ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ ಅವರ ‘ಎದೆಯ ಹಣತೆ’ ಕಥಾ ಸಂಕಲನದಲ್ಲಿ ಒಟ್ಟು 13 ಕಥೆಗಳಿವೆ. ಎದೆಯ ಹಣತೆ ಇಂಗ್ಲಿಷ್ ಗೆ ಅನುವಾದವಾದ್ದರಿಂದ ಬೂಕರ್ ಪ್ರಶಸ್ತಿಗೆ ಮೊದಲ ಹೆಜ್ಜೆಯಾಗಿ ಆಯ್ಕೆಗೊಂಡ 13 ಪುಸ್ತಕಗಳಲ್ಲಿ ಒಂದಾಯಿತು. ಈ ಕೃತಿಯ ಕುರಿತು ದೇವರಾಜ ಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಎದೆಯ ಹಣತೆ
ಲೇಖಕರು : ಭಾನು ಮುಸ್ತಾಕ
ಎದೆಯ ಹಣತೆ ಕಥಾ ಸಂಕಲನದಲ್ಲಿ ಒಟ್ಟು 13 ಕಥೆಗಳಿವೆ. ಈ ಕತೆಯ ಹೆಸರು ಕೇಳಿದಿರೇನೇ ಒಂದು ರೋಮಾಂಚನ. ಪ್ರತಿಭೆಗೆ ಸಂದ ಸನ್ಮಾನ. ಲೇಖಕಿ ಎಂತ ಪ್ರತಿಭಾನ್ವಿತೆ ಅನ್ನುವ ವಿಚಾರ ಮೂಡಿಬರುತ್ತದೆ. ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಸ್ತಾಕ, ಸೃಜನಶೀಲತೆಯುಳ್ಳ ಸಾಹಿತಿ, ಕಥೆಗಾರ್ತಿ ಅನ್ನುವ ವಿಚಾರ ಮೂಡಿ ಬರುತ್ತದೆ.
ಹೆಣ್ಣು ಶೋಷಣೆಯಾದ ಕಥೆಗಳು ಎಲ್ಲಾ ಸಮಾಜದಲ್ಲಿ ನಡೆಯುವಂತಹವೆ. ಆದರೆ ಇಲ್ಲಿ ಬರುವ ಕಥಾನಾಯಕಿಗೆ ಐದು ಮಕ್ಕಳು ಇರುವಂತಹದ್ದು ಮತ್ತು ಗಂಡಾದವನು ತಲಾಕ್ ಹೇಳುವಂತಹದ್ದು ಮುಸ್ಲಿಂ ಸಮುದಾಯದಲ್ಲಿ ಮಾತ್ರ. ಆದರೆ ಹೆಣ್ಣು ಮಕ್ಕಳು ಪ್ರಭುದ್ಧರಾಗುವ ಮೊದಲೇ, ಗೊತ್ತು ಗುರಿ ಇಲ್ಲದ ಗಂಡಿಗೆ ಮದುವೆ ಮಾಡಿಕೊಡುವುದು ಮತ್ತು ಗಂಡು, ಗಂಡಿನ ಮನೆಯವರೆ ಸರಿಯಾಗಿದ್ದಾರೆ. ನೀನು ಸರಿ ಇಲ್ಲ ಅಂತ ಹೇಳುವಂತಹ ಕಥೆ,ಎಲ್ಲಾ ಸಮಾಜದ ಹೆಣ್ಣಿಗೆ ಸಂಬಂಧ ಪಟ್ಟ ಕಥೆಗಳೇ ಆಗಿರುತ್ತವೆ. ಎಲ್ಲಾ ಸಮಾಜದಲ್ಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ.
ಎದೆಯ ಹಣತೆ ಇಂಗ್ಲಿಷ್ ಗೆ ಅನುವಾದವಾದ್ದರಿಂದ ಬೂಕರ್ ಪ್ರಶಸ್ತಿಗೆ ಮೊದಲ ಹೆಜ್ಜೆಯಾಗಿ ಆಯ್ಕೆಗೊಂಡ 13 ಪುಸ್ತಕಗಳಲ್ಲಿ ಒಂದಾಯಿತು. ಇಂಗ್ಲೀಷ್ ಗೆ ಅನುವಾದಿಸಿದ ಶ್ರೀಮತಿ ದೀಪ ಬಾಸ್ತಿ ಇವರನ್ನು ನೆನೆಯುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಎದೆಯ ಹಣತೆ ಕತೆಯನ್ನು ಓದಿದಾಗ ಆದ ಮಾನಸಿಕ ತುಮಲವನ್ನೇ ಇಲ್ಲಿ ದಾಖಲಿಸುತ್ತಿದ್ದೇನೆ. ಮದುವೆಯಾದ ಹೆಣ್ಣುಮಗಳು ಮೆಹರುನ್, 16 ವರ್ಷಗಳ ನಂತರ ತನ್ನ 9 ತಿಂಗಳ ಕೂಸಿನ ಜೊತೆ ಮತ್ತು ಸೂಟ್ಕೇಸ್ ಸಮೇತ ತವರು ಮನೆಗೆ ಬಂದಾಗ, ಮನೆಯಲ್ಲಿದ್ದ ತಂದೆ ತಾಯಿ ಆಗಲಿ,ಅಣ್ಣ ತಮ್ಮನಾಗಲಿ ಖುಷಿ ಪಡದೆ ಅವಳನ್ನು ವಿಚಿತ್ರ ಪ್ರಾಣಿಯಂತೆ ನೋಡುತ್ತಾರೆ.
ಏಕೆ ಒಬ್ಬಳೇ ಬಂದಿದೆಯಾ? ಗಂಡ ಎಲ್ಲಿ?ಹೇಳಿ ಬಂದಿದ್ದೀಯಾ? ಅನ್ನುವ ಪ್ರಶ್ನೆಯನ್ನೇ ತನ್ನ ಬಂದು ಬಳಗ ಹಾಕುತ್ತೇ ಅನ್ನುವ ಕಲ್ಪನೆ ಈ ಮಗಳಿಗೆ ಇರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಗಾದೆ ನಿಜವಾಯಿತು. ತಂದೆ ಬಾ ಮಗು ಎನ್ನಲಿಲ್ಲ, ತಾಯಿ ಬಂದೇಯ ಮಗಳೇ ಎನ್ನಲಿಲ್ಲ. ಅಣ್ಣ ತಮ್ಮಂದಿರು ಕೂಡ ನಿನ್ನ ಗಂಡ ಎಲ್ಲಿ ಎಂದು ಕೇಳುತ್ತಾರೋ ಹೊರತು ಅವಳನ್ನು ವಿಚಾರಿಸುವುದಿಲ್ಲ.
ಇಂತಹ ಸಂದರ್ಭವನ್ನು ಎದುರಿಸಿದ ಹೆಣ್ಣು ಮಗಳು, ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತದೆ ಈ ಸಮಾಜ. ಅವಳದೇ ತಪ್ಪು ಅನ್ನುವಂತೆ ಅವಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನೆ ಮಾಡುತ್ತಾರೆ. ಓದುತ್ತಿದ್ದ ಮಗಳನ್ನು ಹಿಂದೆ ಮುಂದೆ ವಿಚಾರಿಸದೆ ಮದುವೆ ಮಾಡಿ ಕೊಡುತ್ತಾರೆ.
ಬೇರೆ ಯೊಬ್ಬಳ ಹಿಂದೆ ಬಿದ್ದ ಗಂಡ, ತನಗೆ 5 ಮಕ್ಕಳಿದ್ದರೂ ತನ್ನನ್ನು ನಿರ್ಲಕ್ಷ ಮಾಡುತ್ತಿರುವ ಗಂಡನ ಪರವೇ ಇವರೆಲ್ಲ ಇದ್ದಾರಲ್ಲ ಅಂತ ಇವಳಿಗೆ ಕಸಿವಿಸಿ ಆಯಿತು. ತಾಯಿಯೇ ಹೇಳುತ್ತಾರೆ: ಗಂಡಸು ಕಣೆ ಅವನು,ಕೊಚ್ಚೆ ತುಳಿದು ಬೇರೆ ನೀರಿನಲ್ಲಿ ತೊಳೆದುಕೊಂಡು ಮತ್ತೆ ಮತ್ತೆ ಗಂಡಸಾಗುತ್ತಾನೆ. ಅವನನ್ನು ಎದುರು ಹಾಕೊತ್ತಿಯ? ಎದುರು ಹಾಕಿಕೊಂಡರೆ ಅಷ್ಟೇ. ತಲಾಕ್ ಕೊಡುತ್ತಾನೆ. ನೀನು ಏನು ಮಾಡುತ್ತೀಯಾ ಅವಾಗ?ಎನ್ನುವ ಹೆದುರಿಸುವ ತಂತ್ರಗಾರಿಕೆ ತವರಿನ ಕಡೆಯವರಿಂದ.
ಸಹೋದರರು ಹೇಳುತ್ತಾರೆ :ಬಂದು ಬಿಡು ನಮ್ಮ ಜೊತೆ, ನಿನ್ನನ್ನು ಕರೆದುಕೊಂಡು ಭಾವನ ಮನೆಯಲ್ಲಿ ಬಿಡುತ್ತೇವೆ ಅಂದಾಗ,ಇವಳು ಪ್ರತಿಭಟಿಸಿದರು ಕೂಡ ಕೇರ್ ಮಾಡದೆ ಗಂಡನ ಮನೆಯಲ್ಲಿ ಬಿಟ್ಟು ಬರಲು ಅಣಿಯಾಗುತ್ತಾರೆ.
ಇವಳು ಪ್ರತಿಭಟಿಸಿದಾಗ,ನೋಡು ನಿನ್ನನ್ನು ಮದುವೆ ಮಾಡಿಕೊಟ್ಟಿದ್ದೇವೆ. ನಾವು ಆ ಮನೆಯಲ್ಲಿ ನಿನ್ನನ್ನು ಬಿಟ್ಟು ಬಂದಿದ್ದೇವೆ. ನೀನು ಆ ಮನೆಯಿಂದ ಶವವಾದಾಗ ಮಾತ್ರ ಹೊರಬರಬೇಕು ಅಂತ ಹೇಳಿ ಬಿಟ್ಟು ಬರುತ್ತಾರೆ. ಮೆಹರುನ್ ತನ್ನ ಸ್ಥಿತಿಗೆ ಕಣ್ಣೀರು ಹಾಕಿಕೊಂಡು, ಸಾಯಲು ಹೊರಟಾಗ ಮಗಳು ಬಂದು ಅಪ್ಪನಿಗೋಸ್ಕರ ನೀನು ನಮ್ಮನ್ನೆಲ್ಲ ಬಿಟ್ಟು ಹೋಗುತ್ತೀಯಾ? ನಿನ್ನ ಮಕ್ಕಳ ಗತಿ ಏನು?ಹೀಗೆ ಹೇಳಿ ಅವಳನ್ನು ಸಾವಿನ ಪ್ರಯತ್ನದಿಂದ ತಡೆಯುತ್ತಾಳೆ.
ಒಂದು ಹೆಣ್ಣು ಮದುವೆಯಾದ ನಂತರದಲ್ಲಿ ತನ್ನ ಗಂಡನ ಮನೆಯಲ್ಲಿ ಹಚ್ಚಿದ ದೀಪವನ್ನು ತನ್ನ ಎದೆಯಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಾಳೆ ಅಂತ ಅರ್ಥ ಅಂದುಕೊಂಡಿದ್ದೇನೆ. ಇಂತಹ ಹೆಣ್ಣನ್ನು ಜೋಪಾನ ಮಾಡಬೇಕಿರುವುದು ಸಮಾಜದ ಕರ್ತವ್ಯವಲ್ಲವೇ? ಗಂಡ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲವೇ?.

” ಕೆಂಪು ಲುಂಗಿ”
ಈ ಕತೆಯನ್ನು ಓದಿದಾಗ ಮನಸ್ಸು ಚುರ್ ಅನ್ನುತ್ತೆ. ಮುಸ್ಲಿಂ ಸಂಪ್ರದಾಯದಂತೆ ಗಂಡು ಮಕ್ಕಳಿಗೆ ಸುಮಾರು ಹತ್ತು ವರ್ಷ ಆಗುವಷ್ಟರಲ್ಲಿ ತಮ್ಮ ಮಕ್ಕಳಿಗೆ ಖತ್ನಾ ಅಥವಾ ಸುನ್ನತಿ ಮಾಡಿಸುವ ಸಮಾರಂಭವನ್ನು ಲೇಖಕಿ ಎಳೆ ಎಳೆ ಯಾಗಿ ಬಿಡಿಸಿರುತ್ತಾರೆ.
ಶ್ರೀಮಂತ ಕುಟುಂಬದವರು ತಮ್ಮ ಮಕ್ಕಳಿಗೆ ನುರಿತ ವೈದ್ಯರಿಂದ ಯಾವುದೇ ಸೋಂಕು ತಗಲದಂತೆ ಸುನ್ನತಿ ಮಾಡಿಸುವ ವಿಚಾರ ವನ್ನು ಹೇಳುತ್ತ, ಅಂತಹ ಮಕ್ಕಳಿಗೆ ಸಿಗುವ ಪೌಷ್ಟಿಕ ಆಹಾರ,ನೈರ್ಮಲ್ಯದಿಂದ ಕೂಡಿದ ವ್ಯವಸ್ಥೆ ಸರಿಯಾಗಿರುವು ದನ್ನು ಕಥೆಯಲ್ಲಿ ಮಾರ್ಮಿಕವಾಗಿ ತಿಳಿಸಿರುತ್ತಾರೆ.ಆದರೆ ಬಡ ಮಕ್ಕಳಿಗೆ ಒಬ್ಬ ಕ್ಷೌರಿಕನಿಂದ ಮುಂಜಿ ಅಥವಾ ಸುನ್ನತಿ ಮಾಡಿಸುವ ಕಥೆ ಓದಿ ತುಂಬಾ ಬೇಸರವಾಗುತ್ತದೆ.
ಶ್ರೀಮಂತರೊಬ್ಬರು ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಪ್ರತಿಯೊಬ್ಬ ಬಡ ಮಕ್ಕಳಿಗೂ ಪೌಷ್ಟಿಕ ಆಹಾರ ವಿತರಿಸುವುದು ಸರಿಯಷ್ಟೇ.ಈ ಕಾರ್ಯಕ್ರಮಕ್ಕಾಗಿ ಅಂತಹ ಮಕ್ಕಳಿಗಾಗಿ ಕೆಂಪು ಲುಂಗಿಯನ್ನು ವಿತರಿಸುವುದು ಆಶ್ಚರ್ಯ ಸಂಗತಿ. ಖತ್ನ ಮಾಡಿಸಿಕೊಂಡ ಮಕ್ಕಳಿಗೆ ಕೆಂಪು ಲುಂಗಿಯನ್ನು ವಿತರಿಸುವ ಉದ್ದೇಶ ರಕ್ತವು ಆ ಕೆಂಪು ಲುಂಗಿ ಯಲ್ಲಿ ಲೀನವಾಗಲೆಂದು ಈ ಏರ್ಪಾಡು ಅಂತ ಕಾಣುತ್ತೆ.
ಒಬ್ಬ ಬಡ ಹೆಂಗಸು ಆರು ವರ್ಷದ ಮಗನನ್ನು ಕರೆದುಕೊಂಡು ಬಂದು ಮುಂಜಿ ಆಗಿದ್ದರು, ಸರಿಯಾಗಿ ಮಾಡಿಲ್ಲ ಮತ್ತೊಮ್ಮೆ ಮಾಡಿ ಎಂದು ಸಂಘಟಕರನ್ನು ಕೇಳಿಕೊಳ್ಳುವುದು ವಿಪರ್ಯಾಸ. ನಂತರದಲ್ಲಿ ಆ ಸಂಘಟಕರು ಆ ಹುಡುಗನನ್ನು ತಪಾಸಣೆ ಮಾಡಿ ಸರಿಯಾಗಿದೆ ಎಂದು ತಿಳಿಸುವುದು. ಹುಡುಗನಿಗೆ ಸರಿಯಾಗಿ ಸುನ್ನತಿ ಆಗಿದೆ ಎಂದು ಹೇಳಿ, ಆ ಹೆಂಗಸನ್ನು ಹೊರಗಡೆ ಕಳಿಸುವುದು ಸರಿಯಷ್ಟೇ.
ಅವರು ಕೊಡುವ ಆಹಾರದ ಕಿಟ್ ಗಾಗಿ ಈ ರೀತಿ ಮಾಡುತ್ತಾರೆಂದು ಈ ಕಥೆಯಿಂದ ಗೊತ್ತಾಗುತ್ತದೆ.ಇದರಿಂದ ಸಮಾಜದ ಬಡತನವನ್ನು ಎತ್ತಿ ತೋರಿಸುವುದು ಈ ಕಥೆಯಿಂದ ಗೊತ್ತಾಗುತ್ತದೆ. ಇನ್ನೊಬ್ಬಳು ಹಸುಳೆ ಯನ್ನು ಕರೆದುಕೊಂಡು ಬರುವ ಚಿತ್ರಣ ಮನಕಲಕುತ್ತದೆ. ಈ ರೀತಿಯಾಗಿ ಬಾನು ಮುಸ್ತಾಕ ರವರು ತಮ್ಮ ಕಥೆಗಳಲ್ಲಿ ಸಮಾಜದ ನ್ಯೂನತೆಗಳನ್ನು,ಬಡತನವನ್ನು, ಅವೈಜ್ಞಾನಿಕ ಸಮಾರಂಭಗಳನ್ನು, ಹೆಣ್ಣಿನ ಕತೆಯನ್ನು ಮನಮುಟ್ಟುವಂತೆ ನಿರೂಪಿಸಿರುವುದು ಸಂತೋಷದ ವಿಚಾರ.ಎಲ್ಲಾ ಸಮಾಜದವರು ಈ ಪುಸ್ತಕವನ್ನು ಓದಬೇಕೆಂದು ಕಳಕಳಿಯ ಮನವಿ.
- ದೇವರಾಜ ಚಾರ್ – ಮೈಸೂರು
