ಡಾ.ಪ್ರಕಾಶ ಬಾರ್ಕಿ ಅವರ ಸಮಯ ಪ್ರಜ್ಞೆಯಿಂದ ಚಂದ್ರು ಎಂಬ ರೋಗಿಯ ಜೀವ ಉಳಿಯಿತು. ಚಂದ್ರು ಅವರ ಕುಟುಂಬ ಜೀವನ ಪರಿಯಂತ ಡಾಕ್ಟರ್ ಗೆ ಆಭಾರಿಯಾಗಿದ್ದಾರೆ. ಡಾ.ಪ್ರಕಾಶ ಬಾರ್ಕಿ ಅವರು RTPCR ರಿಪೋರ್ಟ್ ತಿನ್ನಿಸಿದ ಚಳ್ಳೆಹಣ್ಣಿನ ನೈಜ್ಯ ಕತೆಯನ್ನು ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮುಖದಲ್ಲಿ ಆರು ದಿನದಿಂದ ತುಂಬಿಕೊಂಡಿದ್ದ ದುಗುಡವನ್ನ ಗಾಳಿಗೆ ತೂರಿ.. ಮೊಬೈಲ್ ಹಿಡಿದು ನನ್ನೆಡೆಗೆ ಬೈಕ್ ತಿರುಗಿಸಿದ್ದ “ಚಂದ್ರು”.
ಮುಖದಲ್ಲಿ ಅಡರಿದ್ದ ಸುಸ್ತು, ಕುಳಿಬಿದ್ದ ಕೆನ್ನೆ, ಕೆಂಡದಂತ ಕೆಂಪನೆಯ ಕಣ್ಣು ನೋಡಿದ್ರೆ ಅರ್ಥ ಆಗ್ತಿತ್ತು ಆತನಿಗೆ ಇನ್ನೂ ಜ್ವರ ಕಡಿಮೆಯಾಗಿಲ್ಲ ಅಂತಾ.
ಚಂದ್ರುಗೆ ಮೂರು ದಿನದಿಂದ ಚಳಿಜ್ವರ, ಮೈ ಕೈ ನೋವು, ಗಂಟಲು ನೋವು, ಕೆರೆತ, ಸ್ವಲ್ಪ ಒಣ ಕೆಮ್ಮು ಇತ್ತು.. ನಾನು ಪರೀಕ್ಷಿಸಿ ಔಷಧಿ ನೀಡಿದ್ದೆ, ಔಷಧಿಯಿಂದ ಚೂರು ಮಣಿಯದೆ ಎದೆ ಸೆಟೆಸಿ ಸೆಣಸಾಟಕ್ಕೆ ಬಿದ್ದಂತಿತ್ತು ಆತನೊಳಗಿನ ತೊಂದರೆ.
ಮೂರನೇಯ ದಿನ
ಕರೋನಾ RTPCR ಪರೀಕ್ಷೆ ಮಾಡಿಸಲು ಸಲಹೆ ಕೊಟ್ಟಿದ್ದೆ, ನನ್ನ ಜೊತೆ ಸಲುಗೆಯಿಂದಿದ್ದ ಚಂದ್ರು, ಒಲ್ಲದ ಮನಸ್ಸಿನಿಂದ, ತೀರಾ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು “ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದ.

ಫೋಟೋ ಕೃಪೆ : New Indian Express
ಚಂದ್ರುಗೆ ನನ್ನ ಮೇಲೆ ಸಂಶಯ ಕಾಡತೊಡಗಿತ್ತು. ಕಾರಣ.. ನಾನು ಕೊಟ್ಟ ಮಾತ್ರೆಗೆ ಆತನ ತೊಂದರೆ ಚೂರು ಕ್ಯಾರೇ ಅನ್ನದೆ, ಮಿಸುಕಾಡಿರಲಿಲ್ಲ ಮತ್ತೊಂದು ಕಟ್ಟುಬಿದ್ದು ನಾನು ಕರೋನಾ ಪರೀಕ್ಷೆಗೆ ಕಳಿಸಿದ್ದು. ಬೇರೆ ವೈದ್ಯನನ್ನು ಭೇಟಿಯಾದರಾಯಿತು ಅಂತ ತೀರ್ಮಾನಿಸಿದ್ದ. ಆತನಿಗೆ ನನ್ನ ಮೇಲೆ ಸಂಶಯ ಪಡಲು ಪುರಾವೆಯಂತಿದ್ದ ಕಾರಣಗಳು ಇಷ್ಟೇ..
- ಹೊರಗೆ ಹೋದಾಗ ಕಟ್ಟುನಿಟ್ಟಾಗಿ ಮಾಸ್ಕ್ ಬಳಸಿದ್ದ.
- ಜನಸಂದಣಿ ಸಹವಾಸಕ್ಕೆ ಹೋದವನಲ್ಲ
- ಪ್ರತಿ ಸಾರೆ ಸ್ಯಾನಿಟೈಸರ್ ಬಳಸಿದ್ದ.
- ಹಿಂದಿನ ದಿನ ಸುರಿದ ಮಳೆ ನೀರಿಗೆ ಮೈಯೊಡ್ಡಿದ್ದ.
ಮೂರು ದಿನದಿಂದ ವಿಪರೀತ ಬಳಲಿ ಬೆಂಡಾಗಿ, ಮೂರನೆಯ ದಿನಕ್ಕೆ RT-PCR ಪರೀಕ್ಷೆ ಕೊಟ್ಟಿದ್ದ ಚಂದ್ರು ಬಕಪಕ್ಷಿಯಂತೆ ಬರುವ ಮೆಸೇಜ್’ಗಾಗಿ,ನಾನು ಕೊಟ್ಟ ಮಾತ್ರೆ ನುಂಗುತ್ತಾ… ತುದಿಗಾಲಲ್ಲಿ ಕಾಯುತ್ತಾ ನಿಂತ.

ಫೋಟೋ ಕೃಪೆ : ABC news
ಆತನ ಕಾಯುವಿಕೆಗೆ ಅಂಕುಶ ಹಾಕಿದಂತೆ ಟೆಸ್ಟ್ ಕೊಟ್ಟ ನಾಲ್ಕನೆಯ ದಿನಕ್ಕೆ ಮೊಬೈಲ್’ಗೆ ಟಿಂವ್… ಟಿಂ…ವಿಸುತ್ತಲೆ ಮೆಸೆಜ್ ಬಂದು ಬಿತ್ತು. ನಡಗುತ್ತಿದ್ದ ಕೈ ಯಿಂದ ಮೆಸೆಜ್ ತೆರೆದು ನೋಡಿದವನ ಮುಖದಲ್ಲಿ ವಕ್ರವಾಗಿದ್ದ ಆತಂಕದ ಗೆರೆಗಳು ನೆಟ್ಟಗಾಗಿ ನಗು ಚಿಮ್ಮಿತು.
“#RT-PCR ಪರೀಕ್ಷೆ ನೆಗಟಿವ್” ಕರೋನಾ ಇಲ್ಲ..!!!!!
ನನ್ನ ಮುಖಕ್ಕೆ ಹೊಡೆದಂಗೆ ಮಾತನಾಡಲು, ಚನ್ನಾಗಿ ಹಳಿಯಲೆಂದೆ, ಮೊಬೈಲ್ ಮೆಸೆಜ್ ತೋರಿಸಲು ಓಡಿ ಬಂದಿದ್ದ. ಆತನ ಮನವರಿತವನೇ ಮೌನಕ್ಕೆ ಜಾರಿದೆ.
ಆರು ದಿನವಾದರೂ ಆತನ ಯಾವ ಲಕ್ಷಣಗಳು ಹತೋಟಿಗೆ ಬಂದಿರಲಿಲ್ಲ. ಇವಾಗ ಹೊಟ್ಟೆ ನೋವು, ಬೇದಿ ಜೊತೆಯಾಗಿತ್ತು. ಆಗಾಗ ಕೈ ಕಾಲು ನಡುಕ. ತೂಕ ಕಳೆದುಕೊಂಡಿದ್ದ..

ಫೋಟೋ ಕೃಪೆ : Conversation
ಎಲ್ಲಾ ಲಕ್ಷಣಗಳಿದ್ದರೂ.. ಕರೋನಾ ನೆಗೆಟಿವ್ ವರದಿ ಬಂದದ್ದು ಆತನಿಗೆ ಸಂತೋಷವಾದರೂ…, ಅದು ಹೇಗೆ?? ಅಂತ ನನ್ನ ಮನದಾಳದಲ್ಲಿ ಅಡಗಿದ್ದ ಸಂಶಯ ನೂರ್ಮಡಿಯಾಯಿತು.
ಚಂದ್ರು ಮತ್ತು ಮನೆಯವರು ತುಂಬಾ ಪರಿಚಯಸ್ಥಯರಾದ್ದರಿಂದ, ಅವನ ತಂದೆಗೆ ಪೋನಾಯಿಸಿ ತಿಳಿಹೇಳಿ, ಆತನ ಲಕ್ಷಣಗಳು ಇನ್ನೂ ಹತೋಟಿಗೆ ಬರದದ್ದನ್ನು ಗಮನಕ್ಕೆ ತಂದು, ಎದೆಯ ಸಿ.ಟಿ ಸ್ಕ್ಯಾನ್ ಮಾಡಿಸಲು ಒತ್ತಾಯಿಸಿದೆ.
ನನ್ನ ಸಂಶಯಿಸಿ, ಬೇರೆ ವೈದ್ಯರ ಭೇಟಿಗೆ ಹವಣಿಸುತ್ತಿದ್ದ ಚಂದ್ರು.. ತಂದೆಯ ಒತ್ತಾಯಕ್ಕೆ ಬಾಗಿ, ಜಿಲ್ಲಾಸ್ಪತ್ರೆಯ ಸಿ.ಟಿ ಸ್ಕ್ಯಾನ್ ಮಷೀನ್ ಒಳಗೆ ತೂರಿ ಹೊರಬಂದ.
ಅಂದು ಕ್ಲಿನಿಕ್’ಲ್ಲಿ ಕೂತು ಶಬರಿಯಂತೆ ಕಾಯುವ ಸರದಿ ನನ್ನದು, ಪ್ರತಿ ನಿಮಿಷ ವಾಟ್ಸಾಪ್ ತೆರೆದು ಮೆಸೇಜ್ ನೋಡುವುದೆ ಆಯ್ತು. ಅಂತೂ ಸಾಯಂಕಾಲದ ಹೊತ್ತಿಗೆ ನನ್ನ ಮೊಬೈಲ್ ಕಣ್ಣು ಮಿಟುಕಿಸಿ, ಮೆಸೆಜ್ ಬಂದಿರೋ ಅರಿವು ಮೂಡಿಸಿತು.
ವಾಟ್ಸಾಪ್ ತೆರೆದಾಗ ಚಂದ್ರು ಕಳಿಸಿದ್ದ ಸಿ.ಟಿ ಸ್ಕ್ಯಾನ್ ರಿಪೋರ್ಟ್ ನಿಚ್ಚಳವಾಯಿತು. ಸಿ.ಟಿ ಸ್ಕ್ಯಾನ್ ರಿಪೋರ್ಟ್’ಲ್ಲಿ ಸ್ಪಷ್ಟವಾಗಿತ್ತು.
“ಕರೋನಾ ವೈರಾಣು ಉಸಿರುನಾಳದಿಂದ ಜಾರಿ, ಪುಪ್ಪುಸವನ್ನ ಅಡಗುದಾಣ ಮಾಡಿಕೊಂಡು ಪದೇ ಪದೇ ದಂಡೆತ್ತಿ ಬಂದ ಲಕ್ಷಣಗಳು ದಟ್ಟವಾಗಿ ಗೋಚರಿಸಿದ್ದವು” Typical covid- 19 (CORADS-5). ಭಾರವಾದ ಮನಸ್ಸಿನಿಂದ ಚಂದ್ರುಗೆ ವಿಷಯವನ್ನು ಸೂಕ್ಷ್ಮವಾಗಿ ವಿವರಿಸಿ, ಧೈರ್ಯ ತುಂಬಲು ಪ್ರಯತ್ನಿಸಿದೆ. ಆತನ ತಂದೆಗೆ ಗಂಭೀರತೆಯ ಅಂಶಗಳನ್ನು ಚುಟುಕಾಗಿ ವಿವರಿಸಿ, ನುರಿತ ಹಿರಿಯ ವೈದ್ಯರಿಗೆ ಶಿಫಾರಸ್ಸು ಮಾಡಿದೆ.
ಅಂತೂ.. ನುರಿತ ವೈದ್ಯರ ಕಣ್ಗಾವಲಿನಲ್ಲಿ ಐದು ದಿನ ಚಿಕಿತ್ಸೆ ಪಡೆದು, ಆಕ್ಸಿಜನ್ ಅವಶ್ಯಕತೆ ಬೀಳುವ ಮೊದಲೆ ಸಂಪೂರ್ಣ ಲಕ್ಷಣರಹಿತನಾಗಿ ಇಂದು ಸಾಯಂಕಾಲ ಮರಳಿದ. ಮನೆಯ ಒಂದು ರೂಮಿಗೆ ಸೀಮಿತವಾದ. ಕಡ್ಡಾಯವಾಗಿ 14 ದಿನ ಮನೆಯವರ ಒಡನಾಟದಿಂದ ದೂರವಿರುವುದು ಅನಿವಾರ್ಯವಾಗಿತ್ತು. (Home Isolation)
ಸುಸ್ತು ಇನ್ನೂ ಆತನನ್ನ ಸಂಪೂರ್ಣ ತೊರೆದು ಹೋಗಿಲ್ಲ. ಹತ್ತು ದಿನದ ನಂತರ ಮತ್ತೆ ಚಿಕಿತ್ಸೆ ನೀಡಿದ ವೈದ್ಯರನ್ನು ಭೇಟಿಯಾಗುವುದಿದೆ. ಆದರೆ ಸಂಪೂರ್ಣ ಅಪಾಯದಿಂದ ಪಾರಾಗಿ, ಕರೋನಾ ಸೋಲಿಸಿ ಬಂದಿದ್ದಾನೆ.
ಚಂದ್ರುನ ತಂದೆ ಕ್ಲಿನಿಕ್’ಗೆ ಬಂದು ಈ ಎಲ್ಲ ವಿಷಯ ತಿಳಿಸಿದ ಸಂತಸವಾಯಿತು, ಹೊರಡುವಾಗ ಆತನ ಕಣ್ಣಲ್ಲೊಂದು ಕೃತಜ್ಞತೆಯ ಭಾವವಿತ್ತು. ಕೈ ಜೋಡಿಸಿ ಹೊರ ನಡೆದ.
ಅಂತೂ “ಚಂದ್ರು”.. ಕರೋನಾ 2 ನೇಯ ಅಲೆಯಲ್ಲಿ ಈಜಿ ಗೆದ್ದುಬಿಟ್ಟ.
“RT-PCR ಟೆಸ್ಟ್ ನೆಗೆಟಿವ್ ಬಂದಿದ್ದರೂ… ಜ್ವರ, ನೆಗಡಿ, ಕೆಮ್ಮು, ಸುಸ್ತು, ಹೊಟ್ಟೆ ನೋವು, ಬೇದಿ, ಕಣ್ಣು ಕೆಂಪಗಾಗುವುದು,ಎದೆಯಲ್ಲಿ ನೋವು, ನಡೆದಾಗ ಉಸಿರು ಕಟ್ಟಿದಂತಾದರೆ…, ವೈದ್ಯರ ಗಮನಕ್ಕೆ ತಂದು ಅವರು ಅಣತಿಯಿತ್ತರೆ ಎದೆಯ ಸಿ.ಟಿ ಸ್ಕ್ಯಾನಿಂಗ್ ಮಾಡಿಸುವುದು ಉತ್ತಮ. ರೂಪಾಂತರಿ ಕರೋನಾ ವೈರಾಣು(mutant coronavirus) RT-PCR ಟೆಸ್ಟ್’ನಿಂದ ಪತ್ತೆಯಾಗುವುದಿಲ್ಲ. ಸಿ.ಟಿ ಸ್ಕ್ಯಾನಿಂಗ್ ನಿಖರವಾಗಿ ಪತ್ತೇ ಹಚ್ಚಬಲ್ಲದು.”
- ಡಾ.ಪ್ರಕಾಶ ಬಾರ್ಕಿ (ವೈದ್ಯರು, ಬರಹಗಾರರು), ಕಾಗಿನೆಲೆ
