ಜನ ಗೋಪ್ರೇಮಿಗಳು ಗೋವುಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿ ಗೋಶಾಲೆಗಳನ್ನು ತೆರೆಯುತ್ತಾರೆ. ಗೋವುಗಳಿಗೆ ದಿನಕ್ಕೆ 15 ಕಿಲೋ ಒಣ ಹುಲ್ಲು ಮತ್ತು 1 ಕಿಲೋ ಪಶು ಆಹಾರ ಇತ್ಯಾದಿ ಸೇರಿದರೆ ದಿನವೊಂದಕ್ಕೆ 65-75 ರೂಪಾಯಿ ಖರ್ಚಾಗುತ್ತದೆ. ಇನ್ನಷ್ಟು ಮಾಹಿತಿಯನ್ನು ಡಾ.ಎನ್.ಬಿ.ಶ್ರೀಧರ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಗೋಶಾಲೆ ಎಂದರೆ ನೆನಪಾಗುವುದು ಹೊಟ್ಟೆಗೆ ಸರಿಯಾದ ಹುಲ್ಲು ಹಿಂಡಿ ಇಲ್ಲದೇ ಮೂಳೆ ಚಕ್ಕಳಗಳಿಂದ ಕೂಡಿದ ಗೋವುಗಳು, ರಸ್ತೆ ಅಪಘಾತದಲ್ಲಿ ಕಾಲು ಕುಂಟಾಗಿ ಓಡಾಗುವ ಹೋರಿಗಳು, ಒಣಗದ ಗಾಯದಲ್ಲಿ ಹುಳ ವೃಣಗಳಾಗಿ ದುರ್ನಾತ ಬೀರುತ್ತಿರುವ ಹಸುಗಳು, ಎದ್ದೇಳಲೂ ಸಾಧ್ಯವಿಲ್ಲದೇ ಮಲಗಿದಲ್ಲೇ ಮಲಗಿ ಹಾಸಿಗೆ ಹುಣ್ಣುಗಳಾಗಿ ಆಗಲೋ ಈಗಲೋ ಪ್ರಾಣ ಬಿಡಲು ಹೆಣಗುತ್ತಿರುವ ಜಾನುವಾರುಗಳು ಇವುಗಳ ದೃಶ್ಯ ಕಣ್ಣೆದುರಿಗೆ ಕಾಣುತ್ತದೆಯೇ ಹೊರತು ಆರೋಗ್ಯದಿಂದ ನಳನಳಿಸುತ್ತಿರುವ ಹೊಳಪು ಕಣ್ಣು, ಕೂದಲಿನಿಂದ ಕೂಡಿದ, ಸದಾ ಚಟುವಟಿಕೆಯಿಂದ ಕರುಗಳು ಚಂಗು ಚಂಗೆAದು ನೆಗೆದಾಡುತ್ತಿರುವ ದೃಶ್ಯ ಕಾಣಿಸುವುದೇ ಇಲ್ಲ.
ಅನೇಕ ಜನ ಗೋಪ್ರೇಮಿಗಳು ಗೋವುಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿ ಗೋಶಾಲೆಗಳನ್ನು ತೆರೆಯುತ್ತಾರೆ. ಇನ್ನು ಕೆಲವರು ಅಪಘಾತಕ್ಕೊಳಗಾಗಿ ಗಾಯಗೊಂಡ ಜಾನುವಾರುಗಳನ್ನು, ಸಾಕದೆ ಬೀಡಾಡಿಯಾದ ಪಶುಗಳನ್ನು ಅಥವಾ ಪೋಷಣೆ ಸಾಧ್ಯವಿಲ್ಲದೇ ಗೋಪಾಲಕರು ಕೈಬಿಟ್ಟ ಹಸುಗಳನ್ನು, ಮುದಿಯಾದ ಗೋವುಗಳನ್ನು, ಹೋರಿಗಳನ್ನು, ಅನೇಕ ಕಾರಣಗಳಿಂದ ಗೊಡ್ಡುಬಿದ್ದ ದನಗಳು, ಮಿಶ್ರತಳಿಯ ಗಂಡು ಕರುಗಳನ್ನು, ಕಟುಕರ ಕೈಯಿಂದ ಬಚಾವು ಮಾಡಿದ ಪಶುಗಳನ್ನು ತಂದು ಒಂದೆಡೆ ಇಟ್ಟು ಸಾಕುತ್ತಾರೆ. ಇದರಲ್ಲಿ ಕಲವೇ ಕೆಲವು ಪಶುಗಳು ಉತ್ಪಾದಕವಾಗಿ ಹಾಲು ಕೊಡುತ್ತಿರಬಹುದು. ಆದರೆ ಇವೆಲ್ಲವೂ ಪ್ರಾಣಿಗಳಾಗಿದ್ದು ಪ್ರಾಣವನ್ನು ಹೊಂದಿರುವುದರಿಂದ ಇವುಗಳ ಜತನ ಮಾಡಲು ದೊಡ್ಡ ಪ್ರಮಾಣದಲ್ಲಿ ಗುಣಮಟ್ಟದ ಪಶು ಆಹಾರ, ಹುಲ್ಲು, ಬೂಸಾ, ಔಷಧಿಗಳು, ಲಸಿಕೆ, ಪರಚಾರಕರು, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ವಿವಿಧ ರೋಗಗಳಿಂದ ರಕ್ಷಣೆ ಇತ್ಯಾದಿ ಮೂಲಭೂತ ಅವಶ್ಯಕತೆಗಳು ಬೇಕೇ ಬೇಕು.

ಯಾವುದೇ ಉತ್ಪಾದಕತೆ ಇರದ ಪಶುಗಳಿಗೆ ದಿನಕ್ಕೆ 15 ಕಿಲೊ ಒಣ ಹುಲ್ಲು ಮತ್ತು 1 ಕಿಲೋ ಪಶು ಆಹಾರ ಇತ್ಯಾದಿ ಸೇರಿದರೆ ದಿನವೊಂದಕ್ಕೆ 65-75 ರೂಪಾಯಿ ಖರ್ಚಾಗುತ್ತದೆ. ಈ ವೆಚ್ಚವನ್ನು ಸ್ವಂತವಾಗಿ ಭರಿಸುವ ಆರ್ಥಿಕ ಶಕ್ತಿ ಇದ್ದಲ್ಲಿ ಮಾತ್ರ ಗೋಶಾಲೆಯ ಆರಂಭ ಸಾಧ್ಯ. ದಾನಿಗಳು ಗೋಪ್ರೇಮದಿಂದ ಒಮ್ಮೆ ದಾನ ನೀಡಿದರೂ ಸಹ ಪುನ: ಪುನ: ಅವರನ್ನು ಕೋರಿದರೆ ಬೇಸರಪಟ್ಟುಕೊಳ್ಳುವದರಲ್ಲಿ ಸಂಶಯವಿಲ್ಲ. ಕಾರಣ ಕಡಿಮೆ ಖರ್ಚಿನಲ್ಲಿ ಪಶುಪಾಲನೆ ಬಹಳ ಅವಶ್ಯದ ವಿಷಯ. ಗೋಶಾಲೆಗಳನ್ನು ತೆರೆಯಲು ಅನೇಕ ಮಾರ್ಗದರ್ಶಿ ಸೂತ್ರಗಳಿವೆ.
• ಗೋಶಾಲೆಯ ವಿನ್ಯಾಸ ಸರಳವಾಗಿದ್ದು ಸಾಕಷ್ಟು ಗಾಳಿ ಬೆಳಕು ಆಡುವಂತೆ ಇದ್ದಲ್ಲಿ ಪಶುಗಳಿಗೆ ರೋಗರುಜಿನಗಳು ಕಡಿಮೆ.
• ಬಿಟ್ಟು ಸಾಕುವ ವ್ಯವಸ್ಥೆ ಇದ್ದಲ್ಲಿ ಹೋರಿಗಳು, ವಯಸ್ಸಾದ ದನಗಳು, ಖಾಯಿಲೆ ಬಂದವುಗಳು, ಕರುಗಳು ಮತ್ತು ಹಾಲು ಹಿಂಡುವ ದನಗಳನ್ನು ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಇದ್ದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಹಿಂಡಿ ಹುಲ್ಲು ಹಾಕಿದಾಗ ಕಾಳಗಕ್ಕೆ ಬಿದ್ದು ಶಕ್ತಿ ಜಾಸ್ತಿ ಇರುವ ದನಗಳು ಮಾತ್ರ ಆಹಾರ ಗಳಿಸಿ ದುರ್ಬಲವಿರುವವುಗಳಿಗೆ ಆಹಾರವೇ ದೊರಕುವುದಿಲ್ಲ.
• ಗೊಡ್ಡು ಅಥವಾ ಬರಡು ರಾಸುಗಳನ್ನು ಒಂದು ಕಡೆ ಇರಿಸಿ ಅವುಗಳಿಗೆ ಆಧುನಿಕ ರೀತಿಯಲ್ಲಿ ಚಿಕಿತ್ಸೆ ಕೊಡಿಸಿ ನಿರಂತರ ಅನುಸರಣೆ ಮಾಡಿಸಿದಲ್ಲಿ ಶೇ 50 ರಷ್ಟು ರಾಸು ಗರ್ಭಧರಿಸಿದರೂ ಸಹ ಹಾಲಿನ ಕೊರತೆ ನೀಗುತ್ತದೆ.
• ಪಶುಗಳು ಕಟ್ಟಿ ಸಾಕುವುದಕ್ಕೆ ಒಗ್ಗುವ ಜೀವಿಗಳಲ್ಲ. ಅವುಗಳು ಓಡಾಡಲು ಅರ್ಧ ಎಕರೆ ಜಾಗವಾದರೂ ಬೇಕು. ಇದನ್ನು ಬೇಲಿ ಹಾಕಿ ಭದ್ರ ಪಡಿಸಿಕೊಂಡು ಅಲ್ಲಿ ಒಂದಿಷ್ಟು ಹುಲ್ಲು ಅಥವಾ ಹಿಂಡಿ ಎರಚಿದರೆ ಪಶುಗಳು ಓಡಾಡಿಕೊಂಡು ಮೇಯುವಾಗ ಅವುಗಳಿಗೆ ಸಾಕಷ್ಟು ವ್ಯಾಯಾಮ ದೊರಕಿ ಅವುಗಳ ಆರೋಗ್ಯ ಚೆನ್ನಾಗಿರುತ್ತದೆ.
• ಪಶುಗಳ ಪ್ರಥಮ ಚಿಕಿತ್ಸೆಯನ್ನು ಗೋಶಾಲೆ ಮಾಡುವವರು ಕಲಿತರೆ ಸಣ್ಣ ಪುಟ್ಟದಕ್ಕೂ ಪಶುವೈದ್ಯರನ್ನು ಕರೆಸುವುದು ಅವಶ್ಯಕತೆ ಇರುವುದಿಲ್ಲ.
• ಯಾವುದೇ ಪಶುಗಳು ಹೊಸದಾಗಿ ಬಂದರೂ ಸಹ ಅವುಗಳಿಗೆ ಆಯಾ ಕಾಲಕ್ಕೆ ಅವಶ್ಯ ಲಸಿಕೆ ಹಾಕಿಸಲೇಬೇಕು. ಅಗಾಗ ಎಲ್ಲವಕ್ಕೂ ಜಂತುನಾಶಕ, ಉಣ್ಣೆ ಮತ್ತು ನೊಣದ ಔಷಧಿಗಳನ್ನು ಹೊಡೆಯುತ್ತಾ ಇರಬೇಕು.
ಪಶುಗಳು ಅನುತ್ಪಾದಕವಾದರೂ ಸಹ ಅವು ಉತ್ಪಾದಿಸುವ ಗೊಬ್ಬರ, ಗಂಜಳ ಅಮೂಲ್ಯ, ಮರೆಯದಿರಿ. ಆದರೆ ಇವು ಅಪ್ರತ್ಯಕ್ಷ ಆದಾಯವಾಗುವುದರಿಂದ ಗೋಚರಿಸುವುದಿಲ್ಲ . ಗಂಜಲ ಮತ್ತು ಗೊಬ್ಬರ ಮಾರಾಟ ಅಥವಾ ತೋಟಕ್ಕೆ ಹಾಕುವುದರಿಂದ ಮಾಡಿದ ಖರ್ಚು ವಾಪಸ್ ಬರುವುದು ಖಚಿತ.
- ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.
