ಇಂಡಿಯನ್ ಸ್ಪೇಸ್ ಹೀರೋ ರಾಕೇಶ್ ಶರ್ಮಾ ಅವರ ೭೨ನೇಯ ವರ್ಷದ ಹುಟ್ಟುಹಬ್ಬ. ಬಾಹ್ಯಾಕಾಶದಲ್ಲಿ ತಮ್ಮ ಆಹಾರವನ್ನಾಗಿ ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಸಹಾಯದಿಂದ ಪ್ಯಾಕ್ ಮಾಡಿಸಿಕೊಂಡು ಕೊಂಡೊಯ್ಯದಿದ್ದರು…
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರೂ ಕೂಡ ಇತಿಹಾಸವನ್ನು ರಚಿಸಬಲ್ಲರು ಎನ್ನುವುದಕ್ಕೆ ಉತ್ತಮ ಉದಾಹರಣೆ ಬಾಹ್ಯಾಕಾಶವನ್ನು ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ.
ಫೋಟೋ ಕೃಪೆ : Wikibio
ರಾಕೇಶ ಶರ್ಮಾ ಅವರ ಬಾಲ್ಯ
ರಾಕೇಶ ಶರ್ಮಾ ಅವರು ಜನವರಿ ೧೩, ೧೯೪೯ ರಂದು ಪಂಜಾಬ್ ರಾಜ್ಯದ ಪಟಿಯಾಲದಲ್ಲಿ ಜನಿಸಿದರು. ಅವರ ತಂದೆ ದೇವೇಂದ್ರ ಶರ್ಮಾ ಹಾಗು ತಾಯಿ ತೃಪ್ತಾ ಶರ್ಮಾ. ಚಿಕ್ಕ ವಯಸ್ಸಿನಲ್ಲಿ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳ ಮೇಲೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳನ್ನು ಬಿಚ್ಚಿಅದರಲ್ಲಿನ ಕಾರ್ಯನಿರ್ವಣೆಯನ್ನು ಅರ್ಥಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ನೋಡುತ್ತಾ ಕೂಡುತ್ತಿದ್ದರು. ಮತ್ತು ಅದರಂತೆ ತಾವು ಕೂಡಾ ಹಾರಬೇಕೆಂಬ ಆಸೆಯನ್ನು ಬಾಲ್ಯದಿಂದಲೇ ಕನಸ್ಸನ್ನು ಕಂಡವರು.
ಶಿಕ್ಷಣ ಮತ್ತು ವೃತ್ತಿ ಬದುಕು
ಅವರ ಪ್ರಾಥಮಿಕ ಶಿಕ್ಷಣವನ್ನು ಹೈದ್ರಾಬಾದ್ ನ ಸೆಂಟ್ ಜಾರ್ಜಸ್ ಗ್ರಾಮರ್ ಶಾಲೆಯಲ್ಲಿ ಮತ್ತು ನಿಜಾಮ್ ಕಾಲೇಜ್ ನಲ್ಲಿ ಗ್ರಾಜುವೇಶನ್ ಮುಗಿಸಿದರು. ತದನಂತರ ೧೯೬೬ ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯನ್ನು ಸೇರಿಕೊಂಡರು. ೧೯೭೦ ಇಂಡಿಯನ್ ಏರ್ ಫೋರ್ಸ್ ನಲ್ಲಿ ಪೈಲಟ್ ಆಗಿ ಕಾರ್ಯಾರಂಭ ಮಾಡಿದರು. ಅಂದು ಅವರು ಬಾಲ್ಯದಲ್ಲಿ ಕಂಡ ಕನಸ್ಸು ನನಸ್ಸಾದ ದಿನವಾಗಿತ್ತು. ೧೯೭೦ ರಲ್ಲಿ ಇಂಡಿಯನ್ ಏರ್ ಫೋರ್ಸ್ ಟೆಸ್ಟ್ ಪೈಲಟ್ ಆಗಿ ಭರ್ತಿ ಪಡೆದರು. ಅಂದು ಭಾರತ ಹಾಗು ಪಾಕ್ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ವಿಂಗ್ ಏರ್ ಕ್ರಾಫ್ಟ್ ನಿಂದ ಪಾಕ್ ಸೈನ್ಯದ ಮೇಲೆ ದಾಳಿ ಮಾಡಿದರು. ಅವರ ಈ ಪ್ರದರ್ಶನದಿಂದ ಸಾಕಷ್ಟು ಪ್ರಶಂಸೆಗೆ ಪಾತ್ರರಾದರು. ೧೯೮೪ ಅವರ ಅತ್ಯುತ್ತಮ ಸೇವೆಯಿಂದಾಗಿ ಸ್ಕ್ವಾಡ್ರನ್ ಲೀಡರ್ ಆಗಿ ಆಯ್ಕೆಯಾದರು. ಏಪ್ರಿಲ್ ೩,೧೯೮೪ ರಂದು ಇತರೆ ಗಗನಯಾತ್ರಿಯೊಂದಿಗೆ ಅಂತರಿಕ್ಷವನ್ನು ಪ್ರವೇಶಿಸಿದರು. ರಾಕೇಶ್ ಶರ್ಮಾ ಅವರ ಜೊತೆಗಿನ ಇಬ್ಬರು ಗಗನಯಾತ್ರಿಗಳು ೭ ದಿನ, ೨೧ ತಾಸು, ೪೦ ನಿಮಿಷ ಅಂತರಿಕ್ಷದಲ್ಲಿ ಕಳೆದರು. ಆ ಸಂದರ್ಭದಲ್ಲಿ ತಮಗೆ ಆಹಾರವನ್ನು ರಾಕೇಶ್ ಶರ್ಮಾ ಅವರು ಮೈಸೂರಿನಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ ಸಹಾಯದಿಂದ ಭಾರತೀಯ ಆಹಾರವಾದ ಸುಜಿ ಹಲ್ವಾ, ಆಲೂ ಚೋಲ್ ಮತ್ತು ವೆಜ್ ಪುಲಾವ್ ವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದರು. ಅದನ್ನು ಶರ್ಮಾ ಅವರು ಸಹ ಗಗನಯಾತ್ರಿಗಳೊಂದಿಗೆ ಹಂಚಿಕೊಂಡರು.
ಫೋಟೋ ಕೃಪೆ : News track
೧೯೮೪ ರಲ್ಲಿ ಬಾಹ್ಯಾಕಾಶ ಕಾಯಿಲೆಯನ್ನು ಎದುರಿಸಲು ಶೂನ್ಯ ಗುರುತ್ವಾಕರ್ಷಣ ಯೋಗವನ್ನು ಅಭ್ಯಾಸ ಮಾಡಿದ ಮೊದಲ ವ್ಯಕ್ತಿ ರಾಕೇಶ್ ಶರ್ಮಾ. ಅವರ ಪ್ರಯೋಗಗಳನ್ನು ದಿ ರೊಕೊಸ್ಮೋಸ್ ಸಾಕಷ್ಟು ಮೆಚ್ಚಿದರು. ೨೦೦೯ ರಲ್ಲಿ ನಡೆದ ಸಮ್ಮೇಳನದಲ್ಲಿ, ಮುಂದಿನ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶ ಕಾಯಿಲೆಯನ್ನು ನಿಭಾಯಿಸಲು ಶೂನ್ಯ ಗುರುತ್ವಾಕರ್ಷಣ ಯೋಗವನ್ನು ಅಭ್ಯಾಸ ಮಾಡಲು ಸೂಚಿಸಿದರು.
ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಬಾಹ್ಯಾಕಾಶದಿಂದ ಭಾರತವು ಹೇಗೆ ಕಾಣುತ್ತದೆ? ಎಂದು ಅವರನ್ನು ಕೇಳಿದಾಗ ಅವರು ಎಲ್ಲ ದೇಶಕ್ಕಿಂತ ನಮ್ಮ ದೇಶ ಸುಂದರವಾಗಿ ಕಾಣುತ್ತದೆ ಎಂದರು. ಅದು ದೇಶಾಭಿಮಾನವನ್ನು ಇನ್ನಷ್ಟು ಹೆಚ್ಚುವಂತ ಮಾತಾಗಿತ್ತು.
ಫೋಟೋ ಕೃಪೆ : starunfolded
ಫೋಟೋ ಕೃಪೆ : latest GK GS
ಸಂದ ಪ್ರಶಸ್ತಿ ಮತ್ತು ಗೌರವಗಳು
ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಅಶೋಕ್ ಚಕ್ರ, ಸೊವಿಯಟ್ ಸರ್ಕಾರದಿಂದ ‘ಹೀರೋ ಆಫ್ ದಿ ಸೊವಿಯಟ್ ಯೂನಿಯನ್’ ಎಂಬ ಬಿರುದನ್ನೂ ನೀಡಿ ರಾಕೇಶ್ ಶರ್ಮಾ ಅವರಿಗೆ ಗೌರವಿಸಲಾಯಿತು. ರಾಕೇಶ್ ಶರ್ಮಾ ಬಾಹ್ಯಾಕಾಶದಲ್ಲಿ ಪಾದಾರ್ಪಣೆ ಮಾಡಿದ ಭಾರತೀಯರಲ್ಲಿ ಮೊದಲಿಗರು ಮತ್ತು ಬಾಹ್ಯಾಕಾಶವನ್ನು ತಲುಪಿದ ೧೪ ದೇಶ ಭಾರತವಾಗಿದೆ.
- ಶಾಲಿನಿ ಹೂಲಿ ಪ್ರದೀಪ್