಿರುತ್ತರ ಭಾವ ಕಾಡುತ್ತದೆ. ಅಂದರೆ, ವಿಶ್ವದ ಸತ್ಯ ನಿರಂತರ, ಮನುಷ್ಯ ಮಾತ್ರರಾದ ನಾವು ಎಲ್ಲಾ ಗಹನವಾದ ಸಂದೇಹಗಳಿಗೂ ಸಮರ್ಪಕವಾಗಿ ಉತ್ತರಿಸಲು ಅಸಾಧ್ಯ. ಏಕೆಂದರೆ ಜಗತ್ತಿನ ವಿಹಂಗಮತ್ವ ಬಹಳ ಘನ ಮತ್ತು ಸತತ ಎಂಬುದು ಡಿ.ವಿ.ಜಿ.ಯವರ ಸಮಷ್ಟಿಪ್ರಜ್ಞಾನಿಲುವು.
ಬದುಕನ್ನು ಹೇಗೆ ಬಾಳಬೇಕು ಎಂಬುದಕ್ಕೆ ಮಾದರಿಯಾಗಿ, ತಾವು ನಂಬಿಕೊಂಡು ಬಂದ ತತ್ವಸಿದ್ಧಾಂತಗಳಿಗೆ ಕಟಿಬದ್ಧ ರಾಗಿ ವ್ರತನಿಷ್ಠ ಸಂಕಲ್ಪದೊಂದಿಗೆ ಅದನ್ನು ಸದೃಢಗೊಳಿಸಿದ ಜೀವಚೇತನ ಡಿ.ವಿ.ಜಿ. ಮಾರ್ಚ್ ೧೭ ಇಂಥ ಮೇರು ವ್ಯಕ್ತಿತ್ವದ ಸಾಹಿತಿಯ೧೩೮ ನೇ ಜನ್ಮದಿನ.ಈ ವರ್ಷ ಡಿ.ವಿ. ಜಿಯವರು ಅಸ್ತಂಗತರಾಗಿ ೫೦ ವರ್ಷ. ಈ ನಿಮಿತ್ತಮರುಳ ಮುನಿಯನ ಮೂಲಕ ಕನ್ನಡನಾಡಿನ ಈ ದಿಗ್ಗಜರಿಗೆ ಗೌರವದ ನುಡಿಮುಡಿಪು.
- ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್, ಕೋಲಾರ.
