ಶಕ್ತಿಯಾಗು ಬದುಕಿಗೆಂದು ನಿನ್ನ ಬೇಡುವೆ ದೇವ ಗಣಪತಿ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಭಾವದುಡುಗೆ ನೀನು ನನಗೆ
ಮುದ್ದು ಗಣಪತಿ
ಭಕ್ತಿ ತೊಡುಗೆ ನೀನು ಎನಗೆ
ದೇವ ಗಣಪತಿ
ಶಕ್ತಿಯಾಗು ಬದುಕಿಗೆಂದು
ನಿನ್ನ ಬೇಡುವೆ
ನಿನ್ನಪಾರ ಮಹಿಮೆಯನ್ನು
ಹಾಡಿ ಹೊಗಳುವೆ
ಗಿರಿಜೆಯ ಕಂದನೆ
ಪರಶಿವನ ನಂದನನೆ
ಸ್ಕಂದ ಪ್ರಿಯ ಸಹೋದರ
ನೀ ಮಹೋದರನೆ
ಶೂರ್ಪಕರ್ಣನೆ,
ವಕ್ತ್ರದಂತನೆ,
ಆನೆಮುಖನೆ
ನೀ ಗಣಾಧಿಪನೆ
ಪ್ರಥಮ ವಂದಿತ,
ಲೋಕಪ್ರಿಯನೆ
ಹುಲು ಗರಿಕೆಗೊಲಿವ
ಸರಳರಲಿ ಸರಳನೆ
ಮೋದಕ ಹಸ್ತ
ದೇವಗಣ ಪ್ರಿಯನೆ
ಭಕ್ತಹೃತ್ಕಮಲವಾಸಿ
ಮೃಣ್ಮಯ ಮೂರುತಿಯೆ
ಚಿನ್ಮಯ ರೂಪ
ಮನೋಹರ ಶುಭಗಾತ್ರ
ನೆನೆದೊಡೆ ನಿನ್ನನು
ಇಲ್ಲವು ದುರ್ಗತಿ
ನಮಿಸುವೆ ಗಣಪತಿ
ನಿನ್ನಯ ಪಾದಕೆ
ನಡೆಸೆನ್ನನು ಕೈಹಿಡಿದು
ಕರುಣೆಯಲಿ ಭವತೀರಕೆ..
- ಶಿವದೇವಿ ಅವನೀಶಚಂದ್ರ – ಕವಿಯತ್ರಿ, ಶಿಕ್ಷಕರು, ಕೊಡುಗು
