‘ದ್ವಂದ್ವ’ ಸಿನಿಮಾದ ಬಗ್ಗೆ ನನ್ನ ಅಭಿಪ್ರಾಯ

ನಾನು ನೋಡಿದ ಇತ್ತೀಚಿನ ಚಿತ್ರ ‘ದ್ವಂದ್ವ’ ದ ಬಗ್ಗೆ ನನ್ನ ಅನುಭವ, ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ. ವಿನಃಹ ಇಲ್ಲಿ ನಾನು ವಿಮರ್ಶೆ ಮಾಡೋಲ್ಲ…ಚಿತ್ರತಂಡದ ಕನಸು, ಶ್ರಮ, ಹೊಸತನ ಈ ಚಿತ್ರದಲ್ಲಿ ನಾವು ಕಾಣಬಹುದು. ಚಿತ್ರದ ಬಗ್ಗೆ ನನ್ನ ಮಾತುಗಳನ್ನು ತಪ್ಪದೆ ಮುಂದೆ ಓದಿ…

ಸಿನಿಮಾ : ದ್ವಂದ್ವ
ನಿರ್ಮಾಪಕರು : ಪ್ರದೀಪ್ ಕೌಡಳ್ಳಿ
ಪ್ರೊಡಕ್ಷನ್ : ಕಾಮನ್ ಮ್ಯಾನ್ ಪ್ರೊಡಕ್ಷನ್

ನಿರ್ದೇಶನ : ಭರತ್ ಎಲ್
ತಾರಾಂಗಣ : ತಿಲಕ್ (ನಾಯಕ ), ಆಸಿಯಾ ಫಿರ್ದೋಸ್ (ನಾಯಕಿ), ಶೋಭರಾಜ್, ಶೋಭನ್ ಇತರರು ಇದ್ದಾರೆ…

ಬೆಳಂಬೆಳಗ್ಗೆ ಶೋಭನ್ ಕರೆ ಮಾಡಿ “ಮೇಡಂ, ಶುಕ್ರವಾರ ನಮ್ಮ ಸಿನಿಮಾ ‘ದ್ವಂದ್ವ’ ಬಿಡುಗಡೆ ಆಗ್ತಿದೆ. ದಯವಿಟ್ಟು ನೀವು ಬರಬೇಕು… ಸಿನಿಮಾ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು” ಅಂದ. ಏನನ್ನು ಹೇಳದೆ ಒಂದೇ ಮಾತಿಗೆ ” ಸಿನಿಮಾ ಯಾವಾಗ?… ಎಲ್ಲಿ?… ಎತ್ತ?… ಅಂತ ಒಂದು ವಾಟ್ಸಪ್ಪ್ ಮಾಡಿ, ಖಂಡಿತಾ ಬರ್ತೀನಿ”… ಅಂದೆ. “ಎಲ್ಲ details ಕಳಸ್ತೀನಿ ತಪ್ಪದೆ ಬನ್ನಿ, ಮೇಡಂ”… ಅಂದ. ಆಯ್ತು ಅಂತ ಹೇಳಿ ಫೋನ್ ಕೆಳಗೆ ಇಟ್ಟೆ.

ಶೋಭನ್ ನನ್ನ ಸ್ನೇಹಿತ ಭಾರ್ಗವನಿಂದ ಪರಿಚಯವಾದ ಕಲಾವಿದ. ನಡೆ ನುಡಿಯಲ್ಲಿ ನಯ, ವಿನಯ ಇರುವಂತ ಹುಡುಗ. ಅದೇ ಸಿನಿಮಾ ಅಂತ ಬಂದ್ರೆ ತೆರೆಯ ಮೇಲಿರಲಿ…ಹಿಂದೆ ಇರಲಿ…  ಹುಚ್ಚನಂತೆ ಕೆಲಸ ಮಾಡುತ್ತಾನೆ. ಕಲಾ ಹಸಿವು ಇರುವಂತಹ ಹುಡುಗ. ಅಂತವರ ಸಿನಿಮಾ ನೋಡೋಲ್ಲ ಅಂದ್ರೆ ಅದು ನನ್ನ ಗರ್ವವಾಗುತ್ತೆ ಅಂತ ಸಿನಿಮಾ ನೋಡಲು ರೆಡಿ ಆದೆ.

‘ದ್ವಂದ್ವ’ ಸಿನಿಮಾದ ನಿರ್ದೇಶಕರು , ನಿರ್ಮಾಪಕರು, ನಾಯಕಿ ಯಾರು ನನಗೆ ಗೊತ್ತಿರಲಿಲ್ಲ. ಎಲ್ಲರೂ ಹೊಸಬರೇ…. ಆದರೆ ಈ ಸಿನಿಮಾದ ನಾಯಕ ತಿಲಕ್ ಅಂತ ಗೊತ್ತಾದಾಗ ಅವರ “ಕರ್ವ” ಸಿನಿಮಾ ನೆನಪಾಯಿತು. ಅವರ ಗಾಂಭೀರ್ಯ ನೋಟ, ಪ್ಲೇ ಬಾಯ್ ಪಾತ್ರಗಳು ನನಗೆ ಇಷ್ಟವಾಗಿತ್ತು. ಈ ಸಿನಿಮಾದಲ್ಲಿಯೂ ಅವರ ಪಾತ್ರ ಹಾಗೆಯೇ ಇರಬಹುದೇನೋ ಅನ್ನುವ ನಿರೀಕ್ಷೆಯಂತೂ ಇತ್ತು.

ಶುಕ್ರವಾರ ಸಿನಿಮಾದ ಮೊದಲನೇ ಶೋ ನೋಡಲು ಶೋಭನ್ ಹೇಳಿದ ತ್ರಿವೇಣಿ ಥಿಯೇಟರ್ ಗೆ ಹೋದೆ. 10.30ಕ್ಕೆ ಶೋ… ನಾನು, ನನ್ನ ಗಂಡ ಪದ್ದಣ್ಣ 9.00 ಗಂಟೆಗೆ ಅಲ್ಲಿದ್ದೆವು… ನಾವು ಗಾಂಧಿನಗರದಲ್ಲಿ ಓಡಾಡದೆ ಎಷ್ಟೋ ವರ್ಷವಾಗಿತ್ತು. 10.00 ಗಂಟೆವರೆಗೂ  ನಾನು, ಪದ್ದಣ್ಣ ಅಲ್ಲೇ ಸುತ್ತಲೂ ಸುತ್ತಾಡಿದೆವು.

10.00 ಗಂಟೆ ಆದ್ಮೇಲೆ ಶೋಭನ್ ಗೆ ಕಾಲ್ ಮಾಡಿ ನಾವು ಬಂದಿದ್ದೇವೆ… ಅಂತ ಸುದ್ದಿ ಮುಟ್ಟಿಸಿದೆ. ಶೋಭನ್ ಖುಷಿಯಿಂದ ಥಿಯೇಟರ್ ನಿಂದ ಹೊರಕ್ಕೆ ಓಡೋಡಿ ಬಂದರು.

ತನ್ನ ಜೊತೆಗೆ ಫಾರ್ಮಲ್ ಡ್ರೆಸ್ ನಲ್ಲಿದ್ದ ವ್ಯಕ್ತಿಯೊರ್ವನನ್ನು ಕರೆದುಕೊಂಡು ಬಂದು “ಮೇಡಂ… ಇವರು ಈ ಸಿನಿಮಾದ ನಿರ್ದೇಶಕರು ಭರತ್ ಎಲ್”… ಅಂದ. ಐಟಿ ಪ್ರೊಫೆಷನಲ್ ತರ ಟಿಪ್ ಟಾಪ್ ಆಗಿ ಫಾರ್ಮಲ್ ಬಟ್ಟೆಯಲ್ಲಿ ಇರೋರು ಡೈರೆಕ್ಟರ್ ಅಂದಾಗ ಅಚ್ಚರಿಯಿಂದ ಅವರನ್ನು ಮೇಲಿಂದ ಕೆಳಗೆ ನೋಡಿದೆ. “ಮೇಡಂ, ಇವರು ವೃತ್ತಿಯಲ್ಲಿ ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಿನಿಮಾ ನಿರ್ದೇಶಕರು”…ಅಂದಾಗ ಇನ್ನಷ್ಟು ಅಚ್ಚರಿ ಆಯ್ತು. ಎತ್ತಣ್ಣ ಮಾಮರ, ಎತ್ತಣ ಕೋಗಿಲೆ… ಸಾಫ್ಟ್ ವೆರ್ ಎಲ್ಲಿ… ನಿರ್ದೇಶನ ಎಲ್ಲಿ… ಅವರನ್ನ ಅಚ್ಚರಿಯಿಂದ ನೋಡುತ್ತಲೇ ಇದ್ದೆ.

“ಸಾಫ್ಟ್ ವೇರ್ ನಿಂದ ಸಿನಿಮಾದತ್ತ ಹೇಗೆ ಸರ್?”… ಎಂದು ಅವರ ಆಸಕ್ತಿಯ ಬಗ್ಗೆ ಕೇಳಿದೆ. “ಸಿನಿಮಾ ಹುಚ್ಚು ಚಿಕ್ಕಂದಿನಿಂದಲೂ ಇತ್ತು ಮೇಡಂ… ಆದರೆ ಅಂದು ಕಾಲ ಕೂಡಿ ಬಂದಿರಲಿಲ್ಲ, ಈಗ ಕೂಡಿ ಬಂದಿದೆ”… ಅಂತ ನಗುತ್ತ ಉತ್ತರಿಸಿದರು.

“ದ್ವಂದ್ವದ ವಿಶೇಷತೆ ಏನು?”…ಪ್ರಶ್ನೆಗೆ

“ಈ ಸಿನಿಮಾ ಕತೆ ನಾಯಕಿಯ ಸುತ್ತಲೂ ಹೋಗುತ್ತೆ. ನಾಯಕಿಗೆ ಹೈಪರ್ ಟೈಮಿಸಿಯಾ (hyperthymesia) ಎನ್ನುವ ಅಪರೂಪದ ಸಿಡ್ರೋಮ್ ಇರುತ್ತೆ. ಹೈಪರ್ ಟೈಮಿಸಿಯಾ ಎಂದರೆ ನೋಡಿದ್ದೆಲ್ಲ ಎಷ್ಟೋ ವರ್ಷವಾದರೂ ತಲೆಯಲ್ಲಿ ಪ್ರಿಂಟ್ ಆಗಿ ಕೂರುತ್ತದೆ. ಈ ಒಂದು ಸಿಡ್ರೋಮ್ ಕಾಲ್ಪನಿಕವಲ್ಲ, ಅಮೇರಿಕಾದಲ್ಲಿ ಒಬ್ಬ ಮಹಿಳೆಗೆ ಈ ಸಿಂಡ್ರೋಮ್ ಇದೆ. ಈ ಸಿಡ್ರೋಮ್ ಬಗ್ಗೆ ಕುತೂಹಲಗೊಂಡು ಹೆಚ್ಚು ತಿಳಿದುಕೊಳ್ಳುತ್ತಾ ಹೋದಾಗ “ದ್ವಂದ್ವ” ದ ಕತೆ ಹುಟ್ಟಕೊಳ್ತು”… ಎಂದು ಕತೆಯ ಹುಟ್ಟಿನ ಬಗ್ಗೆ ನಿರ್ದೇಶಕ ಭರತ್ ಅವರು ಹೇಳಿದಾಗ ಇಂತಹ ಒಂದು ಸಿಡ್ರೋಮ್ ಇರುತ್ತಾ!…ಅಂತ ನನ್ನಲ್ಲೂ ಕುತೂಹಲ ಶುರು ಆಯಿತು. ಹಾಗಿದ್ರೆ ಸಿನಿಮಾ ನನ್ನ ತಲೆಯನ್ನ ದ್ವಂದ್ವ ಮಾಡಿ ಖುಷಿ ಕೊಡೋದು ಪಕ್ಕಾ ಅಂದುಕೊಂಡೆ.

ಸಿನಿಮಾ ಶುರು ಆಗುತ್ತೆ ಅಂತ ಸುಮಾರು ಹೊತ್ತು ಕಾಯುತ್ತಾ ಹೊರಗೆ ನಿಂತೆ. ಕೊನೆಗೆ ಸಿನಿಮಾ ಯಾಕೆ ತಡವಾಗ್ತಿದೆ ಅಂತ ಕೇಳಿದಾಗ ಬಂದ ಉತ್ತರ, “ಸಿನಿಮಾದ ನಾಯಕ, ನಾಯಕಿ ಇನ್ನೂ ಬಂದಿಲ್ಲ….ಅವರು ಇನ್ನೇನು 10 ನಿಮಿಷದಲ್ಲಿ ಬಂದು ಬಿಡ್ತಾರೆ ಮೇಡಂ, ಸಿನಿಮಾ ಬೇಗ ಶುರು ಆಗುತ್ತೆ”… ಅಂದರು. ಸಿನಿಮಾದ ನಿರ್ದೇಶಕರು, ನಿರ್ಮಾಪಕರು ಮಾತ್ರ ಬೆಳoಬೆಳಗ್ಗೆನೇ ಥಿಯೇಟರ್ ಗೆ ಬಂದು ಕೂತಿದ್ದರು. ಇಲ್ಲಿ ಯಾರಿಗೆ ಹಸಿವೆ ಹೆಚ್ಚಿದೆ ಅಂತ ನನಗೆ ಅರ್ಥವಾಗಿ ಸುಮ್ಮನೆ ಒಳಗೆ ಹೋಗಿ ಕೂತೆ.

ಸಿನಿಮಾ ಶುರುವಾಯಿತು. ನಾಯಕಿಗೆ ಹೈಪರ್ ಟೈಮಿಸಿಯಾ  ಸಿಡ್ರೋಮ್ ಇರುತ್ತದೆ. ಆ ಸಿಡ್ರೋಮ್ ನ ಲಾಭ ಯಾರ್ ಯಾರು ಪಡೆಯುತ್ತಾರೆ. ಅದರಿಂದ ನಾಯಕಿ ಹೇಗೆ ಒದ್ದಾಡುತ್ತಾಳೆ?… ಅವಳನ್ನು ಹಿಡಿಯಲು ಎಷ್ಟೆಲ್ಲ ಗುಂಪು ಸಿದ್ಧವಾಗುತ್ತೆ ?…ಮುಂದೆ ನಾಯಕ ಅವಳ ಕೈ ಹಿಡಿಯುತ್ತಾನಾ?….ಇದನ್ನೆಲ್ಲಾ  ತಿಳಿದುಕೊಳ್ಳಬೇಕು ಅಂದ್ರೆ ನೀವು ಸಿನಿಮಾ ನೋಡಲೇಬೇಕು.

ಸಿನಿಮಾದ ಮೊದಲರ್ಧ ಭಾಗದಲ್ಲಿ ಏನ್ ಆಗ್ತಿದೆ ಅನ್ನೋದು ಪ್ರೇಕ್ಷಕನಿಗೆ ದ್ವಂದ್ವ ಆಗೋದು ಗ್ಯಾರಂಟಿ. ಅದೇ ಎರಡನೇ ಭಾಗದಲ್ಲಿ “ಯಾರು ನನ್ನವರು”…. ಅನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಕಾಡುವುದಂತೂ ಗ್ಯಾರಂಟಿ. ಒಂದು ಸಿಡ್ರೋಮ್ ಇಟ್ಟುಕೊಂಡು ಕತೆ ಹೆಣೆದಿದ್ದು ಸಾಹಸವೇ ಸರಿ. ಬದುಕಿನ ಹೋರಾಟದಲ್ಲಿ ಯಾರೇಲ್ಲ ಹೇಗೆಲ್ಲ ದಾರಿ ತಪ್ಪುತ್ತಾರೆ ಮತ್ತು ಸ್ವಾರ್ಥ ಪ್ರಪಂಚದಲ್ಲಿ ಕೊನೆಗೆ ಅಪ್ಪ, ಮಗ, ಮಗಳು, ಪ್ರಿಯಕರ, ಪ್ರೇಯಸಿ ಸಂಬಂಧಗಳಲ್ಲಿಯೇ ಹೇಗೆ ಮೋಸ ಹೋಗ್ತೀವಿ ಅನ್ನೋದನ್ನ ನಿರ್ದೇಶಕರು ತೆರೆಯ ಮೇಲೆ ಚೆನ್ನಾಗಿ ತಂದಿದ್ದಾರೆ.

ಆದರೆ ನಾಯಕನ ಪಾತ್ರಕ್ಕಿಂತ ಸಿನಿಮಾದಲ್ಲಿ ಚಿಕ್ಕ ಚಿಕ್ಕ ಪಾತ್ರಗಳಿಗೆ ವೈಭವೀಕರಣ ಹೆಚ್ಚಾಗಿದೆ. ಅದು ಅನಾವಶ್ಯಕ ಅನ್ನಿಸಿತು. ಕತೆ ನಾಯಕ, ನಾಯಕಿ ಸುತ್ತ ಸುತ್ತಿದ್ದರೆ ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುತ್ತಿತ್ತು. ಶೋಭನ್ ಎಂಟ್ರಿ ಕೂಡಾ ಇಷ್ಟಾಯಿತು…ಶೋಭನ್ ಒಳ್ಳೆ ಕಲಾವಿದ, ಆ ಪಾತ್ರ ಬೆಳೆಸಿದ್ದರೇ ಕತೆ ಗಮ್ಮತ್ ಹೆಚ್ಚುತ್ತಿತ್ತು. ಹಾಸ್ಯ ಇಲ್ಲವೆಂದರೆ ಚಿತ್ರ ಸಪ್ಪೆಯಾಗುತ್ತದೆ. ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳನ್ನು ತಂದಿದ್ದರೇ ಪ್ರೇಕ್ಷಕ ಖುಷಿ ಪಡುತ್ತಿದ್ದ.

ನಾಯಕಿ ಪ್ರಬುದ್ಧವಾಗಿ ನಟಿಸಿದ್ದಾರೆ. ನಾಯಕ ತಿಲಕ್ ನಾನು ಅಂದುಕೊಂಡಂತೆ ಅದೇ ನೋಟ, ಪ್ಲೇ ಬಾಯ್ ಪಾತ್ರ, ಚೆನ್ನಾಗಿ ಅಭಿನಯಿಸಿದ್ದಾರೆ. ಶೋಭರಾಜ್ ಖಡಕ್ ಲುಕ್ ನಲ್ಲಿ ಮಿಂಚಿದ್ದಾರೆ. ಅನುಭವಿ ಕಲಾವಿದರ ತಂಡ ಈ ಸಿನಿಮಾದಲ್ಲಿ ಇರುವುದರಿಂದ ಕತೆಗೆ ನೈಜ್ಯತೆ ಬಂದಿದೆ.

ಸಿನಿಮಾದಲ್ಲಿ ಏಳು- ಬಿಳು, ಸರಿ -ತಪ್ಪುಗಳು ಆಗೋದು ಸಹಜ. ಅದು ಎಷ್ಟೇ ದೊಡ್ಡ ನಿರ್ದೇಶಕರಿರಲಿ, ನಾಯಕರಿರಲಿ ಒಮ್ಮೆ ಸಿನಿಮಾ ಗೆಲ್ಲುತ್ತದೆ, ಒಮ್ಮೆ ಸೋಲುತ್ತದೆ. ಹಾಗೆಯೇ ಈ ಸಿನಿಮಾದಲ್ಲಿ ಕೆಲವು ಕಡೆ ನಿಧಾನ ಅನಿಸಿದರೂ ಸಿನಿಮಾ ವಿಭಿನ್ನವಾಗಿದೆ. ಲಾಂಗು, ಮಚ್ಚು ಇಲ್ಲದೆ ವೈಜ್ಞಾನಿಕ ವಿಷಯವನ್ನು ಇಟ್ಟುಕೊಂಡು ಸಂಪೂರ್ಣ ಮೈಂಡ್ ಗೇಮ್ ಆಗಿ ಮಾಡಿದಂತಹ ಸಿನಿಮಾ. ಚಿತ್ರ ತಂಡದ ಶ್ರಮ, ಶ್ರದ್ದೆ ಮೆಚ್ಚುವಂತದ್ದು. ಎಷ್ಟೋ ಸಿನಿಮಾಗಳು ಶುರುವಾಗಿ ಆರ್ಥಿಕ ತೊಂದರೆಯಿಂದ ಅರ್ಧಕ್ಕೆ ನಿಂತಿದ್ದು ನೋಡಿದ್ದೇವೆ. ಆದರೆ ನಿರ್ಮಾಪಕ ಪ್ರದೀಪ್ ಕೌಡಳ್ಳಿ ಅವರು ಗಟ್ಟಿಯಾಗಿ ಚಿತ್ರತಂಡಕ್ಕೆ ನಿಂತು ನೂರಾರು ಕಲಾವಿದರ ಕೈ ಹಿಡಿದಿದ್ದಾರೆ. ಈ ಚಿತ್ರತಂಡ ಹಠ ತೊಟ್ಟು ಒಂದು ಹೊಸ ಪ್ರಯತ್ನ ಮಾಡಿದೆ, ಆ ಛಲಕ್ಕೆ ಭೇಷ್ ಎನ್ನಲೇ ಬೇಕು.

ಪರಭಾಷೆ ಚಿತ್ರವನ್ನು ನೋಡ್ಬೇಡಿ ಅಂತ ನಾನು ಹೇಳೋದಿಲ್ಲ.. ನಮ್ಮ ಮಣ್ಣಿನ ಮಕ್ಕಳು ಕಷ್ಟ ಪಟ್ಟು ಒಂದು ಸಿನಿಮಾ ಮಾಡಿದಾಗ ಕೈ ಬಿಡಬೇಡಿ ಅಂತ ಮಾತ್ರ ಹೇಳ್ತಿನಿ. ಚಿತ್ರಮಂದಿರಕ್ಕೆ ಹೋಗಿ ‘ದ್ವಂದ್ವ’ ಸಿನಿಮಾ ನೋಡಿ ಚಿತ್ರತಂಡಕ್ಕೆ ಪ್ರೋತ್ಸಾಹಿಸಿ…


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, (WWW.AAKRUTIKANNADA.COM)

1.3 3 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW