ಡಿ.ವಿ.ಜಿ ಅವರ ‘ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ಕುದುರೆ ನೀನ, ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಗು ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ’ ಇದನ್ನು ಕೇಳದ ಕನ್ನಡಿಗರೇ ಇಲ್ಲ ಎಂದರೆ ತಪ್ಪಲ್ಲ.
ಕನ್ನಡದ ಭಗವದ್ಗೀತೆ ಎಂದೇ ಹೆಸರಾದ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗದ ಮೂಲಕ ಕನ್ನಡ ನಾಡಿನಲ್ಲಿ ಚಿರಪರಿಚಿತರಾದವರು ಡಿ. ವಿ. ಗುಂಡಪ್ಪ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು.
ಆಧುನಿಕ ಸರ್ವಜ್ಞ ಎಂದೇ ಹೆಸರಾದ ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಎಂದು. ಹುಟ್ಟಿದ್ದು ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ೧೮೮೭ ರ ಮಾರ್ಚ್ ೧೭ ನೇ ತಾರೀಖು. ಇವರ ಪೂರ್ವಿಕರು ತಮಿಳುನಾಡಿನ ತಿರುಚನಾಪಲ್ಲಿಯ ಕಡೆಯಿಂದ ಬಂದವರು. ೧೮೯೮ ರಲ್ಲಿ ಎಲ್. ಎಸ್. ಪಾಸು ಮಾಡಿದ ಡಿ.ವಿ.ಜಿ.ಅವರು ಇಂಗ್ಲಿಷ್ ಹಾಗೂ ಸಂಸ್ಕೃತ ಗಳನ್ನು ಕಲಿತರು ಮುಂದೆ ಸಂಬಂಧಿ ಒಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿದರಾದರೂ ೧೯೦೫ ರಲ್ಲಿ ಮೆಟ್ರಿಕ್ಯಲೇಷನ್ ಪರೀಕ್ಷೆಯಲ್ಲಿ ನಪಾಸಾಗಿ ಶಿಕ್ಷಣವನ್ನು ನಿಲ್ಲಿಸಿಬಿಟ್ಟರು.

ಫೋಟೋ ಕೃಪೆ : prekshaa
ಹೈಸ್ಕೂಲ್ ನಲ್ಲಿ ಓದುವಾಗಲೇ ಭಾಗೀರಥಮ್ಮನವರನ್ನು ಮದುವೆ ಅದ ಗುಂಡಪ್ಪನವರು ಮುಳುಬಾಗಿಲಿನ ಒಂದು ಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆದರೆ ಅಲ್ಲಿ ಹೆಚ್ಚು ಕಾಲ ಮುಂದುವರೆಯಲು ಆಗದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ ಕೆಲ ದಿನ ಕೆಲಸ ಮಾಡಿ ಅಲ್ಲಿಯೂ ನೆಲೆ ನಿಲ್ಲಲಾಗದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಜೀವನೋಪಯಕ್ಕಾಗಿ ಏನಾದರೂ ಮಾಡಲೇ ಬೇಕಾಗಿದ್ದ ಕಾರಣ “ಸೂರ್ಯೋದಯ ಪ್ರಕಾಶಿಕ” ಎನ್ನುವ ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಕೆಲಸಕ್ಕೆ ಸೇರಿದರು. ಅ ಪತ್ರಿಕೆ ಹೆಚ್ಚು ದಿನ ನಡೆಯಲಿಲ್ಲ. ಅಲ್ಲಿಂದ ಮತ್ತೊಂದು ಪತ್ರಿಕೆಗೆ ಸೇರಿಕೊಂಡರು. ಕೆಲವು ಇಂಗ್ಲಿಷ್ ಪತ್ರಿಕೆಗಳಿಗೆ, ಕನ್ನಡ ಪತ್ರಿಕೆಗಳಿಗೆ ಬರೆದರು. ಮುಂದೆ ಮದ್ರಾಸಿನಲ್ಲಿ “ವೀರಕೇಸರಿ” ಪತ್ರಿಕೆಯಲ್ಲಿ ಕೆಲಸ ಮಾಡುವಾಗ “ಹಿಂದೂ” ಪತ್ರಿಕೆಗೆ ಬರೆದರು. ಅದಾದ ನಂತರ “ಮೈಸೂರು ಟೈಮ್ಸ್” ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.
ಈ ಮಧ್ಯೆ ದಿವಾನ್ ರಂಗಾಚಾರ್ಯ ಅವರ ಬಗ್ಗೆ ಬರೆದ ಇಂಗ್ಲೀಷ್ ಲೇಖನ ಡಿ.ವಿ.ಜಿ ಅವರ ಜೀವನಕ್ಕೆ ಒಂದು ಮಹತ್ತರ ತಿರುವು ನೀಡಿತು. ಈ ಲೇಖನವನ್ನು ಮಾರ್ಪಾಡು ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡಿದರು. ಪ್ರಕಟಣೆಯಿಂದ ಹಣ ಬರುವಂತೆ ಆಯಿತು. ಲೇಖನಗಳು ಪರಿಚಯಗಳ ಜೊತೆ ಕಾವ್ಯ ಕೃಷಿಯನ್ನೂ ಆರಂಭಿಸಿದರು. ಆನಂತರ ಅನುವಾದಗಳ ಮೂಲಕ ಹೆಸರು ಮಾಡಿದರು. ಜೊತೆ ಜೊತೆಗೆ ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಹೀಗೆ ಎಲ್ಲ ವಿಷಯಗಳನ್ನು ಬರೆಯುತ್ತಿದ್ದರು.
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಹಾಡಿ ಹೊಗಳಿದ್ದಾರೆ. ಅಂದಿನ ದಿನಗಳ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ‘ಸರ್ವೆಂಟ್ ಆಫ್ ಇಂಡಿಯ’ ಹಾಗೂ ‘ಬಾಂಬೆ ಕ್ರಾನಿಕಲ್’ ಪತ್ರಿಕೆಗಳು ಡಿ.ವಿ.ಜಿ. ವರನ್ನು ಅವರ ಬರಹಗಳನ್ನು ಮೆಚ್ಚಿ ತಮ್ಮ ಪತ್ರಿಕೆಯಲ್ಲಿ ಬರೆದಿವೆ.
ಡಿ.ವಿ.ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ.ವಿ.ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ”ಹಾ.ಮಾ.ನಾಯಕ ರು “ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ” ಎಂದಿದ್ದಾರೆ.
ಡಿ.ವಿ.ಜಿ ಅವರು ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದರು. ಅಷ್ಟೇ ಅಲ್ಲ ಸಂಗೀತವನ್ನು ಅರಿತವರಾಗಿದ್ದರು, ಅವರ ೫೯ “ಅಂತಃಪುರ ಗೀತೆ”ಗಳ ಹೊಯ್ಸಳ ಶಿಲ್ಪದ ಶಿಲಾಬಾಲಿಕೆಯರ ಕುರಿತು ಬರೆದ ಮೊದಲ ಕನ್ನಡ ಕವನ ಸಂಕಲನಕ್ಕೆ ತಾವೇ ತಕ್ಕ ರಾಗ ಮತ್ತು ತಾಳಗಳನ್ನು ಸೂಚಿಸಿದ್ದಾರೆ.

ಡಿ.ವಿ. ಜಿ ಅವರನ್ನು ಹುಡುಕಿಕೊಂಡು ಬಂದ ಗೌರವಗಳು, ಪ್ರಶಸ್ತಿಗಳು ಹಲವಾರು. ಅದರಲ್ಲಿ ಕೆಲವು ೧೯೩೨ ರ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದುದು.
೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು.
೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಫೋಟೋ ಕೃಪೆ: Facebook
೧೯೭೩ ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ರಲ್ಲಿ ಭಾರತ ಸರ್ಕಾರ “ಪದ್ಮಭೂಷಣ ಪ್ರಶಸ್ತಿ” ನೀಡಿ ಗೌರವಿಸಿತು. ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು.
ವಿದ್ವತ್ತು, ವ್ಯಕ್ತಿತ್ವ, ಪ್ರತಿಭೆ ಎಲ್ಲದರಲ್ಲೂ ಎತ್ತರಕ್ಕೆ ನಿಲ್ಲುವ ಡಿವಿಜಿ ಅವರು ತಮ್ಮ ೮೮ ನೆಯ ವಯಸ್ಸಿನಲ್ಲಿ ಅಕ್ಟೋಬರ್ ೭ , ೧೯೭೫ ರಲ್ಲಿ ನಿಧನರಾದರು.
ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.
- ವಸಂತ ಗಣೇಶ್ (ಲೇಖಕರು, ಚಿಂತಕರು)
