ಏಷ್ಯಾದ ಅತಿ ದೊಡ್ಡ ಭಗವದ್ಗೀತಾ ಜ್ಞಾನಲೋಕ – ಡಾ. ಪ್ರಕಾಶ ಬಾರ್ಕಿ

ಕೊರೋನಾ ಹಾವಳಿಯಿಟ್ಟ ಎರಡನೆಯ ಅಲೆಯ ನಂತರ ಹುಬ್ಬಳ್ಳಿಗೆ ಪಾದ ಬೆಳೆಸಿರಲಿಲ್ಲ, ಮಲೆನಾಡು, ಕರಾವಳಿ ಭಾಗ, ಉತ್ತರ ಪ್ರದೇಶ, ಮಧ್ಯಪ್ರದೇಶ ಮಹಾರಾಷ್ಟ್ರ ತಿರುಗಿದ್ದರೂ… ಹುಬ್ಬಳ್ಳಿಗೆ ಹೊರಡುವ ಗಳಿಗೆಯೇ ಕೂಡಿ ಬಂದಿರಲಿಲ್ಲ. ಅಂತೂ ಇಂತೂ ಈ ರವಿವಾರ (18/09/2022) ಹೆಗಲಿಗೆ ಬ್ಯಾಗೇರಿಸಿದೆ. – ಪ್ರಕಾಶ ಬಾರ್ಕಿ , ಮುಂದೆ ಓದಿ…

ಅಮೂಲ್ಯ 8 ವಸಂತಗಳ ಕಾಲ ತನ್ನೊಡಲಲ್ಲಿ ನನ್ನ ಸಾಕಿಕೊಂಡು ಪದವಿ ನೀಡಿ, ಸಹಸ್ರ ಜೀವಗಳ ನಂಟು ನನಗಂಟಿಸಿ, ಲೆಕ್ಕಕ್ಕೆ ಸಿಗದಷ್ಟೂ ಸಿಹಿ- ಕಹಿ ನೆನಪುಗಳನ್ನ ಮನ ತುಂಬಿದ ಊರು ಹುಬ್ಬಳ್ಳಿ. ವಾಣಿಜ್ಯ ನಗರಿ ಅಲಿಯಾಸ್ ಛೋಟಾ ಬಾಂಬೆ ಎಂದೆ ಅಡ್ಡುದ್ದ ಕರೆಸಿಕೊಂಡಿದ್ದ ಊರು ನಿಧಾನವಾಗಿ ಆಧ್ಯಾತ್ಮ ಜಗತ್ತಿನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಅದೂ #ಏಷ್ಯಾದಲ್ಲಿಯೆ_ಅತಿ_ದೊಡ್ಡ_ಭಗವದ್ಗೀತಾ_ಜ್ಞಾನಲೋಕ_ಮ್ಯೂಸಿಯಂ ಹೊಂದುವ ಮೂಲಕ. ಪ್ರಪಂಚದಲ್ಲಿ ಭಾರತದ ಆಧ್ಯಾತ್ಮಿಕ ಮಹಿಮೆಯನ್ನು ಮತ್ತಷ್ಟೂ ಎತ್ತರಕ್ಕೇರಿಸಿದೆ.
“ಚೆನ್ನಮ್ಮ ಸರ್ಕಲ್'”ನಿಂದ “ಚಿಗರಿ” ಬಸ್ಸೇರಿ ಹೊರಟಿದ್ದು “ಭೈರಿದೇವರಕೊಪ್ಪ”ಕ್ಕೆ. ಅಲ್ಲಿಂದ ಸುಮಾರು 1.5 ಕಿ.ಮೀ (ಗಾಮನಗಟ್ಟಿ ರೋಡ್) ದೂರಕ್ಕೆ “ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂ” ಇರೋದು. ಅತ್ತಕಡೆಗೆ ಯಾವ ಬಸ್ಸಿನ ಸುಳಿದಾಟವಿಲ್ಲ, ಉದ್ದನೆಯ ಡಾಂಬರು ರೋಡು, ಚರ್ಮ ಚುರುಗುಟ್ಟುವ ಬಿಸಿಲು ಹೊರತುಪಡಿಸಿ ಆವಾಗಾವಾಗ ಒಂದೊಂದು ಮೋಟಾರು ಸೈಕಲ್’ಗಳು, ಆಟೋಗಳು ಉರುಳುತ್ತಾ ಓಡುತ್ತಿದ್ದವು. ನಡಿಗೆಗೆ ಜೋತು ಬಿದ್ದೆ. 1.5 ಕಿ.ಮೀ ನಡೆದ ನಂತರ ರಸ್ತೆಯ ಪಕ್ಕ ಮಂಡಿಯೂರಿ ಕೂತಿದ್ದ ನಾಮ ಫಲಕ ಕಣ್ಸೆಳೆಯಿತು.

This slideshow requires JavaScript.

 

ರಸ್ತೆಯಿಂದ 100 ಮೀಟರ್ ಒಳಗಿನ ಬೃಹತ್ ಗಗನಚುಂಬಿ ಕಟ್ಟಡಕ್ಕೆ ಸ್ವಾಗತಿಸಲು ಮನಸೆಳೆಯುವ “ಮಹಾದ್ವಾರ”ವಿದೆ. “ಭಗವದ್ಗೀತಾ ಜ್ಞಾನ ದಿವ್ಯ ಕಲಾಲೋಕ” ಎಂಬ ನಾಮ ಹೊತ್ತು. ದೈತ್ಯಾಕಾರದ ಕಬ್ಬಿಣ ಸಲಾಕೆಯ ಗೇಟನ್ನು ದೂಡಿ ಒಳ ನಡೆದರೆ ಐದು ಎಕರೆ ವಿಶಾಲವಾದ ಭವ್ಯ ನಿಸರ್ಗ ಸೌಂದರ್ಯ ಕೈ ಅಗಲಿಸಿ ತನ್ನ ತೊಳು ತೆಕ್ಕೆಗೆ ಬರಸೆಳೆದುಕೊಳ್ಳುತ್ತೆ. ದಿವ್ಯ ಮೌನ ಹೊದ್ದು, ಹೊರಜಗತ್ತಿನ ಜಂಜಡಕ್ಕೆ ಸಿಲುಕಿಕೊಳ್ಳದೆ ದೂರದಲ್ಲಿ ಏಕಾಂತ ಧ್ಯಾನದಲ್ಲಿರುವ ಯೋಗಿಯಂತೆ ಭಾಸವಾಗುತ್ತೆ. ಅರಮನೆಗೆ ಸೆಡ್ಡು ಹೊಡೆಯುವ ಶ್ವೇತವರ್ಣದ ಎರಡಂತಸ್ತಿನ ಮೋಹಕ ರೂಪ ತಾಳಿದ ಬೃಹತ್ ಕಟ್ಟಡಗಳು ಮೋಡಗಳನ್ನು ಚುಂಬಸಲು ತುದಿಗಾಲೂರಿ ನಿಂತಂತಿವೆ.

ವಾಹನಗಳನ್ನು ನಿಲ್ಲಿಸಲು ಸಾಕಷ್ಟು ವಿಶಾಲ ಬಯಲಿದೆ. ಸ್ವಾಗತ ಕೋರುವ ಹಸಿರುಟ್ಟ ಲಲನೆಯರಂತೆ ಸಾಲುಗಟ್ಟಿದ ತೆಂಗಿನ ಮರಗಳು, ಹೂವರಳಿಸಿಕೊಂಡ ಸಸ್ಯಗಳೂ ಇವೆ. ಅಲ್ಲಲ್ಲಿ ಶ್ವೇತ ವಸ್ತ್ರಧಾರಿ “ಬೃಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ” Brahma Kumaris ಸ್ವಯಂಸೇವಕರು “ಓಂ ಶಾಂತಿ” ಎಂದು ಕೈ ಜೋಡಿಸುತ್ತಿದ್ದರು. ಇಲ್ಲಿನ ಕಟ್ಟಡದೊಳಗೆ “ಮ್ಯೂಸಿಯಂ” ಇರುವುದು.

ಮ್ಯೂಸಿಯಂ ಒಳಗೆ ಕಾಲಿಟ್ಟರೆ ಆಧ್ಯಾತ್ಮಿಕ ಜೀವನ ಉಣಬಡಿಸುವ ವರ್ಣರಂಜಿತ ಚಿತ್ರ,ಆಳವಾದ ಅರ್ಥ ಗ್ರಹಿಸಲು ನೂರಾರು ಪ್ರತಿಮೆಗಳ ಜೊತೆ ಭಗವದ್ಗೀತಾ ಶ್ಲೋಕಗಳು, ಭಾವಾರ್ಥ, ವಚನಗಳು, ಉಕ್ತಿಗಳನ್ನು ಪ್ರದರ್ಶಿಸಲಾಗಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಪುರಾಣಗಳು, ಸನಾತನ ಧರ್ಮ, ವಿವಿಧ ಧರ್ಮಗ್ರಂಥಗಳ ಸಾರದೊಂದಿಗೆ ಮನುಷ್ಯನ ಬದುಕನ್ನು ಸಮೀಕರಿಸಲಾಗಿದೆ.

ಮ್ಯೂಸಿಯಂನ್ನು 1)ಜ್ಞಾನಲೋಕ, 2)ಧ್ಯಾನಲೋಕ, 3)ದೇವಲೋಕ ಎಂದು ವಿಂಗಡಿಸಲಾಗಿದೆ. #ಜ್ಞಾನಲೋಕದಲ್ಲಿ ಆತ್ಮ ಸಾಕ್ಷಾತ್ಕರಣದ ಮಾಹಿತಿ ಇದ್ದರೆ, #ಧ್ಯಾನಲೋಕದಲ್ಲಿ ಪರಮಾತ್ಮ, ಯೋಗದ ಚಿತ್ರಣ ಹೊಂದಿದೆ. #ದೇವಲೋಕ ವಿಭಾಗ ಕಲಿಯುಗ ಅಂತ್ಯದ ನಂತರ ಬರಲಿರುವ ಸತ್ಯಯುಗದಲ್ಲಿ “ಸ್ವರ್ಣಿಮ ಭಾರತದ ಪರಿಕಲ್ಪನೆ” ಏನಾಗಿರುತ್ತದೆ, ವಿಶ್ವಕ್ಕೆ ಹೇಗೆ ಭಾರತ ಮಾರ್ಗದರ್ಶನವಾಗಬಲ್ಲದು ಎಂಬುದರ ಮಾಹಿತಿ ಮನ ತಟ್ಟುವಂತಿದೆ.

“ಮ್ಯೂಸಿಯಂ” ನಮ್ಮ ಬದುಕಿನ ನಗ್ನ ಚಿತ್ರಣವನ್ನು ತೆರೆದಿಟ್ಟು ಚಿಂತನೆಯ ಕಿಡಿ ಹೊತ್ತಿಸುತ್ತದೆ.

ಭಗವದ್ಗೀತೆಯ ಸಾರದ ಆಧಾರದಲ್ಲೇ ವಿಶ್ವವನ್ನು ವ್ಯಾಖ್ಯಾನಿಸುವ, ನಿರಾಕಾರ, ಪರಂಧಾಮ ಪರಮಾತ್ಮನ ಧ್ಯಾನದೊಳಗೆ ಕರೆದೊಯ್ಯುವ, ಬದುಕಿನ ಸಾಕ್ಷಾತ್ಕಾರದ ಚಿತ್ರಣ ಕಣ್ಣ ಮುಂದೆ ನಿಲ್ಲಿಸುವ 114 ಕೋಣೆಗಳಿರುವ “ಜ್ಞಾನ ಲೋಕ”ವಿದು.

ವಿಜ್ಞಾನ, ತಂತ್ರಜ್ಞಾನ ದುರ್ಬಳಕೆಯಿಂದ ಆಗುವ ಅಪಾಯಗಳನ್ನು ಪ್ರಚುರಪಡಿಸುತ್ತಾ, ಒಂದೇ ಕಡೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನವನ್ನ ಮಾಡಿಸುತ್ತದೆ. ಸತ್ಯಯುಗ ಆರಂಭದ ನಂತರದಲ್ಲಿ ಸ್ವರ್ಣಿಮ ಭಾರತದ ಪರಿಕಲ್ಪನೆ ಹೇಗಿರಲಿದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವೈಭವೋಪೇತವಾಗಿ ಪ್ರಸ್ತುತಪಡಿಸಲಾಗಿದೆ.

ಮ್ಯೂಸಿಯಂ 114 ಪ್ರತ್ಯೇಕ ಕೊಠಡಿಗಳನ್ನ ಹೊಂದಿದ್ದು, ಪ್ರತಿ ಕೊಠಡಿಗಳಲ್ಲೂ ಭಗವದ್ಗೀತೆಯ ಬೇರೆ ಬೇರೆ ಶ್ಲೋಕಗಳನ್ನು ವಿವಿಧ ಬಗೆಯಲ್ಲಿ ವಿವರಿಸುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 1,500 ಜನರು ಆಸೀನರಾಗಬಹುದಾದ ಸಭಾಭವನ, 100 ಜನರು ಆಸೀನರಾಗಬಹುದಾದ ಪ್ರಸಾದ ನಿಲಯ, 200 ಜನರಿಗೆ ಅನುಕೂಲವಾಗುವಂತೆ ವಸತಿ ವ್ಯವಸ್ಥೆ, ಸ್ಟುಡಿಯೋ, ಹೋಮ್‌ಥೇಟರ್‌ ಇನ್ನಿತರೆ ವ್ಯವಸ್ಥೆ ಹೊಂದಿದೆ.

ಭಗವದ್ಗೀತಾ ಜ್ಞಾನಲೋಕದ ವೀಕ್ಷಣೆ ಸಂಪೂರ್ಣ ಉಚಿತವಾಗಿದ್ದು, ಬೆಳಿಗ್ಗೆ 10 ರಿಂದ ಸಾಯಂಕಾಲ 6 ರವರೆಗೆ ವೀಕ್ಷಿಸಬಹುದಾಗಿದೆ. ಭವನದಲ್ಲಿರುವ ನಾಲ್ಕೈದು ಸೇವಕರು ಮಾಹಿತಿ ನೀಡುತ್ತಾರೆ. ಧ್ವನಿಮುದ್ರಿತ ವ್ಯವಸ್ಥೆಯಡಿಯಲ್ಲೂ ವೀಕ್ಷಣೆ ಮಾಡಬಹುದಾಗಿದೆ.

ಭಗವದ್ಗೀತಾ ಮ್ಯೂಸಿಯಂ ಸುಮಾರು 15 ವರ್ಷಗಳ ಹಲವರ ಸಾರ್ಥಕ ಶ್ರಮ, ದಾನಿಗಳ ನೆರವಿನ ಪ್ರತೀಕ. ರಾಜಋಷಿ ಬ್ರಹ್ಮಕುಮಾರ ಬಸವರಾಜ ಅವರ ಮಾರ್ಗದರ್ಶನದಲ್ಲಿ ಅನೇಕ ಸೇವಾಕರ್ತರು, ದಾನಿಗಳು ಸೇರಿ ಭವ್ಯ ತಾಣ ನಿರ್ಮಿಸಲು ಸಾಧ್ಯವಾಗಿದೆ. ಭವಿಷ್ಯದಲ್ಲಿ ಇದೊಂದು ಪ್ರಮುಖ ಆಕರ್ಷಣೀಯ ಹಾಗೂ ಧಾರ್ಮಿಕ ಪ್ರವಾಸಿ ತಾಣ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಆಧ್ಯಾತ್ಮಿಕ ಲೋಕದ ಝಲಕ್ ಅನುಭವಿಸಲು ಒಮ್ಮೆ ಭೇಟಿ ನೀಡಿ, ಸುಮಾರು 2 ತಾಸಾದರೂ ಮೀಸಲಿಡಿ. ಅವಸರವಸರವಾಗಿ ಕಣ್ಣಾಡಿಸಲು ಇದು ವಸ್ತು ಪ್ರದರ್ಶನವಲ್ಲ.

ವಿಳಾಸ :

Brahma Kumaris Hubballi Bhagavadgita Gnanaloka
BLOCK NO: 351, BHAGAVADGITA GNANALOKA, Gamanagatti Rd, PO:, Bairidevarkoppa, Hubballi, Karnataka 580025
087621 65218
https://maps.app.goo.gl/N6Lis4DwjtsXcGeA7


  • ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW