ಸೀರೆಯ ಆಸೆ (ಭಾಗ – ೧)  – ನಾಗಮಣಿ ಎಚ್ ಆರ್ಹೆಣ್ಣುಮಕ್ಕಳಿಗೆ ಸೀರೆ ಎಂದರೆ ಪ್ರೀತಿಯಷ್ಟೇ ಅಲ್ಲ, ಜೀವವೂ ಹೌದು. ಸೀರೆಯಲ್ಲಿ ತವರ ಮನೆ ಸೀರೆಯಾದರಂತೂ ಪಂಚಪ್ರಾಣ. ಸೀರೆಯ ಕುರಿತು ಲೇಖಕಿ ನಾಗಮಣಿ ಎಚ್ ಆರ್ ಅವರು ಬರೆದ ಸೀರೆಯ ಪ್ರೀತಿ, ನಿಮಗೂ ಪ್ರೀತಿಯಾಗಬಹುದು.ತಪ್ಪದೆ ಓದಿ…

ಸೀರೆಯ ಆಸೆ  ಸೀರೆ ಅಂದ ಕೂಡಲೇ ನನ್ನ ಮನಸು ಇವತ್ತು ಸೀರೆ ಅಂಗಡಿಗೆ ಹೋಗಿ ಮತ್ತೊಂದು ಹೊಸಾ ಸೀರೆ ತೆಗೆದು ಕೊಳ್ಳೋಣವೆನಿಸುತ್ತೆ. ನನ್ನ ಕನಸಿನ ಮದುವೆಯಲ್ಲಿ ತೆಗೆದುಕೊಂಡ ಹನ್ನೆರಡು ಸೀರೆಗಳಲ್ಲಿ ನಾಲ್ಕೈದು ಸೀರೆ ಇನ್ನೂ ಉಟ್ಟೇ ಇಲ್ಲ. ಫಾಲ್ ಹಾಕಿ ರವಿಕೆ ಹೊಲಿಸಿ ರೆಡಿಯಾಗಿದ್ದರೂ ಉಡಲಿನ್ನೂ ಸಮಯ ಬಂದಿಲ್ಲ. ಆದರೂ ಮತ್ತೊಂದು ಸೀರೆ ತಗೋಳೋಣ ಎಂಬ ಆಸೆ ಮಾತ್ರ ಬೆಟ್ಟದಷ್ಟು . ಅಲ್ಲಲ್ಲ ಹಿಮಾಲಯದಷ್ಟು.

ದಿನಕ್ಕೊಂದೆರಡು ಬಾರಿ ಬೀರುವಿನ ಬಾಗಿಲು ತೆಗೆದು ಹ್ಯಾಂಗರಿನಲ್ಲಿ ನೇತುಹಾಕಿದ ರೇಷ್ಮೇ ಸೀರೆಗಳನ್ನೊಮ್ಮೆ ಕೈನಿಂದ ತಡವಿ , ಕಣ್ಣಲ್ಲೇ ಮುದ್ದಿಸಿ , ಯಾವ ಸೀರೆಯ ಯಾವಾಗ ತಗೊಂಡಿದ್ದು? ಯಾರು ಕೊಡಿಸಿದ್ದು ? ಏಕೆ ಕೊಡಿಸಿದರು ಇದೆಲ್ಲಾ ನೆನಪಿಸಿಕೊಳ್ಳುತ್ತಾ ಮುಗುಳು ನಗುತ್ತಾ ಬೀರುವಿನ ಬಾಗಿಲು ಮುಚ್ಚಿ ಹೊರಬರುವಾಗ ಯಾವಾಗ ಸೀರೆ ತಗೋಳೋದು ಯಾವ ಸೀರೆ ತಗೋಳೋದು ಎಂದು ಪ್ಲಾನ್ ಮಾಡೋದು ಇದೂ ಒಂಥರ ಮನಸಿಗೆ ಮುದ ನೀಡುವ ಸಂಗತಿ.

ಫೋಟೋ ಕೃಪೆ : google

ನಾನು ಚಿಕ್ಕಂದಿನಿಂದಲೂ , ಶಾಲಾ ಕಾಲೇಜು ದಿನ ಗಳಲ್ಲಿ ಕೂಡಾ ಹೆಚ್ಚು ಸೀರೆಯ ವ್ಯಾಮೋಹವಿತ್ತು . ಪ್ರತಿದಿನ ಟೀಚಸ್೯ ಯಾವ ಸೀರೆ ಹೇಗೆ ಉಡುತ್ತಾರೆ. ಅ ಸೀರೆ ಚಿನ್ನಾಗಿದ್ಯಾಇಲ್ವಾ ? ಇದೆಲ್ಲಾ ಗೆಳತಿಯರೊಡ ಗೂಡಿ ನನ್ನ ಕಮೆಂಟ್ ನಡೆಯುತ್ತಿತ್ತು. ನನ್ನಮ್ಮ ಮಾತ್ರ ನನಗೆ ಯಾವಾಗ್ಲೂ ಬೈತಾರೆ . ಅದೇನು ನಾಗಾ ಬರೀ ನೈಟಿ ಹಾಕ್ಕೊಂಡು ಮನೇಲಿರಂದ್ರೇ ಇದ್ ಬಿಡ್ತೀಯಾ. ಬೀರು ತುಂಬಾ ಅಷ್ಟೊಂದು ಸೀರೆ ಇಟ್ಕೊಂಡು ಒಂದಾದರೂ ಉಡೋದಿಲ್ಲ . ಅದೊಂದು ನೈಟಿ ಏರಿಸ್ಕೊಂಡು ಇರ್ತೀಯಾ. ಲಕ್ಷಣವಾಗಿ ಸೆರಗು ಬಾರ್ಡರ್ ಇರುವಂತ ಸೀರೆ ಕೂಡಾ ತಗೋಳಲ್ಲ . ಆ ರೇಷ್ಮೆ ಸೀರೆಗಳನ್ಙಂತೂ ಉಡೋದಿಲ್ಲ . ಒಂದೂ ಸಮಾರಂಭಕ್ಕೂ ಹೋಗಲ್ಲ. ಆನರಿ ಸೀರೆ ಇದೆ ಉಡಲ್ಲ . ಅದರ ಜೊತೆಗೆ ಇಷ್ಟು ಬಗೆ ನೈಟಿ ಬೇರೆ. ಎಣಿಕೆ ಪ್ರಾರಂಭ ಮಾಡ್ತಾರೆ.

ಮೊನ್ನೆ ನಾನು ಅಮ್ಮನ ಮನೆಗೆ ಹೋದೆ . ಚಿಕ್ತಮ್ಮ ಆಶಾ ಸೀರೆ ತಗೋತ್ಯಾಂದ . ಇನ್ನೂ ಮನೆಯೊಳಗೂ ಹೋಗಿ ಎರಡು ನಿಮಿಷವಾಗಿಲ್ಲ . ಆಗಲೇ ಅವನ ಮಾತು ಹೀಗಿತ್ತು . ಅಯ್ಯೋ ಈಗ ಬೇಡಾ ಕಣೋ . ಇರೋದನ್ನೇ ಉಟ್ಟಿಲ್ಲ ಮತ್ತೆ ಹೊಸತು ಅಂತ ಅಂದ್ರೇ .ಅಂತಂದು ಅರ್ಧಕ್ಕೆ ಮಾತು ನಿಲ್ಲಿಸಿದೆ . ಆದರೆ ಅವನು ಕರೆದುಕೊಂಡು ಹೋಗಿ ಅವನೇ ಅರಿಸಿ , ಇಷ್ಟಪಟ್ಟು ಕೊಡಿಸಿದ. ತೆಗೆದುಕೊಳ್ಳಲು ಸಂಕೋಚವಾದರೂ, ಖುಷಿಯಾಗಿ ತೆಗೆದುಕೊಂಡೆ . ಗೆಳತಿಯ ಮಗನ ಮದುವೆ ಇದೆ ಅದಕ್ಕಾಗಿ ಮತ್ತೊಂದು ಸೀರೆ ತಗೊಂಡೆ . ಮಗಳಿಗೆ ವೀಡಿಯೋ ಕಾಲ್ ಮಾಡಿ , ಸೀರೆ
ತೋರಿಸ್ತಿದ್ರೇ ಸಕ್ಕರೆಗೊಂಬೆ ಏನೇಳ್ತು ಗೊತ್ತಾ ? ಓ… ಅಜ್ಜಿ ಇದು ಸೀಯೇ ( ಸೀರೆ) ವೇಂಡಾ ಅಜ್ಜಿ . ಡೆಚ್ಚು ( ಡ್ರೆಸ್) ವೇಣು.

ಅಮ್ಮನ ಸೀರೆಗಳಾಗ ಇಷ್ಟವಾಗ್ತಿರಲಿಲ್ಲ . ಎಲ್ಲಾ ಸೆರಗು ಬಾರ್ಡರ್ ಸೀರೆ ತಗೋಬೇಡಾಮ್ಮಾಂದ್ರು ಅವರು ಮಾತ್ರ ಇವತ್ತಿಗೂ ಅದೇ ಮಾದರಿ ಬದಲಾಗ ದವರು . ನನಗೋ ಸಿಂಪಲ್ ಆಗಿದ್ದು ಹಗೂರಾಗಿರುವ ಸೀರೆಗಳಿಷ್ಟ. ಕನಸಿಗೆ ಬರೀ ಕಾಟನ್ ಸೀರೆಗಳಿಷ್ಟ ಜೀವ ಹೇಳ್ತಾನೆ ಆಶಾ ನೀನು ಬರೀ ರೇಷ್ಮೆ ಸೀರೆ ಉಟ್ಕೋ ಚೆಂದ ಕಾಣ್ತೀಯಾ . ಸೀರೆಯುಟ್ಟ ದಿನ ಅಮ್ಮ ಮಾತ್ರ ನೋಡು ಎಷ್ಟು ಲಕ್ಷಣವಾಗಿದ್ದೀಯಾ ಸೀರೇಲಿ. ಅದೆಂತ ಹದೋ ಚುಡೀದಾರ ಹಾಕಬೇಡಾ. ಸೀರೇನೇ ಚೆನ್ನ ಅಂತಾರೆ.ಅಮ್ಮನ ಕಾಟನ್ ಸೀರೆಗಳು ನನ್ನ ಮಕ್ಕಳಿಗೆ , ತಂಗಿಯ ಮಕ್ಕಳಿಗೆ ಜೋಲಿಯಾಯ್ತು , ಹಾಸುವ ದಟ್ಟಗಳಾದ್ವು . ಸಕ್ಕರೆ ಗೊಂಬೆಯವರೆಗೂ ಆಯ್ತು. ಆದರೆ ಈಗಲೂ ನನಗೆ ಉಡ್ತೀನೋ ಬಿಡ್ತೀನೋ ಸೀರೆ ಮೇಲೆ ಅಪಾರ ವ್ಯಾಮೋಹ . ನನ್ನ ಬಳಿ ಬೇಕಾದಷ್ಟು ಸೀರೆಗ ಳಿದ್ರೂ , ಒಂದು ಐದಾರು ಸೀರೆಗಳನ್ನು ಮುಟ್ಟಿ ಮುಟ್ಟಿ ಸಂತಸ ಪಡೋದೇ ಇಷ್ಟ . ಯಾಕೆಂದರೆ ಅದು ನನ್ನ ಮನಸಿಗೆ ಬಹಳ ಹತ್ತಿರವಾದದ್ದು. ಅದರ ಜೊತೆಗೆ ಕೆಲವು ಭಾವನಾತ್ಮಕ ವಾದ ಸಂಬಂಧವಿದೆ . ಕನಸು ಕೆಲಸ ಸಿಕ್ಕಿ, ಮೊದಲ ಸಂಬಳದಲ್ಲಿ ನನಗೆ ತಂದ ಸೀರೆ , ಅವಳ ಮದುವೆಯಲ್ಲಿ ನನ್ನ ಆತ್ಮೀಯರೊಬ್ಬರಿಂದ
ಅರಿಶಿನ ಕುಂಕುಮ ಸಮೇತವಾಗಿ ಬಂದ ಸೀರೆ , ಕನ ಸಿನ ಮದುವೆಯಾಗಿ , ಪತಿಯ ಮನೆಯಿಂದ ತವರಿಗೆ ಬರುವಾಗ ತಂದ ಸೀರೆ , ಅಮ್ಮ ಕನಸಿನ ಬಸುರಿಯಾದಾಗ ಕೊಡಿಸಿದ ಹಸಿರು ಮೈಸೂರ್ ಸಿಲ್ಕ್ ಸೀರೆ, ಜೀವ ಹುಟ್ಟಿದಾಗ ತೆಗೆಸಿಕೊಟ್ಟ ಸೀರೆ, ಒಂದೊಂದು ಸೀರೆ ಒಂದೊಂದು ಕತೆ ಹೇಳುತ್ತಾ ಸಾಗುತ್ತದೆ.

ಫೋಟೋ ಕೃಪೆ : google

ಅದರೂ ಸೀರೆಯ ವ್ಯಾಮೋಹ ಮಾತ್ರ ಬಿಡಲಾಗುತ್ತಿಲ್ಲ . ನಾನು ಕೊಂಡುತಂದ ಸೀರೆ ಮೇಲಿನ ವ್ಯಾಮೋ ಹವೆಷ್ಟೆಂದರೆ ಅದನ್ನು ಉಡದೇ ಹಳೆಯದಾಗಿ ಬೇರೆಯವರ ಪಾಲಾಗಿದ್ದೆಷ್ಟೋ . ಮಗರಾಯ ಒಂದಷ್ಟು ನನ್ನ ಗೈರು ಹಾಜರಿಯಲ್ಲಿ ಬೇರೆಯವರಿಗೆ ದಾನವನ್ನೂ ಮಾಡಿಬಿಟ್ಟ . ಆದರೂ ಮೂರು ಬೀರು ತುಂಬಾ ಸೀರೆ ಗಳಿಟ್ಟುಕೊಂಡು ಖುಷಿಪಡೋದು . ಹಾ….. ಈಗ ಸೀರೆ ತರಲು ಹೊರಟಿದ್ದೇನೆ . ನಾ ಬರುವುದರೊಳಗೆ ನೀವು

ಹೇಳ್ತೀರಾ ?????  ನೀವೂ ನನ್ನ ಹಾಗೇನಾ ? ಅಥವಾ ಡಿಫರೆಂಟಾ ಹೇಳ್ತೀರಲ್ವಾ ?

(ಮುಂದೊರೆಯುತ್ತದೆ…)


  • ನಾಗಮಣಿ ಎಚ್ ಆರ್ (ಲೇಖಕಿ, ಸಾಹಿತ್ಯ ಪ್ರಿಯರು), ಹಾಸನ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW