ವಿಶ್ವ ಅಪ್ಪಂದಿರ ದಿನವನ್ನು ಜೂನ್ ೧೫ ರಂದು ಆಚರಿಸಲಾಗುತ್ತದೆ. ಅಪ್ಪನ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಕನ್ನಡಮ್ಮನ ತೇರು ಬಳಗದ ಸದಸ್ಯರಿಂದ ಹನಿಗವನಗಳು. ತಪ್ಪದೆ ಮುಂದೆ ಓದಿ…
ಆಗ ಅರಿವಿರಲಿಲ್ಲ
ಅವನ ಮಹತ್ವ
ಅವನು ನಮಗೇನೆಂದು
ಅರಿವಾಯಿತು
ಅವನಿಲ್ಲದಾಗ
ಅವನೆ ನಮಗೆಲ್ಲವೆಂದು.
- ಚನ್ನಕೇಶವ ಜಿ ಲಾಳನಕಟ್ಟೆ.
***
ಅಪ್ಪನೆಂಬುವವ
ಬರೀ ಆಕಾಶವಲ್ಲ
ಅದಕ್ಕಿಂತಲೂ ಮಿಗಿಲು
ಕಷ್ಟ ಸುಖಗಳಲ್ಲಿ
ಸದ್ದಿಲ್ಲದಂತೆಯೇ
ನೀಡುವನು ತನ್ನ ಹೆಗಲು.
- ವಿಜಯಲಕ್ಷ್ಮಿ ಎಸ್
***
ಕೈಹಿಡಿದು ನಡೆದು
ಹೆಗಲೇರಿ ನಲಿದಾಗ
ನಿನ್ನುಸಿರಲ್ಲಿ ನೆಮ್ಮದಿಯ ಜೇನು
ಹಗಲಿರುಳು ಪೊರೆವ
ಬುವಿ ಕಾಯೊ ಮುಗಿಲು
ತಲೆ ಮೇಲೆ ಇರುವಂತೆ ಬಾನು.
- ಶಕುಂತಲ ಪಿ ಆಚಾರ್, ಚಿತ್ರದುರ್ಗ
***
ಮಲಗಲು
ಬೇಕು ಅಪ್ಪನ
ತೋಳು ಮತ್ತು ಹೆಗಲು
ಸಂಸಾರದ
ಬಂಡಿ ಎಳೆಯಲು
ಪಡುವನು ಕಷ್ಟದ ಬಾಳು.
- ಜಯಶ್ರೀ ಆಲೂರು
***
ಮನೆ ಯಜಮಾನ
ಮನೆಗವನು ಪ್ರಾಣ
ಮನೆಯೇ ಅವನ ತ್ರಾಣ
ಕುಟುಂಬಕಾಗಿ ಸದಾ
ದುಡಿಯುವ ಅಪ್ಪನವ
ಏಳ್ಗೆಗಾಗಿ ತೊಟ್ಟಿಹನು ಪಣ.
- ವಿನಯ
***
ಮೊದಮೊದಲು
ನೀನೆನಗೆ
ಅರ್ಥವಾಗಿರಲಿಲ್ಲ ಅಪ್ಪ
ನಿನ್ನ ಕಾಳಜಿ, ಶಿಸ್ತು
ನಾ ಅಪ್ಪನಾದಾಗ
ಸರಿಯಾಗಿ ಅರ್ಥವಾಯಿತಪ್ಪ.
- ಕೃಷ್ಣಕವಿ
***
ಮಡದಿ ಮಕ್ಕಳ
ಸುಖದ ಬಾಳಿಗೆ
ಕಷ್ಟದಿ ಅಪ್ಪ ದುಡಿವನು
ಅವರ ಸಂತಸ
ತನ್ನ ತೋಷವು
ಎನುತ ಜೀವನ ಕಳೆವನು.
- ಗೀತಾ ಶಶಿಭೂಷಣ್, ಬೆಂಗಳೂರು
***
ಅಪ್ಪ ಮೇಟಿ ಕಂಬ
ಅಮ್ಮಗಾಣದೆತ್ತು
ಜನ್ಮನೀಡಿದ ಪುಣ್ಯಶಾಲಿ
ಎಂಟು ದಶಕಬಾಳಿ
ನೋವು ನಲಿವ ತಾಳಿ
ತಪ್ಪುಒಪ್ಪದೆ ಹಾಕಿದ ಬೇಲಿ.
- ನಾಗೇಶ ಅಣ್ವೇಕರ
***
ಬೆವರ ಹನಿಯ ಸುರಿಸಿ
ದುಡಿದು ಸಾಕುವ
ಮೃದು ಮನದ ಒಡೆಯನು ಅಪ್ಪ
ಅವನ ಶ್ರಮ
ಪ್ರೀತಿಯನರಿಯದೆ
ಜರಿದು ದೂರಕಿಟ್ಟವ ನಿಜಕೂ ಬೆಪ್ಪ.
- ಕೆ ಎನ್ ರೀನಾ- ಮೈಸೂರು
***
ಬೇಡಿದ್ದು ನೀಡುವ
ಕಾಡಲು ಸಹಿಸುವ
ಮೋಡಿಯ ಮಾಡುವ ನನ್ನಪ್ಪ
ಮಕ್ಕಳ ಬಾಳು
ಸಕ್ಕರೆ ಹೋಳಿಗೆ
ಮಾಡಲು ಶ್ರಮಿಸಿದ ದೇವರಪ್ಪ.
- ಸುನಂದ ತುಪ್ಪದ್
***
ಹಗಲಿರುಳು ಶ್ರಮಿಸಿಹನು
ಹೆಗಲ ಮೇಲೆ ಹೊತ್ತು
ಬಗಲಲೊಂದು ಪಾಟೀ ಚೀಲ
ಹಗಲೊಂದು ದುಡಿತ
ಇರುಳೊಂದೆಡೆ ದುಡಿವ
ಮಕ್ಕಳಿಗಾಗಿ ಪಡುವ ಪಡಿಪಾಟಲ.
- ಅನಿತಾನಿತಾ
***
ಅಪ್ಪನೆಂದರೆ
ನಲಿವು ಗೆಲುವು
ಒಲವುಗಳ ಸವಿ ಭಾವ
ಸೋಲು ನೋವು
ಬದುಕಿನುದ್ದಕೂ
ಆಸರೆಯ ಏಕೈಕ ಜೀವ.
- ಮಹಾಲಕ್ಷ್ಮಿ ಹೆಗಡೆ – ಸಿರ್ಸಿ (ಉ.ಕ)
***
ನಗುವ ಮನೆಯೊಳಗಿಟ್ಟು
ಬಿಗುವ ಮೊಗದಲ್ಲಿಟ್ಟು
ಜಗವ ಗೆಲ್ಲುವ ಭರವಸೆಯೇ ಅಪ್ಪ
ಕನಸುಗಳ ಕೈಬಿಟ್ಟು
ಕಂದನೆದೆಯಲಿ ನೆಟ್ಟು
ಕಾಪಿಟ್ಟು ಕಡಲಲ್ಲಿ ತೇಲಿಸುವ ತೆಪ್ಪ.
- ಮಹಾಬಲೇಶ್ವರ ನಾಯಕ
***
ಅಪ್ಪನೆಂದರೆ ಬದುಕು
ಅಪ್ಪನೆಂದರೆ ಬೆಳಕು
ಅಪ್ಪನಿಂದಲೇ ಜಗದ ಸಕಲವು
ಅಪ್ಪನೆಂದರೆ ಸಂರಕ್ಷಣೆ
ಮಕ್ಕಳ ಬೆಳವಣಿಗೆಗೆ
ಅಪ್ಪನೇ ಎಲ್ಲದಕ್ಕೂ ಕಾರಣನು.
- ರೂಪಾ ಮಧುಸೂಧನ್ ಜೋಶಿ
***
ತೊದಲ ಮಾತಿಗೆ
ಮೊದಲ ಹೆಜ್ಜೆಗೆ
ಕೈಹಿಡಿದು ನಡೆಸಿದ ತಂದೆ
ಹಸುಗೂಸಿನ
ನಸುನಗುವಿನ
ಸಿಹಿ ನೆನಪನ್ನು ತಂದೆ.
- ತಾನಾಜಿ
***
ತನುಮನದಿ ನಮ್ಮ ಕಾಳಜಿ ಹೊತ್ತು
ದಿನದಿನವು ಉಸಿರಾಡಿದೆ ಹೆತ್ತು
ಕನಸುಗಳ ನನಸಾಗಿಸಿದೆ ಹರಸಿ ಭರವಸೆಯಿತ್ತು
ಅನಿಸಿಕೆ ಜಗದಲನಿಸಲಿಲ್ಲ ಕುತ್ತು
ಎಣಿಸದೆ ಉಣಿಸಿದೆ ಅನ್ನದ ತುತ್ತು
ನಿನದೆ ಹೊಣೆ ದೇವನೀ ಹಾರೈಸೆ ಸದ್ಭುದ್ಧಿಯನಿತ್ತು.
- ಮಂಜುಳಾ ಮೂರ್ತಿ
ಅಂಜನಾಪುರ, ಬೆಂಗಳೂರು.
***
ಅಪ್ಪನೋ
ಎದುರಲಿ
ಹೊಗಳಲು ಬಹಳ ಹಿಂದೆ
ಗಪ್ಪೆನ್ನದೆ
ಸಂಸಾರ ಭಾರ
ಹೊತ್ತು ನಡೆವನು ಮುಂದೆ.
- ಶಾರದಾ ಮೊಳೆಯಾರ್
***
ಅಪ್ಪನೆಂದರೆ ಅವರು
ಅದ್ಭುತ ವ್ಯಕ್ತಿ
ಮಕ್ಕಳಿಗು ಬರಬೇಕುಅವರ ಶಕ್ತಿ
ಇರಬೇಕು ಅವರಲ್ಲಿ ಭಕ್ತಿ
ಅದರಿಂದಲೇ ಮಕ್ಕಳಿಗೆ
ಸಿಗುವುದು ಎಂದಿಗೂ ಮುಕ್ತಿ.
- ಸುಶೀಲಾ ಯಸ್ ಯನ್ ಭಟ್
***
ಮಮತಾಮಯಿ
ಸ್ನೇಹಮಯಿ
ಅಪ್ಪನೆ ಮಗುವಿನ ಸರ್ವಸ್ವವಾಗಿರುವನು
ಬೇಕು ಬೇಡಗಳ
ಪೂರೈಸುತ
ಹರ್ಷವನ್ನು ನೀಡುವವನು.
- ಹೇಮಾವತಿ ಭಟ್ – ಯಲ್ಲಾಪುರ
***
ಸ್ವಂತಿಕೆಯ ತೊರೆದು
ಸರ್ವಸ್ವವೆನ್ನುತ
ಕ್ಷಮಿಸುವನು ಮಕ್ಕಳ ತಪ್ಪ
ಬದುಕ ನೀಡಿ
ಕಣ್ಣ ರೆಪ್ಪೆಯಂತೆ
ಕಾಪಾಡುವ ಕರುಣಾಮೂರ್ತಿ ಅಪ್ಪ.
- ಎಸ್ ಎಂ ಹೆಗಡೆ. ಮು.ಶಿ.
***
ಅಪ್ಪನು
ತನ್ನ ಮಕ್ಕಳಿಗಾಗಿ
ಜೀವವ ತೇಯುತ ಸಲಹುವನು
ಮುಪ್ಪಲು
ಎಲ್ಲರ ಏಳಿಗೆಗಾಗಿ
ನೋವನು ನುಂಗಿ ದುಡಿಯುವನು.
- ಶ್ರೀ ಲಕ್ಷ್ಮಿ ಶ್ರೀನಾಥ್
***
ಧೃತರಾಷ್ಟ್ರನಲ್ಲ
ದುಷ್ಯಂತನೂ ಅಲ್ಲ
ಲಕ್ಷ್ಯ ನಿರ್ಲಕ್ಷ್ಯ ಅತಿಯಾಗಿಲ್ಲ
ಒಮ್ಮೆ ನಲ್ಮೆ ತೋರುತ
ಮತ್ತೊಮ್ಮೆ ಬೈಯುತ
ನನ್ನಪ್ಪ ಬದುಕ ತೋರಿದನಲ್ಲ.
***
- ವಿಜಯಲಕ್ಷ್ಮಿ ಮಳಿಯೆ
ಜನುಮದಾತರು
ಪರಮಪ್ರೀತರು
ಪರರ ನಿಂದೆ ಮಾಡದವರು
ಜ್ಞಾನದಾತರು
ಸರಳಸಜ್ಜನರು
ಬದುಕ ದಾರಿ ತೋರಿದವರು
- ಶೋಭಾ ಆರ್ ಕಲ್ಕೂರ್
***
ಅಪ್ಪ ಎನ್ನುವ ಎರಡಕ್ಷರದಲಿ
ನೂರು ವರ್ಷದ ಹರುಷ ಪಡುತ
ಪ್ರೀತಿ ಸ್ನೇಹ ಮಮತೆಯ ಬಂಧನದಂತೆ
ಕಣ್ಣಿಗೆ ಕಾಣುವ ದೇವರು ಮನದಲಿ
ಜೀವನದ ಮಾರ್ಗವನು ತೋರುತ
ಆಕಾಶದಷ್ಟೆ ದೊಡ್ಡ ಮನಸ್ಸಿಗೆ ಬದ್ಧನಂತೆ.
- ಮೀನಾಕ್ಷಿ ಬಾ ಪಾಟೀಲ – ವಿಜಯಪುರ
***
ಮಕ್ಕಳು
ಪದೇಪದೇ ಮಾಡುವ
ತಪ್ಪಿಗು ತೋರಲ್ಲ ಆಕ್ರೋಶ
ಭೂಮಿಗು
ತಾಯಾಗುವ ತಾಕತ್ತವನು
ಅಪ್ಪ ಅಂದ್ರೆ ಆಕಾಶ.
- ನಾಗೇಶ ಮೈಸೂರು
***
ಅಪ್ಪನೆಂಬ ಪದವೆ
ನನಗೆ ತುಂಬುವುದು
ನನ್ನಲ್ಲಿ ತುಂಬಾ ಆತ್ಮವಿಶ್ವಾಸ,
ಅವನು ನೆನಪೇ
ನನ್ನ ಜೀವನದಲ್ಲಿ
ತುಂಬುವುದು ಅಮಿತೋತ್ಸಾಹ ಮತ್ತು ಸಂತಸ.
- ಶ್ವೇತಾ ರಾವ್
***
ಬೆನ್ನ ಮೇಲೆ
ಕುಳ್ಳಿರಿಸಿ ಮಕ್ಕಳನ್ನು
ಆನೆಯಂತೆ ನಡೆಯುವ ಅಪ್ಪ
ಹಗಲಿರುಳು ದುಡಿದು
ತನಗಿಲ್ಲದಿರೆ ಬೆಳೆಯಲು
ತಿನ್ನಿಸುವನು ಚೆನ್ನಾಗಿ ಊಟಕ್ಕೆ ತುಪ್ಪ.
- ಲಲಿತಾ ರಾಧಾಕೃಷ್ಣ
***
ಅಪ್ಪನೆಂದರೆ
ನಮ್ಮೆಲ್ಲರಿಗೂ
ಆಕಾಶದೆತ್ತರ
ಪ್ರೀತಿ ಪ್ರೇಮ
ಉಣಿಸಿದವ
ನಮ್ಮೆಲ್ಲರ
ಹೃದಯಕ್ಕೆ ಹತ್ತಿರ.
- ಉಷಾ ಕಿರಣ್
***
ನನ್ನ
ಬದುಕಲಿ
ಶಿಸ್ತಿನ ಸಿಪಾಯಿ ಅಪ್ಪ
ತಿದ್ದಿದ
ತೀಡಿದ
ನನ್ನಿಂದ ಆಗದಂತೆ ತಪ್ಪ.
- ನೇತ್ರಾವಿನಯ್ ಶೃಂಗೇರಿ
***
ಹೆತ್ತವಳು ದೇವತೆಯಾದಳು ಅಮ್ಮ
ಜೀವನವಲ್ಲ ಹೊತ್ತರೂ
ದೇವರಾಗಲಿಲ್ಲ ಅಪ್ಪ
ಸತಿಸುತರ ಬೇಡಿಕೆಗಳ ಈಡೇರಿಕೆಗೆ
ಹಗಲಿರುಳೆನ್ನದೆ ದುಡಿವನು
ಐ ಲವ್ ಯೂ ಅಪ್ಪ.
- ರಾಜ್
***
ಅಪ್ಪನು
ಹೊತ್ತುಕೊಂಡರೆ
ತನ್ನ ಸಂಸಾರದ ಜವಾಬ್ದಾರಿ
ಹೊರಟಂತೆ
ಸುಸೂತ್ರವಾಗಿ
ಬಾಳಪಥದ ಹೊನ್ನ ಅಂಬಾರಿ.
- ವಿಜಯಲಕ್ಷ್ಮಿ ನಾಯ್ಕ್ ಬಿಳಿಯೂರು
***
ಜೀವಂತ ದೇವ
ಕಣ್ಣೆದುರಿನ ದೈವ
ಒಂದಿನ ಅಲ್ಲ ಅಪ್ಪಂದಿರ ದಿನ
ಕಷ್ಟಪಟ್ಟು ಜೀವನ
ಭವಬಂಧನದ ಯಾನ
ಅಪ್ಪ ಬದುಕಿನ ನೆನಪು ಅನುದಿನ.
- ಉಮಾ ಬಿ ದುಂಬಾಳಿ.
***
ಕೈಯ ಹಿಡಿದು
ಮುನ್ನಡೆಸಿದ
ಬಾಳ ಸರದಾರ ಅಪ್ಪ.
ಕಷ್ಟದಲ್ಲಿ
ಅವನ ನೆನೆಪು
ನನಗೆ ಬಾರದಿರದಪ್ಪ.
- ಡಾ.ಸುಮತಿ ಪಿ
***
ಕನಸುಗಳ
ಕಾವಲಿಗೆ
ನಿಲ್ಲುವಂತಹ ಪ್ರೀತಿಯ ದೊರೆ,
ವಾಸ್ತವಗಳ
ನಿತ್ಯದಾಸರೆಗೆ
ಅಪ್ಪನಲ್ಲದೆ ಬಲವಿನ್ನೇನಿದೆ ಬೇರೆ.
- ಮಂಜುಳಾ ಪ್ರಸಾದ್
***
ತಪ್ಪಗಳ
ಒಪ್ಪವಾಗಿಸಿ
ಅಪ್ಪ,ಬುದ್ದಿ ಹೇಳುವವ
ಕಣ್ಣೀರ
ಒರೆಸಿ
ಬೆನ್ನ ಚಪ್ಪರಿಸಿ ಮುನ್ನಡೆಸುವ.
ಬಾಳು ನಗಲು
ಬೇಕು ಅಪ್ಪನ
ಹೆಗಲು
ದುಡಿವನು ತಾನು
ಹಗಲಿರುಳು
ಮನೆಗೆ ಸಗ್ಗವ ತರಲು.
- ಕೆ.ಶಿವಶಂಕರ್ ಕಳಸ್ತವಾಡಿ
***
ಅರಿವಿರಲಿಲ್ಲ
ಆಗ ಅಪ್ಪ ಏನೆಂದು
ಈಗ ಅರಿವಾಗಿದೆ
ಜೀವನ ರೂಪಿಸಿದ
ಶಿಲ್ಪಿ ಅವನ ಮಹತ್ವ
ಈಗ ತಿಳಿದಿದೆ.
- ಅಶೋಕ ಸುತಗಟ್ಟಿ
ಧಾರವಾಡ.
***
ಅಪ್ಪ ನೀನಿಲ್ಲದ ಇಂದು
ನೆನಪುಗಳದೇ ಸದ್ದು
ನಿನ್ನ ಪ್ರೀತಿ ಮರೆಯದೆಂದು
ಮರೆಯಲಾಗದ ಮುದ್ದು
ಮತ್ತೆ ಹುಟ್ಟಿದರೆ ನೀ ಮುಂದು
ಬೀಗುವೆನು ನಾ ಗೆದ್ದು.
- ಆಶಾ ಲಕ್ಷ್ಮಣ್ ರಾವ್
***
ಅನಂತ
ಅವಕಾಶಗಳ
ಆಶ್ವಾಸನೆಯೇ ಅಪ್ಪ
ಬೆಂಕಿಯಲೂ
ಬೆಳದಿಂಗಳನ್ನೇ
ಬೆರೆಸಿದಂತಿರುವನಪ್ಪ
- ವಿಜಯಲಕ್ಷ್ಮಿ ಕೆರಳೀಕರ್
***
ತಾನೊಬ್ಬನೆ
ನೋವುಗಳನುಂಡು
ಮಕ್ಕಳಿಗಾಗಿ ಬದುಕುವನು ಅಪ್ಪ
ತಾನು ಹಸಿದರು
ಮರೆಯದೆಯೇ
ತಿನಿಸುವನು ಮಕ್ಕಳಿಗೆ ತುಪ್ಪ.
- ಚನ್ನಕೇಶವ ಜಿ ಲಾಳನಕಟ್ಟೆ.