ಸಭೆ ಸಮಾರಂಭಗಳಲ್ಲಿ ಕೊರಳಿಗೆ ಹಾಕಿದ ಮಾಲೆಯನ್ನು ಹಾಕಿದಾಕ್ಷಣ ತಗೆದಾಗ ಮಾಲೆ ಹಾಕಿದವರಿಗೂ ಅವಮಾನ ಮಾಡಿದಂತೆ ಮತ್ತು ಮಾಲೆ ತೆಗೆದಿಟ್ಟವರಿಗೆಲ್ಲ ದಂಡ ವಿಧಿಸಬೇಕು ಎಂದು ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಸಮಾರಂಭವೊಂದರಲ್ಲಿ ಹೇಳಿದರು ಮುಂದೇನಾಯಿತು ವಿರೂಪಾಕ್ಷಪ್ಪ ಕೋರಗಲ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ …
ಸಭೆ ಸಮಾರಂಭಗಲ್ಲಿ ಕೊರಳಿಗೊಂದು ಮಾಲೆ ಹಾಕಿ ಗೌರವಿಸಿವುದು ರಿವಾಜು. ಮಾಲೆಯನ್ನು ಹಾಕಿಸಿಕೊಂಡರವರು ಅದನ್ನು ಹಾಕಿದ ಕೂಡಲೇ ತೆಗೆದು ಎದುರಿನ ಮೇಜಿನ ಮೇಲೆ ಇಟ್ಟು ಕುಳಿತು ಬಿಡುತ್ತಾರೆ. ಪರದೇಶದವರುನಮ್ಮ ದೇಶಕ್ಕೆ ಬಂದರೆ ತಮಗೆ ಹಾಕಿದ ಮಾಲೆಯನ್ನು ತೆಗೆದು ಹಾಕದೆ ಕೊರಳಲ್ಲಿ ಹಾಕಿಕೊಂಡೇ ಅಡ್ಡಾಡುತ್ತಾರೆ.

ಹತ್ತೋ ಇಪ್ಪತ್ತೋ ರೂಪಾಯಿ ಕೊಟ್ಟು ತಂದು ಹಾಕಿದ ಆ ಹೂ ಮಾಲೆಯನ್ನು ಹಾಕಿದ ಕೂಡಲೇ ತೆಗೆದು ಬಿಟ್ಟರೆ ಹಾಗೆ ಮಾಲೆಯನ್ನು ತಂದು ಹಾಕಿದವರಿಗೆ ಅಪಮಾನ ಮಾಡಿದಂತಗುತ್ತದೆಯೇ? ಎಂಬುದು ಒಂದು ಪ್ರಶ್ನೆ.ಇಂಥ ಒಂದು ಪ್ರಸಂಗ ನನಗೆ ಎದುರಾಗಿತ್ತು.ಮುರುಘರಾಜೆಂದ್ರ ಮಾಗಾವಿಯವರ ಕಥಾಸಂಕಲನದ ಬಿಡುಗಡೆ ಸಮಾರಂಭದಲ್ಲಿ ನಾನು ಭಾಗ ವಹಿಸಿದ್ದೆ.ಅಂದಿನ ಸಭೆಯಲ್ಲಿ ಹಾವೇರಿ ಹುಕ್ಕೇರಿಮಠದ ಶ್ರೀ ಶಿವಲಿಂಗಸ್ವಾಮಿಗಳೂಇದ್ದರು. ಪುಸ್ತಕ ಬಿಡುಗಡೆ ಮಾಡಲಿಕ್ಕೆ ಬಂದವರೆಂದರೆ ನಮ್ಮ ಭಾಗದ ಪ್ರಸಿದ್ದ ಸಾಹಿತಿಗಳಾದ ಶ್ರೀ ಸಿದ್ಧಲಿಂಗ ಪಟ್ಟಣಶೆಟ್ಟರು.ಯಥಾ ಪ್ರಕಾರ ಹೂ ಮಾಲೆಯನ್ನು ಹಾಕಿದ ಕೂಡಲೇ ನಾವು ಮಾಲೆಯನ್ನು ತೆಗೆದು ಇಟ್ಟು ಬಿಟ್ಟೆವು. ಆದರೆ ಶೆಟ್ಟರು ಮಾಲೆಯನ್ನು ತೆಡಗೆದಿಡಲಿಲ್ಲ. ಮಾಲೆಯನ್ನು ಹಾಕಿಕೊಂಡೇ ಭಾಷಣ ಶುರುಮಾಡಿದರು. ಹೂಮಾಲೆಯನ್ನು ತೆಗೆದಿಟ್ಟರನ್ನೆಲ್ಲಾ ತರಾಟೆಗೆ ತೆಗೆದುಕೊಂಡರೆ.”ನೂರು ನೂರು ರೂಪಾಯಿ ಕೊಟ್ಟು ಘಮ ಘಮಿಸುವ ಯಾಲಕ್ಕಿ ಮಾಲೆಗಳನ್ನು ಎಲ್ಲರ ಕೊರಳಿಗೂ ಹಾಕಿದ್ದಾರೆ. ಹಾಕಿದ ಮಾಲೆಯನ್ನು ತೆಗೆದಿಡುವುದೆಂದರೆ ನಮ್ಮನ್ನು ಆಹ್ವಾನಿಸಿ ಮಾಲೆ ಹಾಕಿವರಿಗೆ ಅವಮಾನ ಮಾಡಿದಂತೆ, ಅದ್ದರಿಂದ ಮಾಲೆ ತೆಗೆದಿಟ್ಟವರಿಗೆಲ್ಲ ಮಾಲೆಯ ಕಿಮ್ಮತ್ತಿನಷ್ಟು ದಂಡಾ ಹಾಕಬೆಕು, ಮತ್ತು ಅಂಥವರನ್ನು ಮತ್ತೆ ಇಂಥ ಸಮಾರಂಭಗಳಿಗೆ ಕರೆಯಿಸಬಾರದು” ಎಂದು ಶೆಟ್ಟರು ಫರಮಾನು ಹೊರಡಿಸಿ ಬಿಟ್ಟರು.

ಸಮಾರಂಭದ ಸಾನಿದ್ಯ ವಹಸಿ ಕೊನೆಗೆ ಮಾತಾಡಿದ ಹುಕ್ಕೇರಿಮಠದ ಶಿವಲಿಂಗಸ್ವಾಮಿಗಳು ಅದಕ್ಕೆ ಉತ್ತರ ಕೊಡದೇ ಇರಲಿಲ್ಲ. “ಹೂ ಮಾಲೆಯನ್ನು ಅತಿಥಿಗಳು ಹೇಳಿದಂತೆ ಬಹಳ ಹೊತ್ತು ಹಾಕಿಕೊಂಡು ಕುಳಿತುಕೊಳ್ಳುವುದು ಕ್ಷೇಮಕರವಲ್ಲ. ಯಾಕಂದರೆ ಹೂವಿನಲ್ಲಿ ಮಕರಂದವಿರುವುದರಿಂದ ಮಾಲೆಯ ಜೊತೆಗೆ ಜೇನು ನೊಣಗಳೂ ಬಂದಿರುತ್ತವೆ. ಹಸಿರು ಹುಳುಗಳೂ, ನುಸಿ ನೊರಜುಗಳೂ ಬಂದಿರುತ್ತವೆ. ಅದು ಅಲ್ಲದೆ ಒಮ್ಮೊಮ್ಮೆ ಮಾಲೆ ಕಟ್ಟುವವರು ಅಜಾಗರೂಕತೆಯಿಂದ ಹೂವು ಪೋಣಿಸಿದ ಸೂಜಿಯನ್ನು ಅದರಲ್ಲಿಯೇ ಬಿಟ್ಟು ಬಿಟ್ಟರುತ್ತಾರೆ. ಸೂಜಿಯಿಂದ ಚುಚ್ಚಿಸಿಕೊಳ್ಳಬೇಕು, ಮತ್ತೆ ಜೇನ್ನೊಣಗ ಕ್ರಿಮಿ, ಕೀಟಗಳಿಂದ ಕಡೆಯಿಸಿಕೊಳ್ಳಬೇಕೆಂದರೆ ಹಾಕಿಕೊಂಡೆ ಕುಳ್ಳಿರಬೇಕು. ಈಗ ಮಾಗಾವಿಯವರು ಹಾಕಿದ ಮಾಲೆ ಯಾಲಕ್ಕಿಯದಾಗಿರುವುದರಿಂದ ಆ ಭಯವಿಲ್ಲ. ಇದು ಕಿಮ್ಮತ್ತಿನ ಮಾಲೆ ಆಗಿರುವುದರಿಂದ ಕಾಳಜಿಯಿಂದ ಕಟ್ಟಿರುತ್ತಾರೆ, ಅದಕ್ಕೆ ಇದರಲ್ಲಿ ಸೂಜಿಯೂ ಇರಲಿಕ್ಕಲ್ಲ. ಇದನ್ನು ತೆಗೆದಿದ್ದು ತಪ್ಪು ಎಂದು ನೀವೆಲ್ಲಾ ನಿರ್ಧರಿಸಿದರೆ ನಾವು ದಂಡಾ ಕೊಡಲಿಕ್ಕೆ ಹಿಂದು ಮುಂದು ನೋಡುವುದಿಲ್ಲ.ಆದರೆ ಸನ್ಯಾಸಿಗಳಾದ ನಮ್ಮ ಹತ್ತಿರ ಹಣವೇ ಇರುವುದಿಲ್ಲ. ಹಣ ಇಟ್ಟುಕೊಂಡು ಅಡ್ಡಾಡಲಿಕ್ಕೆ ನಮ್ಮ ಉಡುಪಿಗೆ ಒಂದು ಬಕ್ಕಣವೂ ಇಲ್ಲ. ನಮಗೆ ದಂಡಾ ಹಾಕಿದರೆ ಆ ದಂಡದ ಹಣವನ್ನೂ ಸಹ ಮಾಲೆ ಹಾಕಿದವರೇ ಕೊಡಬೇಕಾಗುತ್ತದೆ” ಎಂದು ಹೇಳಿದಾಗ ಕುಳಿತವರೆಲ್ಲಾ ಬಾಯಿ ತುಂಬಾ ನಕ್ಕು ಚಪ್ಪಾಳೆ ಹೊಡೆದರು.
ಸಿದ್ಧಲಿಂಗ ಪಟ್ಟಣಶೆಟ್ಟರು ಮಾತ್ರ ಅವರು ಹೇಳಿದ ಹಾಗೆ ನಡೆದರು. ಏನಪ್ಪಾ ಅಂದರೆ ಅಲ್ಲಿಂದ ನಾವು ಊಟಕ್ಕೆ ಹೋದಾಗ ಕೊಳ್ಳಾಗ ಮಾಲಿ ಹಾಕಿಕೊಂಡೆ ಬಂದದ್ಧರಿಂದ ದಾರಿಯಲ್ಲಿ ಎದುರಾದವರೆಲ್ಲ ಅವರತ್ತ ನೋಡುತ್ತಾ ಹೋದರು.
- ವಿರೂಪಾಕ್ಷಪ್ಪ ಕೋರಗಲ್ – ಹಾವೇರಿ
