ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಧರವೆಂಬುರವರ ಜೀವನದ ಯಶೋಗಾಥೆಯನ್ನು ನೋಡಿದಾಗ ಸಾಧನೆ ಮಾಡುವವನಿಗೆ ಹಳ್ಳಿಯಾದರೇನು! ನಗರವಾದರೇನು !… ಲೇಖಕರಾದ ಬಸವರಾಜ ಹೊನಗೌಡರ ‘ಬದುಕಿಗೊಂದು ಭರವಸೆ’ ಅಂಕಣದಲ್ಲಿ ಶ್ರೀಧರ ಅವರ ಸಾಧನೆಯನ್ನು ತಪ್ಪದೆ ಮುಂದೆ ಓದಿ…
“ಸುಮ್ಮ ಸುಮ್ಮನೆ ಗಾಡಿಗಳ ಹಿಂದೆ ಓಡುವ ನಾಯಿಗಳಂತೆ” ಇಂದು ಎಲ್ಲರ ಓಟ ಹಳ್ಳಿಯಿಂದ ನಗರದ ಕಡೆಗೆ ನಡೆಯುತ್ತಿದೆ. ಹೌದು, ಹಳ್ಳಿಯೆಂದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಹಳ್ಳಿಯಲ್ಲಿ ಶೌಚಾಲಯಗಳಿಲ್ಲ, ಮಕ್ಕಳಿಗೆ ಒಳ್ಳೆಯ ಶಾಲೆಗಳಲ್ಲಿ, ಆಸ್ಪತ್ರೆಗಳಿಲ್ಲ, ಮನರಂಜನೆಗಳಿಲ್ಲ …. ಹೀಗೆ ಇಲ್ಲಗಳ ಪಟ್ಟಿ ಬೆಳೆಯುತ್ತಿದೆ. ಪಟ್ಟಣದ ಹುಡುಗಿರಯನ್ನು ಹಳ್ಳಿಯವನು ಮದುವೆಯಾದರೆ ತಿಂಗಳೊಳಗೆ ಗಂಡನಿಗೆ ಕಿವಿ ತುಂಬಿ ಪಟ್ಟಣವನ್ನು ಸೇರುವವರ ಸಂಖ್ಯೆ ಇಂದು ಜಾಸ್ತಿ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗೆಯೇ ಪಟ್ಟಣಗಳು ಇಂದು ಬಂದವರನ್ನು ಸೇರಿಸಿಕೊಳ್ಳುತ್ತಾ ದೊಡ್ಡದಾಗುತ್ತಾ ಸಾಗುತ್ತಿದೆ. ಇಲ್ಲೊಬ್ಬ ಸಾಧಕ ಹಳ್ಳಿಯಲ್ಲಿ ಕ್ರಾಂತಿ ಮಾಡಿದ್ದನ್ನು ಹೇಳಲು ಇಷ್ಟೊಂದು ಪೀಠಿಕೆ ಹಾಕಬೇಕಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀಧರವೆಂಬುರವರ ಜೀವನದ ಯಶೋಗಾತೆಯನ್ನು ನೋಡಿದಾಗ ಸಾಧನೆ ಮಾಡುವವನಿಗೆ ಹಳ್ಳಿಯಾದರೇನು! ನಗರಾದರೇನು! ಎಂದು ಶ್ರೀಧರ ವೆಂಬುರವರು ತೋರಿಸಿಕೊಟ್ಟಿದ್ದಾರೆ. ಇವರು 1965 ರಲ್ಲಿ ತಮಿಳುನಾಡಿನ ತಂಜಾವೂರು ಸಮೀಪದ ಒಂದು ಹಳ್ಳಿಯಲ್ಲಿ ಜನಿಸಿದರು. ಇವರ ವಂಶಸ್ಥರು ರೈತಾಗಿದ್ದರು. ಇವರ ಅಜ್ಜ, ತಂದೆಯೂ ಸಹ ರೈತರಾಗಿದ್ದರು. ನಂತರದ ದಿನಗಳಲ್ಲಿ ಇವರ ತಂದೆಗೆ ಚೆನೈನಲ್ಲಿ ಕೆಲಸ ಸಿಕ್ಕಿದ್ದರಿಂದ ಇವರು ತಂದೆಯ ಜೊತೆಗೆ ಚೆನೈಗೆ ಹೋಗುತ್ತಾರೆ. ಅಲ್ಲಿಯೇ ವ್ಯಾಸಂಗ ಮುಂದುವರೆಸುತ್ತಾರೆ. ಜೆಇಇ ಪರೀಕ್ಷೆಯನ್ನು ಬರೆದು ಅದರಲ್ಲಿ 27 ನೇ ರ್ಯಾಂಕ್ ಗಳಿಸಿ ಮದ್ರಾಸ್ ಐಐಟಿ ಯಲ್ಲಿ ಇಂಜಿನಿಯರಿಂಗ್ ಓದುತ್ತಾರೆ. 1989 ರಲ್ಲಿ ಮದ್ರಾಸ್ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ದಲ್ಲಿ ಪದವಿ ಪಡೆಯುತ್ತಾರೆ. ಇದರಿಂದ ಇವರ ಮನೆತನದಲ್ಲಿ ಇವರೇ ಮೊದಲ ಪದವೀಧರ ಎನಿಸಿಕೊಳ್ಳುತ್ತಾರೆ. ನಂತರ ಅಮೇರಿಕಾದ ನ್ಯೂಜೆರ್ಸಿಯ ಪ್ರಿನ್ಸಟನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ದಲ್ಲಿ ಎಂಎಸ್ ಪದವಿಯ ಜೊತೆಗೆ PhD ಪದವಿಯನ್ನು ಪಡೆದರು.

ಕ್ಯಾಲಿಪೋರ್ನಿಯಾದ ಸ್ಯಾನ್ ಡಿಯೊಗೋದಲ್ಲಿರುವ ಕ್ವಾಲ್ಕಮ್ ನಲ್ಲಿ ವೈರಲೆಸ್ ಎಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಆದರೆ ಅವರಿಗೆ ತಾವು ಮಾಡುವ ಕೆಲಸ ತೃಪ್ತಿ ನೀಡುತ್ತಿರಲಿಲ್ಲ. ಅವರಿಗೆ ಏನಾದರೂ ಹೊಸದೊಂದನ್ನು ಮಾಡುವ ತುಡಿತ ಮನದಲ್ಲಿತ್ತು. ಹೀಗಾಗಿಯೇ ಕೈತುಂಬ ಸಂಬಳದ ಕೆಲಸ ಬಿಟ್ಟು ಭಾರತದ ಕಡೆ ಮುಖ ಮಾಡಿದರು. ತೊಂಬತ್ತರ ದಶಕದಲ್ಲಿ ಅಮೇರಿಕಾದ ಕಂಪನಿಗಳಲ್ಲಿ ಕೆಲಸ ಮಾಡುವುದೆಂದರೆ ಭಾರತೀಯ ಎಂಜಿನಿಯರ್ ಗಳಿಗೆ ಮಹಾನ್ ಉದ್ಯಾಗವಾಗಿತ್ತು. ಅಲ್ಲಿ ಕೆಲಸ ಸಿಕ್ಕರೇ ಜೀವನವೇ ಸೆಟ್ಲು ಅನ್ನುವಂತಹ ಮನೋಭಾವದ ಕಾಲದಲ್ಲಿ, ಎಲ್ಲರೂ ಅಮೇರಿಕಾಕ್ಕೆ ಹೋಗಲು ಇಷ್ಟಪಡುವ ಸಂದರ್ಭದಲ್ಲಿ, ಶ್ರೀಧರರವರು ಭಾರತಕ್ಕೆ ಹಿಂದಿರುಗುತ್ತಾರೆ.
1996 ರಲ್ಲಿ ಶ್ರೀಧರ ವೆಂಬುರವರು ತನ್ನ ಇಬ್ಬರು ಸಹೋದರರೊಂದಿಗೆ ಅಡ್ವೆಂಟ್ ನೆಟ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಇದು ಟಿಲಿಕಾಂ ಕಂಪನಿಗಳಿಗೆ ಮ್ಯಾನೇಜ್ಮೆಂಟ್ ಸಂಬಂಧಿಸಿದ ಉಪಕರಣಗಳನ್ನು ಒದಗಿಸುತ್ತಿತ್ತು.1998 ರಲ್ಲಿ ಜಪಾನ ಕಂಪನಿಯಿಂದ ದೊಡ್ಡದಾದ ಪ್ರಾಜೆಕ್ಟ್ ಸಿಗುತ್ತದೆ. ಇದು ಶ್ರೀಧರ ವೆಂಬುರವರಿಗೆ ಸಿಕ್ಕ ಮೊದಲ ಯಶಸ್ಸು ಆಗಿತ್ತು. ಅಂದು ಇದೇ ಕೆಲಸವನ್ನು ದುಬಾರಿ ಬೆಲೆಗೆ ಕೊಡುತ್ತಿದ್ದ ಉಳಿದ ಕಂಪನಿಗಳ ಮಧ್ಯೆ ಯಶಸ್ವಿಯಾಗಲು ಅಗ್ಗದ ದರವನ್ನು ನಿಗದಿ ಮಾಡಿದ್ದರಿಂದ ಇವರ ಕಂಪನಿಗೆ ಹೆಚ್ಚಿನ ಆರ್ಡರ್ ಗಳು ಬಂದವು. 2009 ರಲ್ಲಿ ಇದನ್ನೇ ಮರುನಾಮಕರಣ ಮಾಡಿ ZOHO ಕಾರ್ಪೊರೇಷನ್ ಮಾಡಿದರು. ಇಂದು ಇದೇ ಹೆಸರಿನಲ್ಲಿ ಕಂಪನಿಯಿದೆ.
ಶ್ರೀಧರರವರು ಕೇವಲ ಒಂದು ಕಂಪನಿ ಸ್ಥಾಪನೆ ಮಾಡಿದ್ದರೆ ಅವರ ಬಗ್ಗೆ ಇಷ್ಟೆಲ್ಲಾ ಹೇಳಬೇಕಾಗಿರಲಿಲ್ಲ. ಆದರೆ ಅವರು ಕಂಪನಿ ನಡೆಸುವ ಸ್ಥಳ ಹಾಗೂ ಅದರ ಕಾರ್ಯವೈಖರಿ ವಿಶಿಷ್ಟವಾಗಿದೆ. ಇಂದು ಇವರ ಕಂಪನಿಯು ಸುಮಾರು 160 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅದರ ಪ್ರಧಾನ ಕಚೇರಿ ಇರುವುದು ತಮಿಳುನಾಡಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ತೆಂಕಶಿ ಜಿಲ್ಲೆಯ ಸಮೀಪದ ಮಥಲಂಪರೈ ಗ್ರಾಮದಲ್ಲಿ. ಇವರು ಸಹ ಅದೇ ಗ್ರಾಮದಲ್ಲಿ ವಾಸಿಸುತ್ತಾರೆ. ಬೆಳಿಗೆದ್ದು ದೂರದ ದೇಶಗಳಲ್ಲಿರುವ ತನ್ನ ಕಂಪನಿಯ ನೌಕರರ ಜೊತೆ ವಿಡಿಯೋ ಕಾನ್ಪರನ್ಸ ಮಾಡಿ, ನಂತರ ಸೈಕಲ್ ನಲ್ಲಿ ಕೆರೆಗೆ ಹೋಗಿ, ಹಳ್ಳಿಯ ಜನರು ಸ್ನಾನ ಮಾಡುವ ಕೆರೆಯಲ್ಲಿಯೇ ಇವರು ಸ್ನಾನ ಮಾಡುತ್ತಾರೆ. ತಮ್ಮ ಜಮೀನಿನಲ್ಲಿ ಒಂದು ಸುತ್ತು ಹಾಕಿ, ಮರದ ಕೆಳಗೆ ಲ್ಯಾಪ್ ಟಾಪ್ ತೆಗೆದು ಕಾರ್ಯವನ್ನು ಪ್ರಾರಂಭಿಸುತ್ತಾರೆ. ಅವರ ಬದುಕಿನ ಮಂತ್ರವೇ ಸರಳತೆ. ಇಂದಿನ ಕಾಲದಲ್ಲಿ ಒಂದು ಸಣ್ಣ
ಹುದ್ದೆಯಲ್ಲಿರುವವರ ಮಾತಿನಲ್ಲಿರುವ ಸೊಕ್ಕು, ಅಹಂಗಳನ್ನು ನೋಡಿದರೆ ಇಂತಹವರು ವಿರಳಾತಿವಿರಳರೆಂದೆ ಹೇಳಬಹುದು.

2004 ರಲ್ಲಿ ZOHO ವಿಶ್ವವಿದ್ಯಾಲಯವನ್ನು ತಮಿಳುನಾಡಿನಲ್ಲಿ ಸ್ಥಾಪನೆ ಮಾಡಿದರು. ಅಲ್ಲಿ ಎಸ್ಎಸ್ಎಲ್ ಸಿ, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲೀಷ್, ಕಂಪ್ಯೂಟರ್ ಪ್ರೋಗ್ರಾಮ್ ಗಳ ಸ್ಕಿಲ್ ಕಲಿಸಲಾಗುತ್ತಿದೆ. ನಾಲ್ಕು ವರ್ಷ ಎಂಜಿನಿಯರಿಂಗ್ ಕಲಿತ ವಿದ್ಯಾರ್ಥಿಗಳು ಕೇವರ ಥೇರಿ ಕಲಿತರೇ ಇವರು ಪ್ರಾಯೋಗಿಕತೆಗೆ ಹೆಚ್ಚಿನ ಮಹತ್ವ ನೀಡಿದರು. ಇಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ವಿಶ್ವವಿದ್ಯಾಲಯವೇ ಅವರಿಗೆ ಹತ್ತು ಸಾವಿರ ಸ್ಟೈಫಂಡ್ ಕೊಡುತ್ತದೆ. ಕೋರ್ಸ್ ಮುಗಿದ ಮೇಲೆ ZOHO ಅವರಿಗೆ ಉದ್ಯೋಗ ಕೊಡುತ್ತದೆ. ಇಂಜಿನಿಯರಿಂಗ್ ಕಲಿಯದೇ ಇಂಜಿನಿಯರ್ ಆಗುವ ಅವಕಾಶವನ್ನು ಶ್ರೀಧರರವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಾರೆ.
ಭಾರತ ಸರ್ಕಾರ ಇವರ ಸಾಧನೆಗೆ 2021 ರಲ್ಲಿ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ZOHO ಕಂಪನಿಯು ಇಂದು ಆರು ಕೋಟಿ ಗ್ರಾಹಕರನ್ನು ಒಳಗೊಂಡಿದೆ. ಹನ್ನೊಂದು ಸಾವಿರ ಉದ್ಯೋಗಿಗಳಿದ್ದಾರೆ, 2700 ಕೋಟಿ ಆದಾಯ ಗಳಿಸುತ್ತಿದೆ. 40 ಸಾವಿರ ಕೋಟಿ ಕಂಪನಿಯ ಮೌಲ್ಯವಿದೆ. ಇನ್ನೂ ಭಾರತದಲ್ಲಿ 200 ಹಳ್ಳಿಗಳಲ್ಲಿ ತಮ್ಮ ಕಂಪನಿ ಕಚೇರಿಗಳನ್ನು ತೆರೆಯುವ ಗುರಿ ಹೊಂದಿದ್ದಾರೆ.ಇಷ್ಟೆಲ್ಲಾ ಇದ್ದರೂ ಶ್ರೀಧರ ವೆಂಬುರವರ ಸರಳ ಜೀವನ ಉನ್ನತ ವಿಚಾರಗಳು ಸಾಧಕನನ್ನಾಗಿ ಮಾಡಿವೆ.
- ಬಸವರಾಜ ಹೊನಗೌಡರ – ಬಸಾಪೂರ ಜಿ. ಬೆಳಗಾವಿ
