‘ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಸಾಹಸ ಪ್ರಿಯರಿಗೆ ಇಷ್ಟವಾಗುವಂತಹ ರೆಸ್ಟೋರೆಂಟ್. ಭಾರತದಲ್ಲಿ ಮೊದಲ ‘ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಬೆಂಗಳೂರಿನಲ್ಲಿ ನಿರ್ಮಾಣವಾಗಿದ್ದು ವಿಶೇಷ. ಅಲ್ಲಿಗೆ ಹೋಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಹೊಟ್ಟೆಗಾಗಿ ಗೆಣ್ಣುದ್ದ ಬಟ್ಟೆಗಾಗಿ ದುಡಿಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಗೆಣ್ಣುದ್ದ ನಾಲಿಗೆಯ ರುಚಿಗಾಗಿ ವೈವಿಧ್ಯಮಯ ಪದಾರ್ಥಗಳು ಬೇಕೇ ಬೇಕು. ಅದರಲ್ಲೂ ಬೆಂಗಳೂರು ಬಾಯಿ ರುಚಿ ಸಂತೃಪ್ತಿ ಪಡಿಸುವಲ್ಲಿ ಎತ್ತಿದ ಕೈ.
ಗುಹೆ ರೆಸ್ಟೋರೆಂಟ್, ಕೇಬಲ್ ರೆಸ್ಟೋರೆಂಟ್, ಜೈಲ್ ರೆಸ್ಟೋರೆಂಟ್ ಹೀಗೆ ಗ್ರಾಹಕರನ್ನು ಸೆಳೆಯುಲು ರೆಸ್ಟೋರೆಂಟ್ ಉದ್ಯಮಿಗಳು ಕ್ರಿಯಾತ್ಮಕವಾಗಿ ಯೋಚಿಸುತ್ತಲೇ ಇರುತ್ತಾರೆ. ಗ್ರಾಹಕರು ಹೊಸ ಹೊಸ ರುಚಿಯ ಜೊತೆಗೆ ಹೊಸ ಹೊಸ ಅನುಭವಗಳನ್ನು ಪಡೆಯಲು ಇಷ್ಟಪಡುತ್ತಾರೆ. ಅಂಥವರಿಗಾಗಿ ‘ಫ್ಲೈ ಡೈನಿಂಗ್ ರೆಸ್ಟೋರೆಂಟ್’ ಒಳ್ಳೆಯ ಅನುಭವ ಕೊಡುತ್ತದೆ.
ಫೋಟೋ ಕೃಪೆ : Magicpin
ಫ್ಲೈ ಡೈನಿಂಗ್ ವಿಶೇಷತೆ ಏನು ?
೨೨ ಚೇರ್ ಗಳನ್ನೊಳಗೊಂಡ ಈ ರೆಸ್ಟೋರೆಂಟ್ ವಿಶೇಷತೆ ಏನೆಂದರೆ ಊಟ ಮಾಡುವವರು ಎತ್ತರದಲ್ಲಿ ಅಂದರೆ ೧೬೦ ಅಡಿ ಎತ್ತರದಲ್ಲಿ ಕೂತು ಸುತ್ತಲಿರುವ ನಾಗವಾರ ಲೇಕ್, ಮಾನ್ಯತಾ ಟೆಕ್ ಪಾರ್ಕ್, ಬೆಂಗಳೂರಿನ ಸೌಂದರ್ಯವನ್ನು ನೋಡುವುದರ ಜೊತೆಗೆ ಒಳ್ಳೆಯ ನಾನ್ ವೆಜ್ ಆಹಾರವನ್ನು ಇಲ್ಲಿ ಸವಿಯಬಹುದು. ಆಹಾರವನ್ನು ಸರ್ವ್ ಮಾಡಲು ನಾಲ್ಕು ಜನ ರೆಸ್ಟೋರೆಂಟ್ ಜನರಿರುತ್ತಾರೆ.
ಫೋಟೋ ಕೃಪೆ : the weekend leader
ಸುರಕ್ಷತೆ ಹೇಗೆ ?
ಎತ್ತರದಲ್ಲಿ ನಿಲ್ಲುವುದೇ ದೊಡ್ಡ ಭಯ. ಅಂಥದರಲ್ಲಿ ಎತ್ತರದಲ್ಲಿ ಕೂಡುವುದಷ್ಟೇ ಅಲ್ಲ, ಮೈ ಮರೆತು ಕೂತು ತಿನ್ನುವ ಭಯ ಇರುವವರಿಗಾಗಿ ಚೇರ್ ನಲ್ಲಿ ಸುರಕ್ಷತೆಗಾಗಿ ಮೂರು ಭದ್ರತೆಯ ಬೆಲ್ಟ್ ಗಳನ್ನೂ ಅಳವಡಿಸಲಾಗಿದೆ. ಇದು ಗ್ರಾಹಕರನ್ನು ಬೀಳದಂತೆ ಕಾಪಾಡುತ್ತದೆ. ಅಡುಗೆಯನ್ನು ಅಲ್ಲಿಯೇ ಸಿದ್ದ ಪಡಿಸುವುದಿಲ್ಲ. ಬಿಸಿಯಾದ ಅಡುಗೆಯನ್ನು ಸಿದ್ದ ಮಾಡಿಕೊಂಡು ಫ್ಲೈ ಡೈನ್ನಿಂಗ್ ನಲ್ಲಿ ಸರ್ವ್ ಮಾಡಲಾಗುತ್ತದೆ. ಪ್ರತಿ ತಾಸಿಗೊಮ್ಮೆ ಗ್ರಾಹಕರನ್ನು ಮೇಲಕ್ಕೆ ಒಯ್ಯುವ ಈ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಗ್ರಾಹಕರ ಊಟ ಮುಗಿದಾಕ್ಷಣ ಮತ್ತೆ ಕೆಳಗಿಳಿಸಲಾಗುತ್ತದೆ. ಕ್ರೇನ್ ಸಹಾಯ ಬಳಸಿ ಈ ರೆಸ್ಟೋರೆಂಟ್ ನಿರ್ಮಿಸಲಾಗಿದೆ.
ಈ ರೆಸ್ಟೋರೆಂಟ್ ಆಹಾರವನ್ನು ಸವಿಯಲು ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಗರ್ಭಿಣಿಯರು, ೧೩ ರಿಂದ ೧೪ ವರ್ಷದ ಒಳಗಿನ ಮಕ್ಕಳು, ಅತಿಯಾದ ತೂಕವಿರುವವರು ಮತ್ತು ೪ ಅಡಿ ೫ ಇಂಚ್ ಎತ್ತರದ ಮೇಲಿರುವವರು ಅಲ್ಲಿಗೆ ಹೋಗಬಹುದು.
ಫೋಟೋ ಕೃಪೆ : tLLB
ಬೆಲೆ ಎಷ್ಟು?
ಈ ರೆಸ್ಟೋರೆಂಟ್ ನಲ್ಲಿ ಆಹಾರವನ್ನು ಸ್ವಾದಿಸಲು ಮುಂಗಡವಾಗಿ ಸ್ಥಳವನ್ನು ಕಾಯ್ದಿರಿಸಬೇಕು. ಮೋಕ್ಟ್ರೈಲ್ ನ ಬೆಲೆ ಒಬ್ಬರಿಗೆ ೩, ೯೯೯ ಮತ್ತು ಜೊತೆಗೆ ಊಟ ಒಬ್ಬರಿಗೆ ೬, ೯೯೯ ರೂಪಾಯಿ.
ಇಲ್ಲಿ ಪ್ರೇಮ ನಿವೇದನೆಗಾಗಿ ಪ್ರೇಮಿಗಳು, ವಿವಾಹ ವಾರ್ಷಿಕೋತ್ಸವ ಸಂಭ್ರಮಿಸಿಕೊಳ್ಳುವವರು ಹೆಚ್ಚಾಗಿ ಭೇಟಿ ಕೊಡುತ್ತಾರೆ. ಸಾಧ್ಯವಾದರೆ ನೀವು ಹೋಗಿ ನಿಮ್ಮ ಅನುಭವವನ್ನು ನಮ್ಮ ಆಕೃತಿಕನ್ನಡದಲ್ಲಿ ಹಂಚಿಕೊಳ್ಳಿ
- ಶಾಲಿನಿ ಹೂಲಿ ಪ್ರದೀಪ್