‘ಫ್ಯಾಷನ್ ಪರಮಾತ್ಮ’ ಪುಸ್ತಕ ಪರಿಚಯ

ಕವಿ, ಕಥೆಗಾರ  ಶರಣಗೌಡ ಬಿ.ಪಾಟೀಲ ತಿಳಗೂಳ ಅವರ ಕಥಾ ಸಂಕಲನ “ಫ್ಯಾಷನ್ ಪರಮಾತ್ಮ” ಮತ್ತು ಇತರ ಕತೆಗಳು ಕುರಿತು ಲೇಖಕರ ಮಾತನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : ಫ್ಯಾಷನ್ ಪರಮಾತ್ಮ
ಲೇಖಕರು : ಶರಣಗೌಡ ಬಿ.ಪಾಟೀಲ ತಿಳಗೂಳ ಕಲಬುರಗಿ.
ಪ್ರಕಾಶಕರು: ಕನ್ನಡ ನಾಡು ಲೇಖಕರ ಓದುಗರ ಸಹಕಾರ ಸಂಘ ಕಲ್ಬುರ್ಗಿ (ಕನ್ನಡ ನಾಡು ಪ್ರಕಾಶನ)
ಪುಸ್ತಕ ಬೆಲೆ :100
ಪುಟಗಳು: 92

ವಿಭಿನ್ನ ಕಥಾ ವಸ್ತು ಹೊಂದಿರುವ ನನ್ನ ಈ ಹೊಸ ಕಥಾ ಸಂಕಲನ ‘ಫ್ಯಾಷನ್ ಪರಮಾತ್ಮ’ ಮತ್ತು ಇತರ ಕಥೆಗಳು. ಇದೊಂದು ಸಣ್ಣ ಕಥೆಗಳ ಸಂಕಲನವಾಗಿದ್ದು ಇದರಲ್ಲಿ ಒಟ್ಟು ಹದಿನೇಳು ಸಣ್ಣ ಕಥೆಗಳಿವೆ. ಭಾಷೆ ಅಷ್ಟೇನು ಕಠಿಣವಾಗಿಲ್ಲ ಓದುಗರಿಗೆ ಯಾವುದೇ ಗೊಂದಲಕ್ಕೀಡು ಮಾಡದೇ ಸರಳವಾಗಿ ಓದಿಸಿಕೊಂಡು ಹೋಗುವಲ್ಲಿ ಯಾವುದೇ ಅನುಮಾನವಿಲ್ಲ. ಸಂಕಲನದಲ್ಲಿನ ಹೆಚ್ಚಿನ ಕಥೆಗಳು ಕಂಡು ಕೇಳಿದ ಘಟನೆ ಸನ್ನಿವೇಶ ಕುರಿತು ಹೆಣೆಯಲಾಗಿರುವ ಸಂಕಲನವಾಗಿದೆ. ಗ್ರಾಮೀಣ ಪರಿಸರ ಅಲ್ಲಿನ ಜನಜೀವನ ಗಮನದಲ್ಲಿಟ್ಟುಕೊಂಡು ಜನರ ಬದುಕು ಬವಣೆ ಕುರಿತು ಚಿತ್ರಿಸಲಾಗಿದೆ. ಆದಷ್ಟು ನೈಜ ವಿಷಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುತ್ತೇನೆ.

ಕಥೆಗಳು ಸುಮ್ಮನೆ ಹುಟ್ಟುವುದಿಲ್ಲ ಅವುಗಳ ಹಿಂದೆ ಒಂದು ಕಾರಣ ಇದ್ದೇ ಇರುತ್ತದೆ ಅವುಗಳ ಮೂಲ ಸೂಕ್ಷ್ಮವಾಗಿ ಗ್ರಹಿಸಿ ,ಅರ್ಥೈಸಿಕೊಂಡು ಹೊಸ ರೂಪ ಕೊಟ್ಟಾಗಲೇ ಅದೊಂದು ಅರ್ಥಪೂರ್ಣವಾದ ಕಥೆಯಾಗಿ ಹೊರ ಹೊಮ್ಮಲು ಕಾರಣವಾಗುತ್ತದೆ . ಓದುಗರ ಕೂಡ ಅದನ್ನು ಪ್ರೀತಿಯಿಂದ ಸ್ವೀಕರಿಸಿ ಮೆಚ್ಚುಗೆ ಸೂಚಿಸುತ್ತಾರೆ.

ಕಥೆಗಳಿಗೆ ಕಥಾವಸ್ತು ಎಷ್ಟು ಮುಖ್ಯವೋ ಭಾಷಾ ಶೈಲಿ, ತಂತ್ರಗಾರಿಕೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ವಾಸ್ತವ ಚಿತ್ರಣದ ಜೊತೆಗೆ ಸಾಮಾಜಿಕ ಕಳಕಳಿಯೂ ಇರಲೇಬೇಕು ಅನ್ನುವದು ನನ್ನ ಅಭಿಪ್ರಾಯ. ಕಥೆಗಳಿಗೆ ಒಮ್ಮೊಮ್ಮೆ ನಾವೇ ಹುಡುಕಿಕೊಂಡು ಹೋದರೆ ಕೆಲವೊಮ್ಮೆ ಅವೇ ನಮನ್ನು ಹುಡುಕಿಕೊಂಡು ಬಂದು ಬರೆಯಲು ಪ್ರೇರೇಪಿಸುತ್ತವೆ ಅವು ಹೇಗೆ ಹುಟ್ಟುತ್ತವೆ ಯಾವಾಗ ಹುಟ್ಟುತ್ತವೆ ಅಂತ ನಿರ್ಧಿಷ್ಟವಾಗಿ ನಿಖರವಾಗಿ ಹೇಳಲು ಬರುವದಿಲ್ಲ. ಕಥೆಗಳು ವಾಸ್ತವವೂ ಆಗಿರಬಹುದು ಇಲ್ಲವೇ ಕಲ್ಪನೆಯೂ ಆಗಿರಬಹುದು ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವ ನಡೆಯಬಹುದಾದ ಘಟನೆಗಳೇ ಆಗಿರಬಹುದು ಅವುಗಳನ್ನು ಬರವಣಿಗೆಯ ಮೂಲಕ ಹೊರ ಹಾಕಿದಾಗ ಒಂದು ಸ್ಪಷ್ಟ ರೂಪ ದೊರೆಯುತ್ತದೆ, ನಾವು ಹೇಳಬೇಕಾದ ವಿಷಯ ಬರವಣಿಗೆಯ ಮೂಲಕ ಹೇಳಿದಂತಾಗಿ ಮನಸ್ಸಿಗೆ ತೃಪ್ತಿ ಸಿಗುತ್ತದೆ.

ನಮ್ಮ ದಿನ ನಿತ್ಯದ ಜೀವನದಲ್ಲಿ ಅನೇಕ ಘಟನೆ ಘಟಿಸುತ್ತಲೇ ಇರುತ್ತವೆ ಅವುಗಳಲ್ಲಿ ಕೆಲವು ಬೇಗ ಮರೆತು ಹೋದರೆ ಇನ್ನೂ ಕೆಲವು ಮರೆಯಲಾಗದೆ ನೆನಪಿನಂಗಳದಲ್ಲಿ ಹಾಗೇ ಉಳಿದು ನಿರಂತರ ಕಾಡುತ್ತಲೇ ಇರುತ್ತವೆ ಅವೇ ಕಥೆಗಳಾಗಿ ಹೊರ ಹೊಮ್ಮುತ್ತವೆ. ಕಥೆ ಬರೆಯುವದರ ಜೊತೆಗೆ ಸುಂದರವಾಗಿ ಹೆಣೆಯಬೇಕಾಗುತ್ತದೆ. ಬರವಣಿಗೆ ನಮಗೆಲ್ಲ ಹೊಸ ಅನುಭವ ನೀಡುತ್ತದೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಇನ್ನಷ್ಟು ಬರೆಯಲು ಪ್ರೇರೇಪಿಸುತ್ತದೆ.

ಒಂದು ಕಥೆ ಬರೆದು ಮುಗಿಸಿದ ನಾವು ಸ್ವಯಂ ವಿಮರ್ಶೆ ಮಾಡಿಕೊಳ್ಳಲೇಬೇಕು ಓದುಗರು ನಮ್ಮ ಕತೆಯನ್ನು ಯಾವ ಪ್ರತಿಕ್ರಿಯಿಸುತ್ತಾರೆ ಅವರಿಗೆ ಕಥೆ ಇಷ್ಟವಾಗಬಹುದೇ ಇಲ್ಲವೇ? ಅಂತ ಸಹಜವಾದ ಯೋಚನೆ ಮೂಡುತ್ತದೆ. ಸಣ್ಣ ಕಥೆಗಳ ಪರಂಪರೆ ಹೊಸದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದುದ್ದಾಗಿದೆ ಕಾಲಕ್ರಮೇಣ ಆಧುನಿಕ ಸ್ಪರ್ಶ ಪಡೆದು ನಾವಿನ್ಯತೆ, ತಂತ್ರಗಾರಿಕೆಯಿಂದ ಹೊಸ ರೂಪ ಪಡೆದುಕೊಂಡು ರಂಜಿಸುತ್ತಿವೆ.

ಈ ನನ್ನ ಸಂಕಲನದಲ್ಲಿನ ಎಲ್ಲ ಕಥೆಗಳಲ್ಲೂ ವಿಭಿನ್ನ ಕಥಾ ವಸ್ತು ಹೊಂದಿದ್ದು ಕುತೂಹಲ ಮೂಡಿಸುತ್ತವೆ. “ಫ್ಯಾಷನ್ ಪರಮಾತ್ಮ” ಅನ್ನುವ ತಲೆಬರಹದ ಕಥೆಯೂ ಈ ಸಂಕಲನದಲ್ಲಿನ ಒಂದು ಪ್ರಮುಖ ಕಥೆಯಾಗಿದೆ ಹಳ್ಳಿಯ ಒಬ್ಬ ಸಾಮಾನ್ಯ ವ್ಯಕ್ತಿಯ ಕುರಿತು ಬರೆಯಲಾದ ಕಥೆಯಾಗಿದ್ದು ಆತನ ಹೆಸರೇ ಪರಮಾತ್ಮ ಅನ್ನುವದು ವಿಶೇಷ. ಇಂತಹ ಹಲವಾರು ಕಥೆಗಳು ಈ ಸಂಕಲನದಲ್ಲಿ ಅಡಕವಾಗಿವೆ ಸ್ಟೇಶನ್ ಪೇಶಂಟ್, ಕೋಟಿನ ಗುಂಡಿ.ಕಂಟಿ ಬದಿಯ ಒಂಟಿ ಹೂ, ಯಕ್ಷ ಪ್ರಶ್ನೆ, ಹಣೆಯ ಮೇಲಿನ ಬರಹ, ದೊಡ್ಡಹೆಣ, ನೆತ್ತರುಕಲೆ, ಸಾವಿಗೂ ಸಮಸ್ಯೆ, ಕುರ್ಚಿ ಕುತೂಹಲ, ಸಾಲ ಸಾಲೋದಿಲ್ಲ, ಕಾದಿರುವಳು, ಮುದ್ದೆಯಾದ ಕಾಗದ ಹೀಗೆ ಸುಮಾರು ಕಥೆಗಳು ಪ್ರಮುಖವಾಗಿವೆ. ಈಗಾಗಲೇ ಅನೇಕ ಕಥೆಗಳು ಆನಲೈನ್ ಮ್ಯಾಗ್ಝೀನಗಳಲ್ಲೂ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿವೆ. ಇವುಗಳನ್ನು ಒಂದೆಡೆ ಸೇರಿಸಿ ಈ ಸಂಕಲನ ಹೊರ ತರಲಾಗಿದೆ ಇದನ್ನು ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕಲಬುರಗಿಯವರು ಪ್ರಕಟಿಸಿ ಪ್ರಕಾಶಿಸಿದ್ದಾರೆ ಅನ್ನುವದು ಖುಷಿಯ ವಿಷಯವಾಗಿದೆ.


  • ಶರಣಗೌಡ ಬಿ.ಪಾಟೀಲ ತಿಳಗೂಳ – ಕಲಬುರಗಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW