ಜಾನಪದ ರತ್ನ ಶ್ರೀ ಹೆಚ್ ಎಲ್ ನಾಗೇಗೌಡರ ಜನ್ಮದಿನ೧೧ ಫೆಬ್ರವರಿ, ಡಾ. ಎಚ್. ಎಲ್.ನಾಗೇಗೌಡರ ಜನ್ಮದಿನ. ಜಾನಪದ ಲೋಕವನ್ನು ನೆನೆದಾಗಲೆಲ್ಲಾ ಎಚ್. ಎಲ್. ನಾಗೇಗೌಡ ಅವರ ಸಾಧನೆ ಕಣ್ಣ ಮುಂದೆ ಬರುತ್ತದೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ ಓದಿ…

ಮಂಡ್ಯ ಜೆಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿಯ ತೆಂಗಿನಕಾಯಿ ವ್ಯಾಪಾರಿ ಮಗನೊಬ್ಬ ಓದಲು ಬಲು ಚುರುಕಾದಂತಹ ಹುಡುಗ. ಅಂದೊಂದು ಕಾಲವಿತ್ತು, ಹೈಸ್ಕೂಲು ಮುಗಿಸುವುದೇ ದೊಡ್ಡ ಸಾಧನೆಯಾಗಿತ್ತು.ಏಕೆಂದರೆ ಓದುವ ಆಸಕ್ತಿಯಿದ್ದರೂ ಓದಲು ಮೂಲಭೂತ ಸೌಕರ್ಯಗಳಿರುತ್ತಿರಲಿಲ್ಲ. ಬಸ್, ಬೈಕ್ , ವಿದ್ಯುತ್ ಸೌಕರ್ಯದಿಂದ ಅಂದಿನ ಜನ ವಂಚಿತರಾಗಿದ್ದರು. ಆದರೆ ಆ ಹುಡುಗ ಎಲ್ಲ ಕಷ್ಟಗಳನ್ನು ಮೀರಿ ಓದುತ್ತಾ ಹೋದ. ತನ್ನೂರಿನಲ್ಲಿ ಹೈಸ್ಕೂಲು ಮುಗಿಸಿ, ಬೆಂಗಳೂರಿನ ಕಾಲೇಜನೊಂದರಲ್ಲಿ ಭರ್ತಿ ಪಡೆದು ,ಹಾಸ್ಟೆಲ್ ನಲ್ಲಿದ್ದುಕೊಂಡು ಬಿ.ಎಂ. ಶ್ರೀ ಅವರಿಂದ ಇಂಗ್ಲಿಷ್, ವಿ.ಸೀ ಅವರಿಂದ ಕನ್ನಡ ಹಾಗು ಸಿ. ರಂಗಾಚಾರ್ ಅವರಿಂದ ಹಿಂದಿಯನ್ನುಕಲಿತು, ವಿದ್ಯೆಯಲ್ಲಿ ಪ್ರಾವೀಣ್ಯತೆ ಸಾಧಿಸಿದ.

ಮುಂದೆ ಮೈಸೂರಿನ ಮಹಾರಾಜ ಕಾಲೇಜುನಲ್ಲಿ ಬಿ ಎಸ್ ಸಿ ಓದಿದ ನಂತರ ಕಾನೂನು ಪದವಿ ಓದಲು ಕರ್ನಾಟಕದಲ್ಲಿ ಅವಕಾಶ ಸಿಗದಿದ್ದಾಗ ಪುಣೆಗೆ ತೆರಳಿ ಅಲ್ಲಿ ಕಾನೂನು ಪದವಿ ಮುಗಿಸಿಕೊಂಡರು. ಕೇಂದ್ರೀಯ ನೇಮಕಾತಿ ಮಂಡಳಿಯ ಮೂಲಕ ಮುನ್ಸೀಫ್ ಕೋರ್ಟ್ ನಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು.ವಿವಾಹದ ಬಳಿಕ ಮೈಸೂರು ಸಿವಿಲ್ ಸರ್ವೀಸಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಅದರಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಪ್ರೊಬೆಷನರಿ ಅಧಿಕಾರಿಯಾಗಿ ೧೯೪೧ ರಲ್ಲಿ ಗೆಜೆಟೆಡ್ ಅಧಿಕಾರಿಯಾದರು. ೧೯೬೦ ರಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಈ ಐ ಎ ಎಸ್ ಅಧಿಕಾರಿ ಮತ್ಯಾರು ಅಲ್ಲ, ಜಾನಪದ ಲೋಕದ ಸೃಷ್ಟಿಕರ್ತ ನಾಗೇಗೌಡ ರ ಸಾಧನೆಯ ಸಣ್ಣ ಕತೆ .

ಜಿಲ್ಲಾಧಿಕಾರಿಗಳಾಗಿ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯುತ್ತಮವಾದ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದರು. ೧೯೭೩ ರಲ್ಲಿ ರಾಜ್ಯದ ಲೋಕಾ ಸೇವಾ ಆಯೋಗದ ಸದಸ್ಯರಾಗಿ ನೇಮಿಸಲ್ಪಟ್ಟಾಗ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಾವಿರಾರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉದ್ಯೋಗ ನೀಡಿದ್ದರು.

ಫೋಟೋ ಕೃಪೆ : facebook

ನಾಗೇಗೌಡರ ಸಾಹಿತ್ಯ ಕೃಷಿ :

ನಿವೃತ್ತಿಯ ನಂತರ ರಾಜ್ಯ ಸರ್ಕಾರವು ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿತ್ತು. ನಾಗೇಗೌಡರ ಆಸಕ್ತಿಯೆಲ್ಲ ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿದ್ದ ಕಾರಣ ರಾಜಕೀಯ ಅವರಿಗೆ ಗೌರವ ಬಡ್ತಿಯಾಗಿತ್ತಷ್ಟೆ. ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿನ ಹಿಡಿತ ಅವರನ್ನು ಒಳ್ಳೆಯ ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಭಾಷಾಂತರಕಾರರಾಗಿ, ಪ್ರವಾಸಕಥನಕಾರರಾಗಿ, ಆತ್ಮಚರಿತ್ರಕಾರರಾಗಿ, ಜಾನಪದ ಕರ್ತಾರರಾಗಿ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೊಡುಗೆ ಕೊಡುವಲ್ಲಿ ಯಶಸ್ವಿಯಾಗಿದ್ದರು.

ನಾಗೇಗೌಡರು ತಮ್ಮ ತಾರುಣ್ಯದಲ್ಲಿ ರಚಿಸಿದ ‘ನಾನಾಗುವೆ ಗೀಜಗನ ಹಕ್ಕಿ’ ಕವನಗಳ ಸಂಕಲನ. ‘ಕಥೆ – ವ್ಯಥೆ’ ಸಂಕಲನ ಎಂಟು ನೀಳ್ಗವನಗಳನ್ನೂ ರಚಿದ್ದಾರೆ. ನೈಜ್ಯತೆಯನ್ನಾಧರಿಸಿ ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ಅವುಗಳಲ್ಲಿ ‘ಖೈದಿಗಳ ಕಥೆಗಳು’ ಮುಖ್ಯವಾದದ್ದು, ಖೈದಿಗಳನ್ನು ಸ್ವತಃ ಭೇಟಿ ಮಾಡಿ ಅವರ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ಅವರ ಸುಖ-ದುಃಖಗಳನ್ನು ಅರಿತು ರಚಿಸಿದ ಕೃತಿ ಇದಾಗಿದೆ.‘ಸರ್ ವಾಲ್ಟರ್ ಸ್ಕಾಟ್’ ಅವರ ‘ಕೆನಿಲ್ ವರ್ತ್’, ಚೀನಾ ಸಾಮ್ರಾಜ್ಯದ ಬಗೆಗಿನ ‘ಮಾರ್ಕೊಪೋಲೋ ಪ್ರವಾಸ ಕಥನ’, ವೆರಿಯರ್ ಎಲ್ವಿನರ ‘ಗಿರಿಜನ ಪ್ರಪಂಚ’, ಹಲವಾರು ಮಹನೀಯರು ಭಾರತಕ್ಕೆ ಬಂದು ಇಲ್ಲಿ ಕಂಡ ಭಾರತದ ಬಗ್ಗೆ ಏಳು ಸಂಪುಟಗಳಲ್ಲಿ ಮೂಡಿದ ‘ಪ್ರವಾಸಿ ಕಂಡ ಇಂಡಿಯಾ’ ಇವು ನಾಗೇಗೌಡರ ಅನನ್ಯ ಅನುವಾದಿತ ಕೃತಿಗಳಾಗಿ ಪ್ರಸಿದ್ಧಿ ಪಡೆದಿವೆ.

This slideshow requires JavaScript.

ನಾಗೇಗೌಡರ ಅವರಿಗೆ ಜಾನಪದದ ಮೇಲಿದ್ದ ಪ್ರೀತಿ

ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಅವರ ಉಸಿರಾಗಿತ್ತು. ಅವರು ಸರ್ಕಾರಿ ಅಧಿಕಾರಿಯಾಗಿದ್ದಾಗ ಗ್ರಾಮೀಣರ ಒಡನಾಟದಿಂದಾಗಿ ಅವರ ಮನಸ್ಸು ಜಾನಪದದತ್ತ ವಾಲಿತು. ಗ್ರಾಮೀಣ ವಸ್ತುಗಳನ್ನು ಉಳಿಸುವಲ್ಲಿ ಮುಂದಾದರು.

ಆಗ ಜಾನಪದ ನಶಿಸುವ ಸಂದರ್ಭದಲ್ಲಿ ಅದನ್ನರಿತು ತಮ್ಮನ್ನು ಜಾನಪದ ಕ್ಷೇತ್ರಕ್ಕೆ ಸಮರ್ಪಿಸಿಕೊಂಡರು. ಅಲ್ಲಿಂದ ಸಾಹಿತಿಗಳು, ವಿದ್ವಾಂಸರನ್ನು, ಬುದ್ದಿಜೀವಿಗಳನ್ನು ಒಂದೆಡೆ ಸೇರಿಸುವಲ್ಲಿ ಹೆಚ್ಚು ಗಮನ ಹರಿಸಿದರು. ೧೯೭೧ ರಲ್ಲಿ ಅಕ್ಟೋಬರ್ ೨೭ , ೨೮ ಮತ್ತು ೨೯ ಈ ಮೂರು ದಿನಗಳ ಕಾಲ ನಾಗಮಂಗಲದಲ್ಲಿ ‘ಅಖಿಲ ಕರ್ನಾಟಕ ಜಾನಪದ ಸಮ್ಮೇಳನ’ ನಡೆಯಲು ಮೂಲ ಕಾರಣಕರ್ತರಾದರು. ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವಾರು ಖ್ಯಾತ ಸಾಹಿತಿಗಳನ್ನು ಒಂದೆಡೆ ಸೇರಿಸಿ ಜಾನಪದ ಹಾದಿ ಸುಗಮವನ್ನಾಗಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದಾಗ ಅವರು ಮಂಗಳೂರಿನಲ್ಲಿ ನಡೆಸಿದ ಜನಪದ ಕಲಾ ಮಹೋತ್ಸವಗಳು ಮತ್ತು ಅಖಿಲ ಕರ್ನಾಟಕ ದ್ವಿತೀಯ ಜಾನಪದ ಸಮ್ಮೇಳನವು ಜಾನಪದ ಕ್ಷೇತ್ರದ ಅಚ್ಚಳಿಯದ ದಾಖಲೆಗಳು.ಸಂಗೀತ, ನಾಟಕ, ನೃತ್ಯಗಳಿಗೆ ಪ್ರತ್ಯೇಕ ಅಕಾಡೆಮಿಗಳಿದ್ದಾಗ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಜನಪದ ಕಲೆ, ಸಾಹಿತ್ಯ ಅಕಾಡೆಮಿ ಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಸ್ಥಾಪನೆಗೆ ಕಾರಣರಾದರು. ಸೋಬಾನೆಯವರು, ಕೋಲಾಟದವರು, ಗೊಂಬೆಯಾಟದವರು, ದೊಂಬಿದಾಸರು, ಹೆಳವರು ಸಾಕಷ್ಟು ಜಾನಪದ ಕಲೆಗಳು ಇನ್ನು ಜೀವಂತವಾಗಿ ಉಳಿದಿವೆ ಎಂದರೆ ಅದಕ್ಕೆ ಮುಖ್ಯ ಕಾರಣ ನಾಗೇಗೌಡರು ಎಂದರೆ ತಪ್ಪಲಾಗರದು.

ನಾಗೇಗೌಡರು ೧೯೭೯ ರಲ್ಲಿ ಜಾನಪದ ಟ್ರಸ್ಟ್ ವೊಂದನ್ನು ಪ್ರಾರಂಭಿಸಿದರು. ನಾಡಿನಾದ್ಯಂತ ಸಂಚರಿಸಿ ಸಾವಿರಾರು ಕಲಾವಿದರನ್ನು ಭೇಟಿಯಾಗಿ ಜನಪದ ಗೀತೆ, ಕಥೆ ಗಾದೆ, ಒಗಟು ಮೊದಲಾದ ಜನಪದ ಸಾಹಿತ್ಯ ಪ್ರಸಾರಗಳನ್ನು ಧ್ವನಿಮುದ್ರಿಸಿಕೊಂಡರು. ೧೫೦೦ ಗಂಟೆಗಳಿಗೂ ಹೆಚ್ಚು ಕಾಲ ಕೇಳಬಹುದಾದ ಜಾನಪದ ಧ್ವನಿಮುದ್ರಿಕೆಗಳು ಅವರ ಬಳಿ ಇದ್ದವು. ೮೦೦ ಗಂಟೆಗಳಿಗೂ ಹೆಚ್ಚು ಕಾಲ ನೋಡಬಹುದಾದ ಜಾನಪದ ವಿಡಿಯೋ ಭಂಡಾರವನ್ನು ಕೂಡಾ ಅವರು ನಿರ್ಮಿಸಿದ್ದರು. ನಾಗೇಗೌಡರ ಮಾರ್ಗದರ್ಶನದಲ್ಲಿ ‘ಸಿರಿಗಂಧ’ ಎಂಬ ಶೀರ್ಷಿಕೆಯ ಜಾನಪದ ದಾಖಲಾತಿ ಸಾಕ್ಷಚಿತ್ರವು ನೂರಾ ಎಂಟು (೧೦೮ )ಕಂತುಗಳಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗಿ ಅದು ಅಪಾರ ಜನಮೆಚ್ಚುಗೆ ಗಳಿಸಿತ್ತು.

ಫೋಟೋ ಕೃಪೆ : janapada loka

ಜಾನಪದ ಲೋಕ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅವರು ನಿರ್ಮಿಸಿರುವ ‘ಜಾನಪದ ಲೋಕ’ವು ಸಾಕಷ್ಟು ಜಾನಪದ ರಸಿಕರನ್ನು ತನ್ನತ್ತ ಸೆಳೆಯುತ್ತಿದೆ. ಮತ್ತು ಜಾನಪದ ಅಧ್ಯಯನಕ್ಕೆ ಅಲ್ಲಿ ಸಾಕಷ್ಟು ಅವಕಾಶವನ್ನು ಮಾಡಿಕೊಡಲಾಗಿದೆ. ಜಾನಪದ ಮೆರುಗು, ಜಾನಪದ ಕಲಾವಿದರಿಗೆ ಗೌರವ, ಜನರನ್ನು ಜಾನಪದತ್ತ ಸೆಳೆಯುವಲ್ಲಿ ಜಾನಪದ ಲೋಕದ ಸೇವೆ ಅನನ್ಯವಾಗಿದೆ.

ನಾಗೇಗೌಡರಿಗೆ ಅವರ ಸಾಹಿತ್ಯಕ ಸೇವೆ, ಜಾನಪದ ಕ್ಷೇತ್ರದ ಸೇವೆ ಹಾಗೂ ಮನುಕುಲದ ಸೇವೆಗಾಗಿ ಹಲವಾರುಪ್ರಶಸ್ತಿ, ಗೌರವಗಳು ಸಂದಿವೆ. ೨೦೦೫ ಸೆಪ್ಟೆಂಬರ್ ರಲ್ಲಿ ನಾಗೇಗೌಡರು ನಿಧನರಾದರು. ತಾವು ಮಾಡಿದ ಕೆಲಸದಿಂದ ಸದಾ ಸ್ಮರಣೀಯರಾಗಿದ್ದಾರೆ. ಅವರ ಆತ್ಮಕಥೆ ‘ನಾಗಸಿರಿ’ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿದೆ. ಅವರ ಕಲಾಸೇವೆ ಇಂದು ಕೂಡ ಸಾಕಷ್ಟು ಜಾನಪದ ಕಲಾವಿದರಿಗೆ ಸ್ಫೂರ್ತಿ ಹಾಗು ಅನ್ನವನ್ನು ನೀಡುತ್ತಿದೆ.

(ಮಾಹಿತಿ ಸಂಗ್ರಹ : ಶಿವಕುಮಾರ್ ಬಾಣಾವರ್)


  • ಶಾಲಿನಿ ಹೂಲಿ ಪ್ರದೀಪ್
5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW