‘ಗಗನ ನಕ್ಷತ್ರ’ ಕವನ – ಡಾ. ಲಕ್ಷ್ಮಣ ಕೌಂಟೆ

”ಬೆಳ್ಳಿ ತಾರೆಗಳು ಆಗಸದಲ್ಲೇ ಮಿನುಗುತ್ತವೆ ಕೈಗೆ ಮಾತ್ರ ಸಿಗುವುದೇ ಇಲ್ಲ… ಹೀಗೆನ್ನುವುದು ಮರೆತು ಹೋಗಿತ್ತು ಎನಗೆ’..ಕವಿ ಡಾ. ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಅರಳಿದ ಈ ಸುಂದರ ಸಾಲುಗಳು, ತಪ್ಪದೆ ಓದಿ…

ಹಲವು ಸಹಸ್ರ ಅಡಿ ಎತ್ತರದ ಬೆಟ್ಟದ ಅಂಚಿನಲ್ಲಿ
ಮೊದಲ ಮುಂಜಾವಿನ ಮಂಜಿನ ಹನಿಗಳು ಹೆಣೆದ
ತೇವ ಮೋಡಗಳಲ್ಲಿ
ನೀ ಮೊಗದೋರಿದೆಯಲ್ಲ ಪ್ರಿಯದೇವಿ..

ಸಣ್ಣಗೆ ನಡುಗುವ ಚಳಿಯಲ್ಲೂ
ನಾನೊಂದು ಕ್ಷಣ ಬೆಚ್ಚಗಾಗಿದ್ದೆ
ಆವರಿಸಿದ್ದೆ ನೀ ಎನ್ನ ಮೈ ಮನಗಳಲ್ಲಿ
ಕಚಗುಳಿಯಾಗಿ ಹರಡಿ ಮೋಹ ಜಾಲದೊಳಗೆ ಬಂಧಿಸಿ
ರಸ ಭಾವಗಳನ್ನು ತಲ್ಲಣಗೊಳಿಸಿದ್ದೆ

ಪ್ರತಿ ಕ್ಷಣವೂ ಮನಸ್ಸು ತವಕಿಸುತ್ತಿತ್ತು
ನಿನ್ನ ನೋಡಲು ಕೂಡಲು ಬೆಸೆಯಲು
ತುಂತುರು ತುಷಾರದ ಮಧ್ಯ
ರವಿಕಿರಣಗಳು ತೂರಿ ಬರುವ ಮುನ್ನವೇ
ಬೇಡ ಬೇಡವೆಂದರೂ ಕೇಳದ ನನ್ನ ಮನಸ್ಸು
ನಿನ್ನನ್ನು ಹುಡುಕಿ ಸೇರಲು ಹಂಬಲಿಸಿ
ಹೊರಟೇ ಬಿಟ್ಟಿತ್ತು ತಂಗಾಳಿಯನ್ನು ಹಿಂದಿಟ್ಟುಕೊಂಡು..!!

ನೂರು ತಿರುವಿನ ಬೆಟ್ಟವನ್ನಿಳಿಯುವಾಗಲೂ
ಪ್ರತಿ ಹೆಜ್ಜೆಗೊಮ್ಮೆಯಾದರೂ
ನಿನ್ನ ನಾಮಸ್ಮರಣೆಯೇ ಎನ್ನ ಜಪವಾಯಿತು..

ಓಡಿ ಬಂದಿದ್ದಾಯ್ತು ಮನದ ಬೆಂಬಳಿವಿಡಿದು..!!
ನಿನ್ನ ಆ ಕ್ಷಣದ ಕರೆಯೂ ಮನದ ಬೇಗುದಿಯನ್ನು
ಮತ್ತಷ್ಟು ಉದ್ವೇಗಗೊಳಿಸಿತು..!!

ನೀನೂ ಬಂದಿದ್ದೆ ನನ್ನಂತೆಯೇ..!!
ಕಾಣುವ ಮನದುಂಬಿಕೊಳ್ಳುವ
ಮನದಣಿಯೇ ಮಾತನಾಡುವ ತವಕ
ಎಂಟರ ನಂಟಿಗೆ ನಂಟು ಬೆಸೆಯಲು ಸೂಚಿತ ಸ್ಥಲಕೆ

ಕಣ್ಣುಗಳು ಅರಳಿದ್ದವು
ಹಗುರವಾಗಿತ್ತು ಮನಸ್ಸು ಹತ್ತಿಯಂತೆ
ನಾಲಗೆಯ ತುಂಬ ಸವರಲಾಗಿತ್ತು ಮಧು
ನುಡಿದ ಮಾತುಗಳೆಲ್ಲ ಜೇನ ಹನಿಗಳಲ್ಲಿ ಅದ್ದಿದ್ದವು…

ನಾಲಗೆ ನುಡಿಯುವ ಮುನ್ನವೇ ಸಾವಿರ ಬಾರಿಯಾದರೂ
ಪರಸ್ಪರರ ಕಂಗಳು ಮಾತಾಡಿಕೊಂಡಿದ್ದವು
ಒಲವ ಭಾಷೆಯಲ್ಲಿಯೇ ಮೌನವಾಗಿಯೇ

ಪರಸ್ಪರ ವಿನಿಮಯ ಮಾಡಿಕೊಂಡವು ಒಲವ ನಲಿವು
ದಿಬ್ಬಣದೊಂದಿಗೆ ಹೊರಟ ವಧು- ವರರಂತೆ ಸಂಭ್ರಮಿತಗೊಂಡಿದ್ದವು ಮನಸ್ಸುಗಳು

ಎಲ್ಲೋ ಕುಹಕ ಜನರಹಿತ ಏಕಾಂತದಲ್ಲಿ ಸಂಧಿಸುವ ತವಕ
ಹರಡಿಕೊಂಡಿತ್ತು ನನ್ನ ಮನದ ತುಂಬ
ಹಿಂಬಾಲಿಸಿದ್ದೆ ನಾ ನಿನ್ನ ಅಣತಿಯಂತೆಯೇ..

ಮನಸ್ಸುಗಳ ತುಡಿತ ಏನಿದ್ದರೇನು..!!
ಅವ್ಯಕ್ತವಾಗಿ ಬಂಧಿಸಿದ ನಡವಳಿಕೆಗಳು
ನೂರೆಂಟು ಬಗೆಯ ರೀತಿ ನೀತಿಗಳು
ಮಧ್ಯ ಹೆಣೆದವು ಅನೇಕ ಅಂತರ ಪಟಗಳನ್ನು..

ಮೃದುವಾಗಿ ಕೈ ಸವರಿದ್ದೇ ಬಂತು
ಹಿತವಾಗಿ ತುಸು ಸ್ಪರ್ಶಕ್ಕೊಳಗಾದ
ತನುವಿನಲ್ಲಿ ಹರಿದಿತ್ತು ಮದ್ಯದಮಲಿನ ಘಮಲು
ಒಂದಿಷ್ಟು ಸಲ್ಲಾಪಗಳು
ಮಾತು ಮಾತಿನಲ್ಲೂ ಉಕ್ಕಿ ಹರಿದ ಸಂತಸ ಸಂಭ್ರಮಗಳು…
ಅಷ್ಟೇ…!!
ನೀನೆಲ್ಲ ಕೆಲವೇ ಘಳಿಗೆಗಳಲಿ
ಮುಗಿಸಿ ಬಿಟ್ಟೆ ಪ್ರಿಯ ಸಂಭಾಷಣೆ, ಮೃದು ಸ್ಪರ್ಶಗಳನ್ನು..!!

ಸರಸಿಜೆಯಾಗಿ
ಸ್ವಪ್ನ ಲೋಕದಿಂದ ಮುಗಿಲು ಮಲ್ಲಿಗೆಯಾಗಿ
ಇಳಿದು ಬಂದ ನೀ
ಅಷ್ಟು ಸುಲಭವಾಗಿ ದಕ್ಕುವುದೆಂತು ಕೈಗೆ..!!

ಬಳಿ ಬಂದವಳು ಬಂದ ವೇಗದಲ್ಲಿಯೇ ಮರಳಿದೆ
ಕೈ ಬೀಸಿ ಹಾಯ್ ಹೇಳಿ…!!

ವಾಸ್ತವಕ್ಕೆ ಮರಳಿದ್ದೆ ಮನವ ತುಂಬಿಕೊಂಡಿದ್ದೆ..!!
ಕನಸಿನ ಮನೆಯವಳು ನೀನು..
ರಾತ್ರಿ ಎಚ್ಚರಗೊಳಿಸಿ ಮರಳಿದ್ದೆ
ಗಾಢಾಲಿಂಗನ ಸಿಹಿ ಸ್ಮರಣೆಯನ್ನಿತ್ತು

ಬೆಳ್ಳಿ ತಾರೆಗಳು ಆಗಸದಲ್ಲೇ ಮಿನುಗುತ್ತವೆ
ಕೈಗೆ ಮಾತ್ರ ಸಿಗುವುದೇ ಇಲ್ಲ…!!
ಹೀಗೆನ್ನುವುದು ಮರೆತು ಹೋಗಿತ್ತು ಎನಗೆ..!!
ಇರುಳಾದರೂ ಸರಿಯೇ ಹಗಲಾದರೂ ಸರಿಯೇ
ನನಸು ಕನಸಲ್ಲಾದರೂ ಸರಿಯೇ
ನಿನ್ನೊಲವು ಎನಗಿರಲಿ..
ಏಕೆಂದರೆ ಭಕ್ತ ನಾನು
ನನ್ನ ಪರಮ ಪ್ರಿಯ ದೇವಿ ನೀನು..!!


  • ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು)  ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW