ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಆಗು ಹೋಗುಗಳ ಚಿಂತನಾ ಪ್ರಬಂಧ ಇದಾಗಿದ್ದು, ಲೇಖಕಿ ತಮ್ಮ ವಿಚಾರದ ಜೊತೆ ಇಂದಿನ ನೈಜ್ಯ ಪರಿಸ್ಥಿತಿ ಬಗ್ಗೆ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಓದಿ ನಿಮ್ಮ ವಿಚಾರಧಾರೆಯನ್ನು ಆಕೃತಿಕನ್ನಡದಲ್ಲಿ ಹಂಚಿಕೊಳ್ಳಬಹುದು.
ಎತ್ತಣ ಸಾಗುತ್ತಿದೆ ಶಿಕ್ಷಣ ವ್ಯವಸ್ಥೆ, ಎತ್ತ ಮುಖ ಮಾಡಿ ನಿಂತಿದೆ ಶಿಕ್ಷಕ ವೃತ್ತಿ? ಪ್ರತಿ ದಿನವೂ ಹೊಸದೊಂದು ಕಾಯ್ದೆ, ಹೊಸದೊಂದು ನಿಯಮ, ಉದ್ಯೋಗಕ್ಕಾಗಿ ಅಲೆದು ಬಡ ಬಡಿಸುತ್ತಿರುವ ಉದ್ಯೋಗ ಆಕಾಂಕ್ಷಿಗಳ ಕಥೆಯೇನು?. ಅವರ ಬದುಕಿನ ತೀರ ಎತ್ತಣ ಮುಟ್ಟಲಿದೆ?.
ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಸರ್ಕಾರದ ಕಾನೂನನ್ನು ಒಪ್ಪೋಣ. ಆ ಗುಣಮಟ್ಟದ ಶಿಕ್ಷಣಕ್ಕೆ ನೂರೆಂಟು ಬಿಗಿ ನಿಯಮಗಳ ಕಟ್ಟಿದ್ದಾಗ ಅದು ಅಡ್ಡ ದಾರಿಯ ರಹದಾರಿಯನ್ನು ಹುಡುಕುವುದಿಲ್ಲ ಎನ್ನುವುದಕ್ಕೆ ಸಾಕ್ಷ್ಯ ಆದ್ರೂ ಏನು? ಕಠಿಣತೆಯನ್ನು ಪರಿಚಯಿಸುವುದು ತಪ್ಪು ಎಂದಲ್ಲ. ಆ ಕಠಿಣತೆಯನ್ನು ಎದುರಿಸುವ ದಾರಿಯನ್ನು ತೋರಬೇಕು ಅಲ್ಲವೇ..? ಎಷ್ಟೊಂದು ನಿಯಮಗಳು, ಆ ನಿಯಮಗಳೆಲ್ಲ ದಾಟಿ ಶಿಕ್ಷಕ ವೃತ್ತಿಯನ್ನು ಪಡೆಯಲು ಯೌವನದ ಉತ್ಸಾಹ ಕಮರಿ ಬೇಸರದ ಭಾವ, ಹತಾಶೆಯು ಮನೆ ಮಾಡಿಬಿಡುತ್ತದೆ.
ಕಳೆದ ೨-೩ ವರುಷಗಳ ಹಿಂದೆ ಬಿ.ಎಡ್ ಅನ್ನು ೯ ತಿಂಗಳ ಕಾಲಾವಧಿಯಿಂದ ೨ ವರುಷಕ್ಕೆ ವಿಸ್ತರಣೆ ಮಾಡಿದರು. ಸುಮಾರು ೫೦ -೭೦ % ಮಾತ್ರ ಅಧಿಕೃತವಾಗಿ ಪ್ರವೇಶಾತಿ ಪಡೆದು ಕಾಲೇಜಿನಲ್ಲಿ ಅಭ್ಯಾಸ ಮಾಡತೊಡಗಿದರು. ಉಳಿದವರು ಹಿಡಿದ ಹಾದಿಯೇನು? ಮುಕ್ತವಾಗಿ, ಅಥವಾ ಹಣವನ್ನು ಖರ್ಚು ಮಾಡಿ ಪರೀಕ್ಷೆಗಳನ್ನಷ್ಟೇ ಬರೆದು ಪದವಿ ಪತ್ರ ಪಡೆಯುವಲ್ಲಿ ಯಶಸ್ವಿ ಆದ್ರೂ ಎಂಬ ಹಗರಣದ ವಿಷಯ ನಾವು ಓದದೇ ಇರಲು ಸಾಧ್ಯವೆ ಇಲ್ಲ.

ಫೋಟೋ ಕೃಪೆ : shiksha
ಉಳ್ಳವರೇನೋ ಹಣ ಖರ್ಚು ಮಾಡಿ ಪದವಿ ಪಡೆದು ಕೆಲ್ಸ ಗಿಟ್ಟಿಸುವಲ್ಲಿ ಯಶಸ್ವಿಯಾಗಬಹುದು ಬಡವರ ಗತಿಯೇನು?. ಪರಿಮಾಣ ಬೇಡ, ಪರಿಣಿತಿ ಶಿಕ್ಷಕರು ಬೇಕೆಂದು ಹಾಕುವ ನಿಯಮಗಳ ಸುಳಿಯಲ್ಲಿ ಈಜಲಾಗದೆ ದಡ ಸೇರಲಾಗದೆ ಒದ್ದಾಡುವುದು ಮಾತ್ರ ಹಿಂದುಳಿದ ವರ್ಗದವರು, ಯಾವ್ದೆ ಕಾನೂನು ಖಾಯ್ದೆಗಳು ಬಂದರು ಸಹ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಏಟಿಗೆ ತುತ್ತಾಗುವುದು ಈ ಮಧ್ಯಮ ವರ್ಗದವರೆ ಹೆಚ್ಚಾಗಿರುತ್ತಾರೆ.
ಇದರ ಕಥೆ ಇರಲಿ… ಶಾಲಾ ಶಿಕ್ಷಣ ೧೨ ವರುಷ, ಪದವಿ ೩ ವರುಷ, ಸ್ನಾತಕೋತ್ತರ ೨ ವರುಷ, ಬಿ.ಎಡ್ ಹೆಸರಿಗಷ್ಟೇ ೨ ವರುಷ. ಅದರ ಅವಧಿ ಮುಗಿದು ಬಿ.ಎಡ್ ಪೂರ್ಣ ಆಯ್ತು ಎಂದು ಹೇಳುವ ವೇಳೆಗೆ ೩ ವರುಷ ಆಗಿರುತ್ತದೆ. ಅಭ್ಯರ್ಥಿ ಸರ್ಕಾರಿ ಶಾಲೆಯಲ್ಲಿ ಓದಿ ಬಂದಿರುವನಾಗಿದ್ರೆ, ಇಷ್ಟೆಲ್ಲ ಅಭ್ಯಾಸ ಮಾಡಲು ೨೬ ವರುಷಗಳು ಆದ್ರೂ ಬೇಕು. ಅವನೇನಾದ್ರು ಪ್ರಾಥಮಿಕ ಶಿಕ್ಷಣವ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪಡೆದು ಬಂದಿದ್ರೆ ೨೭- ೨೮ ವರುಷಗಳ ವಿದ್ಯಾಭ್ಯಾಸದ ಪಯಣವಿದ್ರು ಆತನಿಗೆ / ಆತಳಿಗೆ ನೌಕರಿ ಅನ್ನೋದು ಇಲ್ಲ. ಇನ್ನು ಟಿ.ಇ.ಟಿ ಅರ್ಹತೆಯನ್ನು ಕಡು ಕಷ್ಟದಿಂದ ಪಡೆದ ಎಂದು ಇಟ್ಟುಕೊಂಡರು ಸಹ ಸಿ.ಇ.ಟಿಯ ಮೂರೂ ವರುಷದೊಳಗೆ ಪಾಸಾಗಲಿಲ್ಲವೆಂದರೆ ಮತ್ತೆ ಟಿ.ಇ. ಟಿ ಹೀಗೆ ಆದ್ರೆ ಬದುಕಿನ ಗತಿಯೇನು?.
ಕಡು ಬಡತನ ಬೇಗೆಯೊಳಗೆ ಬೇಯುತ್ತಿರುವ ಬಡವ ತನ್ನ ಮಗ/ ಮಗಳನ್ನ ಕನಿಷ್ಠ ಪದವೀಧರ/ರೆ ಮಾಡಿಸಬಹುದೇ ವಿನಃ ಉತ್ತಮ ಶೈಕ್ಷಣಿಕ ವಿದ್ಯಾಭ್ಯಾಸವನ್ನ ಕೊಡಿಸಲು ಸಾಧ್ಯವೇ? ನಾನು ಕೂಡ ಮಧ್ಯಮ ಕುಟುಂಬದ ಹೆಣ್ಣು ಮಗಳು, ೨೨ ವರುಷ ದಾಟುತ್ತಿದೆ, ಓದಿದ್ದು, ಸಾಕು ಮದುವೆ ಆಗು ಎಂದು ಹೇಳುವ ಮನೆಯವರು ಬಿ.ಎಡ್ ಗೆ ಪ್ರವೇಶಾತಿ ಕೊಡಿಸಿ ಎಂದರೆ ಒಪ್ಪುವರೆ?. ಒಪ್ಪಿದರು ಸಹ ಮನೆಯ ಪರಿಸ್ಥಿತಿಗಳ ತಿಳಿದು ಓದುವುದಾದರು ಹೇಗೆ..? ಒಬ್ಬ ವ್ಯಕ್ತಿ ಶಿಕ್ಷಕ ವೃತ್ತಿಯನ್ನು ಪಡೆಯ ಬೇಕೆಂದರೆ ೩೦ ವರುಷಗಳ ಜೀವನ ಸವೆಸವೇಕು? ಆದ್ರೆ ೨೩ ವರುಷ ತುಂಬಿದ ಹಾಗೆ ಹೆಣ್ಣು ಮಕ್ಕಳಿಗೆ ಮದುವೆಯ ಹೆಸರಲ್ಲಿ ದಿಗ್ಬಂಧನ, ಗಂಡು ಮಕ್ಕಳಿಗೆ ಸಂಸಾರದ ಜವಾಬ್ದಾರಿ ಹೊರೆ. ಇಷ್ಟೆಲ್ಲ ಅಡೆ ತಡೆಗಳ ನಡುವೆ ಪ್ರಾಮಾಣಿಕ ಪ್ರಯತ್ನ ಯಾರದು ಇರುತ್ತೆ?
ಇದೆಲ್ಲ ಪಕ್ಕಕ್ಕೆ ಇರಲಿ, ಒಂದು ಸ್ಪರ್ಧಾತ್ಮಕ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ , ಪರೀಕ್ಷೆ ಮುಗಿದು, ಫಲಿತಾಂಶ ನೀಡಲು ೧.೫ ವರುಷದಿಂದ ೨ ವರುಷಗಳ ಕಾಲ ಕಾಯಿಸುವಾಗ ಒತ್ತಡದ ಜೀವನದಲ್ಲಿ, ಓಡುವ ಬಿಸಿಲ್ಗುದರೆ ಕಾಲದಲ್ಲಿ ನಾ ಪರೀಕ್ಷೆ ಬರೆದಿದ್ದೆ ಎಂಬ ವಿಷ್ಯವೇ ಮರೆತು ಹೋದರು ಅದು ಅತಿಶಯೋಕ್ತಿ ಏನಿಸುವುದಿಲ್ಲ. ೧೯೯೮ ರಲ್ಲಿ ಬರೆದ ಕೆ.ಎ.ಎಸ್ ಕಟ್ ಆಫ್ ಈ ಮಾಸಿಕದಲ್ಲಿ ಬಿಡುಗಡೆ ಗೊಂಡಿತ್ತು, ಅದರಲ್ಲಿ ೧೯೫೭ ರಲ್ಲಿ ಜನಿಸಿದವರು ಕೂಡ ಪರೀಕ್ಷೆ ಬರೆದಿದ್ದರು, ಇವರಿಗೆ ಅವಕಾಶ ಸಿಕ್ಕಿದೆ ಅಂದ್ರೆ ಬಹುಶಃ ವಯಸ್ಸಿನ ವಿಸ್ತರಣೆಯಲ್ಲಿ ಸಿಕ್ಕಿರಬಹುದು, ಒಮ್ಮೆ ಅವ್ರು ಇದರಲ್ಲಿ ಆಯ್ಕೆ ಆದ್ರೆ ಅವರಿಗೆ ಉದ್ಯೋಗ ಸಿಗುವುದೇ?
ಈಗಲೂ ನನಗೆ ಕಾಡುವ ಕಟ್ಟಕಡೆಯ ಪ್ರಶ್ನೆ? ಪರೀಕ್ಷೆ ಬರೆಯಲಷ್ಟೇಯಾ ವಯಸ್ಸಿನ ಮಿತಿ..? ಉದ್ಯೋಗ ಪಡೆಯಲು ವಯಸ್ಸಿನ ಮಿತಿ ಇಲ್ಲವೇ? ಇಷ್ಟು ಕಾಲಾವಕಾಶ ಪಡೆದರೆ ಉದ್ಯೋಗ, ಜೀವನದ ಗತಿಯೇನು?
೨೩ ವರುಷಗಳು ಫಲಿತಾಂಶ ನೀಡಲು ತೆಗೆದುಕೊಂಡರೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳ ಪಾಡೇನು..? ಕೆಲವು ಈಗ ಅಶಕ್ತರಾಗಿರಬಹುದು, ಮರಣವನ್ನೇ ಹೊಂದಿರಬಹುದು, ರೀತಿ ರಿವಾಜುಗಳಿಗೆ ಸಮಯ ಬೇಕು ಆದ್ರೆ ಇಷ್ಟೊಂದು ಉದ್ದುದ್ದದ ಕಾಲವಾಕಾಶ ಆಕಾಂಕ್ಷಿಗಳ ಆಕಾಂಕ್ಷೆಯನ್ನೇ ಕೊಂದು ಬಿಡುತ್ತದೆ.

೨೦೧೭-೧೮ ನೇಯ ಸಾಲಿನ IAS ಉದ್ದೆಯ ಪರೀಕ್ಷೆಗೆ ಈಗ ಅಧಿಸೂಚನೆ ಹೊರ ಬಿದ್ದಿದೆ. ಇವುಗಳೆಲ್ಲ ದೇಶದ ಅತ್ಯುನ್ನತ ಪರೀಕ್ಷೆಗಳು, ಕಾರ್ಯ ಕಲಾಪಗಳು ರೀತಿ ರಿವಾಜುಗಳಿಗೆ ತುಂಬಾನೇ ಸಮಯದ ಅವಶ್ಯಕತೆ ಇದೆ ಆದ್ರೆ ಇಷ್ಟು ತಡವಾದ್ರೆ ಹೇಗೆ? ಇನ್ನು ಈಗ ಸುದ್ದಿಯಲ್ಲಿರುವ ಕೆಪಿಎಸ್ಸಿ ಎಫ್.ಡಿ .ಎ ಪ್ರಶ್ನೆ ಪತ್ರಿಕೆಯ ಸೋರುವಿಕೆಯ ಬೆನ್ನಲ್ಲೇ ೧೨ ದ್ವಿತೀಯ ಸಹಾಯಕರು ನ್ಯಾಯಾಂಗ ವಿಭಾಗದಲ್ಲಿ ದುರಾಚಾರ ಎಬ್ಬಿಸಿದರು ಎಂಬ ವಿಷಯ ಹೀಗೆ, ಕಾಠಿಣ್ಯತೆ ಪರಿಚಯಿಸಿದಷ್ಟು ಅಡ್ಡ ದಾರಿಯಲ್ಲಿ ರಹದಾರಿಗಳೇ ತೆರೆದು ಕೊಳ್ಳುತ್ತವೆ.
ಬಹಳ ಹಿಂದೆ ಎಸ್ಎಸ್ ಎಲ್ ಸಿ ಓದಿದವರೆ ಶಿಕ್ಷಕರು. ಮೊದಲೆಲ್ಲ ಇಷ್ಟು ಸೌಲಭ್ಯವಿರಲಿಲ್ಲ. ಆದ್ರೆ ಅಂದಿನ ನೈತಿಕ ಶಿಕ್ಷಣ ಆಗ್ಲಿ, ಅಂದು ಸಿಗುತ್ತಿದ್ದ ಮೌಲ್ಯಗಳೇ ಆಗಲಿ, ಅಂದು ಕೊಟ್ಟಂತಹ ಗುಣಮಟ್ಟದ ಶಿಕ್ಷಣ ಆಗಲಿ ಇಂದು ಇಲ್ಲ. ಅಲ್ಲಿ ಪ್ರತಿಕೂಲ ಪರಿಸ್ಥಿತಿಯಿತ್ತು. ಬದುಕಲೇ ಬೇಕೆಂಬ ಹಠದ ಗುಣಚರ್ಯೆ ಇತ್ತು ಆದ್ರೆ ಇಂದು? ಎತ್ತಣ ಸಾಗುತ್ತ ಇದೆಯೋ ನಾ ಕಾಣೆ. ಶಿಕ್ಷಕ ವೃತ್ತಿಗೆ ಇಷ್ಟು ನಿಯಮಾವಳಿಗಳ ಹಾಕಿದರೆ ಅವನೋರ್ವ ಉತ್ತಮ ಶಿಕ್ಷಕನಾಗಿ ಇರಬಹುದೇ ಹೊರತು ಪರಿಚಾರಕನಾಗಿ ಅಲ್ಲ.
ಎಲ್ಲ ಹುದ್ದೆಗಳಲ್ಲೂ ಇಂದು ಲಾಭಿತನ ಇದೆ ಮೊದಲು ಇದನ್ನೇ ಕಿತ್ತುಹೋಗೆಯಬೇಕು. ಇಲ್ಲಿ ವ್ಯವಸ್ಥೆಯದು ತಪ್ಪು, ಅಂತ ನಾ ಎಂದು ಹೇಳಲ್ಲ. ಯಾಕೆಂದರೆ ಆ ವ್ಯವಸ್ಥೆನಾ ಹುಟ್ಟು ಹಾಕಿದ್ದೆ ನಾವುಗಳು ತಾನೇ?
ತುಂಬಾ ಚಿಕ್ಕವಳಿದ್ದಾಗಿನಿಂದಲೂ ಒಂದು ಯೋಚನೆ ಕಾಡುತ್ತದೆ. ಲಂಚ ಯಾತಕ್ಕಾಗಿ ಕೊಡಬೇಕು? ಹೀಗೆ ಮಾಡಿ ತಾನೇ ಯಾರಿಗೆ ಸಾಮರ್ಥ್ಯ ಇರುತ್ತದೋ ಅವನು ಕಸ ಆಯ್ತಾ ಇರ್ತಾನೆ ಅಸಾಮರ್ಥ್ಯನು ಸಿಂಹಾಸನದ ಗದ್ದುಗೆ ಏರಿ ವ್ಯವಸ್ಥೆ ಮೇಲೆ ಗೂಬೆ ಕೂರಿಸಲು ಹೊರಡುತ್ತಾನೆ.
೧೫ ಲಕ್ಷ ಲಂಚ ಕೊಟ್ಟು, ಅಥವಾ ಯಾರದೋ ಕಿಮ್ಮತ್ತಿನ ಮೇಲೆ ಅಧಿಕಾರಕ್ಕೆ ಬಂದವನು ಕೊಟ್ಟ ಲಂಚ ಹೇಗೆ ವಸೂಲಿ ಮಾಡಬೇಕೆಂದು ಯೋಚಿಸುತ್ತಾನೆಯೇ ಹೊರತು ಜನ ಸಾಮಾನ್ಯರು ಹೇಗೆ ಅಭಿವೃದ್ಧಿಸಬೇಕೆಂದು ಚಿಂತಿಸುವುದಿಲ್ಲ. ಇದೆ ಅಲ್ವಾ ಇಂದಿನ ನಮ್ಮ ಪರಿಸ್ಥಿತಿ. ತಪ್ಪುಗಳನ್ನು ನಾವೇ ಆರಂಭ ಮಾಡಿರ್ತೀವಿ ಅನಾವಶ್ಯಕ ವ್ಯವಸ್ಥೆ ಮೇಲೆ ದೂರು ಹಾಕ್ತಿವಿ. ನನಗೆ ಈಗಲೂ ತಿಳಿದಿಲ್ಲ. ನಮ್ಮ ಆಧಾರ್ ನಂಬರ್ ತಪ್ಪಿದರೆ ಅರ್ಜಿ ಪೂರ್ಣಗೊಳ್ಳುವುದಿಲ್ಲ. ಹಾಗಿರುವಾಗ ಈ ನಕಲಿಯಾಗಿ ಹೇಗೆ ಪರೀಕ್ಷೆ ಬರೆದು ಕೆಲಸ ಗಿಟ್ಟಿಸುವರು?.
ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಜ್ಞಾನ ಇದ್ದು ಕಷ್ಟಪಟ್ಟು ಓದಿದವನು ಅಲೆಮಾರಿಯಂತೆ ಅಲೆಯುತ್ತಿದ್ದಾನೆ. ಯಾವ್ದೆ ಕಷ್ಟವಿಲ್ಲದೆ ಹಣದಿಂದ ಬಂದವನು ಅಧಿಕಾರದ ಗದ್ದುಗೆಯ ಒಡ್ಡೋಲಗ ಹೊರಡಿಸಿದ್ದಾನೆ.
ವ್ಯವಸ್ಥೆ ಎಂದು ಬದಲಾಗಲ್ಲ ನಾವು ಬದಲಾಗಬೇಕು. ಯಾರದೇ ಕಿಮ್ಮತ್ತಿಲ್ಲದೆ ಯಾರ ಅನುಗ್ರಹವಿಲ್ಲದೆ ಸ್ವ ಸಾಮರ್ಥ್ಯದಿಂದ ಮೇಲೆ ಬಂದವನು ಪ್ರಾಮಾಣಿಕವಾಗಿಯೇ ಇರುತ್ತಾನೆ ಎಂಬ ನಿದರ್ಶನಗಳು ಸುಳ್ಳಲ್ಲ. ಅವನಿಗೆ ಅಲ್ಲಿ ಹಣ ಸಂಪಾದನೆ ಮಾಡ್ಬೇಕು ಎಂಬ ಹುಚ್ಚು ಇರುವುದಿಲ್ಲ. ಯಾಕಂದ್ರೆ ಕಷ್ಟ ಪಟ್ಟು ದುಡಿದು, ಕಷ್ಟದ ಮಡುವಿನಲ್ಲಿ ಮಿಂದ್ದೆದ್ದವ ಲೆಕ್ಕ ಹಾಕುವುದು ನಾಣ್ಯಗಳನ್ನಲ್ಲ. ಆ ನಾಣ್ಯಕ್ಕಾಗಿ ಸುರಿಸಿದ ಬೆವರ ಹನಿಗಳು.
- ಅಮೃತ ಎಂ ಡಿ (ಸ್ನಾತಕೋತ್ತರ ಗಣಿತ ವಿಭಾಗ ವಿದ್ಯಾರ್ಥಿನಿ, ಮಂಡ್ಯ)
