ಈ ಅಕ್ಕಿ ರೊಟ್ಟಿ ಹಾಗೂ ಮೂಲಂಗಿ ಸಾರಿನ ವಿಶೇಶತೆಯೇನೆಂದರೆ ಅಕ್ಕಿ ರೊಟ್ಟಿ ಮಾಡುವ ವಿಧಾನವನ್ನು ಅಪ್ಪ ಹೇಳಿಕೊಟ್ಟರೆ, ಸಾರನ್ನು ಅತ್ತೆ ಹೇಳಿಕೊಟ್ಟಿದ್ದಾರೆ. ಅವರ ಪ್ರೀತಿ ಈ ಆಹಾರದಲ್ಲಿ ಅಡಕವಾಗಿದೆ ಎನ್ನುತ್ತಾರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು, ತಪ್ಪದೆ ಮುಂದೆ ಓದಿ…
ಅಕ್ಕಿರೊಟ್ಟಿ
ಒಂದು ಪಾವು ಅಕ್ಕಿ ಹಿಟ್ಟಿಗೆ 1ವರೆ ಪಾವು ನೀರಿನ ಅಳತೆಯಂತೆ ಒಂದು ದಪ್ಪ ತಳದ ಪಾತ್ರೆಯಲ್ಲಿ ನೀರು, ರುಚಿಗೆ ತಕ್ಕಷ್ಟು ಉಪ್ಪು, 2 ಸ್ಪೂನ್ ಎಣ್ಣೆ ಹಾಕಿ ಕುದಿಯಲು ಇಡಿ. ಈಗ ನೀರು ಕುಯುವಾಗ ಅಕ್ಕಿ ಹಿಟ್ಟು ಹಾಕಿ ಸ್ಟವ್ ಆಫ್ ಮಾಡಿ ಒಂದು ಪ್ಲೇಟ್ ಮುಚ್ಚಿ 10 ನಿಮಿಷ ಇಡಿ.
ಈಗ ತಣ್ಣಗಾದ ಹಿಟ್ಟನ್ನು ಅಗಲವಾದ ಒಂದು ದೊಡ್ಡ ಬೌಲ್ ಅಥವಾ ತಟ್ಟೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಾದಿಕೊಂಡು ರೊಟ್ಟಿ ಪೇಪರ್ ಮೇಲೆ ರೊಟ್ಟಿ ತಟ್ಟಿ. ( ಆಗ ಅಪ್ಪಯ್ಯ ತೆಳು ಬಟ್ಟೆ ಮೇಲೆ ರೊಟ್ಟಿ ತಟ್ಟಿ ಇಜ್ಜಿಲು ಒಲೆಯಲ್ಲಿ ಬೇಯಿಸುತ್ತಿದ್ದರು. ಅದರ ಟೆಸ್ಟೆ ಟೇಸ್ಟ್. ) ಕಾದ ಹೆಂಚಿನ ಮೇಲೆ ಹಾಕಿ 2 ಕಡೆ ಕೆಂಪಗೆ ಕಾಯಿಸಿ. ಬೆಂದ ಹಿಟ್ಟು ಆದ್ದರಿಂದ ರೊಟ್ಟಿ ಬೇಯುವುದು ಸ್ವಲ್ಪ ತಡ ಆಗುತ್ತದೆ.

ಜಜ್ಜು ಮೂಲಂಗಿ
ಮೂಲಂಗಿಯನ್ನು ಉದ್ದಕ್ಕೆ ಕಟ್ ಮಾಡಿಕೊಂಡು ಒಂದು ಒರಳು ಕಲ್ಲಿಗೆ ಹಾಕಿ ಜಜ್ಜಿಕೊಂಡು ಒಂದು ಪಾತ್ರೆಗೆ ಹಾಕಿ ಬೇಯಲು ಇಡಿ. ಒಂದು ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುರಿ ಕಡ್ಲೆ, ಸಾಂಬಾರ್ ಪುಡಿ, ಹುಣಸೆ ಹಣ್ಣು, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ 2ಸ್ಪೂನ್ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು ಒಗ್ಗರಣೆ ಮಾಡಿ ರುಬ್ಬಿದ ಮಸಾಲೆ ಹಾಕಿ ಹುರಿದು ಬೆಂದ ಮೂಲ0ಗಿ, ಉಪ್ಪು ಹಾಕಿ ಕುದಿಸಿ. ಈಗ ರುಚಿಯಾದ ಜಜ್ಜು ಮೂಲಂಗಿ ರೆಡಿ. ಅಕ್ಕಿ ರೊಟ್ಟಿ,ಯೊಂದಿಗೆ ಸವಿಯಿರಿ. ಅಕ್ಕಿ ತರಿ ಕಡುಬು ಗೆ ಕೂಡ ಗುಡ್ ಕಾಂಬಿನೇಶನ್.
- ಶಕುಂತಲಾ ಸವಿ
