ಭಾರತೀಯ ಅಡುಗೆಯಲ್ಲಿ ಮೆಂತ್ಯದ ಉಪಯೋಗ

ಮೆಂತ್ಯದ ಸೊಪ್ಪನ್ನು ಬೇಯಿಸುವಾಗ, ಸೊಪ್ಪಿನ ಮೇಲೆ ನೀರು ಚಿಮುಕಿಸಿದರೆ ಕಹಿ ಹೆಚ್ಚಾಗುತ್ತದೆ. ನೀರು ಹಾಕದೇ ಸಣ್ಣ ಉರಿಯಲ್ಲಿ ಬೇಯಿಸುವುದರಿಂದ ಕಹಿ ಕಡಿಮೆಯಾಗುತ್ತದೆ. ಇದು ಮನೆಯಲ್ಲಿನ ಹಿರಿಯ ಜೀವಗಳ `ಆರೋಗ್ಯ ಸಲಹೆ’! ಸೌಮ್ಯ ಸನತ್ ಅವರು ಮೆಂತ್ಯದ ಉಪಯೋಗವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಭಾರತೀಯ ಅಡುಗೆಯಲ್ಲಿ ಮೆಂತ್ಯದ ಉಪಯೋಗ ಬಹಳ. ತನ್ನದೇ ಆದ ವಿಚಿತ್ರ ಆದರೂ ವಿಶಿಷ್ಟ ಘಮವಿರುವ ಮೆಂತ್ಯದ ಹಸಿ ಸೊಪ್ಪೂ, ಒಣ ಸೊಪ್ಪೂ, ಕಾಳೂ ಎಲ್ಲವೂ ದಿನನಿತ್ಯದ ಬಳಕೆಯಲ್ಲಿ ವರ್ಷಪೂರ್ತಿ ಅಡುಗೆಯಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಇರುತ್ತದೆ. ಚಳಿಗಾಲ ಹತ್ತಿರ ಬರುತ್ತಿದ್ದಂತೆ ಭರಪೂರ ಹಸಿರು ಸೊಪ್ಪಿನ ಕಾಲವಾದರೆ, ಬೇಸಗೆಯಲ್ಲಿ ಒಣಗಿಸಿದ ಸೊಪ್ಪೂ ಬಳಕೆಯಾಗುವುದು ಸಹಜ. ಇಂತಹ ಮೆಂತೆಕಾಳು ಕಹಿಯಾದರೂ, ಕೇವಲ ಆಹಾರವಾಗಿ ಮಾತ್ರವಲ್ಲ ಆರೋಗ್ಯಕರ ಜೀವನಶೈಲಿಯಲ್ಲೂ ಯಥೇಚ್ಛವಾಗಿ ಬಳಕೆಯಾಗುವ ಮೂಲಕ ತನ್ನ ಮಹತ್ವವನ್ನು ಕಂಡುಕೊಂಡಿದೆ.

ಔಷಧಿಯ ತಯಾರಿಕೆಯಲ್ಲಿ ಬಳಕೆಯಾದ ಸಸ್ಯಗಳ ಪೈಕಿ ಅತ್ಯಂತ ಹಳೆಯ ಕಾಲದಿಂದ ಬಳಕೆಯಾದ ಸಸ್ಯವೆಂದರೆ ಇದು. ಕೇವಲ ಭಾರತ ಮಾತ್ರವಲ್ಲ, ಚೀನಾದ ವೈದ್ಯಕೀಯ ಪದ್ಧತಿಯಲ್ಲೂ ಅತ್ಯಂತ ಹೆಚ್ಚು ಬಳಕೆಯಾದ ಸಸ್ಯವಿದು.ಅರ್ಜೆಂಟೀನ, ಫ್ರಾನ್ಸ್, ಸ್ಪೇನ್, ಮೊರೊಕ್ಕೊ ದೇಶಗಳಲ್ಲಿ ಅದನ್ನು ಬೆಳೆಯುತ್ತಾರೆ. ಎಲ್ಲೇ ಬೆಳೆದರೂ ಭಾರತದಲ್ಲಿ ಮೆಂತ್ಯ ಬೆಳೆಯುವಷ್ಟು ಎಲ್ಲೂ ಬೆಳೆಯಲಾರರು. ನಮ್ಮ ದೇಶದಲ್ಲಿ ಮೆಂತ್ಯಕ್ಕೆ ವೈವಿಧ್ಯಮಯ ಹೆಸರುಗಳಿವೆ. ಮರಾಠಿ ಭಾಷೆಯಲ್ಲಿ `ಮಾಟ್’, ಹಿಂದಿಯಲ್ಲಿ `ಮೇಥಿ’, ತಮಿಳಿನಲ್ಲಿ `ಮೆಂತ್ಯಂ,’ ತೆಲುಗಿನಲ್ಲಿ `ಮೆಂತ್ಯಾಲು’, ಕನ್ನಡದಲ್ಲಿ `ಮೆಂತ್ಯ’…

ರಾಜಸ್ತಾನ, ಗುಜರಾತ್, ಉತ್ತರಾಂಚಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್‌ಗಳಲ್ಲಿ ಮೆಂತ್ಯದ ಕಾಳನ್ನು ಹೆಚ್ಚು ಬೆಳೆಯುತ್ತಾರೆ, ಹಾಗೆಯೇ ಬಳಸುತ್ತಾರೆ. ದೇಶದ ಒಟ್ಟು ಮೆಂತ್ಯ ಉತ್ಪಾದನೆಯಲ್ಲಿ ಶೇಕಡಾ 80 ರಷ್ಟು ಮೆಂತ್ಯ ರಾಜಸ್ತಾನದಿಂದಲೇ ಬರುತ್ತದೆ.

ಹೆಚ್ಚಾಗಿ ಬೆಳೆದ ಸೊಪ್ಪನ್ನು ನಿರ್ಜಲೀಕರಿಸಿ ದಾಸ್ತಾನು ಮಾಡುತ್ತಾರೆ. ಇದು `ಖಸೂರಿ ಮೇಥಿ’ ಎಂಬ ಹೆಸರಿನಿಂದಲೂ ಮಾರಾಟವಾಗುತ್ತದೆ. ಪಾಕಿಸ್ತಾನದ ಖಸೂರ್‌ನಿಂದ ಬರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಉತ್ತರ ಭಾರತದಲ್ಲಿ ಇದು ಬಹು ಜನಪ್ರಿಯ. ಸ್ವಲ್ಪ ಕಹಿ ಇರುವುದರಿಂದ ಪ್ರಾಯಶಃ ನಮ್ಮಲ್ಲಿ ಬೇಡಿಕೆ ಇಲ್ಲ. ಮೆಂತ್ಯದ ಸೊಪ್ಪನ್ನು ಬೇಯಿಸುವಾಗ, ಸೊಪ್ಪಿನ ಮೇಲೆ ನೀರು ಚಿಮುಕಿಸಿದರೆ ಕಹಿ ಹೆಚ್ಚಾಗುತ್ತದೆ. ನೀರು ಹಾಕದೇ ಸಣ್ಣ ಉರಿಯಲ್ಲಿ ಬೇಯಿಸುವುದರಿಂದ ಕಹಿ ಕಡಿಮೆಯಾಗುತ್ತದೆ. ಇದು ಮನೆಯಲ್ಲಿನ ಹಿರಿಯ ಜೀವಗಳ `ಆರೋಗ್ಯ ಸಲಹೆ’!

ಹೌದು, ಮೆಂತ್ಯ ಕಾಳು, ಮೆಂತ್ಯ ಸೊಪ್ಪು ಕೇವಲ ತರಕಾರಿ ಮಾತ್ರವಲ್ಲ, ಔಷಧಿಯುಕ್ತ ಆಹಾರ ಸಹ. ಹಾಗಾಗಿಯೇ ಸೊಪ್ಪುಗಳಲ್ಲಿ ಮೆಂತ್ಯ ಸೊಪ್ಪಿಗೆ ವಿಶಿಷ್ಟ ಸ್ಥಾನ.
ಇದರಿಂದಾಗಿಯೇ ಮೆಂತ್ಯವಿಲ್ಲದ ಆಹಾರ, ಆರೋಗ್ಯ ಕಲ್ಪನೆಯೂ ಬಲುಕಷ್ಟ. ಇಂತಹ ಮೆಂತ್ಯದ ಆರೋಗ್ಯಕರ ಉಪಯೋಗಗಳು ಇಲ್ಲಿವೆ.

ಫೋಟೋ ಕೃಪೆ : google

1.ಮೊಳಕೆ ಕಟ್ಟಿದ ಮೆಂತ್ಯವನ್ನು ನೆರಳಲ್ಲಿ ಒಣಗಿಸಿ, ಕೊಬ್ಬರಿ ಎಣ್ಣೆಗೆ ಹಾಕಿ ಕಾಯಿಸಿ ನಿಯಮಿತವಾಗಿ ಈ ಎಣ್ಣೆ ಹಚ್ಚುತ್ತಿದ್ದರೆ, ಕೂದಲು ಕಪ್ಪಾಗಿ ಹೊಳಪಿನಿಂದ ಕೂಡಿರುತ್ತದೆ ಎನ್ನುತ್ತಾರೆ ಹರ್ಬಲ್ ಬ್ಯೂಟಿಷಿಯನ್ಸ್. ಮೆಂತ್ಯದ ಸೊಪ್ಪಿನ ರಸಕ್ಕೆ ನಿಂಬೆ ರಸ ಸೇರಿಸಿ, ಊತ ಬಂದಿರುವ ಜಾಗಕ್ಕೆ ಹಚ್ಚಿದರೆ ಬಹು ಬೇಗ ಊತ ಕಡಿಮೆಯಾಗುತ್ತದೆ ಎಂಬುದು ನಾಟಿ ವೈದ್ಯರ ಅಭಿಪ್ರಾಯ.

2. ಚರ್ಮದ ಆರೋಗ್ಯಕ್ಕೆ ಮೆಂತ್ಯ ಅತ್ಯುತ್ತಮ. ಮುಖದ ಮೇಲಿನ ಕಲೆಯನ್ನು ಕಡಿಮೆ ಮಾಡುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಬಳಸಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

3.ಮಧುಮೇಹದಿಂದ ಬಳಲುತ್ತಿರುವವರಿಗೆ ವೆುಂತ್ಯ ಸೊಪ್ಪು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಮೆಂತ್ಯದ ಕಾಳು ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ನೆರವಾಗುತ್ತದೆ’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿ.

4.ಬೇಳೆಗಳೊಡನೆ ಬೆರೆಸಿ ಮಾಡುವ `ಮೆಂತ್ಯದ ಹಿಟ್ಟು’ ಅತಿ ಹೆಚ್ಚು ಪ್ರೊಟೀನ್ ಕೊಡುವಂತಹುದು. ಹುಣಿಸೆಹಣ್ಣು, ಬೆಲ್ಲ ಬೆರೆಸಿ ಮಾಡುವ `ಗೊಜ್ಜು’ ಅತ್ಯಂತ ಆರೋಗ್ಯಕರವಾದ ಪದಾರ್ಥ. ಕಡಲೆಬೇಳೆ ಜೊತೆಯಲ್ಲಿ ಮೆಂತ್ಯದ ಸೊಪ್ಪು, ಮಸಾಲೆ ಹಾಕಿ ಮಾಡುವ `ಮಾಟ್ ವಡಿ’ ಪಲ್ಯ ಉತ್ತರ ಕನ್ನಡದವರ ಅಚ್ಚುಮೆಚ್ಚಿನ ತಿಂಡಿ. ಮೆಂತ್ಯ ಸೊಪ್ಪಿನಿಂದ ಭಾತ್, ಸೂಪ್, ಪನ್ನೀರ್ ಕರಿ, ಪಲ್ಯಗಳನ್ನು ತಯಾರಿಸಲಾಗುತ್ತದೆ.

5. ಮಗುವಿಗೆ ಜನ್ಮನೀಡಿದ ಹೊಸ ತಾಯಂದಿರಿಗೆ ಮೆಂತ್ಯಕಾಳು ಒಳ್ಳೆಯದು. ಇದು ಹಾಲುಣಿಸುವ ತಾಯಂದಿರಲ್ಲಿ ಕಾಣುವ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಹಾಲಿನ ಸಮಸ್ಯೆ ಇರುವ ತಾಯಂದಿರಿಗೂ ಹಾಲು ಹೆಚ್ಚಾಗಲು ಮೆಂತ್ಯ ಸೇವಿಸಬಹುದು.

6. ಬಾಣಂತಿಯರು ಇರುವ ಮನೆಗಳಲ್ಲಿ ಹಿತ್ತಲಿನಲ್ಲೇ ಒಂದಿಷ್ಟು ತಾಜಾ ಮೆಂತ್ಯ ಸೊಪ್ಪನ್ನು ಬೆಳೆದುಕೊಳ್ಳುವುದು ರೂಢಿಯಲ್ಲಿದೆ. ಮೊಳಕೆ ಕಟ್ಟಿದ ಮೆಂತ್ಯದ ಕಾಳಿನ `ಉಸಲಿ’ ಬಹು ಜನಪ್ರಿಯ. ಮೆಂತ್ಯದ ಸೊಪ್ಪಿನೊಂದಿಗೆ ಮಸಾಲೆ ಹಾಕಿ ಮಾಡುವ `ಪರಾಠ’ ಸಹ ಬೇಡಿಕೆಯುಳ್ಳ ತಿಂಡಿ. `ಮೇಥಿ ಕಾಖರ’ ದೂರ ಪ್ರಯಾಣಕ್ಕೆ ನೆರವಾಗುವ `ಕುರು ಕುರು’ ತಿಂಡಿ.

7. ಪಚನಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಪಚನಕ್ರಿಯೆಯ ಸಮಸ್ಯೆಗಳನ್ನು ನೀಗಿಸುತ್ತವೆ. ಅರೀರ್ಣ, ಹೊಟ್ಟೆಯುಬ್ಬರವೂ ಇದರಿಂದ ಕಡಿಮೆಯಾಗುತ್ತದೆ.

8. ರಕ್ತದಲ್ಲಿರುವ ಕೊಲೆಸ್ಟೆರಾಲ್‌ನ ಮಟ್ಟವನ್ನು ತಗ್ಗಿಸುವಲ್ಲಿಯೂ ಇದು ಮುಖ್ಯ ಪಾತ್ರ ವಹಿಸುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.

9.ಕಣ್ಣಿನ ಡಾರ್ಕ್ ಸರ್ಕಲ್‌ಗಳು, ಮೊಡವೆ, ಮೊಡವೆಗಳ ಕಲೆಗಳು ಮತ್ತು ಸುಕ್ಕು ಚರ್ಮಕ್ಕೆ ರೋಸ್‌ವಾಟರ್‌ನೊಂದಿಗೆ ತಯಾರಿಸಿದ ಮೆಂತ್ಯ ಪೇಸ್ಟ್ ಅನ್ನು ಬಳಸಿ ಪರಿಹಾರ ಪಡೆಯಬಹುದು.

10. ಇದರಲ್ಲಿರುವ ಫ್ಲೇವನಾಯ್ಡ್‌ ಆಂಟಿಆಕ್ಸಿಡೆಂಟ್‌ಗಳ ಕಾರಣದಿಂದ ಇದು ಎಲ್ಲ ಬಗೆಯ ಉರಿಯೂತದಿಂದ ರಕ್ಷಿಸುತ್ತದೆ. ಅಸ್ತಮಾಕ್ಕೂ ಮೆಂತ್ಯ ಬಹಳ ಒಳ್ಳೆಯದು.

11.ಮೆಂತ್ಯ ಬೀಜದ ಪೇಸ್ಟ್ ಮಾಡಿ ಅದನ್ನು ಮೊಸರು / ಅಲೋವೆರಾ ಜೆಲ್ / ನೀರಿನಲ್ಲಿ ಸೇರಿಸಿ ನೆತ್ತಿಯ ಮೇಲೆ ಹಚ್ಚುವುದರಿಂದ ತಲೆಹೊಟ್ಟು, ಕೂದಲು ಉದುರುವಿಕೆ, ಬಿಳಿ ಕೂದಲು ಕಡಿಮೆಯಾಗುತ್ತದೆ.

ಫೋಟೋ ಕೃಪೆ : google

ಇಷ್ಟೆಲ್ಲ ಔಷಧದ ಗುಣವಿರುವ ಮೆಂತ್ಯ ಸೊಪ್ಪು ಮತ್ತು ಕಾಳನ್ನು ವಾರದಲ್ಲಿ ಒಮ್ಮೆಯಾದರೂ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನುವುದು ಆಹಾರ ತಜ್ಞರ ಸಲಹೆ. ಹಾಗಾಗಿ, ಕೆಲವು ಪದಾರ್ಥಗಳಿಗಷ್ಟೇ ಬಳಸುತ್ತಿರುವ ಮೆಂತ್ಯ ಕಾಳನ್ನು ಸಣ್ಣ ಡಬ್ಬದಿಂದ ದೊಡ್ಡ ಡಬ್ಬಕ್ಕೆ ರವಾನಿಸಿ. ದಂಟಿನ ಸೊಪ್ಪಿಗೆ ನೀಡುವ ಪ್ರಾಶಸ್ತ್ಯವನ್ನು ಮೆಂತ್ಯಸೊಪ್ಪಿಗೂ ನೀಡೋಣವೇ.


  • ಸೌಮ್ಯ ಸನತ್ 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW