ನಿರ್ದೇಶಕ ಜಯತೀರ್ಥ ಅವರೊಂದಿಗೆ ಮುಕ್ತ ಮಾತುಕತೆ- ಭಾಗ ೨ಜಯತೀರ್ಥವರು ೨೦೦೫ ರಲ್ಲಿ ‘ಹಸಿವು’ ಎನ್ನುವ ಕಿರುಚಿತ್ರವನ್ನು ನಿರ್ದೇಶಿಸುವುದರ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ಅಂದು ಶುರುವಾದ ಅವರ ಸಿನಿ ಪಯಣ ಇಂದು ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ಕ್ರಿಯಾತ್ಮಕ ನಿರ್ದೇಶನದಿಂದ ಸಾಕಷ್ಟು ಜನಪ್ರಿಯರಾಗಿದ್ದಾರೆ. ಸದ್ಯದಲ್ಲೇ ಅವರ ನಿರ್ದೇಶನದ ಹಾಗು ಸಾಕಷ್ಟು ನಿರೀಕ್ಷೆಯ ಚಿತ್ರ ‘ಬನಾರಸ್’ ತೆರೆ ಮೇಲೆ ಬರಲು ಸಜ್ಜಾಗಿದೆ. ಸಿನಿಮಾ ನಿರ್ದೇಶನದ ಬಗ್ಗೆ ಅವರ ಅನುಭವದ ಮಾತುಗಳು ಮುಂದೊರೆಯುತ್ತದೆ.

ಕು ಶಿ : ರಂಗಭೂಮಿಯಲ್ಲಿನ ನಿಮ್ಮ ನಿರಂತರ ಚಟುವಟಿಕೆಗಳ ನಡುವೆ ಚಿತ್ರರಂಗದ ನಂಟು ಹೇಗೆ ಶುರುವಾಯಿತು ?

ಜಯತೀರ್ಥ : ನಾಟಕರಂಗದ ನನ್ನ ಈ ಎಲ್ಲಾ ಚಟುವಟಿಕೆಗಳು ಬೇಡಿಕೆಗಳನ್ನು ಸೃಷ್ಟಿಸಿತು. ಎಷ್ಟೋ ಎನ್ ಜಿ ಒ ಗಳು, ಜಾಹೀರಾತು ಕಂಪನಿಯವರು ನಮ್ಮೊಟ್ಟಿಗೆ ಕೆಲಸ ಮಾಡಿ ಎಂದು ಬೇಡಿಕೆ ಇಟ್ಟವು. ಎನ್ ಜಿ ಒ ಗಳ ಸ್ವಯಂ ಸೇವಕರುಗಳನ್ನು ಕರೆದು ಅವರಿಗೆ ಕೆಲವು ನಾಟಕಗಳನ್ನು ಕಲಿಸಿದ್ದಾಯ್ತು. ಖಾಸಗಿ ಜಾಹೀರಾತು ಸಂಸ್ಥೆಯೊಂದು ಸರಕಾರದೊಂದಿಗೆ ಕೈ ಜೋಡಿಸಿ ಕೆಲವು ಪ್ರಾಜೆಕ್ಟ್ ಗಳನ್ನು ಮಾಡುತ್ತಿತ್ತು. ನಾನು ಅವರೊಂದಿಗೆ ಸೇರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದೆ. ಆಗ ಎಷ್ಟೋ ದೇಶಗಳ ವಿಭಿನ್ನ ಭಾಷೆಗಳ ಚಿತ್ರ ನೋಡುವ ಅವಕಾಶ ಸಿಕ್ಕಿತು.ಫ್ರೆಂಚ್ ಮೂವಿಗಳು, ಚಾಪ್ಲಿನ್ ಚಿತ್ರಗಳು, ಮಹಾಯುದ್ಧದ ಕುರಿತಾದ ಚಲನಚಿತ್ರಗಳು ಇನ್ನು ಅನೇಕ ಗೊತ್ತೇ ಇರದ ಭಾಷೆಯ ಶ್ರೇಷ್ಠ ಚಿತ್ರಗಳನ್ನು ನೋಡಿ ಯೋಚಿಸಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತೀಯ ಚಲನಚಿತ್ರಗಳಲ್ಲಿ ಪ್ರಯೋಗಾತ್ಮಕತೆ ತುಂಬಾ ಕಡಿಮೆ. ನಾನು ಯಾಕೆ ಪ್ರಯತ್ನ ಮಾಡಬಾರದೆಂದು ದಿನವೂ ಹಲವು ಭಾಷೆಗಳ ಚಿತ್ರಗಳನ್ನು ನೋಡಲು ಆರಂಭಿಸಿದೆ. ನೋಡಿ ಅಧ್ಯಯನ ಮಾಡುತ್ತಾ ಹೇಗೆ ನಿರ್ದೇಶಕರುಗಳು ತಮ್ಮ ಕನಸುಗಳನ್ನು ಸಾಮಾಜಿಕ ಸಂಗತಿಗಳೊಡನೆ ಬೇರೆಸುತ್ತಾರೆ ಎಂದು ಅಚ್ಚರಿಪಟ್ಟೆ. ‘ಕಿಮ್ ಕಿ ಡುಕ್’ ದಕ್ಷಿಣ ಕೊರಿಯಾ ದೇಶದ ನಿರ್ದೇಶಕ ಇತ್ತೀಚೆಗಷ್ಟೇ ತೀರಿಕೊಂಡರು. ಅವರು ನಿರ್ದೇಶಸಿದ ಚಿತ್ರಗಳು ಅದರಲ್ಲಿನ ವಿಚಾರಗಳು ನನ್ನನ್ನು ತುಂಬಾನೇ ಆಕರ್ಷಸಿತು.

ನಿರ್ದೇಶಕ ಜಯತೀರ್ಥ ಅವರೊಂದಿಗೆ ಮುಕ್ತ ಮಾತುಕತೆ- ಭಾಗ ೧

ನನ್ನ ಬಿಡುವಿಲ್ಲದ ಕೆಲಸಗಳಾದ ನಾಟಕಗಳು, ಜಾಹೀರಾತು ಸಂಸ್ಥೆಯೊಂದಿಗಿನ ಪ್ರಾಜೆಕ್ಟುಗಳು, ಜೊತೆಗೆ ತಿರಪತ್ತೂರಿನ ಕಾಲೇಜೊಂದರ guest lecture ಕೆಲಸ, ಇವುಗಳ ನಡುವೆಯೂ ಸಿನಿಮಾ ತಂತ್ರಜ್ಞಾನಗಳನ್ನು ಕಲಿತು ೨೦೦೫ ರಲ್ಲಿ ‘ಹಸಿವು’ ಎಂಬ ಕಿರು ಚಿತ್ರ ನಿರ್ದೇಶಿಸಿದೆ. ಆ ಕಿರುಚಿತ್ರ ಬಹಳ ಒಳ್ಳೆಯ ಪ್ರಶಂಸೆಯನ್ನು ಪಡೆದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮಾನ್ಯತೆಯನ್ನು ಪಡೆದು ಪ್ಯಾರಿಸ್ ಚಿತ್ರೋತ್ಸವದಿಂದ ಉತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಪಡೆಯಿತು.”ಹಸಿವು” ನನ್ನನ್ನು ಚಿತ್ರರಂಗದಲ್ಲೇ ಮುಂದುವರಿಯಲು ಉತ್ತೇಜಸಿತು. ಹಂಸಲೇಖ ಅವರ ದೇಸಿ ಶಾಲೆಯಲ್ಲಿ ಅಭಿನಯ ತರಬೇತಿ ಕೊಡುತ್ತಿದಾಗ ನಿರ್ದೇಶಕ ಶಶಾಂಕ್ ರವರ ಪರಿಚಯವಾಗಿ ನಟ ಪ್ರಜ್ವಲ್ ದೇವರಾಜ್ ರವರಿಗೆ (ಸಿಕ್ಸರ್) ಹಾಗೂ ಅವರ ಮುಂದಿನ ಚಿತ್ರವಾದ ಮೊಗ್ಗಿನ ಮನಸ್ಸಿನ ನಾಯಕ ನಾಯಕಿ ಯರಾದ ಯಶ್ ದಂಪತಿಗಳಿಗೆ ಅಭಿನಯ ತರಬೇತಿಯನ್ನು ಕೊಟ್ಟೆ.ಕು ಶಿ : ಅಭಿನಯ ತರಬೇತಿಯಲ್ಲಿ ಏನೇನು ಮುಖ್ಯ ಅಂಶಗಳು ಇರುತ್ತಿದ್ದವು?

ಜಯತೀರ್ಥ : ಪಾತ್ರಗಳೊಂದಿಗೆ ಮುಖಾ ಮುಖಿ, ಭಾವಭಿನಯ, ಕಣ್ಣುಗಳ ಹಾವಭಾವ, ಧ್ವನಿ ಹೀಗೆ ಸುಮಾರು ಅಧ್ಯಾಯಗಳಿರುತ್ತವೆ.

ಕು ಶಿ : ನಿಮ್ಮ ಮೊದಲ ಚಲನಚಿತ್ರ “ ಒಲವೇ ಮಂದಾರ” ಹೇಗೆ ಪ್ರೇಕ್ಷಕರನ್ನು ತಲುಪಿತು.

ಜಯತೀರ್ಥ: ಜಾನಪದ ಮೇಳದಲ್ಲಿ ಆಕರ್ಷಸಿದ ಅಸ್ಸಾಂನ ಬಿಹು ಕುಣಿತ. ಅಸ್ಸಾಂಮಿನ ಸುಗ್ಗಿ ಸಮಯದಲ್ಲಿ ಎಲ್ಲಾ ಸೇರಿ ಬಿಹು ಕುಣಿತವನ್ನು ಮಾಡುತ್ತಾರೆ. ಇದ್ದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ತೆಗೆದ ಚಿತ್ರ “ಒಲವೇ ಮಂದಾರ”. ಇದರಲ್ಲಿ ನಾಯಕಿ ಬಿಹು ಡ್ಯಾನ್ಸರ್ ಕಾಡಿನ ಹುಡುಗಿ, ನಾಯಕ ದೊಡ್ಡ ಬಿಸಿನೆಸ್ ವ್ಯಕ್ತಿಯ ಮಗ ಇವರಿಬ್ಬರ ನಡುವೆ ಪ್ರೇಮ ವ್ಯಕ್ತವಾಗಿ ಹರಿಯುವುದೇ “ ಒಲವೇ ಮಂದಾರ”. ಈ ಚಿತ್ರ ಜನ ಮನ್ನಣೆಗಳಿಸಿ ಹದಿನೆಂಟು ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಕು ಶಿ : ನಿಮ್ಮ ಮುಂದಿನ ಚಿತ್ರವಾದ “ಟೋನಿ” ಯಲ್ಲಿ ನಿಮ್ಮ ಪ್ರಯೋಗಾತ್ಮಕತೆ ಹೇಗೆ ಕೆಲಸ ಮಾಡಿತು?

ಜಯತೀರ್ಥ: “ಟೋನಿ” ಚಿತ್ರದಲ್ಲಿನ ನಾಯಕ ದುಡ್ಡಿನ ಹಿಂದೆ ಬೀಳುತ್ತಾನೆ ಮತ್ತು ಪಡಬಾರದ ಕಷ್ಟಗಳನ್ನು ಒತ್ತಡಗಳನ್ನು ಎದ ರಿಸುತ್ತಾನೆ ಆಗ ನಾನು ಮೂರು ಉಪಕತೆಗಳನ್ನು ಮದ್ಯದಲ್ಲಿ ಸೇರಿಸಿ ಮೂಲ ಕಥೆಗೆ ಸೇರುವಂತೆ ಮಾಡಿದೆ. ಪ್ರೇಕ್ಷಕರು ತುಂಬಾ ಒಳ್ಳೆಯ ರೀತಿಯಲ್ಲಿ ಆ ಚಿತ್ರವನ್ನು ಸ್ವೀಕರಿಸಿದರು. ಇದರಲ್ಲಿ ಬಿಗ್ ಬಾಸ್ ಖ್ಯಾತಿಯ ಪ್ರದೀಪ ರ ಧ್ವನಿಯನ್ನು ಚಿತ್ರದುದ್ದಕ್ಕೂ ಪರಿಣಾಮಕಾರಿಯಾಗಿ ಬಳೆಸಿಕೊಂಡೆವು ಜೊತೆಗೆ ಜಾನಪದ ಕಲಾವಿದರ ಮೂಲಕ ಒಳ್ಳೆಯ ಸಂದೇಶವನ್ನು ಕೊಟ್ಟೆವು.

ಕು ಶಿ : ಈ ಎರಡು ಪ್ರಯೋಗತ್ಮಕ ಚಿತ್ರ ತೆಗೆದ ನೀವು “ಬುಲೆಟ್ ಬಸ್ಯಾ” ಚಿತ್ರದಲ್ಲಿ ಬರಿ ಹಾಸ್ಯಕ್ಕೆ ಒತ್ತು ಕೊಟ್ಟಿರಿ ಏಕೆ?

ಜಯತೀರ್ಥ: ಮೊದಲ ಎರಡು ಚಿತ್ರಗಳಿಗೂ ಒಳ್ಳೆ ರಿವ್ಯೂ ಬಂದಿದ್ದರು ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟು ದುಡ್ಡು ಮಾಡಲಿಲ್ಲ. ಎಲ್ಲೋ ಒಂದು ಕಡೆ ಬೇಸರವಾಗಿತ್ತು ಆಗ ನೋಡೋಣ ಈ ರೀತಿ ಬರಿ ಹಾಸ್ಯದಲ್ಲೇ ಪ್ರೇಕ್ಷಕರನ್ನು ತಲುಪೋಣ ಎಂದು “ಬುಲೆಟ್ ಬಸ್ಯಾ” ಮಾಡಿದೆ ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆ ದುಡ್ಡು ಮಾಡಿತು. ಶರಣ್ ಅಭಿನಯ ಚೆನ್ನಾಗಿತ್ತು ಹಾಗೂ ಒಟ್ಟು ತಂಡದ ಕೆಲಸ ತುಂಬಾನೇ ಎಫರ್ಟಿವ್ ಹಾಗಿತ್ತು. ಇದರಲ್ಲಿ ಬೇಕು ಅಂತಾನೆ ಪ್ರಯೋಗಕ್ಕೆ ಮುಂದಾಗಲಿಲ್ಲ. ಪ್ರಯೋಗಕ್ಕೆ ಮುಂದಾಗದಿರುವುದೇ ನನ್ನ ಒಂದು ಪ್ರಯೋಗ (ನಗು) ಹ ಹ ಹಾ…. ಈಗಲೂ ಬೇಜಾರದಾಗ ಆ ಚಿತ್ರವನ್ನು ನಮ್ಮ ಮನೆ ಮಂದಿಯೆಲ್ಲಾ ನೋಡಿ ನಗುತ್ತೇವೆ.

ಕು ಶಿ : “ಬ್ಯೂಟಿಫುಲ್ ಮನಸ್ಸುಗಳು” ಚಿತ್ರದ ಮೂಲಕ ಮಾಧ್ಯಮದ ಸಾಮಾಜಿಕ ಜವಾಬ್ದಾರಿಯನ್ನು ಎಚ್ಚರಿಸಿದಿರಿ.

ಜಯತೀರ್ಥ: ಹೌದು… ಬರಿಯ ಮಾಧ್ಯಮವಷ್ಟೇ ಅಲ್ಲಾ, ಅಧಿಕಾರದಲ್ಲಿರುವವರು ಹೇಗೆ ಅಧಿಕಾರವನ್ನು ದುರುಪಯೋಗಪಡೆಸಿಕೊಳ್ಳಬಹುದು ಎಂದು ತೋರಿಸಿದ್ದೇನೆ. ಒಬ್ಬ ಮಹಿಳೆ ಮಾಧ್ಯಮಗಳ ಅವಸರದ ವರದಿಯಿಂದ ಹೇಗೆ ಕಷ್ಟಪಡುತ್ತಾಳೆ ಹಾಗೂ ವರದಿ ಮಾಡುವ ಮುನ್ನ ಮಾಧ್ಯಮಗಳ ಇನ್ವೆಸ್ಟಿಗೇಷನ್ ಎಷ್ಟು ಮುಖ್ಯ ಹಾಗೂ ಜವಾಬ್ದಾರಿಯುತ ಎಂದು ತೋರಿಸುವುದೇ ನನ್ನ ಉದ್ದೇಶವಾಗಿತ್ತು. ಹಾಗೂ ಮತ್ತೊಮ್ಮೆ ಪ್ರೇಕ್ಷಕರಿಂದ ಅಭಿನಂದಿಸಲ್ಪಟ್ಟೆ ಜೊತೆಗೆ ಪ್ರಶಸ್ತಿಯು ಬಂತು.

ಕು ಶಿ : ನಿಮ್ಮ “ವೆನಿಲಾ” ಚಿತ್ರ ಮೂಡಿದ್ದು ಹೇಗೆ?

ಜಯತೀರ್ಥ : ಡ್ರಗ್ಸ್ ಮಾಫಿಯ ಹಾಗೂ ಯುವ ಜನತೆ ಮೇಲಿನ ಅದರ ಕರಾಳತೆಯ ಹರಿವು ಮೂಡಿಸಬೇಕೆಂದು ವೆನಿಲ ಚಿತ್ರ ತೆಗೆದಿದ್ದು. ನೋಡಿ ೧೮ ರಿಂದ ೨೫ ರ ವರೆಗಿನ ಯುವಕ ಯುವಕಿಯರಲ್ಲಿ ತುಂಬಾನೇ ಕ್ರಿಯಾಶೀಲತೆ ಇರುತ್ತದೆ. ಈ ಡ್ರಗ್ಸ್ ನ ಚಟಕ್ಕೆ ಬಲಿಯಾಗಿ ಹುಡುಗ ಹುಡುಗಿಯರು ಅದನ್ನು ಸೇವಿಸಿ ದಿನಗಟ್ಟಲೆ ಸತ್ತವರಂತೆ ಬಿದ್ದುಕೊಂಡು ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜಕ್ಕೆ, ದೇಶಕ್ಕೆ ಬಹಳ ನಷ್ಟವಾಗುತ್ತಿದೆ. ತಮ್ಮ ಅದ್ಬುತ ಕ್ರಿಯಾಶೀಲತೆಯಿಂದ ದೇಶಕ್ಕೆ ಉಪಯುಕ್ತ ಕೊಡುಗೆಗಳನ್ನು ಕೊಡುವ ವಯಸ್ಸಿನಲ್ಲಿ ಯುವಜನತೆ ಈಗ ಎಲ್ಲೆಡೆ ಸುಲಭವಾಗಿ ಸಿಗುತ್ತಿರುವ ಈ ಡ್ರಗ್ಸ್ ನಿಂದ ಹಾಳಾಗುತ್ತಿದೆ. ಇದನ್ನು ಎಚ್ಚರಿಸಲು ಈ ಚಿತ್ರ ತೆಗೆದಿದ್ದು. ಎಷ್ಟೋ ನನ್ನ ಆತ್ಮೀಯರಿಗೂ ಈ ಚಿತ್ರ ನಾನು ತೆಗೆದಿದ್ದು ಅಂತ ಗೊತ್ತಿಲ್ಲ. ಯಾಕೆಂದರೆ ನಿರ್ಮಾಪಕರ ಉಡಾಫೇಯಿಂದ ಚಿತ್ರಕ್ಕೆ ಸರಿಯಾದ ಪ್ರಮೋಷನ್ ಸಿಗಲಿಲ್ಲ.ಕು ಶಿ : ‘ಬೆಲ್ ಬಾಟಮ್’ ಚಿತ್ರದ ಯಶಸ್ಸು ನಿಮಗೆ ತೃಪ್ತಿ ತಂದಿತಾ?

ಜಯತೀರ್ಥ: ಈ ಚಿತ್ರವನ್ನು ಪ್ರೇಕ್ಷಕರು ಅದ್ಬುತ ರೀತಿಯಲ್ಲಿ ಸ್ವೀಕರಿಸಿದರು. ಇಡೀ ತಂಡದ ಒಟ್ಟು ಕೆಲಸ ಪರಿಣಾಮಕಾರಿಯಾಗಿತ್ತು. ರಿಷಬ್ ಶೆಟ್ಟಿ, ಅಚ್ಯುತ್, ಹರಿಪ್ರಿಯಾ ಎಲ್ಲರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತಮಿಳು ತೆಲಗಿನಲ್ಲೂ ಸಹ ಬೆಲ್ ಬಾಟಮ್ ಡಬ್ ಹಾಗಿ ಅಲ್ಲೂ ಕೂಡ ಯಶಸ್ವಿಯಾಗಿದೆ.

ಫೋಟೋ ಕೃಪೆ : Indian Express

ಕು ಶಿ: ನಿಮ್ಮ ಹೊಸ ಚಿತ್ರ “ಬನಾರಸ್” ಕುರಿತು ಹೇಳಿ

ಜಯತೀರ್ಥ: “ಬನಾರಸ್” ಮೇಲ್ನೋಟಕ್ಕೆ ಪ್ರೇಮ ಕಥೆಯಂತೆ ಕಂಡರೂ ಅದರಲ್ಲಿ ಸಾಮಾಜಿಕ ಜವಾಬ್ದಾರಿ ಗಳ ಉದ್ದೇಶವನ್ನು ತೋರಿಸಿದ್ದೇನೆ. ಅಷ್ಟಲ್ಲದೆ ನನ್ನ ಮಟ್ಟಿಗೆ ಕಾಶಿಯನ್ನು ಕನ್ನಡ ಚಿತ್ರರಂಗದಲ್ಲಿ ತೋರಿಸಿರೋದು ತುಂಬಾ ಕಡಿಮೆ. ನಮ್ಮ ತಂಡದ ಶಕ್ತಿಯಿಂದ ಇಡೀ ಬನಾರಸ್ ಅನ್ನು ತುಂಬಾ ಶ್ರೀಮಂತವಾಗಿ ತೋರಿಸಿದ್ದೀವಿ. ಅಲ್ಲಿನ ಎಲ್ಲಾ ಘಟ್ಟಗಳಲ್ಲೂ ಚಿತ್ರೀಕರಣ ಮಾಡಿದ್ದೇವೆ. ನನ್ನ ಎಲ್ಲಾ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರದ ವಿಶುಯಲ್ಸ್ ಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಡೀ

ಚಿತ್ರವೇ ಒಂದು ಪ್ರಯೋಗ ಇದರಲ್ಲಿ ಪ್ರೀತಿ, ವಿರಹ, ಹಾಸ್ಯ,ವಿಜ್ಞಾನ, ಹೊಸ ವಿಚಾರಗಳು ತುಂಬಾನೇ ಇವೆ. ಚಿತ್ರದ ಅಂತಿಮ ದೃಶ್ಯ ಅದ್ಭುತವಾಗಿ ಮೂಡಿ ಬಂದಿದೆ ಎಲ್ಲರು “ಬನಾರಸ್” ಚಿತ್ರವನ್ನು ನೋಡಬೇಕೆಂದು ಆಶಿಸುತ್ತೇನೆ. ಚಿತ್ರವೂ ಮಾರ್ಚ್ ಅಂತ್ಯದ ವೇಳೆಗೆ ಬಿಡುಗಡೆಯಗುತ್ತದೆ.

ಫೋಟೋ ಕೃಪೆ : graho

ಕು ಶಿ : ನಿಮ್ಮ ಮುಂದಿನ ಚಿತ್ರ ಯಾವುದು ಅದರ ವಿಷೇಶತೆ ಎನು?

ಜಯತೀರ್ಥ: ಮುಂದಿನ ಚಿತ್ರ “ ಪೆಂಟಾಗನ್” ಹೆಸರು ಅಂತಿಮವಾಗಿಲ್ಲ ಈ ಚಿತ್ರವನ್ನು ನಾನು, ಯೋಗರಾಜ್ ಭಟ್, ಪವನ್ ಕುಮಾರ್, ಕೆ ಎಮ್ ಚೈತನ್ಯ, ಹಾಗೂ ಶಶಾಂಕ್ ಒಟ್ಟು ಐದು ನಿರ್ದೇಶಕರು ಕೂಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದೇವೆ ಎಂದಿನಂತೆ ಈ ಚಿತ್ರದಲ್ಲಿ ನಮ್ಮೆಲ್ಲರ ಹೊಸ ಹೊಸ ಪ್ರಯೋಗಗಳು ಕೂಡಿವೆ ಮತ್ತು ಪ್ರೇಕ್ಷಕರಿಗೆ ಅದ್ಬುತ ಸಿನಿಮಾ ಕೊಡುವ ಭರವಸೆ ಇದೆ. ಚಿತ್ರೀಕರಣ ಶುರು ಹಾಗಿದೆ.


  • ಕು ಶಿ ಚಂದ್ರಶೇಖರ್

 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW