ಹೆಸರಾಂತ ಕವಿ ಪು.ತಿ.ನರಸಿಂಹಾಚಾರ್ (ಪು.ತಿ.ನ.) ಅವರ ರಚನೆ ಮತ್ತು ಖ್ಯಾತ ನಿರ್ದೇಶಕರಾದ ಡಾ. ಟಿ. ಎಸ್. ನಾಗಭರಣ ಅವರ ನಿರ್ದೇಶನದ “ಗೋಕುಲ ನಿರ್ಗಮನ” ನಾಟಕ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬವನ್ನೇ ಸೃಷ್ಟಿಸಿತು. ಈ ನಾಟಕವನ್ನು ನೋಡದೆ ಇದ್ದವರು ತಪ್ಪದೆ ನೋಡಿ …
‘ಮನರಂಜನೆಯಿಂದ ಮನೋವಿಕಾಸವಾಗಬೇಕು’… ಖ್ಯಾತ ನಿರ್ದೇಶಕರಾದ ಡಾ ಟಿ ಎಸ್ ನಾಗಭರಣ ಅವರು “ಗೋಕುಲ ನಿರ್ಗಮನ” ನಾಟಕ ಪ್ರದರ್ಶನದ ವೇಳೆ ಹೇಳಿದ ಮಾತು ತಲೆಯಲ್ಲಿ ಹಾಗೆ ಕೂತು ಬಿಟ್ಟಿತು. ಮನರಂಜನೆ ಹೆಸರಿನಲ್ಲಿ ಎಷ್ಟೆಲ್ಲ ದಾರಿಗಳಿವೆ. ಅವೆಲ್ಲವೂ ನಮ್ಮ ಮನೋವಿಕಾಸಗೊಳ್ಳಿಸುತ್ತದೆಯೇ?… ಖಂಡಿತಾ ಇಲ್ಲಾ. ನಮ್ಮ ಮನೋವಿಕಾಸಕ್ಕೆ ನಾಟಕ, ನೃತ್ಯ, ಸಂಗೀತವೂ ಕೂಡಾ ಸಹಾಯವಾಗುತ್ತದೆ ಎನ್ನುವುದು ಇತ್ತೀಚಿಗೆ “ಗೋಕುಲ ನಿರ್ಗಮನ” ನಾಟಕ ನೋಡುವಾಗ ಅನುಭವವಾಯಿತು. ಈ ನಾಟಕ ಕೇವಲ ಮನರಂಜನೆಯನಷ್ಟೇ ಕೊಡಲಿಲ್ಲ, ಹಲವಾರು ಆಯಾಮಗಳತ್ತ ಚಿಂತಿಸುವಂತೆ ಮಾಡಿತು. ನಾಟಕದಲ್ಲಿನ ವೈವೀಧ್ಯಮಯ ಸಂಗೀತ, ನೃತ್ಯ, ಬೆಳಕಿನ ಪ್ರಯೋಗಗಳು, ವೇಷ ಭೂಷಣಗಳು, ನಿರ್ದೇಶನ, ನಟನೆ, ಪ್ರಸಾದನ ಎಲ್ಲವೂ ಪ್ರೇಕ್ಷಕನಲ್ಲಿ ಸಂತೋಷ, ಕುತೂಹಲ, ಚಿಂತನೆಯನ್ನು ಹುಟ್ಟು ಹಾಕಿತು.

“ಗೋಕುಲ ನಿರ್ಗಮನ” ನಾಟಕದ ತಿರುಳೇನು ಎಂದರೆ ನಾಟಕದ ಹೆಸರೇ ಸೂಚಿಸುವಂತೆ ಶ್ರೀಕೃಷ್ಣ ಗೋಕುಲವನ್ನು ನಿರ್ಗಮಿಸುವ ಸಂದರ್ಭದಲ್ಲಿ ನಡೆಯುವಂತಹ ಕತೆಯಿದು. ಇದು ಹೆಸರಾಂತ ಕವಿ ಪು.ತಿ.ನರಸಿಂಹಾಚಾರ್ (ಪು.ತಿ.ನ.) ಅವರ ರಚನೆ. ಈ ನಾಟಕದಲ್ಲಿ ಶ್ರೀ ಕೃಷ್ಣನ ಕೊಳಲಿನ ನಾದ, ರಾಧೆಯ ಮೇಲಿನ ಪ್ರೀತಿ, ಗೋಪಿಕಾ ಸ್ತ್ರೀಯರ ನಡುವೆ ಕೃಷ್ಣನ ತುಂಟಾಟ, ಎಲ್ಲವೂ ಸೊಗಸಾಗಿದ್ದಾಗ ಕೊನೆಗೆ ತನ್ನ ಬಾಲ್ಯದ ನೆನಪು, ರಾಧೆಯನ್ನು, ತನ್ನ ಕೊಳಲನ್ನು ಗೋಕುಲದಲ್ಲಿಯೇ ಬಿಟ್ಟು ನಿರ್ಗಮಿಸುತ್ತಾನೆ. ಆ ಸಂದರ್ಭದಲ್ಲಿ ಕೃಷ್ಣನಲ್ಲಿ ಆಗುವ ವೇದನೆ, ಗೋಪಿಕೆಯರ ಭಾವುಕತೆ ಮತ್ತು ರಾಧೆಯ ವಿರಹದ ನೋವು ಎಲ್ಲವನ್ನು ಗೀತ ರೂಪಕದಲ್ಲಿ ಲೇಖಕರು ಕಟ್ಟುಕೊಟ್ಟ ರೀತಿ ಅದ್ಭುತವಾಗಿದೆ.

ಕವಿ ಪು.ತಿ.ನರಸಿಂಹಾಚಾರ್ (ಪು.ತಿ.ನ.)

ಖ್ಯಾತ ನಿರ್ದೇಶಕರಾದ ಡಾ ಟಿ ಎಸ್ ನಾಗಾಭರಣ ಅವರು
ಈ ನಾಟಕವನ್ನು ಬೆನಕ ತಂಡದಿಂದ ಮೊದಲು ನಿರ್ದೇಶನ ಮಾಡಿದವರು ಬಿ ವಿ ಕಾರಂತರು. ಇದೇ ನಾಟಕವನ್ನು ಬೆನಕ ತಂಡದ ಐದನೇ ತಲೆಮಾರು ಅಭಿನಯಿಸಿತು. ಇದೊಂದು ಸರ್ವಕಾಲಿಕ ನಾಟಕ ಎನ್ನಲು ಈ ಪ್ರದರ್ಶನ ಸಾಕ್ಷಿಯಾಗಿತ್ತು. ಇದನ್ನು ಖ್ಯಾತ ನಿರ್ದೇಶಕರಾದ ಡಾ.ಟಿ.ಎಸ್. ನಾಗಭರಣ ಅವರು ನಿರ್ದೇಶಸಿದ್ದರು.
ಈ ನಾಟಕ ಹಳೆಗನ್ನಡ ಭಾಷೆಯಲಿದ್ದು, ಪ್ರೇಕ್ಷಕರಿಗೆ ಇದನ್ನು ಕೇಳುವಾಗ ಅರ್ಥವಾಗದಿದ್ದರೂ ನಾಗಭರಣ ಅವರ ನಿರ್ದೇಶನ ಪ್ರೇಕ್ಷಕಕರಿಗೆ ಅರ್ಥೈಸುವಲ್ಲಿ ಯಶಸ್ವಿಯಾದ್ದಾರೆ.
ನಾಗಭರಣ ಅವರು ಸಿನಿಮಾ ನಿರ್ದೇಶನದಲ್ಲಿ ಖ್ಯಾತಿ ಪಡೆದವರು. ರಂಗಭೂಮಿ ಹಿನ್ನೆಲೆಯಿಂದ ಬಂದವರು ಮತ್ತು ಅಲ್ಲಿಯೂ ಸೈ ಎನ್ನಿಸಿಕೊಂಡವರು. ಅವರ ನಿರ್ದೇಶನದ “ಬೆಂಗಳೂರು ನಾಗರತ್ಮಮ್ಮ” ನಾಟಕವನ್ನು ಈ ಹಿಂದೆ ನೋಡಿದ್ದೇನೆ. ಅದು ಕೂಡಾ ಸಂಗೀತ ಕುರಿತಾದ ನಾಟಕವಾಗಿದ್ದು,ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಯೋಗವನ್ನು ಕಂಡಿದೆ. ಪ್ರತಿಯೊಂದು ಹೊಸತನ್ನು ನೀಡುವ ನಾಗಭರಣ ಅವರು, “ಗೋಕುಲ ನಿರ್ಗಮನ” ನಾಟಕವನ್ನು ನೋಡುವಾಗ ಪ್ರೇಕ್ಷಕರು ಸಂಪೂರ್ಣವಾಗಿ ಕಳೆದು ಹೋಗಿದ್ದರು. ಈ ನಾಟಕದಲ್ಲಿ ಕಲಾವಿದರು, ತಂತ್ರಜ್ಞರು, ಸಂಗೀತಗಾರರು ಸೇರಿ ಮೂವತ್ತಕ್ಕೂ ಹೆಚ್ಚು ಜನ ತಂಡದಲ್ಲಿ ಭಾಗವಹಿಸಿದ್ದರು. ಅಷ್ಟು ದೊಡ್ಡ ತಂಡಕ್ಕೆ ನಿರ್ದೇಶನ ಮಾಡುವುದಷ್ಟೇ ಅಲ್ಲ, ಸಮರ್ಥವಾಗಿ ಅದರ ಜವಾಬ್ದಾರಿ ನಿಭಾಯಿಸಿದ್ದರು ನಾಗಭರಣ ಅವರು.
“ಗೋಕುಲ್ ನಿರ್ಗಮನ” ನೋಡುವಾಗ ಎರಡು ತಾಸು ನಾಟಕವನ್ನು ನೋಡುತ್ತಿದ್ದೇನೆ ಎಂದನ್ನಿಸಲಿಲ್ಲ, ಒಂದು ಒಳ್ಳೆ ಸಿನಿಮಾ ನೋಡಿದ ಅನುಭವ ನೀಡಿತು.
ಅಳಿದು ಹೋಗುತ್ತಿರುವ ನಾಟಕಗಳು ಉಳಿಯಬೇಕು ಮತ್ತು ಬೆಳೆಯಬೇಕೆಂದರೆ ಒಂದು ಒಳ್ಳೆ ನಾಟಕ ಬಂದಾಗ ಪ್ರೇಕ್ಷಕರು ತಪ್ಪದೆ ನೋಡಬೇಕು. ಆಗಲೇ ಕಲಾವಿದರಿಗೆ, ನಿರ್ದೇಶಕರಿಗೆ ಪ್ರೋತ್ಸಾಹ ಸಿಗುವುದು. ಗೋಕುಲ ನಿರ್ಗಮನ ಮುಂದಿನ ಪ್ರದರ್ಶನ ಸದ್ಯದಲ್ಲೇ ಇದ್ದು, ನೀವೆಲ್ಲಾ ಕುಟುಂಬ ಸಮೇತರಾಗಿ ನಾಟಕವನ್ನು ವೀಕ್ಷಿಸಿ, ಆನಂದಿಸಿ…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
