ಪುಂಡಿ (ಗೊಂಗುರು) ಸೊಪ್ಪು ಹೆಚ್ಚು ಕಬ್ಬಿಣದ ಅಂಶ ಹಾಗೂ ಅನೇಕ ಜೀವಸತ್ವಗಳಿಂದ ಸಮೃದ್ಧವಾಗಿರುವ ಸೊಪ್ಪು. ಈ ಸೊಪ್ಪಿನ ಸೇವನೆಯಿಂದ ದೃಷ್ಟಿ ಸಮಸ್ಯೆ ಸುಧಾರಿಸುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಾಯಕಾರಿ ಎಂದು ಹೇಳಲಾಗುತ್ತದೆ. ಸುಹಾಸಿನಿ ಅವರಿಂದ ಚಟ್ನಿಯನ್ನು ಮಾಡುವ ವಿಧಾನ ತಿಳಿಯೋಣ.
ಈ ಸೊಪ್ಪನ್ನು ಉತ್ತರಕರ್ನಾಟಕದ ಕಡೆ ಇದನ್ನು ಪುಂಡಿ ಸೂಪ್ಪು, ಬೆಂಗಳೂರು ಸುತ್ತ ಮುತ್ತ ಹುಳಿ ಸೊಪ್ಪು ಮತ್ತು ಆಂಧ್ರ ಪ್ರದೇಶದ ಸುತ್ತ ಮುತ್ತ ಗೋಂಗುರ ಸೊಪ್ಪು ಎಂತಲೂ ಕರೆಯುತ್ತಾರೆ. ನಾಮ ಹಲವಾದರೂ ಅದರ ರುಚಿ ಹುಳಿ. ಆ ಹುಳಿ ಅಂಶವನ್ನು ಇಟ್ಟುಕೊಂಡು ವಿವಿಧ ರೀತಿಯಲ್ಲಿ ಆಹಾರವನ್ನು ತಯಾರಿಸಬಹುದು. ಆಂಧ್ರ ಶೈಲಿಯ ಗೊಂಗುರು ಚಟ್ನಿ ವಿನೂತನ ಮತ್ತು ಸ್ವಾದಿಷ್ಟವಾಗಿರುತ್ತದೆ.
ಆಂಧ್ರಶೈಲಿ ರೆಸ್ಟೋರೆಂಟ್ ಗಳಿಗೆ ಹೋದಾಗ ಗೊಂಗುರ ಚಟ್ನಿಯ ರುಚಿಯನ್ನು ಬಿಸಿ ಅನ್ನದೊಂದಿಗೆ ಸ್ವಲ್ಪ ತುಪ್ಪ ಹಾಕಿಕೊಂಡು ಸವಿಯಲು ಯಾರೂ ಮರೆಯುವುದಿಲ್ಲ. ಇಂದು ಅದೇ ಚಟ್ನಿಯನ್ನು ಮನೆಯಲ್ಲೇ ಸುಲಭವಾಗಿ ಹೇಗೆ ತಯಾರಿಸುವುದು ಎಂದು ಸುಭಾಷಿಣಿಯವರು ಹೇಳಿ ಕೊಡಲು ಸಿದ್ಧರಿದ್ದಾರೆ, ಕಲಿಯಲು ನೀವು ಸಿದ್ಧರಿದ್ದೀರಾ?

- ಗೊಂಗುರು ಸೊಪ್ಪು -೧ ಕಟ್ಟು
- ಈರುಳ್ಳಿ – ೧
- ಬೆಳ್ಳುಳ್ಳಿ – ೧ ಸಣ್ಣ ಉಂಡೆ
- ಜೀರಿಗೆ – ೧ ಚಮಚ
- ಹುರಿದ ಕಡಲೇಬೀಜ – ೩ ರಿಂದ ೪ ಚಮಚ
- ಕರಿಬೇವಿನ ಸೊಪ್ಪು – ಸ್ವಲ್ಪ
- ಎಣ್ಣೆ – ೫ ರಿಂದ ೬ ಚಮಚ
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಉಪ್ಪು (ರುಚಿಗೆ ತಕ್ಕಷ್ಟು)
- ಒಣಮೆಣಸಿನಕಾಯಿ ೩ ರಿಂದ ೪ ಒಗ್ಗರಣೆಗೆ
- ಹಸಿಮೆಣಸಿನಕಾಯಿ – ೧೦ (ಸೊಪ್ಪಿನಲ್ಲಿ ಹುಳಿ ಅಂಶ ಹೆಚ್ಚಿರುವುದರಿಂದ ಮೆಣಸಿನಕಾಯಿ ಸ್ವಲ್ಪ ಹೆಚ್ಚಾಗಿ ಬೇಕಾಗುತ್ತದೆ.)
ಮಾಡುವ ವಿಧಾನ :
ಬಾಣಲೆಗೆ ೨ ರಿಂದ ೩ ಚಮಚ ಎಣ್ಣೆ ಹಾಕಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ ೨ ನಿಮಿಷ ಹುರಿದು ಅದಕ್ಕೆ ಚೆನ್ನಾಗಿ ತೊಳೆದ ೧ ಕಟ್ಟು ಗೊಂಗುರು ಸೊಪ್ಪನ್ನು ಹಾಕಿ 3 ರಿಂದ 4 ನಿಮಿಷ ಹುರಿದು ತಣ್ಣಗಾಗಲು ಇಡಬೇಕು. ನಂತರ ಮಿಕ್ಸಿ ಜಾರಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಹುರಿದ ಕಡಲೆ ಬೀಜ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಅದಕ್ಕೆ ಆರಿದ ಹುರಿದ ಮಸಾಲೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಸಾಸಿವೆ ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ನೀಡಿದರೆ ರುಚಿರುಚಿಯಾದ ಆಂಧ್ರಶೈಲಿಯ ಗೊಂಗುರು ಚಟ್ನಿ ಸವಿಯಲು ಸಿದ್ಧ.
ಇದನ್ನು ಬಿಸಿ ಬಿಸಿ ಅನ್ನ ಮತ್ತು ತುಪ್ಪದ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ.
- ಕೈ ಚಳಕ : ಸುಹಾಸಿನಿ
