‘ಬೇಟೆ’ ಕವನ – ಮೇಗರವಳ್ಳಿ ರಮೇಶ್ಒಂದು ಜೀವಿಯ ಸಾವಾದರೆ ಇನ್ನೊಂದು ಜೀವಿಯ ಆಹಾರವಾಗುತ್ತದೆ ಇದು ಪ್ರಕೃತಿ ನಿಯಮ. ಆದರೆ ಮನುಷ್ಯ ಮನುಷ್ಯ ಬೇಟೆಯಾಡುವುದು ಅಮಾನವೀಯ. ಕವನ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನಿನ್ನೆ ಇರಲಿಲ್ಲ ಈ ಬಲೆ ಗ್ಯಾರೇಜಿನ ಮೂಲೆಯಲ್ಲಿ
ಈದಿನ ನೋಡಿದರೆ ಹೆಣೆದು ಬಿಟ್ಟಿದೆ ಜೇಡವೊಂದು ಬಲೆಯನ್ನ
ತನ್ನ ಕುಶಲ ಕಸುಬುಗಾರಿಕೆಯಲ್ಲಿ.
ನೊಣವೊಂದು ಹಾರಿ ಬಂದು ಬಿದ್ದಿದೆ ಬಲೆಯಲ್ಲಿ.
ಕಾಣದಂತೆ ಬಲೆಯ ಅಂಚಿನಲ್ಲೆಲ್ಲೋ ಇದ್ದ ಜೇಡ
ಸರ ಸರ ಬಂದು ಸಾವಧಾನವಾಗಿ ಬಲೆಗೆ ಬಿದ್ದ ಬೇಟೆಯ
ಬಲಾಬಲಗಳನ್ನು ಪರಿವೀಕ್ಷಿಸಿ ಆವರಿಸಿ ಕೊಳ್ಳುತ್ತಿದೆ
ನೊಣವನ್ನು ತನ್ನ ಅಷ್ಟ ಪಾದಗಳಲ್ಲಿ.

ಹೊಚ್ಚ ಹೊಸದಾಗಿ ಬಣ್ಣ ಬಳಿದ ಹಜಾರದ ಗೋಡೆಯ ಮೇಲೊಂದು ಹಲ್ಲಿ
ಅದರೆದುರು ತುಸು ದೂರದಲ್ಲೊಂದು ದೀಪದ ಹುಳು.
ಸಜ್ಜಾಗಿನಿಂತಿದೆ ಹಲ್ಲಿ, ಬಲವಾಗಿ ಕಾಲೂರಿ ಗೋಡೆಗೆ, ಮೈಯುಬ್ಬಿಸಿ, ಬಾಲ ಅಲ್ಲಡಿಸುತ್ತಾ ಅವಿಶ್ರಾಂತ.
ಕ್ಷಣದಲ್ಲಿ ಮಿಂಚಿನಂತೆರಗಿ ತನ್ನ ನಾಲಗೆಯಿಂದ ಒಳಗೆಳೆದುಕೊಂಡು ಬಿಟ್ಟಿತು
ಆ ಕ್ಷುದ್ರ ಜೀವಿಯನ್ನು .

ಅಂಗಳದಲ್ಲೊಂದು ಬೆಕ್ಕು ಕುಳಿತಿದೆ ಕಿವಿ ನಿಮಿರಿಸಿ.
ಅದರ ಕಣ್ಣು ಅಲ್ಲೇ ಕಾಳು ಕುಕ್ಕುತ್ತಿರುವ ಕೋಳಿ ಮರಿಯ ಮೇಲೆ.
ಬೇಟೆಗೆ ಸಜ್ಜಾದ ಬೆಕ್ಕು ಛಂಗನೆ ನೆಗೆದು
ಹಿಡಿದು ಬಿಟ್ಟಿತು ಕೋಳಿ ಮರಿಯನ್ನು ಬಾಯಲ್ಲಿ

ಕಾಗೆಯೊಂದು ಹಾರಿ ಬಂದು ತಿಪ್ಪೆಗೆಸೆದ ಅವರೆಕಾಳಿನ ಸಿಪ್ಪೆಯ ನಡುವೆ
ಮುಲುಗುಟ್ಟುತ್ತಿದ್ದ ಹಸಿರು ಹುಳುವನ್ನು ಕೊಕ್ಕಲ್ಲಿ ಎತ್ತಿಕೊಂಡು ಹಾರಿ ಹೋಯಿತು.

ಆನೆಗಳು ಕಬ್ಬಿನ ಗದ್ದೆಗೆ ನುಗ್ಗಿ ಬೆಳೆದ ಕಬ್ಬಿನ ಪೈರನ್ನು ಧ್ವಂಸ ಮಾಡುತ್ತವೆ
ಹಸು, ಹೋರಿ. ಎಮ್ಮೆ. ಕೋಣಗಳು ಗದ್ದೆಗೆನುಗ್ಗಿ
ಬೆಳೆದು ನಿಂತಪೈರನ್ನು ತಿಂದು ಹಾಳುಗೆಡವುತ್ತವೆ.
ಇದೂ ಒಂದು ರೀತಿಯ ಸಸ್ಯಾಹಾರಿ ಬೇಟೆ.

ಆನೆಗಳನ್ನುಸಿಂಹಗಳು ಬೇಟೆಯಾಡುತ್ತವೆ,
ಹಸು, ಹೋರಿ, ಎಮ್ಮೆ, ಕೋಣ, ಜಿಂಕೆ, ಕಡವೆ
ಕಾಡೆಮ್ಮೆಗಳನ್ನು ಹುಲಿಗಳು ಬೇಟೆಯಾಡುತ್ತವೆ.

ಒಂದು ಜೀವಿಯ ಸಾವು ಇನ್ನೊಂದು ಜೀವಿಯ ಬದುಕು!
ಇದು ಪ್ರಕೃತಿ ನಿಯಮ!

ಆದರೆ
ಮನುಷ್ಯರೂ ಬೇಟೆಯಾಡುತ್ತಾರೆ
ಪ್ರಾಣಿಗಳನ್ನು ಮಾತ್ರವಲ್ಲ
ಮನುಷ್ಯರನ್ನೂ!?


  • ಮೇಗರವಳ್ಳಿ ರಮೇಶ್  (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ )

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW