ʻಅತೀತʼ ಮತ್ತಿತರ ಬದುಕುಗಳು…- ವಿನಯ್‌ ಮಾಧವ್

ಅರ್ಜುನ್‌ ದೇವಾಲದಕೆರೆ ಅವರು ಬರೆದ ಮೂರು ಪುಸ್ತಕಗಳಲ್ಲಿ ನನ್ನ ಗಮನ ಸೆಳೆದದ್ದು ‘ಅತೀತ’. ಇಂದೊದು ಮುದ್ದಾದ ಲವ್‌ ಸ್ಟೋರಿ ಸುತ್ತ ಹೆಣೆಯಲಾದ ಕಥೆಯಾಗಿದ್ದು, ಮಲೆನಾಡಿನ ಮಧ್ಯೆ ನಡೆಯವುವ ಈ ಕಥೆಯಲ್ಲಿ ಮಾಂತ್ರಿಕರದೇ ಕಾರುಬಾರು. ಮಾಕೋನಹಳ್ಳಿ ವಿನಯ್‌ ಮಾಧವ್ ಅವರ ಬರಹದಲ್ಲಿ ಮೂಡಿಬಂದ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಎಪ್ಪತ್ತರ ದಶಕದ ಕೊನೆ ಭಾಗ ಎಂದು ಕಾಣುತ್ತದೆ. ವರಸೆಯಲ್ಲಿ ಚಿಕ್ಕಪ್ಪನಾಗಬೇಕಾದ ಶರಾವತಿ ಪ್ರಕಾಶಣ್ಣ ಒಮ್ಮೆ ರಾತ್ರಿ ಕೋವಿ ಹಿಡಿದುಕೊಂಡು ಶಿಕಾರಿಗೆ ಹೋಗಿದ್ದರಂತೆ. ರಾತ್ರಿ ಶಿಕಾರಿಯಲ್ಲಿ ಹೆಚ್ಚಾಗಿ ಸಿಗುವುದು ಮೊಲ, ಕಬ್ಬೆಕ್ಕು, ಪುನುಗಿನ ಬೆಕ್ಕು, ಅದೃಷ್ಟ ಇದ್ದರೆ ಕಾಡು ಕುರಿ. ಒಬ್ಬರು ಅಥವಾ ಹೆಚ್ಚೆಂದರೆ ಇಬ್ಬರು ಹೋಗುವುದು ಮಲೆನಾಡಿನ ಆಗಿನ ಕಾಲದ ಅಭ್ಯಾಸ.

ರಾತ್ರಿ ಊಟವಾದ ನಂತರ ಹೊರಟು, ಮಧ್ಯ ರಾತ್ರಿಯವರೆಗೆ ತೋಟಗಳ ಮಧ್ಯೆ ಕತ್ತಲಲ್ಲಿ ಅಂದಾಜಿನ ಮೇಲೆ ಕಾಲು ಹಾಕುತ್ತಾ, ಸದ್ದಾಗಿ ಅಥವಾ ಅನುಮಾನ ಬಂದಲ್ಲಿ ಮಾತ್ರ ಟಾರ್ಚ್‌ ಹಾಕಿ, ಕತ್ತಲಲ್ಲಿ ಕಣ್ಣು ಕೊಡುವ ಪ್ರಾಣಿಗಳಿಗೆ ಗುಂಡು ಹೊಡೆಯುವುದು ಈ ಶಿಕಾರಿಯ ವಾಡಿಕೆ. ಒಮ್ಮೊಮ್ಮೆ ದೊಡ್ಡ ಪ್ರಾಣಿಗಳು ಕಣ್ಣು ಕೊಡುವ ಸಾಧ್ಯತೆಗಳೂ ಇದ್ದವು.
ಟಾರ್ಚ್‌ ಬೆಳಕು ಪ್ರಕರವಾಗಿಲ್ಲದೇ ಹೋದರೆ, ಪ್ರಾಣಿಗಳು ಅಲ್ಲಿಂದ ಹೊರಟು ಹೋಗುವ ಸಾಧ್ಯತೆ ಹೆಚ್ಚು. ಪ್ರಖರವಾಗಿದ್ದರೆ ಮಾತ್ರ, ಗರ ಬಡಿದಂತೆ ಬೆಳಕನ್ನೇ ನೋಡುತ್ತಾ ಕುಳಿತುಕೊಂಡು ಬಿಡುತ್ತಿದ್ದವು. ಆಗ ಕಣ್ಣುಗಳ ಮಧ್ಯೆ, ಅಂದಾಜು ಮಾಡಿ ಕತ್ತಲಲ್ಲಿ ಗುಂಡು ಹೊಡೆಯಬೇಕು. ಏಕೆಂದರೆ, ನಳಿಗೆಯ ತುದಿ ಕತ್ತಲಲ್ಲಿ ಕಾಣುವುದಿಲ್ಲ.

ಅವತ್ತು ಪ್ರಕಾಶಣ್ಣನ ಅದೃಷ್ಟ ಸರಿ ಇರಲಿಲ್ಲ ಎಂದು ಕಾಣುತ್ತೆ. ಎಷ್ಟು ಸುತ್ತಿದರೂ ಏನೂ ಸಿಗಲಿಲ್ಲ. ಆಗಿನ ಎವರೆಡಿ ಬ್ಯಾಟರಿಯ ಚಾರ್ಜ್‌ ಹೋಗಿ, ಟಾರ್ಚ್‌ ಕುರುಡಾಗುತ್ತಾ ಬಂದಿತ್ತು. ಸರಿ, ಮನೆ ಕಡೆಗೆ ಹೆಜ್ಜೆ ಹಾಕಲು ಆರಂಭಿಸಿದರು. ಅವರ ಮನೆಗೆ ಹೋಗುವ ದಾರಿಯಲ್ಲಿ ಸುಗ್ಗಿ ಕಟ್ಟೆ ಇಳಿಜಾರು ಇದೆ. ಅಲ್ಲಿ ಯಾವಾಗ ಸುಗ್ಗಿ ನಡೆಯುತ್ತಿತ್ತು ಅನ್ನೋದು ಯಾರಿಗೂ ಸರಿಯಾಗಿ ನೆನಪಿಲ್ಲ. ಹಾಗಾಗಿ ರಾತ್ರಿ ಹೊತ್ತು ಅಲ್ಲಿ ದೆವ್ವ ಕಾಣಿಸುತ್ತದೆ ಎನ್ನುವ ಪ್ರತೀತಿ. ಮೇಲಿನಿಂದ ಇಳಿಜಾರಿನ ಕಡೆಗೆ ಕಾಲು ಹಾಕುವಾಗ, ಪ್ರಕಾಶಣ್ಣನಿಗೆ ಇಳಿಜಾರಿನ ಕೆಳಗೆ, ಸುಗ್ಗಿ ಕಟ್ಟೆಯ ಪಕ್ಕದಲ್ಲೇ ಎರಡು ಬೆಳಕು ಕಂಡಿತು.

ಒಂದು ಬೆಳಕು ಸಣ್ಣ ದೀಪದಂತೆ ಮೇಲುಗಡೆ ಇದ್ದರೆ, ಅದರಿಂದ ಸ್ವಲ್ಪ ಕೆಳಗೆ ಇನ್ನೊಂದು ಕೆಂಪು ಬಣ್ಣದಾಗಿತ್ತು. ದೀಪದಂತಿದ್ದ ಬೆಳಕು ಅಲ್ಲಾಡುತ್ತಿರಲಿಲ್ಲ. ಆದರೆ ಕೆಂಪು ದೀಪ ಮಾತ್ರ ಒಮ್ಮೆ ಪ್ರಕಾಶಮಾನವಾಗಿ, ಮತ್ತೆ ಮಂದವಾಗುತ್ತಿತ್ತು. ಆದರೂ ಕಾಣಿಸುತ್ತಿತ್ತು. ದೆವ್ವ, ಭೂತಗಳಿಗೆ ಅಷ್ಟಾಗಿ ಹೆದರದ ಪ್ರಕಾಶಣ್ಣ ಸಹ ಒಂದು ಕ್ಷಣ ಗಾಭರಿಯಾದರು. ತಮ್ಮ ಟಾರ್ಚ್‌ ಹಾಕಿದರೆ, ಅಲ್ಲಿ ಟಾರ್ಚ್‌ ಇರಬಹುದು ಎನ್ನುವಷ್ಟು ಬೆಳಕು ಬರುತ್ತಿತ್ತೇ ಹೊರತು, ಬೆಳಕು ಮುಂದಕ್ಕೆ ಹೋಗುತ್ತಿರಲಿಲ್ಲ. ಒಂದು ಕ್ಷಣ ಸುಧಾರಿಸಿಕೊಂಡು, ʻಯಾರದು?ʼ ಎಂದು ಕೇಳಿದರು.

ಆ ಕಡೆಯಿಂದ ಉತ್ತರವಿಲ್ಲ. ಆದರೆ, ಮೇಲಿನ ಬೆಳಕು ಹಾಗೇ ಇದೆ. ಕೆಳಗಿನದು ಮಾತ್ರ ಒಮ್ಮೆ ಪ್ರಕಾಶಮಾನವಾಗಿ, ಮತ್ತೆ ಕಡಿಮೆಯಾಗುತ್ತಿದೆ. ಈಗ ಪ್ರಕಾಶಣ್ಣನಿಗೆ ಗಾಭರಿಯಾಯಿತು. ಕೋವಿಯನ್ನು ಎತ್ತಿ ಭುಜದ ಮೇಲೆ ಇಟ್ಟವರೇ, ʻಯಾರದು ಅಂತ ಮೂರು ಎಣಿಸುವುದರೊಳಗೆ ಹೇಳದೇ ಹೋದರೆ, ಗುಂಡು ಹೊಡೆಯುತ್ತೇನೆ,ʼ ಎಂದವರೇ, ʻಒಂದು… ಎರಡು..ʼ ಎಂದು ಹೇಳುವಷ್ಟರಲಿ, ಕೆಳಗಿನಿಂದ, ʻಏ ಪ್ರಕಾಶ, ನಾನು ಕಣೋ, ಹಡ್ಲು ಗದ್ದೆ ಹುಚ್ಚಣ್ಣ,ʼ ಎಂಬ ಗಾಭರಿಯ ಧ್ವನಿ ಕೇಳಿಸಿತು.

ಆಗಿದ್ದಿಷ್ಟೆ. ಹುಚ್ಚಣ್ಣ ಸಹ ಶಿಕಾರಿಗೆ ಹೋಗಿದ್ದರು. ಅವರು ತಲೆಗೆ ಕಟ್ಟಿಕೊಂಡಿದ್ದ ಟಾರ್ಚ್‌ ಸಹ, ಬ್ಯಾಟರಿ ಕಡಿಮೆಯಾಗಿ ಕುರುಡಾಗಿತ್ತು. ಅವರು ಸಹ ಮನೆ ಕಡೆಗೆ ಹೊರಟಿದ್ದರು. ಪ್ರಕಾಶಣ್ಣ ಮೇಲೆ ಒಂದು ಸಲ ಟಾರ್ಚ್‌ ಹತ್ತಿಸಿ ನೋಡಿದಾಗ, ತಮ್ಮಂತೆಯೇ ಕುರುಡು ಟಾರ್ಚ್‌ ಹಿಡಿದುಕೊಂಡು, ಶಿಕಾರಿಗೆ ಹೋದ ಯಾರೋ ಬರುತ್ತಿರುವುದು ಹುಚ್ಚಣ್ಣನಿಗೆ ಗೊತ್ತಾಯಿತು. ತಕ್ಷಣವೇ ತಮ್ಮ ತಲೆಗೆ ಕಟ್ಟಿಕೊಂಡಿದ್ದ ಟಾರ್ಚ್‌ ಹತ್ತಿಸಿ, ಒಂದು ಬೀಡಿಯನ್ನು ಸಹ ಹಚ್ಚಿಕೊಂಡಿದ್ದಾರೆ. ಬೀಡಿಯನ್ನು ಕೈಯಲ್ಲಿ ಹಿಡಿಯದೆ, ಬಾಯಿಯಲ್ಲಿಯೇ ಹೊಗೆ ಎಳೆದು, ಹೊರಗೆ ಬಿಡುವಾಗ, ʻಕೆಂಪು ದೀಪʼ ಒಮ್ಮೆ ಪ್ರಕಾಶಮಾನವಾಗಿ, ಮತ್ತೆ ಮಂಕಾಗುತ್ತಿದ್ದದ್ದು. ಮೂರು ಇಂಚು ಅಂತರದಲ್ಲಿ, ಮೇಲೆ ಮತ್ತು ಕೆಳಗೆ ಎರಡು ಥರಹದ ದೀಪಗಳನ್ನು, ದೆವ್ವ ಇದೆ ಎಂದು ಹೇಳಲಾದ ಜಾಗದಲ್ಲಿಯೇ ನೋಡಿದ ಪ್ರಕಾಶಣ್ಣ ಗಾಭರಿಯಾಗಿ, ʻದೆವ್ವಕ್ಕೆʼ ಗುಂಡು ಹೊಡೆಯಲು ಹೊರಟಿದ್ದರು. ಸ್ವಲ್ಪದರಲ್ಲಿ ಅನಾಹುತ ತಪ್ಪಿತಷ್ಟೆ.

ದೆವ್ವಗಳ ಬಗ್ಗೆ ಇಂಥಹ ಬಹಳಷ್ಟು ಕಥೆಗಳು ಮಲೆನಾಡಿನಲ್ಲಿ ಸಿಗುತ್ತವೆ. ಹಾಗೆಯೇ, ಹೊತ್ತಲ್ಲದ ಹೊತ್ತಿನಲ್ಲಿ ತಮ್ಮನ್ನು ದೆವ್ವ ಚೌಡಿ ಕಲ್ಲಿರುವ ಮರದ ಹತ್ತಿರ, ಭೂತ ಬನಗಳ ಹತ್ತಿರ, ಹಾಳು ಬಿದ್ದ ಸುಗ್ಗಿ ಕಟ್ಟೆಗಳ ಹತ್ತಿರುವ ಕಾಡಿರುವ ಕಥೆಗಳನ್ನೂ ಬಹಳಷ್ಟು ಜನ ಹೇಳುತ್ತಿದ್ದರು. ಆಗೆಲ್ಲಾ ಕಾರುಗಳು ಬಹಳ ಕಡಿಮೆ ಇದ್ದುದ್ದರಿಂದ, ಕತ್ತಲಲ್ಲಿ ಅಂದಾಜಿನ ಮೇಲೆ ಕಾಲು ಹಾಕುತ್ತಾ ಕಿಲೋಮೀಟರ್‌ ಗಟ್ಟಲೆ ನಡೆಯುವುದು ನನಗೂ ಅಭ್ಯಾಸವಿತ್ತು.

ಒಂದೆರೆಡು ಸಣ್ಣ ಘಟನೆಗಳ ವಿಷಯದಲ್ಲಿ ಬೆಚ್ಚಿ ಬಿದ್ದದ್ದನ್ನು ಬಿಟ್ಟರೆ, ನನಗೆ ಅಂಥಹಾ ಅನುಭವವೇನೂ ಆಗಿರಲಿಲ್ಲ. ಹಾಗಾಗಿ ಕುತೂಹಲ ಹೆಚ್ಚಾಗತೊಡಗಿತು.

ಆಗೆಲ್ಲಾ ಗದ್ದೆಗೆ ನೀರು ಕಟ್ಟುವ ಸಮಯದಲ್ಲಿ, ರಾತ್ರಿ ಕೆಲಸದವರ ಜೊತೆ ನಾನೂ ಹೋಗುತ್ತಿದ್ದೆ. ಒಂದು ಕಡೆ ಬೆಂಕಿ ಹಾಕಿಕೊಂಡು, ಮಧ್ಯ ರಾತ್ರಿಯವರೆಗೆ ನಮ್ಮ ಗದ್ದೆಗೆ ನೀರು ತುಂಬುವಷ್ಟು ಹೊತ್ತು ಇದ್ದು, ಆನಂತರ ಮನೆಗೆ ಹಿಂದುರುಗುತ್ತಿದ್ದೆವು. ಈ ಸಮಯಗಳಲ್ಲಿ, ನಾನು ಕೋವಿ ಹಿಡಿದುಕೊಂಡು, ಚೌಡಿ ಕಲ್ಲು, ಭೂತದ ಕಲ್ಲು ಮತ್ತು ಸುಗ್ಗಿ ಕಟ್ಟೆಯ ಹತ್ತಿರ ಹೋಗಿ, ಒಬ್ಬನೇ ಸ್ವಲ್ಪ ಹೊತ್ತು ಇದ್ದು ಬರುತ್ತಿದ್ದೆ. ದೆವ್ವ, ಭೂತಗಳ ಬಗ್ಗೆ ವಿಪರೀತ ನಂಬಿಕೆ ಇದ್ದ ಆಳುಗಳು ಮಾತ್ರ ಬರುತ್ತಿರಲಿಲ್ಲ. ವಿಷಯ ಹೇಗೋ ಅಣ್ಣ(ಅಪ್ಪ)ನಿಗೆ ತಿಳಿಯಿತು. ಒಂದು ದಿನ, ʻಈ ದೆವ್ವ, ಭೂತ ಅಂತ ರಾತ್ರಿ ಹುಡುಕುತ್ತಾ ಹೊರಟರೆ, ನಿನ್ನನ್ನು ನಿಮ್ಹಾನ್ಸ್‌ ಗೆ ಸೇರಿಸುತ್ತೇನೆ,ʼ ಎಂದು ಬೈದಿದ್ದರು.

ನನಗೋ ವಿಪರೀತ ಕುತೂಹಲ. ಕೆಲವು ದಿನ ಬಿಟ್ಟು, ಇನ್ನೊಬ್ಬ ಚಿಕ್ಕಪ್ಪನರಾದ ವಿಜಯಣ್ಣನ ಹತ್ತಿರ, ʻಅಣ್ಣ, ಈ ದೆವ್ವ, ಭೂತ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ನಿಮಗೇನಾದರೂ ಗೊತ್ತಾ ಎಲ್ಲಿ ಸಿಗುತ್ತೆ ಅಂತ?ʼ ಎಂದು ಕೇಳಿಯೇ ಬಿಟ್ಟೆ.

ʻಹೋಗೊ, ಹೋಗೊ… ರಾತ್ರಿ ಇಡೀ ಸುತ್ತೋ ನನಗೇ ನಲ್ವತ್ತು ವರ್ಷ ಆಗ್ತಾ ಬಂದ್ರೂ ಸಿಕ್ಕಿಲ್ಲ. ಹದಿನೇಳು ವರ್ಷ ಸಹ ಆಗಿಲ್ಲ. ನಿನಗೆಲ್ಲಿ ಸಿಗುತ್ತೆ?ʼ ಅಂತ ವಿಜಯಣ್ಣ ನಕ್ಕುಬಿಟ್ಟರು.
ನಂತರ, ʻದೆವ್ವ ಎಲ್ಲರಿಗೂ ಕಾಣಲ್ಲ ಕಣಾ…. ನಿನಗೂ ಕಾಣಲ್ಲ ಅನ್ನಿಸುತ್ತೆ. ಇಲ್ಲದೇ ಹೋಗಿದ್ದರೆ, ನೀನು ಓಡಾಡಿರೋ ಜಾಗದಲ್ಲಿ ಇಷ್ಟು ಹೊತ್ತಿಗೆ ನಿನ್ನನ್ನ ಹೆದರಿಸ್ತಾ ಇತ್ತು. ಕಾಣೋದಿದ್ರೆ ಅದಾಗೇ ಕಾಣುತ್ತೆ. ನೀನೇನೂ ಹುಡುಕಬೇಕಾಗಿಲ್ಲ. ನನಗೂ ಕಂಡಿಲ್ಲ ನೋಡು. ದೆವ್ವ ಇರೋದು ಸುಳ್ಳು ಅಂತ ಹೇಳಲ್ಲ. ಆದ್ರೂ, ನನಗೂ ಇಷ್ಟು ದಿನದೊಳಗೆ ಕಾಣಬೇಕಿತ್ತು,ʼ ಎಂದರು.
ಅಲ್ಲಿಗೆ, ನನಗೂ, ದೆವ್ವಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅರ್ಥವಾಯಿತು. ಅಲ್ಲಿಂದ ಮುಂದೆ, ದೆವ್ವವನ್ನು ಹುಡುಕುವ ಯಾವುದೇ ಪ್ರಯತ್ನ ಮಾಡಲಿಲ್ಲ. ಆದರೆ, ರಾಮಕೃಷ್ಣ ಆಶ್ರಮದಲ್ಲಿ, ಸ್ವಾಮಿ ಜಗದಾತ್ಮಾನಂದರ ಮೂಸೆಯಲ್ಲಿ ಬೆಳೆದಿದ್ದ ನನಗೆ, ಆಧ್ಯಾತ್ಮ ಎನ್ನುವುದು ಕೇವಲ ಮೂರ್ತಿ ಪೂಜೆ ಮತ್ತು ಅದರ ಆಚರಣೆಗಳಿಗೆ ಸಂಬಂಧಿಸಿದ ವಿಷಯ ಎನ್ನುವುದರ ಬಗ್ಗೆ ನನ್ನದೇ ಆದ ತಕರಾರಿತ್ತು. ಅದಕ್ಕಿಂತ ಹೆಚ್ಚಿನದು ಇದೆ ಎನ್ನುವುದು ಯಾವಾಗಲೂ ಕಾಡುತ್ತಿತ್ತು.

ಮುಂದೆ ಮಾಟ, ಮಂತ್ರ ಮುಂತಾದವನ್ನು ಸಹ ನಾನು ಕುತೂಹಲದಿಂದ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಚಿಕ್ಕವನಿದ್ದಾಗ, ಅಣ್ಣ ಅರಕಲುಗೂಡಿನ ಕೇರಳಾಪುರದಲ್ಲಿ ವೈದ್ಯರಾಗಿದ್ದಾಗ, ಆ ಊರಿನಲ್ಲಿ ಮಾಟ, ಮಂತ್ರಗಳ ಬಗ್ಗೆ ಜನ ಬಹಳಷ್ಟು ಹೆದರುತ್ತಿದ್ದರು. ಅಮ್ಮ ಮಾತ್ರ, ಅದೆಲ್ಲ ಸುಳ್ಳು ಎಂದು ಹೇಳುತ್ತಿದ್ದರು. ಹಾಗಾಗಿ, ನಾನೂ ಸಹ ಮಾಟ, ಮಂತ್ರಗಳನ್ನು ನಂಬುತ್ತಿರಲಿಲ್ಲ. ಅದರ ಬಗ್ಗೆ ನನಗಿದ್ದ ತಾತ್ಸಾರದಲ್ಲಿ. ಮಾಟ ಮಾಡಿದ ನಿಂಬೆ ಹಣ್ಣು, ತೆಂಗಿನಕಾಯಿಗಳನ್ನು ಫುಟ್ಬಾಲ್‌ ಥರ ಆಡುತ್ತಿದ್ದೆ. ಒಮ್ಮೆ ಮನೆಯವರೆಗೆ ಒಂದು ತೆಂಗಿನಕಾಯಿಯನ್ನು ಒದ್ದುಕೊಂಡು ಹೋದಾಗ ಮಾತ್ರ ಅಮ್ಮ ಗಾಭರಿಯಾದರು. ಅದನ್ನು ಹಾಗೆಯೇ ಮನೆಯಿಂದ ದೂರ ಒದೆಯಲು ಹೇಳಿದರು. ನಾನೇನೂ ತಲೆ ಕೆಡಿಸಿಕೊಂಡಿರಲಿಲ್ಲ.

ಆದರೆ, ನಿಧಾನವಾಗಿ ಆ ಆಚರಣೆಗಳು ನನ್ನ ಕುತೂಹಲಕ್ಕೆ ಕಾರಣವಾಗಲು ಆರಂಭಿಸಿದವು. ಮೊದ ಮೊದಲು ತಿಳಿದಿದ್ದು, ಈ ಮಾಟ ಮಂತ್ರಗಳನ್ನು ಕೊಳ್ಳೆಗಾಲ ಅಥವಾ ಕೇರಳದ ಮಂತ್ರವಾದಿಗಳು ಮಾಡುವ ಒಂದು ದುಷ್ಟ ಕ್ರಿಯೆ ಎಂದು. ನಿಧಾನವಾಗಿ, ಇದು ಅಮೂರ್ತವಾದ ಸಾಧನೆಯ ಅತೀ ಕೆಳಸ್ಥರದ ಕ್ರಿಯೆ ಎನ್ನುವುದು ಅರ್ಥವಾಗತೊಡಗಿತು. ಅವುಗಳನ್ನು ಅರ್ಥ ಮಾಡಿಸುವಲ್ಲಿ ನಾನು ಓದಿದ ಭೈರಪ್ಪನವರ ನಿರಾಕರಣ, ರವಿ ಬೆಳಗೆರೆಯ ಮಾಟಗಾತಿ, ಅಗ್ನಿ ಶ್ರೀಧರ್‌ ಬರೆದ ಆಧುನಿಕ ಮಾಂತ್ರಿಕರ ಜಾಡಿನಲ್ಲಿ, ಎಂ ವಿ ನಾಗರಾಜ್‌ ರಾವ್‌ ಅನುವಾದಿಸಿದ, ಸುರೇಶ್‌ ಸೋಮಪುರ ರಚಿತ ಅಘೋರಿಗಳ ನಡುವೆ, ಶ್ರೀ ಎಂ ಬರೆದ ಅಪ್ರೆಂಟಿಸಿಂಗ್‌ ಅಂಡರ್‌ ಹಿಮಾಲಯನ್‌ ಮಾಸ್ಟರ್ಸ್‌, ಮುಂತಾದ ಪುಸ್ತಕಗಳು ಸಹಾಯ ಮಾಡಿದವು. ಇವೆಲ್ಲ ಓದಿ ಮುಗಿಸುವ ಹೊತ್ತಿಗೆ, ರವಿ ಬೆಳಗರೆಯ ಮಾಟಗಾತಿ ಒಂದು ಸಾಧಾರಣ ಕಾದಂಬರಿ ಅನ್ನಿಸಲು ಆರಂಭಿಸಿತು. ಭೈರಪ್ಪನವರ ನಿರಾಕರಣ ಕೆಲವು ವಿಷಯಗಳನ್ನು ಹೊರ ತಂದರೂ, ಅಘೋರಿಗಳ ನಡುವೆ ಸ್ವಲ್ಪ ಹೆಚ್ಚಿನ ವಿಷಯಗಳನ್ನು ಅರ್ಥ ಮಾಡಿಸಿತ್ತು. ಹಿಮಾಲಯನ್‌ ಮಾಸ್ಟರ್ಸ್‌ ಮತ್ತು ಆಧುನಿಕ ಮಾಂತ್ರಿಕರ ಜಾಡಿನಲ್ಲಿ ನನಗೆ ಈ ಅಮೂರ್ತ ಸಾಧನೆಗಳ ಬಗ್ಗೆ ಬಹಳಷ್ಟು ಬೆಳಕು ಚೆಲ್ಲಿತು. ಅಘೋರಿಗಳಲ್ಲದೆ, ಸೂಫಿ ಸಾಧಕರ ಬಗ್ಗೆ ಮತ್ತು ಅವರ ಜೀವನ ಶೈಲಿಗಳ ಬಗ್ಗೆಯೂ ಅಗ್ನಿ ಶ್ರೀಧರ್‌ ಮತ್ತು ಶ್ರೀ ಎಂ ಬಹಳ ಬೆಳಕು ಚೆಲ್ಲಿದ್ದರು ಮತ್ತು ಬಹಳಷ್ಟು ಸ್ಥಳಗಳ ಬಗ್ಗೆ ಆ ಪುಸ್ತಕಗಳಲ್ಲಿ ವಿವರಗಳಿವೆ.

ಇವೆಲ್ಲವನ್ನು ಓದಿದ ಮೇಲೂ ನನಗೆ ಬಹಳಷ್ಟು ಪ್ರಶ್ನೆಗಳು ಕಾಡುತ್ತಿದ್ದವು. ಎಲ್ಲರೂ ತಾಂತ್ರಿಕರು, ಅಘೋರಿಗಳು ಮತ್ತು ಬಾಬಾಗಳ ಸಾಧನೆಯ ವಿಧಾನಗಳನ್ನು ಸಾಕಷ್ಟು ಅಭ್ಯಸಿಸಿ ಬರೆದಿದ್ದರೇ ಹೊರತು, ಮೂಲ ಉದ್ದೇಶವನ್ನು ಅರ್ಥಮಾಡಿಕೊಳ್ಳುವಲ್ಲಿ ನಾನು ವಿಫಲನಾಗಿದ್ದೆ. ಏಕೆ? ಮತ್ತು ಏನು? ಎನ್ನುವುದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಹೆಣಗಿದೆ. ಅದು ನನಗೆ ಸ್ವಲ್ಪ ಮಟ್ಟಿಗೆ ಅರ್ಥವಾಗಿದ್ದು, ವೇದಯುಗ ಎನ್ನುವ ಪುಸ್ತಕಮಾಲೆ ಓದಿದ ಮೇಲೆ. ಅದರ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಕ್ಕಿದ್ದು, ರಹಮತ್‌ ತರಿಕೆರೆಯವರು ಬರೆದ ಕರ್ನಾಟಕದಲ್ಲಿ ನಾಥಪಂತ ಪುಸ್ತಕದ ಮೂಲಕ. ಆದರೂ, ಈ ಪ್ರಪಂಚವನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಲಾರೆ. ಇನ್ನೂ ಹುಡುಕಾಟದಲ್ಲಿದ್ದೇನೆ.

ಹೀಗಿದ್ದಾಗ, 2019 ರಲ್ಲಿ, ಪ್ರಯಾಗ್‌ ರಾಜ್‌ ನಲ್ಲಿ ನಡೆದ ಕುಂಭ ಮೇಳಕ್ಕೆ ನಾನು ಹೋಗಿದ್ದೆ. ಐದು ದಿನ ಅಲ್ಲಿದ್ದು, ಶಿವರಾತ್ರಿಯ ಮಾರನೇ ದಿನ ಅಲ್ಲಿಂದ ಹೊರಡಲು ಯೋಚಿಸಿದ್ದೆ. ಈ ನಾಥಪಂಥ ಮತ್ತು ಸೂಫೀ ಬಾಬಾಗಳನ್ನು ಭೇಟಿಯಾಗುವುದೂ ನನ್ನ ಉದ್ದೇಶವಾಗಿತ್ತು. ಆದರೆ, ಒಂದಿಬ್ಬರನ್ನು ನೋಡಿದ ತಕ್ಷಣ ನನಗೆ ಭ್ರಮನಿರಸವಾಯಿತು. ನಾನು ಉಳಿದುಕೊಂಡಿದ್ದ ಟೆಂಟ್‌ ಸಮುಚ್ಚಯ ನಡೆಸುತ್ತಿದ್ದ ಮಹೇಶ್‌ ಎನ್ನುವ ಹುಡುಗನಿಗೆ ತಕ್ಷಣವೇ ಅದು ಅರ್ಥವಾಯಿತು ಎಂದು ಕಾಣುತ್ತದೆ. ʻನೀವು ತುಂಬಾ ತಡವಾಗಿ ಬಂದಿರಿ. ಶಾಹಿ ಸ್ನಾನದ ಸಮಯದಲ್ಲಿ ಬಂದರೆ, ನೀವು ಹುಡುಕುವ ಬಾಬಾಗಳು ಸಿಗುತ್ತಾರೆ. ಅವರು ಮಾತನಾಡುವುದಿಲ್ಲ ಮತ್ತು ಇವರಂತೆ ಭಿಕ್ಷೆ ಬೇಡುವುದಿಲ್ಲ. ಅಖಾಡಗಳಲ್ಲಿರುತ್ತಾರೆ. ಇಷ್ಟು ಹೊತ್ತಿಗೆ ಅವರು ಹಿಮಾಲಯಗಳಲ್ಲೆಲ್ಲೋ ಕಳೆದು ಹೋಗಿರುತ್ತಾರೆ. ಮುಂದಿನ ಕುಂಭ ಮೇಳಗಳು ನಡೆದಾಗ, ಶಾಹಿ ಸ್ನಾನದ ಸಮಯದಲ್ಲಿ ಹುಡುಕಿದರೆ ಯಾರಾದರೂ ನಿಮಗೆ ಸಿಗಬಹುದು,ʼ ಎಂದು ಹೇಳಿದ.

ಅಲ್ಲಿಂದ ನಾನು ಈ ಬಾಬಾಗಳ ಯೋಚನೆ ಬಿಟ್ಟು, ನದಿಯ ಸುತ್ತ-ಮುತ್ತ ಸಮಯ ಕಳೆಯಲು ಪ್ರಾರಂಭಿಸಿದೆ. ಶಿವರಾತ್ರಿ ದಿನ ತ್ರಿವೇಣಿ ಸಂಗಮದಲ್ಲಿ ನಾನು ಸ್ನಾನ ಮಾಡುತ್ತಿರುವ ಫೋಟೋ ಕಳುಹಿಸಲೇಬೇಕು ಎಂದು ನನ್ನ ಹೆಂಡತಿ ಶರತ್ತು ಹಾಕಿದ್ದರ ಪ್ರಯುಕ್ತ, ಬೆಳಗ್ಗೆ ಐದು ಘಂಟೆಗೆಲ್ಲಾ ಹೊಳೆಗೆ ಹೊರಟೆ. ದಾರಿಯಲ್ಲಿ, ಮಹೇಶ್‌ ಮೂರು ಜನರನ್ನು ಪರಿಚಯಿಸಿ, ʻಇವರೂ ಸಹ ಕರ್ನಾಟಕದಿಂದ ಬಂದಿದ್ದಾರೆ,ʼ ಎಂದು ಹೇಳಿದ.

ಊರು ಕೇಳಿದಾಗ ಮೊದಲು ಹಾಸನದ ಹತ್ತಿರ ಸಕಲೇಶಪುರ ಎಂದವರು, ಮತ್ತೆ ವಿಚಾರಿಸಿದಾಗ ದೇವಲಕೆರೆ (ದೇವಾಲದಕೆರೆ) ಎಂದು ಗೊತ್ತಾಯಿತು. ಒಬ್ಬ ಮಾತ್ರ ತನ್ನ ಹೆಸರು ಹೇಳಿ, ತಾನೊಬ್ಬ ಫೋಟೋಗ್ರಾಫರ್‌ ಎಂದು ಪರಿಚಯ ಮಾಡಿಕೊಂಡ. ದೇವಾಲದಕೆರೆಯಲ್ಲಿ ನನ್ನ ಪರಿಚಯದವರ ಹೆಸರು ಹೇಳಿದಾಗ, ಅವನೇನೂ ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ಹಾಗಾಗಿ ನಾನೂ ಸುಮ್ಮನಾದೆ.

ಈಗೊಂದೆರೆಡು ತಿಂಗಳ ಹಿಂದೆ ಅಂತ ಕಾಣುತ್ತೆ… ನನ್ನ ಫೇಸ್ಬುಕ್‌ ನಲ್ಲಿ ಪರಿಚಯವಾದ ಅರ್ಜುನ್‌ ದೇವಾಲದಕೆರೆ ಮೆಸೆಂಜರ್‌ ನಲ್ಲಿ ತನ್ನ ಮೂರು ಪುಸ್ತಕಗಳ ಬಗ್ಗೆ ಪ್ರಸ್ತಾಪಿಸಿದ. ಅವುಗಳನ್ನು ತರಿಸಿಕೊಂಡು ಹಾಗೆಯೇ ಇಟ್ಟಿದ್ದೆ. ನನ್ನದೇ ಕೆಲಸಗಳಲ್ಲಿ ಒಂದು ತಿಂಗಳು ಪುಸ್ತಕ ಮುಟ್ಟುವುದಿಲ್ಲ ಎನ್ನುವುದು ನನಗೂ ಗೊತ್ತಿತ್ತು. ಅದು ಒಂದೂವರೆ ತಿಂಗಳಾಗಿತ್ತು. ಈ ಮೂರು ಪುಸ್ತಕಗಳಿಗೆ ಮುಂಚೆ ಇನ್ನೂ ಕೆಲವು ಪುಸ್ತಕಗಳನ್ನು ತಂದಿಟ್ಟುಕೊಂಡಿದ್ದೆ.

ಅರ್ಜುನ್‌ ಬರೆದ ಮೂರು ಪುಸ್ತಕಗಳಲ್ಲಿ ನನ್ನ ಗಮನ ಸೆಳೆದದ್ದು ಅತೀತ.

ಅದು ಅಮೂರ್ತ ಸಾಧಕರ ಪ್ರಪಂಚದ ಬಗ್ಗೆ ಬರೆದ ಕಾದಂಬರಿ. ಒಂದು ಪಯಣದಂತಿದೆ. ಒಂದು ಮುದ್ದಾದ ಲವ್‌ ಸ್ಟೋರಿ ಸುತ್ತ ಹೆಣೆಯಲಾದ ಕಥೆ. ಮಲೆನಾಡಿನ ಮಧ್ಯೆ ನಡೆಯವುವ ಈ ಕಥೆಯಲ್ಲಿ ಮಾಂತ್ರಿಕರದೇ ಕಾರುಬಾರು. ಅದನ್ನು ಓದುತ್ತಾ ಹೋಗುತ್ತಿದ್ದಂತೆ, ನಾನು ಚಿಕ್ಕಂದಿನಲ್ಲಿ ನಡೆದಾಡಿಕೊಂಡಿದ್ದ ಹಾನುಬಾಳು, ಅಗುನಿ, ದೇವಲಕೆರೆ, ದೇವವೃಂದ, ಹೊಡಚಳ್ಳಿಗಳ ಚಿತ್ರ ನನ್ನ ಕಣ್ಣಮುಂದೆ ಅಪ್ರಯತ್ನಕವಾಗಿ ಹಾದು ಹೋಗುತ್ತಿತ್ತು. ಅದೆಲ್ಲಕ್ಕಿಂತ ಇಷ್ಟವಾದ ವಿಷಯವೆಂದರೆ, ಈ ಅಘೋರಿಗಳ ಪ್ರಪಂಚ ಮತ್ತು ಅವರುಗಳ ಆಚರಣೆಯ ಬಗ್ಗೆ ಬರೆಯುವ ಮುನ್ನ, ಅರ್ಜುನ್‌ ಎಂಬ ಹುಡುಗ ಬಹಳಷ್ಟು ಹೋಂ ವರ್ಕ್‌ ಮಾಡಿದ್ದಾನೆ. ಹಾಗಾಗಿ, ಈ ಪುಸ್ತಕ ವಾಸ್ತವಕ್ಕೆ ಅಂಟಿಕೊಂಡಂತಿದೆ.

ಈ ಪುಸ್ತಕದ ಕಥಾ ಹಂದರವನ್ನು ನಾನು ವಿವರಿಸಲು ಹೋಗುವುದಿಲ್ಲ. ಈಗಾಗಲೇ ಓದಿರುವವರಿಗೆ ಅದರ ಅವಶ್ಯಕತೆ ಇಲ್ಲ. ಮುಂದೆ ಓದುವವರಿಗೆ ರಸಭಂಗವಾಗುತ್ತದೆ. ಇಷ್ಟು ಮಾತ್ರ ಹೇಳಬಲ್ಲೆ. ಕಥಾ ಹಂದರವೇ ಬೇರೆ ಇರುವುದರಿಂದ, ಇದನ್ನು ಭೈರಪ್ಪನವರ ನಿರಾಕರಣಕ್ಕೆ ಹೋಲಿಸಲಾಗುವುದಿಲ್ಲ. ಆದರೆ, ರವಿ ಬೆಳೆಗರೆಯ ಮಾಟಗಾತಿ ಮತ್ತು ಸುರೇಶ್‌ ಸೋಮಪುರರ ಅಘೋರಿಗಳ ನಡುವೆ ಕಾದಂಬರಿಗಳಿಗಿಂತ ಮೇಲಿದೆ. ಹಾಗೆಯೇ, ಇದು ಕಾಲ್ಪನಿಕವಾದರೂ, ಶ್ರೀ ಎಂ ಮತ್ತು ಅಗ್ನಿ ಶ್ರೀಧರ್‌ ಬರೆದಿರುವ ಪುಸ್ತಕಗಳ ಸಮೀಪಕ್ಕೆ ಬಂದು ನಿಲ್ಲುತ್ತದೆ.

ಒಮ್ಮೆ ವೈಎನ್ಕೆ, ಜೋಗಿಯವರಿಗೆ ಕೇಳಿದ್ದರಂತೆ… ನೀನು ದೇವರನ್ನು ನಂಬುತ್ತೀಯಾ?

ಜೋಗಿಯವರು ಇಲ್ಲ ಎಂದದ್ದಕ್ಕೆ, ʻಹಾಗಾದರೆ, ಲೇಖಕನಾಗಿ ನೀನು ಬಹಳಷ್ಟು ಕಳೆದುಕೊಳ್ಳುತ್ತೀಯ,ʼ ಎಂದಿದ್ದರಂತೆ. ಹೌದು, ನಂಬಿಕೆ ಎನ್ನುವುದು ಇಲ್ಲದಿದ್ದರೆ, ಓದುಗರು ಸಹ ಬಹಳಷ್ಟು ಕಳೆದುಕೊಳ್ಳುತ್ತಾರೆ. ಅವುಗಳಲ್ಲಿ ನಾನು ಮೇಲೆ ಪ್ರಸ್ತಾಪಿಸಿದ ಪುಸ್ತಕಗಳೆಲ್ಲವೂ ಸೇರಿವೆ.

ಹಾಗಂತ ಅರ್ಜುನ್‌ ಇನ್ನೂ ಎರಡು ಪುಸ್ತಕಗಳನ್ನು ಬರೆದಿದ್ದಾನೆ. ʻಅವಳು…ಬದುಕು ಕಲಿಸಿದವಳು,ʼ ಒಂದು ಮುದ್ದಾದ ಲವ್‌ ಸ್ಟೋರಿ. ಕಾಲೇಜು ದಿನಗಳಲ್ಲಿ ಆರಂಭವಾಗಿ, ಒಂದೇ
ಹುಡುಗಿಯ ಪ್ರೇಮ ಪಾಶದಲ್ಲಿ ಎರಡು ಸಲ ಬಿದ್ದು, ಎರಡು ಸಲವೂ ಪಿಗ್ಗಿ ಬೀಳುವ ಹುಡುಗನೊಬ್ಬನ ಕಥೆ. ತುಂಬಾ ಇಷ್ಟವಾಯಿತು.

ಅದರ ಮುಂದುವರೆದ ಭಾಗದಂತಿರುವ ʻಆಟಗಾರʼಓದಲು ಕುಳಿತಾಗ, ಅದೇ ಮುದ ನೀಡಿತ್ತು. ಆದರೆ, ಅರ್ಧದಲ್ಲೇ ಹಿಡಿದು ನಿಲ್ಲಿಸಿದ ಹಾಗಾಯಿತು. ಊರಿಗೆ ಹಿಂದುರುಗಿದ ಹುಡುಗನ ಸುತ್ತ ರಾಜಕೀಯ ಚದುರಂಗ ಆರಂಭವಾಗುತ್ತದೆ. ಇಲ್ಲಿ ಅರ್ಜುನ್‌ ಗಮನಿಸದ ಕೆಲವು ವಿಷಯಗಳಿವೆ.

ಮೊದಲನೆಯದಾಗಿ, ಅರ್ಜುನ್‌ ಬರೆದಿರುವ ಸಾಮಾಜಿಕ ವ್ಯವಸ್ಥೆ ಎರಡು-ಮೂರು ದಶಕಗಳಿಗಿಂತ ಹಳೆಯದು. ಎರಡನೆಯದಾಗಿ, ರಾಜಕೀಯ ಎನ್ನುವುದು ಮಲೆನಾಡಿನ ಜೀವನದ ಪ್ರಮುಖ ಅಂಗವಲ್ಲ ಮತ್ತು ಬಯಲು ಸೀಮೆ, ಉತ್ತರ ಕರ್ನಾಟಕದ ಊಳಿಗಮಾನ್ಯ ಪದ್ದತಿಗಿಂತ ಭಿನ್ನವಾದದ್ದು. ರಾಜಕೀಯದ ಬಗ್ಗೆ ಬರೆಯುವ ಮುನ್ನ, ಬಹಳಷ್ಟು ತಿಳಿದುಕೊಳ್ಳಬೇಕಿದೆ.
ಹಾಗೆಯೇ, ಮಲೆನಾಡಿನಲ್ಲಿ ಮನೆಹಾಳು ಮಾಡುವ ಎಷ್ಟೋ ವಿಷಯಗಳು ಇವೆ. ಆ ವಿಷಯಗಳಲ್ಲೊಂದನ್ನು ಆರಿಸಿಕೊಳ್ಳಬಹುದಿತ್ತು ಎಂದು ನನಗನ್ನಿಸಿತು. ಆದರೆ, ಅದು ತೀರ ನನ್ನ ವೈಯಕ್ತಿಕ ಅಭಿಪ್ರಾಯ.

ಇತ್ತೀಚೆಗೆ, ಮೂಡಿಗೆರೆ ಭಾಗದ ಮಲೆನಾಡಿನಲ್ಲಿ ಬಹಳಷ್ಟು ಸಾಹಿತ್ಯ ಕೃಷಿ ನಡೆಯುತ್ತಿದೆ. ಅದಕ್ಕೆ ಬುನಾದಿ ಹಾಕಿದವರು ತೇಜಸ್ವಿ ಎನ್ನುವುದು ನನ್ನ ಅಭಿಪ್ರಾಯ. ಮೂಡಿಗೆರೆ ಸುತ್ತ ಮುತ್ತಲಂತೂ, ತೇಜಸ್ವಿ ಸಾಹಿತ್ಯ ಎನ್ನುವುದೊಂದು ಸಮೂಹ ಸನ್ನಿಯೋ ಎಂದೂ ಭಾಸವಾಗುತ್ತದೆ. ಬಹಳಷ್ಟು ಜನರ ಬರವಣಿಗೆಯ ಮೇಲೆ ತೇಜಸ್ವಿಯವರ ಪ್ರಭಾವ ಎದ್ದು ಕಾಣುತ್ತಿರುತ್ತದೆ.

ನನ್ನ ಮುಂದಿನ ಪುಸ್ತಕಕ್ಕೆ ಮುನ್ನುಡಿಯಲ್ಲಿ ಜೋಗಿಯವರು, ವಿನಯ್‌ ಬರಹದಲ್ಲಿ ತೇಜಸ್ವಿಯವರ ಪ್ರಭಾವ ಕಾಣುತ್ತದೆ, ಎಂದು ಬರೆದಿದ್ದಾರೆ. ಅದನ್ನು ಓದಿದ ತಕ್ಷಣ ನನಗೆ ನೆನಪಾಗಿದ್ದು, ಕುಬಿ ಮತ್ತು ಇಯಾಲ ಕಥೆಯ ಕೊನೆಯ ವಾಕ್ಯ. ʻಅದು, ಇತಿಹಾಸದ ವ್ಯಂಗ್ಯ ಮತ್ತು ಕಾಲಪುರುಷನ ಅಪಹಾಸ್ಯ.ʼ

ತೇಜಸ್ವಿಯವರು ಮೂಡಿಗೆರೆ ಸಾಹಿತ್ಯ ಕೃಷಿ ಇತಿಹಾಸಕ್ಕೆ ಬುನಾದಿ ಹಾಕಿದವರು. ಅವರು ವಿಭಿನ್ನವಾಗಿ ಯೋಚಿಸುವುದು ಮತ್ತು ವಿಭಿನ್ನವಾಗಿ ಬರೆಯುವುದಕ್ಕೆ ತಮ್ಮ ಜೀವನವನ್ನೇ ಮೀಸಲಿಟ್ಟರು. ಬೇರೆಯವರಿಂದಲೂ ಅವರು ಅದನ್ನೇ ನಿರೀಕ್ಷಿಸುತ್ತಿದ್ದರು. ಆದರೆ, ನಾವು ಅವರಂತೆಯೇ ಯೋಚಿಸಲಾರಂಭಿಸಿದರೆ, ಅದು ತೇಜಸ್ವಿಯವರು ಆರಂಭಿಸಿದ ವಿಭಿನ್ನ ಸಾಹಿತ್ಯ ಚಿಂತನೆಗೆ ವ್ಯಂಗ್ಯ. ಅವರ ಬರವಣಿಗೆಯ ಪ್ರಭಾವವನ್ನು ನಮ್ಮ ಬರವಣಿಗೆಯಲ್ಲಿ ಅಳವಡಿಸಿಕೊಂಡರೆ, ನಾವು ಆ ಕಾಲಪುರುಷನಿಗೆ ಮಾಡುವ ಅಪಹಾಸ್ಯವಲ್ಲದೆ ಮತ್ತೇನು?
ಆದರೆ, ಅರ್ಜುನ್‌ ಬರವಣಿಗೆಯಲ್ಲಿ ತೇಜಸ್ವಿಯವರ ಪ್ರಭಾವ ನನಗೆಲ್ಲೂ ಕಾಣಲಿಲ್ಲ. ಹಾಗಾಗಿ, ಈ ಹುಡುಗನ ಬಗ್ಗೆ ಹೆಮ್ಮೆ ಎನಿಸಿತು. ಈ ಹುಡುಗ ಬಹಳಷ್ಟು ಹಾದಿ ಕ್ರಮಿಸಲಿದ್ದಾನೆ ಎಂದೂ ಅನ್ನಿಸಿತು……


  • ಮಾಕೋನಹಳ್ಳಿ ವಿನಯ್‌ ಮಾಧವ್ (ಪತ್ರಕರ್ತರು,ಲೇಖಕರು, ವಿಮರ್ಶಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW