ಭೂಪಾಲನ ಅನಿಲ ಸೋರಿಕೆ ಮಹಾದುರಂತದಿಂದ ಎರಡು ಸಾವಿರಕ್ಕಿಂತ ಹೆಚ್ಚು ಜನ, ಯಾರೂ ಲೆಕ್ಕವಿಲ್ಲದಷ್ಟು ಶವಗಳು ಜಗತ್ತಿನ ಮಹಾದುರಂತಕ್ಕೆ ಬಲಿಯಾಗಿ ಹೋದವು. ಆ ಕರಾಳ ದಿನದ ಮನಮಿಡಿಯುವ ಕತೆ…
ಡಿಸೆಂಬರ್ ೨, ೧೯೮೪ ರ ಮಧ್ಯ ರಾತ್ರಿ ೧೨ ಗಂಟೆ ಕಳೆದು ಡಿಸೆಂಬರ್ ೩ ರ ಮುಂಜಾವಿನತ್ತ ಜಗತ್ತಿನ ಎಲ್ಲಾ ಭಾಗದಂತೆ ಭೋಪಾಲದಲ್ಲಿಯೂ ಕತ್ತಲಿಂದ ಬೆಳಕಿನೆಡೆ ನಿಧಾನವಾಗಿ ಸಾಗುತ್ತಿತ್ತು. ಆತ ಮೂತ್ರವಿಸರ್ಜನೆಗೆಂದು ಹೊರಬಂದ.ಕೈಕಾಲು ಮುರುಟಿ ಹೋಗುವಷ್ಟು ಚಳಿ. ಆತನ ಚಿಕ್ಕ ತಗಡಿನ ಶೆಡ್ಡು ಮನೆಯಲ್ಲಿ ಮೊಮ್ಮಗ, ಮಗ, ಸೊಸೆ ಸೇರಿ ನಾಲ್ವರು. ಹೇಳಿ ಕೇಳಿ ಅದೊಂದು ಸ್ಲಮ್ಮು. ಮಗ ರೈಲಿನ ಡಬ್ಬಿ ತೊಳೆಯುವ ಕೆಲಸ ಮಾಡ್ತಾನೆ. ಸೊಸೆ ಗಾರ್ಮೆಂಟ್ ಪ್ಫ್ಯಾಕ್ಟರಿಯಲ್ಲಿ ಕೆಲಸ. ಮೊಮ್ಮಗನ ಜೊತೆ ವಯಸ್ಸಾದ ಈತನ ವಾಸ. ಮನೆಯ ಪಕ್ಕವೇ ಸಕಲ ಸ್ಲಮ್ಮು ನಿವಾಸಿಗಳ ಗಲೀಜು ಉಚ್ಚೆ ಹೇಲುಗಳ ನಾತ ಸೂಸುವ ಕಾಲುವೆ. ಅದರ ಪಕ್ಕವೇ ಸಾಲಾಗಿ ಅಲ್ಲಲ್ಲಿ ಜೋಪಡಿ. ಅವರೆಗೆಲ್ಲಾ ಅದರ ವಾಸನೆ ಅಭ್ಯಾಸವಾಗಿ ಹೋಗಿತ್ತು. ಆತ ಕೊಳಕು ಕಾಲುವೆಯ ಪಕ್ಕವೇ ಕುಕ್ಕರಗಾಲಿನಲ್ಲಿ ಕುಳಿತು ಜಲಭಾದೆ ತೀರಿಸಿಕೊಳ್ಳಬೇಕೆಂದುಕೊಂಡ. ಅಲ್ಲೊಂದು ಇಲ್ಲೊಂದು ಮಿಣ ಮಿಣ ಮಿನುಗುವ ಜಿರೋ ಕ್ಯಾಂಡಲ್ಲಿನ ದೀಪಗಳು, ರೆಂವ್… ರೆಂವ್… ಎಂದು ಕೀರಲು ಶಬ್ಧ ಮಾಡುವ ಜೀರುಂಡೆಗಳು, ಊಳಿಡುತ್ತಿರುವ ಮುದಿ ನಾಯಿಗಳ ಶಬ್ಧ ಬಿಟ್ಟರೆ ಇಡೀ ಕಾಲನಿ ನಿಶ್ಯಬ್ಧವಾಗಿತ್ತು. ಅಲ್ಲಿರುವ ಬಹುತೇಕ ಮಂದಿ ಕಾರ್ಮಿಕರು. ಹಗಲೆಲ್ಲಾ ಮೈಮುರಿ ದುಡಿದು ರಾತ್ರಿ ವಿಶ್ರಾಂತಿ ತೆಗೆದುಕೊಳ್ಳಲು ಅವರಿಗೆ ಯಾರಾದರೂ ಮನೆ ಮಾಡಿಕೊಡುತ್ತಾರೆಯೇ? ಈ ಸ್ಲಮ್ಮೇ ಗತಿ.
ಮೂತ್ರಾಶಯದಲ್ಲಿ ತುಂಬಿದ ಮೂತ್ರ ಒಳ್ಳೆ ಹಿತವಾದ ಒತ್ತಡ ಕೊಡುತ್ತಿತ್ತು. ಅದನ್ನು ಜೊರ್ರನೇ ಸುರಿದು ನಿರಾಳವಾಗಬೇಕೆಂದು ಕೊಂಡ. ಹೌದು.. ಸಳ್ಳನೇ ನಿರಾಳವಾಗಿ ಹೋಗಬೇಕಾದ ಮೂತ್ರ ಧಾರೆ ಏನೋ ಸಿಕ್ಕಿ ಹಾಕಿಕೊಂಡ ಹಾಗೆ ಹನಿ ಹನಿಯಾಗತೊಡಗಿತು. ಇದ್ದಕ್ಕಿದ್ದಂತೆ ಆತನಿಗೆ ನೆನಪಾಯಿತು.. ಸರ್ಕಾರಿ ಆಸ್ಪತ್ರೆಯ ಡಾಕ್ಟ್ರು ಹೇಳಿದ್ದರು. ಅದೆಂತದೋ ಪ್ರೋಸ್ಟೇಟಂತೆ. ಅದು ಊದಿಕೊಂಡಿದೆಯಂತೆ. ಅದಕ್ಕೆ ಅಪರೇಶನ್ ಆಗಬೇಕಂತೆ. ದುಡ್ಡು ಬೇಕಲ್ಲಾ? ಎಲ್ಲಿಯ ದುಡ್ಡು? ಆ ದಿನದ ಕೂಳು ಆ ದಿನಕ್ಕೆ ಆದರೆ ಸಾಕಾಗಿದೆ. ಮೂಗಿಗೆ ಏನೋ ಅಡ್ಡ ವಾಸನೆ. ಪಕ್ಕದ ಕಾಲುವೆಯಲಿ ಹಂದಿಯೋ ನಾಯಿಯೋ ಸತ್ತಿರಬೇಕು ಅಂದುಕೊಂಡ. ಅದ್ಯಾಕೋ ಇದ್ದಕ್ಕಿದ್ದ ಹಾಗೇ ಕುತ್ತಿಗೆ ಹಿಚುಕಿದ ಹಾಗಾಯಿತು. ಈ ಅಸ್ಥಮಾನೇ ಹೀಗೆ. ಚಳಿಗಾಲದಲ್ಲಿಯೇ ಜಾಸ್ತಿ ಸತಾಯಿಸುತ್ತದೆ. ವಾಸನೆಯ ಘಾಟು ಜಾಸ್ತಿಯಾಯಿತು. ಹಾಳಾದ ಪಕ್ಕದ ಫ್ಯಾಕ್ಟರಿಯವರು ಅದೇನೇನೋ ಗ್ಯಾಸು ಬಿಡುತ್ತಾನೇ ಇರ್ತಾರೆ” ಎಂದುಕೊಂಡ. ಅಯ್ಯೋ… ಇದೇನಿದು. ಕಣ್ಣಿನಲ್ಲೆಲ್ಲಾ ದಳ ದಳ ನೀರು. ಚಳಿಯಲ್ಲೂ ಬೆವರು ಕಿತ್ತು ಬರುತ್ತಿದೆ. ಎದೆ ಹಿಂಡಿದ ಹಾಗಾಯ್ತಲ್ಲ? ಹಾರ್ಟಿನ ಕಾಯಿಲೆಯೂ ಬಂತಾ? ಇದಕ್ಕೆ ಬೇರೆ ಖರ್ಚು ಮಾಡಬೇಕಾ? ಅಂದುಕೊಂಡ. ಹೊಟ್ಟೆ ತೊಳಸಿದಂತಾಯಿತು. ಹೊಟ್ಟೆಯ ಬುಡದಿಂದ ವಾಂತಿ ಕಿತ್ತುಕೊಂಡು ಬಂತು. ಬಕ..ಬಕ.. ಎಂದು ವಾಂತಿ ಮಾಡಿದ. ಕಟವಾಯಿಗೆ ಕೈ ಹಾಕಿ ನೋಡಿಕೊಂಡ. ಹಸಿ ವಾಸನೆಯ ಬಿಸಿ ದ್ರವ ತಗಲಿತು. ಬಾಯಲ್ಲಿ ರಕ್ತವೂ ಬಂತೇ? ಹೌದು. ಬಿಸಿಯಾದ ದ್ರವ ರಕ್ತ…ಯಾರೋ ಎದೆಯ ಮೇಲೆ ಕುಳಿತು ಕುತ್ತಿಗೆಯನ್ನು ಗಟ್ಟಿಯಾಗಿ ಹಿಚುಕಿದಂತೆ ಅನುಭವ. ಎದೆಯನ್ನು ಹಗ್ಗವೊಂದರಿಂದ ಬಿಗಿಯಾಗಿ ಕಟ್ಟಿ ಮಹಾನ್ ಬಲಶಾಲಿಗಳು ಎಳೆದ ಹಾಗೇ ಅನುಭವ. ‘ಅಯ್ಯೋ… ಅಯ್ಯೋ … ಸ್ವಲ್ಪ ಗಾಳಿ ಬೇಕು… ಸ್ವಲ್ಪವೇ ಸಾಕು…’ ಬದುಕಿಕೊಳ್ಳುವೆ ಎಂದು ಅಲವತ್ತುಕೊಂಡ. ಎಲ್ಲೋ ನೂರಾರು ಅಡಿ ಗಾಳಿಯಿಲ್ಲದ ಹಾಳು ಬಾವಿಗೆ ತಳ್ಳಿದ ಹಾಗಾಯ್ತು. ಇದೊಂದು ಕನಸೇ? ಕನಸೇ ಆಗಿರಲಿ. ಬೆಳಗಾದ ಮೇಲೆ ಸರಿಯಾಗುತ್ತದೆ ಎಂದುಕೊಂಡ.
ಫೋಟೋ ಕೃಪೆ : Qrius
ಅಕ್ಕ ಪಕ್ಕದಲ್ಲೂ ಗಲಾಟೆ. ಯಾರೋ ದಢ ದಢನೇ ಓಡಿದ ಶಬ್ಧ. ಕೀರಲು ಶಬ್ಧದಲ್ಲಿ ಸಣ್ಣ ಮಕ್ಕಳು ಅಳುವ ಶಬ್ಧ. ದೊಡ್ಡವರೂ ಯಾರದೋ ಅಳು ಜಾಸ್ತಿಯಾದಂತೆ. ಮನೆಯ ಒಳಗೆ ಹೋಗಲೇ ಕಾಲು ಕಿತ್ತಿಡಬೇಕು. ಕಿತ್ತಿಡಲೇ ಬೇಕು. ಕಾಲುಗಳು ಹೆಣಭಾರ. ಆನೆಯ ಕಾಲು ಕಾಟ್ಟಿ ಬಿಟ್ಟಿರುವರೇ? ಕಾಲು ಕಿತ್ತು ಒಂದು ಹೆಜ್ಜೆ ಮುಂದಿಡಲೂ ಸಾಧ್ಯವಿಲ್ಲ. ಅಸಾಧ್ಯ ನೋವು.. ಸಾವು ಹತ್ತಿರ ಬಂತೇ? ಇದೇನು ಭ್ರಮೆಯೇ? ಇಲ್ಲ. ಇಲ್ಲ. ಇಷ್ಟು ಸುಲಭಕ್ಕೆ ಸಾವು ಬರಲು ಬಿಡಬಾರದು ಅಂದುಕೊಂಡ. ಇನ್ನೊಂದು ಸಲ ರಪ್ಪನೇ ಮೂಗಿಗೆ ಅಡರಿತು ದುರ್ವಾಸನೆ. ಸ್ವಲ್ಪ ಹೊತ್ತಿಗೆಲ್ಲಾ ಖಾಲಿ ಓಣಿಯಲ್ಲಿ ಜನ ದಿಕ್ಕಾಪಲಾಗಿ ಓಡತೊಡಗಿದ್ದು ಆತನ ಮಂಜುಗಟ್ಟಿದ ಕಣ್ಣಿಗೆ ಕಾಣುತ್ತಿತ್ತು. ಅವರು ಹೊರಡಿಸುವ ಮರಣ ಪೂರ್ವ ಶಬ್ಧ ಗುಹೆಯಿಂದ ಶಬ್ಧ ಕ್ಷೀಣ ಶಬ್ಧದ ಹಾಗಿತ್ತು. ಸ್ವಲ್ಪೇ ಹೊತ್ತಿನಲ್ಲಿ ಇಡೀ ಓಣಿ ಜನರಿಂದ ತುಂಬಿ ಹೋಯಿತು. ಎಲ್ಲರದೂ “ಕಾಪಾಡಿ.. ಕಾಪಾಡಿ ಎಂಬ ಆರ್ತನಾದ. ಎಲ್ಲರೂ “ ವ್ಯಾಕ್ ವ್ಯಾಕ್” ಎಂದು ಎದೆ ಹಿಡಿದು ವಾಂತಿ ಮಾಡುತ್ತಿದ್ದರು. ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುತ್ತಾ ಅಲ್ಲಿಂದ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಯಾರು ಯಾರನ್ನು ಕಾಪಾಡಬೇಕು?.
ಫೋಟೋ ಕೃಪೆ : Reddit
ಇನ್ನು ಉಸಿರಾಡಲು ಸಾಧ್ಯವೇ ಇಲ್ಲ. ಮುಗಿಯಿತು, ಆತನ ಪಯಣ. ಕುತ್ತಿಗೆಯ ಮೇಲೆ ಕಲ್ಲು ಹಾಕಿದಾಗ ಹಾವು ವಿಲ ವಿಲ ಒದ್ದಾಡಿ ಪ್ರಾಣ ಬಿಡುತ್ತದೆಯೋ ಹಾಗೇ ಪ್ರಾಣಪಕ್ಷಿ ಶರೀರದಿಂದ ಹೊರಟು ಹೋಗುವ ಮೊದಲು ಆತನ ಕೈಕಾಲು ಒಂದೆರಡು ಸಲ ಕೊಡವಿಕೊಂಡು ಆತನ ಕಣ್ಣು ಆಕಾಶದೆಡೆಗೆ ಶೂನ್ಯದೆಡೆ ದಿಟ್ಟಿಸಿ ನಿಶ್ಚಲವಾಯಿತು. ಕಾರ್ಮೋಡದಂತೆ ಮೈಮೇಲೆ ಎರಗಿದ ಅನಿಲದ ಮಹಾದುರಂತಕ್ಕೆ ಸಾಕ್ಷಿಯಾಗಿ ಹೋದರು ಸಾವಿರಾರು ಜನ. ಬದುಕಲು ಒಂದು ಸಣ್ಣ ಅವಕಾಶವನ್ನು ನೀಡದೇ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಲೀಕಾದ ಮಿಥೈಲ್ ಐಸೋಸಯನೇಟ್ ಅನಿಲ ಅವರ ಬಾಳನ್ನೇ ನುಂಗಿಹಾಕಿತ್ತು. ಆ ಕಾಲನಿಯಲ್ಲಿದ್ದ ಸುಮಾರು ೩೦೦೦ ಜನ ಏನಾಗುತ್ತಿದೆ ಎಂಬುದರೊಳಗೆ ಸತ್ತು ಹೆಣವಾಗಿ ಎಲ್ಲಿ ಬೇಕಾದಲ್ಲಿ ಹುಳಗಳ ತರ ಸತ್ತು ಬಿದ್ದಿದ್ದರು. ಅಲ್ಲಿರುವ ಸಕಲ ಪ್ರಾಣಿ ಪಕ್ಷಿಗಳು, ಆಕಳು, ಎಮ್ಮೆ, ಎತ್ತು, ಹಂದಿ, ನಾಯಿಗಳಾದಿಯಾಗಿ ಜೀವ ಇರುವ ಎಲ್ಲಾ ಪ್ರಾಣಿಗಳೂ ಆರ್ತ ನಾದ ಮಾಡುತ್ತಾ ಸತ್ತು ಹೋದವು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ನೋದದೇ ವಿಷದ ಗ್ಯಾಸು ಯಮಪುರಿಗಟ್ಟಿತ್ತು. ಎರಡು ಸಾವಿರಕ್ಕಿಂತ ಜನ ಶಿವನ, ಅಥವಾ ಅಲ್ಲಾನ ಅಥವಾ ಏಸುವಿನ ಪಾದ ಸೇರಿದರೂ ಯಾರೂ ಲೆಕ್ಕ ಇಡಲು ಅವಕಾಶ ನೀಡದೇ ಶವವಾಗಿ ಜಗತ್ತಿನ ಮಹಾದುರಂತಕ್ಕೆ ಬಲಿಯಾಗಿ ಹೋದರು.
ಸರಿ ಸುಮಾರು ಅದೇ ಸಮಯ.ಡಿಸೆಂಬರ್ ೨ ರ ೧೯೮೪ ಮಧ್ಯರಾತ್ರಿ. ಭೋಪಾಲಿನ ಯುನಿಯನ್ ಕಾರ್ಬೈಡ್ ಕಾರ್ಖಾನೆಯ ನೌಕರ ಸುಮನ್ ಡೇ ಆಗಷ್ಟೇ ಎಂದಿನಂತೆ ರಾತ್ರಿ ಡ್ಯೂಟಿಗೆ ಬಂದಿದ್ದ. ಯುನಿಯನ್ ಕಾರ್ಬೈಡ್ ಒಂದು ಅಮೇರಿಕಾ ಮೂಲದ ಬಹುದೇಶಗಳ ಕೀಟನಾಶಕ ತಯಾರು ಮಾಡುವ ಕಾರ್ಖಾನೆ. ಅದು ಪ್ರಾರಂಭವಾದ ೧೯೬೯ ನೇ ಸಾಲಿನಲ್ಲಿ ಆತನಿಗೆ ೧೫ ವರ್ಷ. ಆಗಿನಿಂದಲೂ ಆತ ಈ ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಾ ಇದ್ದಾನೆ. ಹೆಸರಿಗೇ ಆತ ಕಾರ್ಖಾನೆಯ ನೌಕರರ ಸಂಘದ ಮುಖ್ಯಸ್ಥ ಕೂಡಾ. ಕಾರ್ಖಾನೆಯ ಆಡಳಿತ ಮಂಡಳಿಗೂ ಹಳೆಯ ನೌಕರನೆಂದು ಸ್ವಲ್ಪ ಆಪ್ತ. ಆತನ ಕೊಳಕಾದ ನಿತ್ಯದ ವಸ್ತ್ರ ಕಳಚಿ ಕಾರ್ಖಾನೆಯ ಯುನಿಫಾರ್ಮ್ ಹಾಕಲು ಡ್ರೆಸಿಂಗ್ ರೂಮು ಪ್ರವೇಶಿಸಿದ. ಡ್ರೆಸಿಂಗ್ ರೂಮೆಂದರೆ ತಗಡಿನ ಶೀಟುಗಳನ್ನು ನಾಲ್ಕು ಕಡೆ ಹಾಕಿ ಮೇಲೊಂದು ಅದರದೇ ಮುಚ್ಚಳ ಹಾಕಿದ ಡಬ್ಬದಂತ ರೂಮು. ನೆಪಕ್ಕೆಂದು ಇರುವ ಹಳೆಯ ಮಾಸ್ಕೊಂದು ಧರಿಸಿ ನಿತ್ಯ ಕೆಲಸ ಮಾಡುವೆಡೆ ಸರ ಸರ ನಡೆದ. ಆತನಂತೆ ರಾತ್ರಿ ಶಿಪ್ಟಿನಲ್ಲಿ ಕೆಲಸ ಮಾಡುವ ಅನೇಕ ನೌಕರರೂ ಒಳಬಂದು ಅವರವರ ಕೆಲಸ ಮಾಡತೊಡಗಿದರು. ಆತನದು ಗ್ಯಾಸ್ ಟ್ಯಾಂಕರಿನ ಒತ್ತಡ ಎಷ್ಟಿದೆ? ಸ್ಟಾಕು ಎಷ್ಟು? ಬೇಡಿಕೆಗೆ ತಕ್ಕ ಹಾಗೇ ಗ್ಯಾಸನ್ನು ಬಿಡುಗಡೆ ಮಾಡುವ ಕೆಲಸ. ಆತನ ಕೆಲಸ ಮಾಡುವ ಸ್ಥಳಕ್ಕೆ ಬಂದ ಕೂಡಲೇ ಕೆಟ್ಟ ಘಾಟು ವಾಸನೆ ಮೂಗಿದೆ “ರಫ್” ಎಂದು ರಾಚಿತು. ಹೇಳಿ ಕೇಳಿ ಮೊದಲೇ ಅದು ಕೀಟನಾಶಕದ ಕಾರ್ಖಾನೆ. ಈ ತರಹದ ಚಿತ್ರ ವಿಚಿತ್ರವಾದ ಅನೇಕ ವಾಸನೆಗಳೆಲ್ಲಾ ಅದರಲ್ಲಿ ಸಾಮಾನ್ಯ. ಸ್ವಲ್ಪ ಹೊತ್ತು ಅಲಕ್ಷ್ಯ ಮಾಡಿದ. ಆದರೆ ಇದು ಹೊಸರೀತಿಯದು. ಕುತ್ತಿಗೆಯ ಮೇಲೆ ಯಾರೋ ಕೂತು ಹಿಚುಕಿದ ಹಾಗಾಯಿತು. ಎದೆಯನ್ನು ಹಿಂಡಿದ ಅನುಭವ. ಆತನ ಅನುಭವೀ ಮನಸ್ಸಿಗೆ ಗೊತ್ತಾಗಿ ಹೋಯಿತು. ಇದು ಗ್ಯಾಸು ಲೀಕೇಜು. ಆತ ಅಲ್ಲಿರುವ ಹಳೆಯ ಸೊನ್ನೆಯಿಂದ ೯ ರವರೆಗೆ ನಂಬರುಗಳಿರುವ ಮತ್ತದರ ಮೇಲೆ ರಂದ್ರಗಳಿರುವ ದೂರವಾಣಿ ಯಂತ್ರದ ಮೇಲೆ ಬೆರಳಿಟ್ಟು ಕಂಟ್ರೋಲ್ ರೂಮಿನ ನಂಬರು ತಿರುಗಿಸಿ ದೂರವಾಣಿ ಮಾಡಿ ಆ ಕಡೆಯಿರುವವರಿಗೆ “ಗ್ಯಾಸು ಲೀಕಾಗಿದೆ.ಕ್ರಮ ತೆಗೆದುಕೊಳ್ಳಿ” ಎಂದು ತಿಳಿಸಿದ. ಯಾರಿದ್ದಾರೆ ಆ ಕಡೆ? ಹೆಸರಿಗಷ್ಟೇ ಕಂಟ್ರೋಲು ರೂಮು ಅಲ್ಲಿರುವುದು ಇವನಷ್ಟೇ ವಯಸ್ಸಾದ ಮತ್ತೊಬ್ಬ ನೌಕರ. ಆತ ಕೆಸರು ತಾಗಿ ಹಳೆಯದಾದ ದಪ್ತರು ತೆಗೆದು ಈತನ ಹೆಸರು ಬರೆದು ಈತನ ಹೆಸರು ಬರೆದು ಲೀಕೆಜು ಕಂಪ್ಲೇಂಟು ಇದೆ ಎಂದು ಎಂದಿನಂತೆ ನಮೂದಿಸಿ ನಿದ್ದೆ ಹೋದ.
ಫೋಟೋ ಕೃಪೆ : eNewsroom
ಅಲ್ಲಿರುವ ಮೂರು ಮೀಟರುಗಳು ತುಂಬಾ ಹಳೆಯದಾಗಿ ಟ್ಯಾಂಕುಗಳು ತುಂಬಿದ್ದರೂ ಸಹ ಶೂನ್ಯವನ್ನೇ ತೋರಿಸುತ್ತಿದ್ದವು. ತೋರುಬೆರಳಿಂದ “ಟಪ್.. ಟಪ್ ಎಂದು ಒಂದೆರಡು ಸಲ ಸಿಡಿದ. ಒಂದು ಮೀಟರಿನ ಮುಳ್ಳು ಮಾತ್ರ ಅರ್ಧ ಟ್ಯಾಂಕು ಗ್ಯಾಸು ಇದೆ ಎಂದು ಸುಳ್ಳೇ ತೋರಿಸಿತು. ಆತ ಗ್ಯಾಸು ಇರುವತ್ತ ನಡೆದ. ಆ ಬ್ರಹತ್ ಮೂರು ಟ್ಯಾಂಕರುಗಳನ್ನು ನೆಲದಲ್ಲಿ ಸಾಲಾಗಿ ಒಂದರ ಪಕ್ಕ ಒಂದನ್ನು ಗೋರಿಗಳೋಪಾದಿಯಲ್ಲಿ ಹುಗಿದಿದ್ದರು. ಅಲ್ಲಿಂದಲೇ ಲೀಕೇಜು ಇರುವುದು ಆತನಿಗೆ ಗೊತ್ತಾಗಿ ಹೋಯ್ತು. ಅದಕ್ಕಿಂತ ಮೊದಲ ದಿನ ಆತ ಮಾಲಕನಿಗೆ ಇದರ ಬಗ್ಗೆ ಹೇಳಿದ್ದ. ಈ ಟ್ಯಾಂಕುಗಳು ಹಳೆಯದಾಗಿ ಹೋಗಿವೆ. ಅದರ ಪೈಪುಗಳು ತುಕ್ಕು ಹಿಡಿದಿವೆ. ಬದಲಾಯಿಸಬೇಕು ಎಂದು. ಯಾರು ಕೇಳುವವರು ಆತನ ಅಹವಾಲು?.
ಹೌದು. ಆ ಟ್ಯಾಂಕರುಗಳಲ್ಲಿರುವುದು “ಮಿಥೈಲ್ ಐಸೋ ಸಯನೇಟ್” ಎಂಬ ಪ್ರಪಂಚದಲ್ಲೇ ಅತ್ಯಂತ ವಿಷಕಾರಿ ಅನಿಲ. ಸರಿ ಸುಮಾರು ೧೦೦ ಟನ್ನಿನಷ್ಟು ಅನಿಲ ರಕ್ಕಸನಂತೆ ತಣ್ಣನೇ ಹುದುಗಿ ಕುಳಿತಿತ್ತು.ಅದರಿಂದ ತಯಾರಿಸುವ “ಸೆವಿನ್” ಎಂಬ ಕೀಟನಾಶಕ ಹೊಂದಿದ “ಕಾರ್ಬಾರಿಲ್” ಉತ್ಪನ್ನಕ್ಕೆ ಭಾರಿ ಬೇಡಿಕೆ ಇತ್ತಂತೆ. ಹಾಗಂತ ಆತನ ಮಾಲಕ ವಾರನ್ ಅಂಡರ್ಸನ್ ಹೇಳಿದ್ದ. ಬಹುತೇಕ ನೌಕರರಿಗೆ ಏನು ತಯಾರಾಗುತ್ತದೆಯೆಂದೇ ತಿಳಿದಿಲ್ಲವಾಗಿತ್ತು. ತಿಳಿದುಕೊಂಡು ಮಾಡುವುದಾದರೂ ಏನು? ಒಂದೊತ್ತಿನ ತುತ್ತಿನ ಚೀಲ ತುಂಬಿದರೆ ಸಾಕಲ್ಲವೇ? ಜಾಸ್ತಿ ಕೇಳಿದರೆ ಕಾರ್ಖಾನೆಯಿಂದ ಗೇಟ್ ಪಾಸ್ ಖಚಿತ. ಆದರೂ ಸುಮನ್ ಮಾಲಿಕನ ಹತ್ತಿರ ಹೇಳಿದ್ದ. ಎಲ್ಲರಿಗೂ ಒಂದಿಷ್ಟು ರಕ್ಷಣಾ ವಸ್ತುಗಳು, ಮುಖಕ್ಕೆ ಗವುಸುಗಳು, ಕೈಗಳಿಗೆ ಗ್ಲೋವ್ಸುಗಳು ಇತ್ಯಾದಿ. “ಬೇಕಾದರೆ ಕೆಲಸ ಮಾಡು.. ಇಲ್ಲದಿದ್ದರೆ ಬಿಟ್ಟು ಹೊರಡು” ಎಂಬ ಉತ್ತರ ಬಂದಿತ್ತು. ಆತನೂ ಈ ದರೀದ್ರ ಫ್ಯಾಕ್ಟರಿ ಬಿಟ್ಟು ಬೇರೆ ಕಡೆ ಕೆಲಸ ನೋಡಿಕೊಳ್ಳಬೇಕೆಂದು ಅನೇಕ ಸಲ ಅಂದುಕೊಳ್ಳುತ್ತಾನೆ. ಹಾಗಂತ ಅಂದುಕೊಳ್ಳುತ್ತಾ ೧೮ ವರ್ಷಗಳೇ ಕಳೆದು ಹೋದವು. ವಯಸ್ಸಾಯಿತು.”ಇನ್ನು ಬೇರೆಲ್ಲಿ ಯಾರು ಕೆಲಸ ಕೊಟ್ಟಾರು? ಇಲ್ಲಿಯೇ ಜೀವನ ಮುಗಿಸುವುದು ದೇವರ ಇಚ್ಚೆ’ ಎಂದು ಸುಮ್ಮನಾದ..
ಫೋಟೋ ಕೃಪೆ : India Today
ಸಣ್ಣ ಪುಟ್ಟ ಗ್ಯಾಸುಗಳು ದಿನವೂ ಲೀಕಾಗುತ್ತಲೇ ಇದ್ದುದರಿಂದ ಆತನ ಎಲ್ಲಾ ಸ್ನೇಹಿತರೂ ಸಹ ಅದಕ್ಕೆ ಹೊಂದಿಕೊಂಡು ಬಿಟ್ಟಿದ್ದರು. ಒಂದಿಷ್ಟು ದುರ್ವಾಸನೆ, ಗಂಟಲು ಕಟ್ಟಿದಂತೆ ಆಗುವುದು ಇದೆಲ್ಲಾ ಅವರಿಗೆ ಸಾಮಾನ್ಯವಾಗಿತ್ತು. ೨೫ ಡಿಸೆಂಬರ್,೧೯೮೧ ರಂದು “ಪೋಸ್ಜಿನ್” ಎಂಬ ಗ್ಯಾಸು ಲೀಕಾಗಿ ಅವರ ಸ್ನೇಹಿತ ಅಶ್ರಫ್ ಖಾನ್ ಸತ್ತಿದ್ದ. ಒಂದಿಬ್ಬರು ನೌಕರರು ತೀವ್ರವಾಗಿ ತೊಂದರೆಗೀಡಾಗಿದ್ದರು. ಇದನ್ನೆಲ್ಲಾ ಸಣ್ಣ ಪುಟ್ಟ ಪರಿಹಾರ ನೀಡಿ ಕಾರ್ಖಾನೆಯ ಆಡಳಿತ ಮುಚ್ಚಿಹಾಕಿತ್ತು. ಆತ ಅಂದುಕೊಂಡಿದ್ದ. ಪ್ರತಿಭಟಿಸಬೇಕಿತ್ತು ಎಂದು.. ಆದರೆ ಜೊತೆ ಬರುವವರು ಯಾರು? ಅವರವರ ತೊಂದರೆ ಅವರವರಿಗೆ. ಬಡತನದ ಬೇಗೆ ಪ್ರತಿಭಟಿಸುವ ಇಚ್ಚೆಯನ್ನೇ ತೊಡೆದು ಹಾಕಿತ್ತು.
ಆ ದಿನವೂ ಆತನಿಗೆ ಚೆನ್ನಾಗಿ ನೆನಪಿದೆ. ಜನವರಿ ೯,೧೯೮೨. ಫ್ಯಾಕ್ಟರಿಯ ಮೂರನೇ ಕಟ್ಟಡದಲ್ಲಿ ಅತೆಂತದೋ ಗ್ಯಾಸು ಲೀಕಾಗಿ ಮುಖಕ್ಕೆ ರಾಚಿ ೨೫ ಜನ ಆತನ ಸ್ನೇಹಿತರು ಆಸ್ಪತ್ರೆ ಸೇರಿ ಸಾವು ಬದುಕಿನ ಮಧ್ಯ ಹೋರಾಡಿ ಜೀವಛ್ಛವವಾಗಿ ಮನೆ ಸೇರಿದ್ದರು. ಅವರಿಗೆ ಜೀವನಾಧಾರಕ್ಕೆ ಒಂದಿಷ್ಟು ಪರಿಹಾರಕ್ಕಾಗಿ ಆತ ಮಾಲಕನ ಹತ್ತಿರ ಗೋಗೆರೆದಿದ್ದ. ಏನೂ ಪ್ರಯೋಜನವಾಗಲಿಲ್ಲ. ಕೆಲಸಕ್ಕೆ ಬಂದರೆ ಮಾತ್ರ ಸಂಬಳ. ಇಲ್ಲದಿದ್ದರೆ ಇಲ್ಲ ಎಂದು ಮಾಲಕ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದ. ನೌಕರರೆಲ್ಲಾ ಸೇರಿ ಒಂದಿಷ್ಟು ಮೊತ್ತವನ್ನು ಅವರೆಲ್ಲರಿಗೂ ತಲುಪಿಸಿದ್ದರು.
ಆತ ಟ್ಯಾಂಕರುಗಳತ್ತ ನಡೆದ. ಹಿಸ್… ಹಿಸ್ ಎಂಬ ಶಬ್ಧ ಯಾವುದೋ ಒಂದು ಟ್ಯಾಂಕಿನ ಬುಡದಿಂದ ಬರುತ್ತಿತ್ತು. ಪೊದೆಗಳ ಮಧ್ಯದಲ್ಲಿ ಹಾವುಗಳ ಸರಸವಿರಬೇಕೆಂದುಕೊಂಡ. ಆದರೆ ರಪ್ಪನೆ ಮುಖಕ್ಕೆ ಚಾಚಿದ ದುರ್ವಾಸನೆ ಅದು ಗ್ಯಾಸು ಲೀಕೆಂದು ಖಚಿತ ಪಡಿಸಿತು. ಆತನಿಗೆ ನೆನಪಿದೆ. ಒಂದಿನ ಆತನ ಮಾಲೀಕ ಆ ಕಡೆ ಬಂದವ “ಒಂದಿಷ್ಟು ಸ್ವಲ್ಪ ಸ್ವಚ್ಚ ಮಾಡಿರಿ” ಎಂದು ಇವನ ತಂಡಕ್ಕೇ ಅಪ್ಪಣೆ ಮಾಡಿದ್ದ. ಅಲ್ಲಿರುವ ಲಂಟಾನಾ ಪೊದೆಗಳನ್ನು ಸ್ವಚ್ಚ ಮಾಡುವಾಗಲೇ ಇವರಿಗೆ ಅಲ್ಲಿ ಗ್ಯಾಸು ಲೀಕಾಗುವುದು ತಿಳಿದಿತ್ತು. ಅವುಗಳಿಂದ ತುರ್ತುಪರಿಸ್ಥಿತಿಯಲ್ಲಿ ಗ್ಯಾಸು ಹೊರಗೆ ಬಿಡಲು ಇದ್ದ ದೊಡ್ಡ ದೊಡ್ಡ ವಾಲ್ವುಗಳು ತುಕ್ಕು ಹಿಡಿದು ಹೋಗಿದ್ದವು. ಗಿಡಕಂಟಿಗಳನ್ನು ಸ್ವಚ್ಚ ಮಾಡುವಾಗ ಪೈಪಿನ ಮೇಲಿದ್ದ ಮಣ್ಣು ಸರಿದು ಲೀಕಾಗುವುದು ಗೊತ್ತಾಗಿತ್ತು. ಅದನ್ನು ಪೂರ್ತಿ ಬದಲಾವಣೆ ಮಾಡಲೇ ಬೇಕಾಗಿತ್ತು. ಮಾಡಲು ದುಡ್ಡಿಲ್ಲ. ಹಾಗೇ ಇರಲಿ ಸ್ವಲ್ಪ ದಿನ ನೋಡಿಕೊಳ್ಳೋಣ ಎಂಬ ಉತ್ತರ ಬಂದಿತ್ತು. ಆದರೆ ಆಗಲೇ ಎಡವಟ್ಟಾಗಿ ಹೋಗಿತ್ತು. ಫ್ಯಾಕ್ಟರಿಯ ಸೋರಿದ ನೀರು ತುಕ್ಕು ಹಿಡಿದ ಪೈಪುಗಳ ಮೂಲಕ ಟ್ಯಾಂಕನ್ನು ಸೇರಿರಬೇಕು. ಅಲ್ಲೊಂದು ರಾಸಾಯನಿಕ ಕ್ರಿಯಯಾಗಿ ಭಾರಿ ಒತ್ತಡ ನಿರ್ಮಾಣವಾದ ಹಾಗಿತ್ತು.
ಫೋಟೋ ಕೃಪೆ : NoiseBreak
ಆತ ಪುನಃ ಆತ ಕೆಲಸ ಮಾಡುವ ಜಾಗಕ್ಕೆ ಓಡಿದ. ಅಲ್ಲಿದ್ದ “ಬೆಂಟ್ ಗ್ಯಾಸ್ ಸ್ಕ್ರಬ್ಬರ್” ಎಂಬ ಬ್ರಹತ್ ಫಿಲ್ಟರಿನ ನಿಯಂತ್ರಣ ಸರಿಯಿದೆಯೇ ಎಂದು ಪರೀಕ್ಷಿಸಿದ. ಏನಿದು “ಬೆಂಟ್ ಗ್ಯಾಸ್ ಸ್ಕ್ರಬ್ಬರ್” ಅಂತಿರಾ? ಇದು ನಮ್ಮ ಮನೆಯಲ್ಲಿ ಅಕ್ವಾ ಗಾರ್ಡ್ ತರದ ನೀರಿನ ಫಿಲ್ಟರ್ ಇದ್ದಲ್ಲಿ ಅದಕ್ಕೆ ನೀರುಬರುವಾಗ ಕೊಳಕು ಎಲ್ಲ ಫಿಲ್ಟರ್ ಹಾಕ್ತಾರಲ್ಲ ಆ ತರದ ಫಿಲ್ಟರ್. ಈ ಸ್ಕ್ರಬ್ಬರ್ ಕಾರ್ಖಾನೆಯ ಚಿಮಣಿ ಮತ್ತು ರಾಕ್ಷಸ ವಿಷದ ಗ್ಯಾಸ್ ಮಧ್ಯೆ ಹಾಕಿರುತ್ತಾರೆ. ಆಗಾಗ ಇದನ್ನು ಚಾರ್ಜ್ ಮಾಡ್ತಾ ಇರಬೇಕು. ಇಲ್ಲದಿದ್ದಲ್ಲಿ ಒಳಗಿದ್ದ ವಸ್ತುಗಳೆಲ್ಲ ಒಣಗಿ ಗ್ಯಾಸು ಲೀಕಾದರೆ ನೇರವಾಗಿ ಚಿಮಣಿ ಸೇರಿ ಪರಸರಕ್ಕೆ ಬಿಡುಗಡೆಯಾಗುತ್ತದೆ. ಅದರ ಮೀಟರ್ ಸರಿಯಿತ್ತೋ ಇಲ್ಲವೋ “ಖಾಲಿ” ಎಂದು ತೋರಿಸುತ್ತಿತ್ತು. ಆತನ ಉದ್ವೇಗ ಜಾಸ್ತಿಯಾಯಿತು. ಏನಾದರೂ ಈ ನೂರಾರು ಟನ್ ವಿಷಾನಿಲ ಲೀಕಾಗಿ ಚಿಮಣಿ ಸೇರಿದರೆ ಇಡೀ ಭೋಪಾಲಿನ ಜನ ಹೇಳ ಹೆಸರಿಲ್ಲದ ಹಾಗೇ ಮಾಯವಾಗುತ್ತಾರಲ್ಲ? ಇದನ್ನು ನೆನೆದೇ ಆತನಿಗೆ ಕೈಕಾಲು ನಡುಕ ಬಂತು. ಇದೆಲ್ಲಾ ಆಗುವಾಗಲೇ ಅಪ್ರತಿಮವಾದ ಭಯಂಕರ ಒತ್ತಡದಲ್ಲಿ ೨೦೦ ಡಿಗ್ರೀ ತಾಪಮಾನದ ಗ್ಯಾಸು ಲೀಕಾಗಲು ಪ್ರಾರಂಭಿಸಿಯೇ ಬಿಟ್ಟಿತ್ತು. ಎಂದೂ ಕೆಲಸ ಮಾಡಿರದ ಮೀಟರುಗಳೆಲ್ಲಾ ಮುಳ್ಳುಗಳು ಕಿತ್ತು ಹೋಗುವ ಒತ್ತಡ ಮತ್ತು ತಾಪಮಾನ ತೋರಿದವು. ಆತನಿಗೆ ಮತ್ತು ಅಲ್ಲಿರುವ ಇತರ ಕರ್ಮಚಾರಿಗಳಿಗೆ ಒಂದು ಕ್ಷಣ ಏನೂ ಮಾಡುವುದೆಂದು ತಿಳಿಯದೇ ದಿಗ್ಮೂಢರಾಗಿ ನಿಂತು ಬಿಟ್ಟರು. ಇದ್ದ ಬದ್ದ ವಾಲ್ವುಗಳನ್ನು ತಿರುಗಿಸಲೂ ಭಯ.
ಗ್ಯಾಸು ಒಳಗೆ ನುಗ್ಗಿ ಕ್ಷಣ ಮಾತ್ರದಲ್ಲಿ ಇವರ ಪ್ರಾಣದ ಭಕ್ಷಣೆ ಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದವು. ಆಗಲೇ ರಾತ್ರಿಯ ೧.೦೦ ಘಂಟೆ. ಆತನಿಗೆ ಯುನಿಯನ್ ಕಾರ್ಬೈಡ್ ಕಾರ್ಖಾನೆಯ ಪಕ್ಕದಲ್ಲಿಯೇ ಇರುವ ಸ್ಲಮ್ಮಿನ ಸಹಸ್ರಾರು ಝಾಣಾ ಸುಖ ನಿದ್ರೆಯಲ್ಲಿರುವುದು ನೆನಪಾಯ್ತು. ಈ ಗ್ಯಾಸಿನ ಅಟಾಟೊಪಕ್ಕೆ ಬೆಂಕಿಗೆ ಸಿಕ್ಕ ಪತಂಗಗಳಂತೆ ಪತರಗುಟ್ಟಿ ಸತ್ತುಹೋಗುವುದು ಆತನ ಮಸ್ತಿಷ್ಕಕ್ಕೆ ಬಂದು ಗಂಟಲು ಒಣಗಿ ಹೋಯ್ತು. ಆತ ಸೈರನ್ನಿನ ಹತ್ತಿರ ಗಾಬರಿಯಿಂದ “ಸೈರನ್ ಹಾಕ್ರೋ” ಎಂದು ಕೂಗಿಕೊಳ್ಳುತ್ತಾ ಓಡಿದ. ಸೈರನ್ ಸ್ವಿಚ್ ಒತ್ತಿದರೆ ಎಲ್ಲಾಗುತ್ತೆ ಸೈರನ್? ಫ್ಯಾಕ್ಟರಿಗೆ ಎರಡು ಸೈರನ್ ಇದ್ದವು. ಮೊದಲನೆಯದು ಕೆಲಸಗಾರರಿಗೆ ಊಟದ ಸಮಯ ತಿಳಿಸಲು ಇರುವ ಕೀರಲು ಸ್ವರದ್ದು. ಮತ್ತೊಂದು “ಬೊಂವ್… ಬೊಂವ್.” ಎಂದು ಜೋರಾಗಿ ಬೊಂಬ್ಡಾ ಬಜಾಯಿಸುವ, ಏನಾದರೂ ಅವಗಡಗಳಾದರೆ ಸಾರ್ವಜನಿಕರನ್ನು ಎಚ್ಚರಿಸಲು ಇರುವಂತದ್ದು. ಇವು ಟ್ಯಾಂಕುಗಳ ಜೊತೆಯೇ ಅಮೇರಿಕಾದಿಂದ ೧೯೭೫ ರಲ್ಲೇ ಬಂದವು. ಆತನಿಗೆ ತಿಳಿದಂತೆ ಒಂದಷ್ಟು ದಿನ ಕೆಲಸ ಮಾಡಿ ಅವು ಸುಮ್ಮನಾದ ಮೇಲೆ ಅವನ್ನು ರಿಪೇರಿ ಮಾಡಿಸಿಯೇ ಇರಲಿಲ್ಲ. ಟ್ಯಾಂಕನ್ನು ಕೂಡ್ರಿಸಲು ಅಮೇರಿಕಾದಿಂದ ಬಂದ ಕೆಂಪು ಮೂತಿಯ ಒಂದಿಷ್ಟು ಜನ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಚಿತ್ರ ವಿಚಿತ್ರವಾಗಿ ಅವನಿಗೆ ಮತ್ತು ಮತ್ತೊಂದಿಷ್ಟು ಜನರನ್ನು ಒಂದು ರೂಮಿನಲ್ಲಿ ಕೂಡ್ರಿಸಿ ಅರ್ಥವಾಗ ಭಾಷೆಯಲ್ಲಿ ಟ್ರೇನಿಂಗ್ ನೀಡಿದಂತೆ ಮಾಡಿ ಫೋಟೋ ತೆಗೆದುಕೊಂಡು ಹೋಗಿದ್ದರು. ಅದು ಕೇವಲ ಲೈಸನ್ಸ್ ಪಡೆಯಲು ಮಾತ್ರ ಎಂದು ಅವನಿಗೆ ತಡವಾಗಿ ತಿಳಿದಿತ್ತು. ಹಾಳಾಗಿ ಹೋಗಲಿ. ಆಕ್ಸಿಜನ್ ಸಿಲೆಂಡರ್ ಮತ್ತು ಮಾಸ್ಕುಗಳು ಇವೆಯೇ ನೋಡೋಣ ಎಂದು ಆತ ಉಗ್ರಾಣದೆಡೆ ಧಾವಿಸಿದ. ಎಲ್ಲಿವೆ ಅವು? ಉಗ್ರಾಣದ ಮೂಲೆಯಲ್ಲಿ ಬಣ್ಣ ಕಳೆದುಕೊಂಡು ಅನಾಥವಾಗಿ ಬಿದ್ದಿದ್ದವು. ಅವುಗಳನ್ನು ಯಾವ ಸ್ಥಿತಿಯಲ್ಲಿಯೂ ಸಹ ಉಪಯೋಗಿಸುವಂತೆಯೇ ಇರಲಿಲ್ಲ.
ಫೋಟೋ ಕೃಪೆ : janata weekly
ಆಗಲೇ ಬಹುಶಃ ಮೊದಲ ಟ್ಯಾಂಕಿನ ಸೇಫ್ಟಿ ವಾಲ್ವ್ ಒಫನ್ ಆಗಿದ್ದು. ಭಾರೀ “ಹಿಸ್.. ಹಿಸ್…” ಶಬ್ಧದೊಂದಿಗೆ ಕೆನೆಯುತ್ತಾ ಚಿಮಣಿಗೆ ನುಗ್ಗಿ ರಾಕೆಟ್ಟಿನ ವೇಗದಲ್ಲಿ ನಭದೆಡೆ ನೆಗೆಯುತ್ತಿದ್ದರೆ ಎಲ್ಲಾ ನಿಸ್ಸಹಾಯಕರಾಗಿ ನೋಡುತ್ತಾ ನಿಂತಿದ್ದರು. ಆತನಿಗೆ ಏನಾದರೂ ಮಾಡಿ ಈ ಮಹಾಮಾರಿಯನ್ನು ತಡೆಯಲೇ ಬೇಕು ಎಂದು ಕೊಂಡು ತನ್ನಂತೇ ಮಾಸ್ಕ್ ಧರಿಸಿದ್ದ ಇನ್ನೂ ಕೆಲವರನ್ನು ಕರೆದುಕೊಂಡು ಅಲ್ಲಿರುವ ನೇರನ್ನು ಹಾಯಿಸುವ ಪೈಪಿನಿಂದ ರಭಸವಾಗಿ ನೀರನ್ನು ಹಾಯಿಸಿ ಗ್ಯಾಸಿನ ವೇಗಕ್ಕಾದರೂ ಬ್ರೇಕು ಹಾಕಬೇಕೆಂದುಕೊಂಡ. ಆದರೆ ಕೇವಲ ೧೦೦ ಮೀಟರ್ ಇದ್ದ ಪೈಪಿನ ಉದ್ದ ೧೫೦ ಮೀಟರು ಇರುವ ಚಿಮಣಿಯ ತುದಿಯನ್ನು ಹೇಗೆ ತಲುಪೀತು? ಆಗಸದೆಡೆ ರಭಸದಿಂದ ಚಿಮ್ಮಿದ ಗ್ಯಾಸು ವೇಗವನ್ನು ಕಳೆದುಕೊಂಡು ದೊಡ್ಡದೊಂದು ಕಂಬಳಿಯು ಕೆಳಗಿಳಿದಂತೆ ಕ್ರಮೇಣ ನೆಲದತ್ತ ಬಂದು ಕಾರ್ಮೋಡವನ್ನೇ ನಿರ್ಮಿಸಿತು. ಆಗ ನಡೆದಿದ್ದೇ ಮಹಾನರಮೇಧದ ಜಗತ್ತಿನ ಅತ್ಯಂತ ದೊಡ್ಡ ಮಹಾದುರಂತ.
- ಡಾ: ಎನ್.ಬಿ.ಶ್ರೀಧರ
ಮುಂದುವರೆಯುವುದು…..