ಚಿಕ್ಕಮಕ್ಕಳಿಗೆ ಜೈವಿಕ ಕಾರಣದಿಂದ ನೆನಪಿನ ಶಕ್ತಿ ಕಡಿಮೆಯಿರುತ್ತದೆ. ಮಗುವನ್ನು ಪಳಗಿಸಲು ಪ್ರತಿ ಸಂಸ್ಕೃತಿಯೂ ತನ್ನದೇ ಆದ ಪರಿಕರವನ್ನು ಹೊಂದಿದೆ. ಮಗು ಸಾಮಾಜಿಕ ಒಡನಾಟದಲ್ಲಿ, ಸಮಾಜ ಸೃಷ್ಟಿಸಿದ ಈ ಪರಿಕರದಿಂದ ಬುದ್ಧಿವಂತಿಕೆಯನ್ನು ಸಂಗ್ರಹಿಸುತ್ತ ಹೋಗುತ್ತದೆ ಎನ್ನುತ್ತಾರೆ ಖ್ಯಾತ ಚಿಂತನಕಾರರು ಕೇಶವ ಮಳಗಿ ಅವರು, ಮುಂದೆ ಓದಿ ಮಕ್ಕಳ ಕಲಿಕೆಗೆ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆ ಹೇಗೆ ತಳಹದಿಯಾಗುತ್ತದೆ ಎಂದು.
* ಲೆವ್ ವೈಗೊಟಸ್ಕೀ : Lev Vygotsky (1869-1934, ಬೆಲರೂಸ್, ಸೋವಿಯತ್ ರಷ್ಯಾ)
ಫೋಟೋ ಕೃಪೆ :pinterest
ಮಕ್ಕಳ ಮನೋವಿಕಾಸದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಪರಿಕರ ಮತ್ತು ಭಾಷೆಗಳು ಬೀರುವ ಪ್ರಭಾವದ ಕುರಿತು ಲೆವ್ ನಡೆಸಿದ ಅಧ್ಯಯನಗಳು ಇಂದಿಗೂ ಕ್ರಾಂತಿಕಾರಿ. ಜಾನ್ ಪಿಯಾಜೆ ಮತ್ತು ವೈಗೊಟಸ್ಕೀಯವರನ್ನು ಅರಿತುಕೊಳ್ಳದೆ ಶಿಕ್ಷಣ-ಶಿಕ್ಷಕ ತರಬೇತಿ ಕೊನೆಗೊಳ್ಳದು. ಈ ಹಿನ್ನೆಲೆಯಲ್ಲಿ ಶಿಕ್ಷಕ ಮತ್ತು ಸಾಂಸ್ಕೃತಿಕ ಪರಿಕರಗಳಾದ ಪಠ್ಯಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಲೆವ್ ಹೇಳುತ್ತಾನೆ.
*
ಮಕ್ಕಳ ಅರಿವಿನ ಸಂಪಾದನೆ ಅಥವ ಜ್ಞಾನಗ್ರಹಿಕೆಯ ವಿಕಾಸಕ್ಕೆ ಸಂಬಂಧಿಸಿದಂತೆ ವೈಗೊಟಸ್ಕೀ ಮಂಡಿಸಿದ ಪ್ರಮೇಯ ಅಂದಿಗಷ್ಟೇ ಅಲ್ಲ, ಇಂದಿಗೂ ಪ್ರಾಥಮಿಕ-ಮಾಧ್ಯಮಿಕ- ಪ್ರೌಢಶಿಕ್ಷಣದಲ್ಲಿ ಅತ್ಯಂತ ಪ್ರಸ್ತುತ. ಅವು ಅಂದಿಗೆ ಹಾಗೂ ಇಂದಿಗೆ ಸಮಕಾಲೀನ. ಮಾತ್ರವಲ್ಲ, ಶಿಕ್ಷಕ-ಶಿಕ್ಷಣದಲ್ಲಿ ಇನ್ನೊಬ್ಬ ಮಕ್ಕಳ ಮನೋವಿಶ್ಲೇಷಣೆಕಾರ ಜಾನ್ ಪಿಯಾಜೆ (Jean Piaget)ಗಿಂತ ವೈಗೊಟಸ್ಕೀ ಪ್ರಮೇಯಗಳಿಗೆ ಹೆಚ್ಚು ಮಹತ್ವ. ಪ್ರಮೇಯಗಳ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಮಗುವಿನ ಪರಿಸರ, ಕುಟುಂಬ ಮತ್ತು ಸಮಾಜಕ್ಕೆ ಅತಿ ಹೆಚ್ಚಿನ ಮಹತ್ವವನ್ನು ವೈಗೊಟಸ್ಕೀ ನೀಡುವುದೇ ಇದಕ್ಕೆ ಕಾರಣವಾಗಿದೆ. ಇದನ್ನು ವಿಶಾಲನೆಲೆಯಲ್ಲಿ ‘ಸಮಾಜೋ-ಸಾಂಸ್ಕೃತಿಕ ’ ಸಿದ್ಧಾಂತವೆಂದು ಕರೆಯಲಾಗುತ್ತದೆ.
ಮಗುವಿನ ಸಾಂಸ್ಕೃತಿಕ ಮೌಲ್ಯ, ನಂಬಿಕೆ, ಬಿಕ್ಕಟ್ಟನ್ನು ಎದುರಿಸುವ ಸಾಮರ್ಥ್ಯಗಳು ಸಾಮಾಜಿಕ ಧ್ಯಾನಸ್ಥ ಸ್ಥಿತಿಯಾಗಿದೆ. ಇದನ್ನೇ ಮಾನವ ವಿಕಾಸವೆನ್ನಬಹುದು. ಈ ಪ್ರಕ್ರಿಯೆಯು ಸಮಾಜದಲ್ಲಿ ತನಗಿಂತ ಹೆಚ್ಚು ಕಲಿತರವರೊಂದಿಗೆ ಸಹಯೋಗ ಸಂವಾದ ಸಾಧಿಸುತ್ತ ಪಡೆಯುವಂಥದ್ದಾಗಿದೆ. ನಿರ್ದಿಷ್ಟ ಸಾಂಸ್ಕೃತಿಕ ಪರಿಕರ, ಖಾಸಗಿ ಮಾತುಕತೆ, ನಿಕಟ ಸಹವಾಸದಿಂದ ಸಾಧ್ಯವಾಗುತ್ತದೆ, ಎನ್ನುವುದು ವೈಗೊಟಸ್ಕೀಯ ಸಮಾಜೋ-ಸಾಂಸ್ಕೃತಿಕ ಸಿದ್ಧಾಂತ ಮುಖ್ಯ ತಿರುಳು. ಹೀಗಾಗಿ, ಮಗುವಿನ ಮಾನಸಿಕ ವಿಕಾಸದಲ್ಲಿ ಸಮಾಜವು ಅತ್ಯಂತ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ. ಸಮುದಾಯಗಳು ‘ಅರ್ಥವನ್ನು ಕಟ್ಟಿಕೊಡುವ’ ಪ್ರಕ್ರಿಯೆಯಲ್ಲಿ ಕೇಂದ್ರಪಾತ್ರವನ್ನು ವಹಿಸುತ್ತವೆ. “ಕಲಿಕೆ ಎನ್ನುವುದು ಒಂದು ಸಂಘಟಿತ ಸಾಂಸ್ಕೃತಿಕ ಪ್ರಕ್ರಿಯೆ. ಮಕ್ಕಳ ವಿಕಾಸಕ್ಕೆ ಸಾಂಸ್ಕೃತಿಕವಾಗಿ ಒಟ್ಟುಗೂಡಿಸಿದ ಮಾನವ ಮಾನಸಿಕ ಕಾರ್ಯವಿಧಾನ” ಎಂಬುದು ವೈಗೊಟಸ್ಕೀಯ ಅಭಿಮತ.
ಮಕ್ಕಳ ಅರಿವಿನ ವಿಕಾಸದಲ್ಲಿ ಸಂಸ್ಕೃತಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ಸಾಂಸ್ಕೃತಿಕ ಸನ್ನಿವೇಶದಲ್ಲಿಯೂ ಇದು ವಿಶಿಷ್ಟವಾಗಿರುತ್ತದೆ. ಹಾಗೆಂದೇ, ಸಾರ್ವತ್ರಿಕ ನಂಬಿಕೆಗಳನ್ನು ಮಕ್ಕಳ ಮೇಲೆ ಹೇರಲಾಗದು. ಸಂಸ್ಕೃತಿಯು ರೂಪುಗೊಳ್ಳುತ್ತಿರುವ ಸಮಾಜ ಮತ್ತು ಸಾಮಾಜಿಕ ನಂಬಿಕೆಗಳಿಂದ. ಆದ್ದರಿಂದಲೇ, ಮಕ್ಕಳ ಅರಿವಿನ ವಿಸ್ತರಣೆಗೆ ಕೈಹಿಡಿದು ನಡೆಸುವ ಸಾಮಾಜಿಕ ಒಡನಾಟದ ಅಗತ್ಯವಿರುತ್ತದೆ. ತನ್ನದೇ ವಯೋಮಿತಿಯ ಮಕ್ಕಳ ಒಡನಾಟದಿಂದ ಮಗು ಸ್ವಂತ ಅರಿವನ್ನು ಪಡೆಯುತ್ತದೆ. ಹಾಗೂ ಅಂತಹ ಜ್ಞಾನ ಸೃಷ್ಟಿಯನ್ನು ಜತೆಯಾಗಿ ಮಾಡಬೇಕು ಎಂದು ಅರಿಯುತ್ತದೆ. ಮಕ್ಕಳು ಬೆಳೆಯುವ ಪರಿಸರವೇ ಅವರು ಯಾರು, ಹೇಗೆ ಯೋಚಿಸುತ್ತಾರೆ, ಎಂಬುದನ್ನು ತಿಳಿಸುವಂತಿರುತ್ತದೆ.
ಫೋಟೋ ಕೃಪೆ : News18
ಮಕ್ಕಳ ಅರಿವಿನ ವಿಕಾಸಕ್ಕೆ ಹಿರಿಯರು ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಈ ಹಿರಿಯರು ತಮ್ಮ ಸಾಂಸ್ಕೃತಿಕ ಪರಿಕರಗಳಿಂದ ಮಗುವಿಗೆ ಮೌಲ್ಯಗಳ ಮಹತ್ವವನ್ನು ಕಲಿಸುತ್ತಾರೆ.
ಸಂಸ್ಕೃತಿಯ ಪರಿಣಾಮಗಳು- ಬೌದ್ಧಿಕವಾಗಿ ಅಳವಡಿಸಿಕೊಳ್ಳುವಾಗ ಬೇಕಾಗುವ ಪರಿಕರಗಳು :
ಮಕ್ಕಳು ಹುಟ್ಟುವಾಗಲೇ ಬೌದ್ಧಿಕ ವಿಕಾಸಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ಪಡೆದುಕೊಂಡೇ ಹುಟ್ಟಿರುತ್ತವೆ. ಇದನ್ನು ವೈಗೊಟಸ್ಕೀ ‘ಪ್ರಾಥಮಿಕ ಬೌದ್ಧಿಕ ಕಾರ್ಯವಿಧಾನ’ ಎನ್ನುತ್ತಾನೆ. ಆರಂಭಿಕ ಬೌದ್ಧಿಕ ಕಾರ್ಯವಿಧಾನಗಳು –
- ಗಮನ-ಲಕ್ಷ್ಯ
- ಸಂವೇದನೆ
- ಗ್ರಹಿಕೆ
- ನೆನಪು-ಸ್ಮರಣೆ
ಮಕ್ಕಳು ಸತತವಾಗಿ ಒಂದು ನಿರ್ದಿಷ್ಟ ಸಮಾಜೋ-ಸಾಂಸ್ಕೃತಿಕ ಪರಿಸರದಲ್ಲಿ ಒಡನಾಡುವುದರಿಂದ ಅವು ಸುಶಿಕ್ಷಿತ ಮತ್ತು ಪರಿಣಾಮಕಾರಿ ಮಾನಸಿಕ ಪ್ರಕ್ರಿಯೆಗಳಾಗಿ ರೂಪಾಂತರ ಹೊಂದುತ್ತವೆ. ಇದನ್ನು ವೈಗೊಟಸ್ಕೀ ‘ಉನ್ನತ ನೆಲೆಯ ಬೌದ್ಧಿಕ ಕಾರ್ಯ’ ಎಂದು ಹೇಳುತ್ತಾನೆ. ಮಗುವನ್ನು ಪಳಗಿಸಲು ಪ್ರತಿ ಸಂಸ್ಕೃತಿಯೂ ತನ್ನದೇ ಆದ ಪರಿಕರವನ್ನು ಹೊಂದಿದೆ. ಮಗು ಸಾಮಾಜಿಕ ಒಡನಾಟದಲ್ಲಿ, ಸಮಾಜ ಸೃಷ್ಟಿಸಿದ ಈ ಪರಿಕರದಿಂದ ಬುದ್ಧಿವಂತಿಕೆಯನ್ನು ಸಂಗ್ರಹಿಸುತ್ತ ಹೋಗುತ್ತದೆ.
ಫೋಟೋ ಕೃಪೆ : heysigmund
ಉದಾಹರಣೆಗೆ, ಚಿಕ್ಕಮಕ್ಕಳಿಗೆ ಜೈವಿಕ ಕಾರಣದಿಂದ ನೆನಪಿನ ಶಕ್ತಿ ಕಡಿಮೆಯಿರುತ್ತದೆ. ಇದ್ದರೂ, ಪ್ರತಿ ಸಂಸ್ಕೃತಿಯೂ ತಮಗೆ ಎಂತಹ ‘ನೆನಪಿನ ಸಾಮರ್ಥ್ಯ’ ಬೇಕು ಎಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಪಾಶ್ಚಾತ್ಯ ದೇಶದ ಮಕ್ಕಳು ‘ನೆನಪಿಟ್ಟುಕೊಳ್ಳಲು’ ನೋಟ್ಸ್ ತೆಗೆದುಕೊಳ್ಳುವುದನ್ನು ರೂಢಿ ಮಾಡಿಸಲಾಗುತ್ತದೆ. ಆದರೆ, ಸ್ಮೃತಿ ಮತ್ತು ಶ್ರುತಿಗಳೇ ಜೀವನ ವಿಧಾನವಾದ ಭಾರತೀಯ ಮತ್ತು ಆಫ್ರಿಕನ್ ಸಮಾಜಗಳು ಮೌಖಿಕ ಪರಂಪರೆಗೆ ಮೊರೆ ಹೋಗುತ್ತವೆ. ಅಂದರೆ, ಕಂಠಸ್ಥ (ಹೃದಯಸ್ಥ/ಬಾಯಿಪಾಠ) ಮಾಡಿಸುವುದು. ಕಥೆ-ಕವಿತೆ-ಮಗ್ಗಿಗಳನ್ನು ನಾವು ಈ ಸಾಂಸ್ಕೃತಿಕ ಪರಿಕರದಿಂದಲೇ ಕಲಿಯುತ್ತೇವೆ. ಈ ಕಾರಣವಾಗಿಯೇ, ತಂತ್ರಜ್ಞಾನ ಆಧಾರಿತ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯರಿಗೆ ಅಗ್ರಪಟ್ಟ. ಅತ್ಯಂತ ಸಂಕೀರ್ಣ ಗಣೀತ ಪ್ರಮೇಯ-ಪ್ರೊಗ್ರಾಮಿಂಗ್ ಇತ್ಯಾದಿಯನ್ನು ಭಾರತೀಯರಷ್ಟು ನೆನಪಿಟ್ಟುಕೊಂಡು ಮರುಉತ್ಪಾದಿಸುವ ಸಾಮರ್ಥ್ಯ ಪಡೆದವರು ಕಡಿಮೆ. ಭಾರತೀಯರ ಗಣೀತ ಬಿಡಿಸುವ, ಅತ್ಯಂತ ಸಂಕೀರ್ಣ ಭಾಗಾಕಾರವನ್ನು ತಟ್ಟನೆ ಹೇಳುವ ಪ್ರತಿಭೆಗೆ ಪಶ್ಚಿಮ ನಿಬ್ಬೆರಗಾಗುತ್ತದೆ! ಒಗಟು ಬಿಡಿಸುವುದು, ಪದ್ಯ ಉರು ಹೊಡೆಯುವುದು, ಗಾದೆ ಮಾತು-ಕಿಷ್ಟಕರ ಪಠ್ಯ (ಹಳಗನ್ನಡ)ವನ್ನು ಬಾಯಿಪಾಠ ಮಾಡುವುದು; ಸಾಮೂಹಿಕವಾಗಿ ಸರತಿಯಲ್ಲಿ ಮಗ್ಗಿಯನ್ನು ಹೇಳಿಕೊಳ್ಳುವುದು ಇನ್ನೊಂದಿಷ್ಟು ಉದಾಹರಣೆಗಳು.
ಹಾಗೆಂದೇ, ವ್ಯಕ್ತಿಯೊಬ್ಬ ತನ್ನ ಅರಿವಿನ ಪರಿಣತಿಯನ್ನು ವ್ಯಕ್ತಿಗತ ನೆಲೆಯಲ್ಲಿ ಪ್ರಸ್ತುತಪಡಿಸುತ್ತಿದ್ದರೂ ಅದು ಬರುತ್ತಿರುವುದು ಸಮಾಜೋ-ಸಾಂಸ್ಕೃತಿಕ ಪರಿಸರ ನಿರ್ಮಿಸಿದ ಪರಿಕರಗಳಿಂದ ಎಂಬುದು ವೈಗೊಟಸ್ಕೀಯ ವಾದ. ಈ ಪರಿಕರಗಳು ನಂಬಿಕೆ, ಮೌಲ್ಯ ಮತ್ತು ಒಡನಾಟದ, ಸಾಮೂಹಿಕ ಕಲಿಕೆಯನ್ನೂ ಒಳಗೊಂಡಿವೆ. ಮತ್ತು ಸಂಸ್ಕೃತಿಯಿಂದ ಸಂಸ್ಕೃತಿಗೆ ಬೇರೆಯಾಗಿವೆ.
ವೈಗೊಟಕ್ಸೀ ಸಿದ್ಧಾಂತದಲ್ಲಿ ಸಾಮಾಜಿಕ ಪ್ರಭಾವ ಮತ್ತು ಒಡನಾಟ ಬಹಳ ಮುಖ್ಯವಾದವು. ಇದನ್ನು ಆಗು ಮಾಡಿಸಲು ಪ್ರತಿ ಹಂತದಲ್ಲೂ ಶಿಕ್ಷಕ ಅಗತ್ಯ. ಸಮಾಜೋ-ಸಾಂಸ್ಕೃತಿಕ ಪರಿಕರವಾಗಿ ಅತ್ಯಂತ ಸಮರ್ಪಕ ಪಠ್ಯ ಅತ್ಯಗತ್ಯ. ಶಿಕ್ಷಕ ಇಲ್ಲಿ ಮಾದರಿ ನಡವಳಿಕೆಯ ವ್ಯಕ್ತಿ. ಸೂಕ್ತ ಕಲಿಕಾ ಪರಿಸರ ನಿರ್ಮಿಸಿ, ಕಲಿಕಾ ಸಾಮಗ್ರಿಯನ್ನು ಸಿದ್ಧಪಡಿಸುವವನು. ವೈಗೊಟಸ್ಕೀ ಈ ಪ್ರಕ್ರಿಯೆಯನ್ನು ಸಹಯೋಗದ ಸಂವಾದ (ಕೊಲಾಬರೇಟಿವ್ ಡೈಲಾಗ್) ಎನ್ನುತ್ತಾನೆ. ಮಗು ಅಲ್ಲಿ ನಿರ್ಮಿಸುತ್ತಿರುವ ಕಲಿಕಾ ಪರಿಸರವನ್ನು ಅರಿತುಕೊಳ್ಳುತ್ತದೆ. ತನಗೆ ನೀಡುತ್ತಿರುವ ಮಾಹಿತಿಯನ್ನು ಅರಗಿಸಿಕೊಳ್ಳುತ್ತದೆ. ಬಳಿಕ ತನ್ನದೇ ಅರ್ಥದಲ್ಲಿ ಮತ್ತೊಮ್ಮೆ ಅದನ್ನು ಪ್ರಚುರಪಡಿಸುತ್ತದೆ.
ಭಾಷಾ ಸಾಮರ್ಥ್ಯದ ವಿಕಾಸಕ್ಕೆ ಕೂಡ ಸಾಮಾಜಿಕ ಒಡನಾಟ, ಸಂವಹನವೇ ಕಾರಣವೆಂಬುದು ವೈಗೊಟಸ್ಕೀ ನಿಲುವು. ಭಾಷೆ ಮನುಷ್ಯನ ಅತ್ಯಂತ ಶ್ರೇಷ್ಠ ಪರಿಕರವೆಂಬುದು ಆತನ ನಂಬಿಕೆ. ಅರಿವಿನ ವಿಸ್ತಾರಕ್ಕೆ ಭಾಷೆಯು ಎರಡು ಪ್ರಮುಖ ಪಾತ್ರಗಳನ್ನು ವಹಿಸುತ್ತದೆ:
1. ಹಿರಿಯರು ಮಕ್ಕಳಿಗೆ ಮಾಹಿತಿ ರವಾನಿಸುವ ಮಾಧ್ಯಮವಾಗಿ
2. ಬೌದ್ಧಿಕವಾಗಿ ಸಾಮರಸ್ಯ ಸಾಧಿಸಲು ಭಾಷೆಯೇ ಒಂದು ಮುಖ್ಯ ಪರಿಕರವಾಗಿ
ಸಾಮಾಜಿಕ-ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬಗಳಲ್ಲಿ ಮಕ್ಕಳು ತಮ್ಮ ಪರಿಸರವು ದತ್ತವಾಗಿ ನೀಡುವ ಪರಿಕರದಿಂದಾಗಿ ಅರಿವು ಮತ್ತು ಭಾಷಾ ಸಾಮರ್ಥ್ಯವನ್ನು ಬೇಗನೇ ಪಡೆದು ಮಾತನಾಡುವುದರಲ್ಲಿ ಪರಿಣತಿ ಗಳಿಸುತ್ತಾರೆ ಎನ್ನುವುದು ವೈಗೊಟಸ್ಕಿಯ ಅಭಿಮತ. ಬಡತನದ ಹಿನ್ನೆಲೆಯಲ್ಲಿ ಬೆಳೆದ ಮಕ್ಕಳು ಈ ಎರಡೂ ಸಾಮರ್ಥ್ಯ ಪಡೆಯಲು ತುಸು ನಿಧಾನವಾಗಬಹುದು.
ಈ ಕೊರತೆಯನ್ನು ನೀಗಿಸಲು ವೈಗೊಟಸ್ಕೀ ಎರಡು ಪರಿಹಾರಗಳನ್ನು ಶೈಕ್ಷಣಿಕ ಪರಿಹಾರಗಳನ್ನು ಸೂಚಿಸುತ್ತಾನೆ:
* ಒಂದು ಕಲಿಕಾ ಚೌಕಟ್ಟನ್ನು ನಿರ್ಮಿಸಿಕೊಳ್ಳುವುದು
* ಕಲಿಕಾ ತರಬೇತಿಯನ್ನು ನೀಡುವುದು
ಶಿಕ್ಷಕನು ಪ್ರತಿ ವಿದ್ಯಾರ್ಥಿಯೂ ಈ ಎರಡೂ ಗುರಿಗಳನ್ನು ತಲುಪುವಂತೆ ಶ್ರಮಿಸಬೇಕಾಗುತ್ತದೆ. ಅದಕ್ಕೆ ಸಮಾಜೋ-ಸಾಂಸ್ಕೃತಿಕ ಪರಿಕರಗಳಾಗಿ ಪಠ್ಯ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳಿರುತ್ತವೆ.
*
ಶಿಕ್ಷಣದ ಸಾರ್ವತ್ರಿಕರಣವನ್ನು ಮುಖ್ಯ ಉದ್ದೇಶವಾಗಿ ಹೊಂದಿರುವ ಸಮಾಜಗಳು ಮಕ್ಕಳ ಈ ಕಲಿಕಾ ಕುಂದುಕೊರತೆಗಳನ್ನು ನೀಗಲು ಉಲ್ಲಸಿತ ಕಲಿಕಾ ಪರಿಸರವನ್ನು ಸಾರ್ವತ್ರಿಕವಾಗಿ ನಿರ್ಮಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತವೆ. ಸಾಮಾಜಿಕ ರಚನೆ, ಸಾಂಸ್ಕೃತಿಕ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ ಮತ್ತು ಸಮಾಜವಾಗಿ ತಾವು ನಂಬಿದ ಮೌಲ್ಯಗಳನ್ನು ಏಕಕಾಲಕ್ಕೆ ಎಲ್ಲೆಡೆ ಸಾಧಿಸುವ ಜವಾಬ್ದಾರಿಯೂ ಸಮಾಜದ್ದೇ ಆಗಿರುತ್ತದೆ. ಅಂದರೆ, ಸಾರ್ವತ್ರಿಕ ಶಿಕ್ಷಣ ಒದಗಿಸುವ ಶಾಲೆಗಳು ಎಲ್ಲರಿಗು ಎಟಕುವಂತಿರಬೇಕು. ಪಠ್ಯಗಳು ಭಾರತ ಸಂವಿಧಾನದ ಆಶಯವಾದ ಪ್ರಜಾಸತ್ತೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಕುಲಮತ ನಿರಪೇಕ್ಷತೆಯನ್ನು ಸ್ಪಷ್ಟವಾಗಿ ಪ್ರಕಟಿಸುವಂತಿರಬೇಕು. ಸಮಾಜ ಬದಲಾದಂತೆ ಪುರೋಗಾಮಿತನಕ್ಕೆ ಅಗತ್ಯವಾದ ಪರಿಷ್ಕರಣೆಯನ್ನು ಮಾಡಬೇಕು.
ಮರೆಯಬಾರದ ಅಂಶವೆಂದರೆ: ಸಮಾಜದ ಚಲನಶೀಲತೆ ಮುಮ್ಮುಖವಾಗಿರಬೇಕೆ ಹೊರತು, ಹಿಮ್ಮುಖವಾಗಿಯಲ್ಲ.
- ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು