ಇಂಜಿನಿಯರಿಂಗ್ ಯುವಕನ ಕೃಷಿ ಪ್ರೀತಿ



ಕೃಷಿಗೆ ಸಾಲ ಮಾಡಿ ಆತ್ಮಕತ್ಯೆ ಮಾಡಿಕೊಂಡ ಎಷ್ಟು ರೈತರಿಗೆ ಶ್ರೀನಿಧಿಯವರು ಮಾದರಿಯಾಗಿದ್ದಾರೆ. ಓದಿದ್ದು ಇಂಜಿನಿಯರಿಂಗ್ ಆದರೂ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದು ಕೃಷಿಯಲ್ಲಿ. ಅವರ ಕತೆ ಇನ್ನೊಬ್ಬರಿಗೆ ಯಾವಾಗಲೂ ಆದರ್ಶಮಯ.ಅವರ ಸಾಧನೆಯ ಹಾದಿ ಕುರಿತು ಒಂದು ಲೇಖನ….

ಹಳ್ಳಿ ಬೇಡ ..ರೈತಾಪಿ ಬೇಡ…ಎಂದು ಪಟ್ಟಣದ ಬಣ್ಣದ ಬದುಕಿಗೆ ಒಗ್ಗಿಹೋಗಿದ್ದ ಎಷ್ಟೋ ಕುಟುಂಬಗಳಿಗೆ ಹಳ್ಳಿ ಸೊಗಡನ್ನು ಅರ್ಥಮಾಡಿಸಲು ಕೊರೋನಾ ಬರಬೇಕಾಯಿತು. ಈ ಮಹಾಮಾರಿಗೆ ಹೆದರಿ ಹಳ್ಳಿಯತ್ತ ನಡೆದ ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದು ವ್ಯವಸಾಯ. ಈಗ ಎಷ್ಟೋ ವಿದ್ಯಾವಂತರ ಬಾಳಿಗೆ ವ್ಯವಸಾಯವೇ ಉಸಿರಾಗಿದೆ. ಭೂತಾಯಿ ಮಡಿಲಿನಲ್ಲಿ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಇಂದು ವಿದ್ಯಾವಂತರು ವ್ಯವಸಾಯದತ್ತ ಆಸಕ್ತಿ ತೋರಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ .

This slideshow requires JavaScript.

 

ಕರೋನ ಮಹಾಮಾರಿ ಬರುವ ಪೂರ್ವದಲ್ಲೇ ಕೃಷಿಯಲ್ಲಿ ಯಶಸ್ಸನ್ನು ಕಂಡ ವಿದ್ಯಾವಂತನ ಕತೆಯಿದು. ೨೦೧೩ರಲ್ಲಿ  ಸಿ ವಿ ಶ್ರೀನಿಧಿ ಎಂಬ ಯುವಕ ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದು ಮುಗಿಸಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡಬಹುದಿತ್ತು. ಆದರೆ ಆ ಯುವಕ ಚಾಮರಾಜನಗರ ರಾಮಸಮುದ್ರ ಹಳ್ಳಿಯಲ್ಲಿದ್ದ ತನ್ನ ಆರು ಎಕರೆ ಜಮೀನನ್ನು ನಂಬಿ ಕೃಷಿಕನಾಗಲು ಹೊರಟ.  ಅಪ್ಪ ವೆಂಕಟೇಶಮೂರ್ತಿ, ಅಮ್ಮ ಮೀನಾಕ್ಷಮ್ಮ ಕೃಷಿಕರು. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದರಾದರೂ ಶ್ರೀನಿಧಿಯವರಿಗೆ ಕೃಷಿಯ ಗಂಧ ಗಾಳಿಯೇ ಗೊತ್ತಿರಲಿಲ್ಲ. ಇಂತಹ ಪರಿಸ್ಥಿಯಲ್ಲಿ ಕೃಷಿ ಮಾಡುವುದು ಹೇಗೆ? ಉತ್ತುವುದು ಹೇಗೆ? ಬಿತ್ತುವುದು ಹೇಗೆ ?ಎನ್ನುವ ಸಾಕಷ್ಟು ಪ್ರಶ್ನೆಗಳಿದ್ದವು. ಆಗ ಅವರ ಸ್ನೇಹಿತ ಸಂತೋಷ ಎನ್ನುವವರು ‘ಸುಭಾಷ್ ಪಾಳೇಕರ್’ ಅವರ ‘ಶೂನ್ಯ ಬಂಡವಾಳ’ದ ಪುಸ್ತಕವನ್ನು ಓದುವಂತೆ ಸಲಹೆ ನೀಡಿದರು. ಅದೇ ಪುಸ್ತಕ ಶ್ರೀನಿಧಿ ಅವರಿಗೆ ಕೃಷಿಗೆ ಮುನ್ನುಡಿಯಾಯಿತು. ಅಪ್ಪನ ಅಕಾಲಿಕ ಮರಣ, ಸಂಸಾರದ ಜವಾಬ್ದಾರಿ, ಕೃಷಿಯ ಕಲಿಕೆ ಎಲ್ಲ ಸಮಸ್ಯೆಗಳು ಹೆಗಲೇರಿದಾಗ ಅವುಗಳನ್ನು ಧೈರ್ಯವಾಗಿ ಎದುರಿಸಿ ಮುನ್ನುಗಿದರು.

(ಶ್ರೀನಿಧಿಯವರಿಗೆ ಸ್ಫೂರ್ತಿ ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಭಾಷ್ ಪಾಳೇಕರ್ ಅವರು ಮತ್ತು ಅವರ ಶೂನ್ಯ ಬಂಡವಾಳ ಪುಸ್ತಕ)

ಅದೇ ವೇಳೆ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಜಿನಿಯರ್ ಕೆಲಸ ಸಿಕ್ಕಿದ್ದರಿಂದ ಕೃಷಿ ಮಾಡಲು ಇನ್ನಷ್ಟು ಅನುಕೂಲವಾಯಿತು. ಕೆಲಸ ಮಾಡುತ್ತಲೇ ಕೃಷಿಯ ಕಲಿಕೆ, ಬಿತ್ತನೆಗಳು ಶುರುವಾದವು. ಕೃಷಿಯತ್ತ ಹೆಚ್ಚು ಗಮನ ನೀಡಿದರು. ಮೊದಲ ಮೂರು ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿಯಲ್ಲಿ ಏಲಕ್ಕಿ ಬಾಳೆಯನ್ನು ಬೆಳೆದರು, ಮಣ್ಣಿನ ಫಲವತ್ತತೆ ಕಾಪಾಡಲು ಸಿಹಿಗೆಣಸು, ದ್ವಿದಳ ಧಾನ್ಯಗಳನ್ನು ಅದರಡಿಯಲ್ಲಿ ಬೆಳೆದರು. ಮಿತ ನೀರಿನ ಬಳಕೆಗಾಗಿ ಡ್ರಿಪ್ (ಹನಿ ನೀರಾವರಿ) ಪದ್ಧತಿಯನ್ನು ಅಳವಡಿಸಿಕೊಂಡರು. ನಾಟಿ ಹಸು ಸಾಕಿ ಅದರ ಸೆಗಣಿ, ಗಂಜಲದಿಂದ ಕೃಷಿಗೆ ಗೊಬ್ಬರದ ಪೂರೈಕೆ ಮಾಡಿಕೊಂಡರು.ಸುಮಾರು ಎಳು ವರ್ಷ ಕೆಲಸ ಮಾಡಿದ ಬಳಿಕ ಕೆಲ್ಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ತಮ್ಮನ್ನು ತಾವು ಕೃಷಿಯಲ್ಲಿ ತೊಡಗಿಸಿಕೊಂಡರು.

ಮೊದಲು ಬಾಳೆ ಬೆಳೆದಾಗ ಒಳ್ಳೆ ಫಸಲು ಬಂದಿತಾದರೂ ಮಾರಾಟದ ಸಮಸ್ಯೆ ಎದುರಾಯಿತು. ಅಲ್ಲಿಂದ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅಂದರೆ ನೇರ ಮಾರುಕಟ್ಟೆ ಶುರುಮಾಡಿದರು. ಆ ಸಮಯದಲ್ಲೇ ಹುಟ್ಟಿಕೊಂಡಿದ್ದೇ ಸಿ.ವಿ.ನ್ಯಾಚುರಲ್ ಬ್ರಾಂಡ್.

This slideshow requires JavaScript.

ನೇರ ಮಾರುಕಟ್ಟೆ ಮಾಡುವಾಗ ಎದುರಾದ ಸಮಸ್ಯೆಯೆಂದರೆ ತಾವು ಬೆಳೆದ ಬಾಳೆಹಣ್ಣನ್ನು ಒಂದು ತಿಂಗಳೊಳಗೆ ಮಾರಾಟ ಮಾಡಬೇಕು,ಇಲ್ಲವಾದರೆ ಫಸಲು ಹಾಳಾಗಿ ಹೋಗುತ್ತಿತ್ತು. ಬಹಳ ದಿನಗಳವರೆಗೂ ಉಳಿಯುವ ಬೆಳೆಯನ್ನು ಬೆಳೆದರೆ ಗ್ರಾಹಕರಿಗೆ ನೇರವಾಗಿ ಮಾರಬಹುದು ಎನ್ನುವ ಉಪಾಯವನ್ನು ಕಂಡುಕೊಂಡರು. ಅದರ ಪ್ರಕಾರ ಕಬ್ಬು ಬೆಳೆಯುವುದು ಸೂಕ್ತ ಎಂದು ತಿಳಿದು ಕಬ್ಬನ್ನು ಬೆಳೆಯತೊಡಗಿದರು. ಮೊದಲ ಬಾರಿಗೆ ಮೂರೂ ಎಕರೆಯಲ್ಲಿ ಕಬ್ಬನ್ನು ೧೨ ಅಡಿ ಅಂತರದಲ್ಲಿ ನಾಟಿ ಮಾಡಿ ಬೆಳೆದಾಗ, ಮೊದಲ ಇಳುವರಿ ಕೇವಲ ೩೦ ಟನ್ ಮಾತ್ರ ಬಂದಿತು.  ಆಗ ಅಕ್ಕಪಕ್ಕದ ರೈತರು ಅವರನ್ನು ‘ ೩೦ ಟನ್ ಇಳುವರಿ ಮಾಡಲು ಇಂಜಿನಿಯರಿಂಗ್ ಓದಬೇಕಿತ್ತಾ?’ ಎಂದು ಹಾಸ್ಯ ಮಾಡಿ ನಕ್ಕರು. ಅವರ ಮಾತಿಗೆ ಶ್ರೀನಿಧಿಯವರು ಸೊಪ್ಪು ಹಾಕದೆ ೩೦ ಟನ್ ಕಬ್ಬಿನಿಂದ ೩,೦೦೦ಕೆಜಿ ಬೆಲ್ಲವನ್ನು ತಯಾರಿಸಿ ಕಬ್ಬನ್ನು ಬೆಲ್ಲವನ್ನಾಗಿ ಮಾರ್ಪಾಡು ಮಾಡಿ ನೇರ ಮಾರುಕಟ್ಟೆ ಮಾಡಲು ಶುರುಮಾಡಿದರು. ಒಂದು ಕೆಜಿ ಬೆಲ್ಲಕ್ಕೆ ೧೦೦ ರೂಪಾಯಿ ಎಂದು ನಿಗಧಿ ಪಡಿಸಿದರು. ಮೊದಮೊದಲು ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಬಾರದಿದ್ದರೂ, ಬೆಲ್ಲ ಬಳಸುತ್ತಾ ಹೋದಂತೆ ಬೇಡಿಕೆ ಹೆಚ್ಚಾದವು.



ಎಕರೆಗೆ ೧೦ ಟನ್ ಕಬ್ಬು ಬೆಳೆದ ಶ್ರೀನಿಧಿಯವರು ಮುಂದೆ  ಒಂದು ಎಕರೆಗೆ ೫೦ ಟನ್ ನೈಸರ್ಗಿಕ ಕಬ್ಬನ್ನು ಬೆಳೆಯಲು ಶುರು ಮಾಡಿದರು. ಆಗ ಅಲ್ಲೂ ಕೂಡಾ ಸವಾಲೊಂದು ಎದುರಾಯಿತು. ಗ್ರಾಹಕರು ಅಚ್ಚು ಬೆಲ್ಲದ ಬದಲು ಪುಡಿ ಬೆಲ್ಲ ಬೇಡಿಕೆಯನ್ನಿಟ್ಟರು.ಅಲ್ಲಿಂದ ಪುಡಿಬೆಲ್ಲದ ತಯಾರಿ ಪ್ರಯೋಗಗಳು ಶುರುವಾಯಿತು.  ಗ್ರಾಹಕರಿಗೆ ನೈಸರ್ಗಿಕ ಬೆಲ್ಲ ನೀಡಬೇಕು ಎನ್ನುವ ಬರದಲ್ಲಿ ಸೋಡಾ ಬಳಸದೆ ಬೆಲ್ಲ ತಯಾರಿಸಿದ್ದರಿಂದ ಒಂದು ವರ್ಷ ಬೆಳೆ ನಾಶ ಮಾಡಿಕೊಂಡರು . ಶ್ರೀನಿಧಿಯವರು ಧೃತಿಗೆಡಲಿಲ್ಲ, ಹಂತ ಹಂತವಾಗಿ ಬೇಕಿಂಗ್ ಸೋಡಾದ ಪ್ರಮಾಣವನ್ನು ಕಡಿಮೆ ಗೊಳಿಸುತ್ತಾ ಬೇಕಿಂಗ್ ಸೋಡಾ ಮುಕ್ತ ಬೆಲ್ಲವನ್ನು ತಯಾರಿಸಿಯೇ ಬಿಟ್ಟರು. ಹಲವಾರು ಪ್ರಯೋಗಗಳನ್ನು ಮಾಡಿ ಕೈಸುಟ್ಟಿಕೊಂಡರು ಕೂಡಾ ತಮ್ಮ ಛಲ ಬಿಡದೆ ತಮ್ಮದೇಯಾದ ಬ್ರಾಂಡ್ ನ್ನು ನಿರ್ಮಿಸಿ ಮಾರುಕಟ್ಟೆಗೆ ಬಿಟ್ಟಿರು. ಅದರ ಹೆಸರೇ ‘ಶ್ರೀನಿ ಫಾರ್ಮ್ ಬೆಲ್ಲ’. ಈಗ ಶ್ರೀನಿ ಫಾರ್ಮ್ ಬೆಲ್ಲ ಗ್ರಾಹಕರ ಅಚ್ಚುಮೆಚ್ಚಿನ ಬೆಲ್ಲವಾಗಿದೆ ಎಂದು ಶ್ರೀನಿಧಿಯವರು ತಮ್ಮ ಹರ್ಷವನ್ನು ವ್ಯಕ್ತ ಪಡಿಸುತ್ತಾರೆ.

ಕೃಷಿಯಲ್ಲಿ ಸಾಧನೆ ಮಾಡಿರುವ ಶ್ರೀನಿಧಿಯವರು ಥೈಲ್ಯಾಂಡ್, ಬ್ಯಾಂಕಾಕ್ ಗಳಿಗೂ ಹೋಗಿ ಹಲವಾರು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೃಷಿಯು ಕಡಿಮೆ ಬಂಡವಾಳ ಹೂಡಿ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ.

ಆತ್ಮವಿಶ್ವಾಸ, ಶ್ರಮವಿದ್ದರೆ ಕೃಷಿಯ ಭೂಮಿಯಲ್ಲಿ ಏನುಬೇಕಾದರೂ ಬೆಳೆಯಬಹುದು, ಈ ಹಿಂದೆ ಹೆಗ್ಗವಾಡಿಪುರದ ಶಿವಕುಮಾರ ಸ್ವಾಮಿಯವರಿಂದ ನುಗ್ಗೆ ಬೀಜಗಳನ್ನು ತಂದು ತಮ್ಮ ಜಮೀನಿನಲ್ಲಿ ಹಾಕಿದ್ದೆ, ಅದು ಕೇವಲ ಎಂಟೆ ತಿಂಗಳಲ್ಲಿ ಗಿಡದ ತುಂಬಾ ನುಗ್ಗೆ ಕಾಯಿಗಳು ಸುರಿದು ನೋಡುಗರನ್ನು ಬೆರಗುಗೊಳಿಸಿತ್ತು. ನುಗ್ಗೆಕಾಯಿ, ಅದರ ಎಲೆಗಳು ಉತ್ತಮ ಆರೋಗ್ಯಕ್ಕೆ ರಾಮಬಾಣ. ಇದನ್ನು ಬೆಳೆಯಲು ಯಾವುದೇ ಕಷ್ಟವೂ ಇಲ್ಲಾ , ನಷ್ಟವೂ ಇಲ್ಲಾ ಇಂತಹ ಎಷ್ಟೋ ಬೆಳೆಗಳನ್ನು ಬೆಳೆಯಬಹುದು. ಆದರೆ ಬೆಳೆದ ಯಾವುದೇ ಬೆಳೆಯನ್ನು ನೇರ ಮಾರುಕಟ್ಟೆ ಮಾಡಿದರೆ ಮಾತ್ರ ಲಾಭದಾಯಕ ಎನ್ನುವ ಕಿವಿಮಾತನ್ನು ರೈತರಿಗೆ ಶ್ರೀನಿಧಿಯವರು ಹೇಳುತ್ತಾರೆ .

ಶ್ರೀನಿ ಫಾರ್ಮ್ ಬೆಲ್ಲ ಕೊಳ್ಳುವವರು – 8904641947,  9738540990 ಸಂಖ್ಯೆಗೆ ಸಂಪರ್ಕಿಸಬಹುದು. ಬೆಲ್ಲ ಕೆಜಿ ೧೩೦ ರೂಪಾಯಿ ಇದ್ದು, ಬೆಲೆ ಹೆಚ್ಚೆನ್ನಿಸಿದರೂ ರಾಸಾಯನಿಕ ಮುಕ್ತ ಶುದ್ಧ ಬೆಲ್ಲ ಇದಾಗಿದೆ. ಹಾಗೆ ರಾಮಸಮುದ್ರ ಹಳ್ಳಿಯತ್ತ ಹೋದರೆ ಕೇವಲ ೩೦ ರೂಪಾಯಿಗೆ ಒಂದು ಲೀಟರ್ ಸ್ವಾದಿಷ್ಟ ಕಬ್ಬಿನ ಹಾಲನ್ನು ಸವಿಯಬಹುದು.  ಅದೇ ಹೊರಗಡೆ ಲೀಟರ್ ಗೆ ೭೦ ರೂಪಾಯಿಯಂತಿದೆ.

ಶ್ರೀನಿಧಿಯವರು ಮತ್ತೊಂದು ಹೆಜ್ಜೆ ಮುಂದಿಟ್ಟು ‘ನೈಸರ್ಗಿಕ ಕಬ್ಬಿನ ಹಾಲಿನ ಕೇಂದ್ರ’  ತೆರೆದಿದ್ದಾರೆ. ಗ್ರಾಹಕರಿಗೆ ಸ್ವಾದಿಷ್ಟವಾದ ರಾಸಾಯನಿಕ ಮುಕ್ತ ಕಬ್ಬಿನ ಹಾಲು ನೀಡಬೇಕು ಎನ್ನುವ ಈ  ಕೇಂದ್ರದ ಸದುದ್ದೇಶವಾಗಿದೆ.

(ಶ್ರೀನಿಧಿಯವರು ಇತ್ತೀಚಿಗೆ ತೆರೆದ ಕಬ್ಬಿನ ಹಾಲಿನ ಕೇಂದ್ರ)

ಅವರ ಹೊಸ ಹೊಸ ಪ್ರಯೋಗಗಳು ಯುವ ರೈತರಿಗೆ ಪ್ರೋತ್ಸಾಹ, ಉತ್ಸಾಹ ತುಂಬಲಿ…ರಾಸಾಯನಿಕ ಮುಕ್ತ ಬೆಳೆ ಗ್ರಾಹಕರಿಗೆ ಸಿಗಲಿ… ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

 

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW