ನಾಯಕನಿಗೆ ಎದುರಾಗಿ ನಿಲ್ಲುವ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ಅಂತಹ ಅದ್ಭುತ ಪಾತ್ರಗಳಿಂದಲೇ ಜನ-ಮನ ಗೆದ್ದವರು ನಮ್ಮ ಕಂಚಿನ ಕಂಠದ ಅರಸರಾದಂತಹ “ಸುಂದರ ಕೃಷ್ಣ ಅರಸ”ರವರು.ಅವರ ಸಾಧನೆ ಬಗ್ಗೆ ಲೇಖಕ ನಾಗರಾಜ್ ಲೇಖನ್ ಅವರು ಇನ್ನಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಮುಂದೆ ಓದಿ…
ಒಂದು ಚಿತ್ರದಲ್ಲಿ ನಾಯಕ ಯಶಸ್ವಿಯಾಗಬೇಕಾದರೆ ಎದುರಿಗೆ ಬರಿ ನಾಯಕಿಯೊಬ್ಬಳೆ ಇದ್ದರೆ ಸಾಲದು.ಅವನಿಗೆ ಸರಿ ಸಮಾನಾಗಿ ಸವಾಲು ಹಾಕಿ, ಎದರು ನಿಲ್ಲುವವನ್ನೊಬ್ಬ ಇದ್ದರೇನೆ, ನಾಯಕನಾದವನು ಅವನನ್ನು ಎದುರಿಸಿ ಗೆದ್ದರೇನೆ, ನಾಯಕನ ಪಾತ್ರಕ್ಕೆ ಬೆಲೆ. ಆ ಚಿತ್ರದ ಕಥೆಗೂ ಒಂದು ಅರ್ಥ. ನಾಯಕನಿಗೆ ಎದುರಾಗಿ ನಿಲ್ಲುವ ಪಾತ್ರವು ಬಹಳ ಮುಖ್ಯವಾಗಿರುತ್ತದೆ. ಅಂತಹ ಅದ್ಭುತ ಪಾತ್ರಗಳಿಂದಲೆ ಜನ-ಮನ ಗೆದ್ದವರು ನಮ್ಮ ಕಂಚಿನ ಕಂಠದ ಅರಸರಾದಂತಹ “ಸುಂದರ ಕೃಷ್ಣ ಅರಸ”ರವರು.
ಸುಮಾರು ಎರಡುವರೆ ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯ, ವಿಶಿಷ್ಠ ನಗು, ಮುಖಭಾವ, ಗಡಸು ಧ್ವನಿಯಿಂದ ಖಳನಾಯಕರಾಗಿ ರಂಜಿಸಿ ಮಿಂಚಿ ಮರೆಯಾದವರು.ಇಂದಿಗೂ ಇವರ ಕಂಚಿನ ಧ್ವನಿಯನ್ನು ಕೇಳಿದೊಡನೆ ಹೇಳಬಹುದು ಈ ಕಂಠಕ್ಕೆ ಅರಸರು ಇವರೆ ಎಂದು. ಕಂಠದಿಂದಲೆ ಗುರುತಿಸಬಹುದಾಂತಹ ಅಪರೂಪದ ಕಲಾವಿದರಲ್ಲಿ ಒಬ್ಬರು ʼಸುಂದರ ಕೃಷ್ಣ ಅರಸ್. ಇಂದಿಗೆ ಅವರ ನೆನಪೊಂದೆ ನಮ್ಮೊಂದಿಗೆ ಶಾಶ್ವತ.
ಫೋಟೋ ಕೃಪೆ : Youtube
ಸುಂದರ ಕೃಷ್ಣ ಅರಸರು, ಸಾಮಾನ್ಯ ಕಲಾವಿದರಾಗಿರಲಿಲ್ಲ ಅವರೊಬ್ಬ ಬಹುಮುಖ ಪ್ರತಿಭೆಯೆಂದೆ ಹೇಳಬಹುದು. ಕೇವಲ ಖಳನಾಯಕನ ಪಾತ್ರವಷ್ಟೆ ಅಲ್ಲದೆ ಎಲ್ಲಾ ಥರದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಬಾಲ್ಯದಿಂದಲೆ ಸುಂದರ ವಾಕ್ಚಾತುರ್ಯ ಹೊಂದಿದ ಅರಸರು, ರಂಗಭೂಮಿಯಲ್ಲಿ ಗದರಿಸಿ, ಅಬ್ಬರಿಸುವ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. ಬಹುಶಃ ಅವರ ಧ್ವನಿ ಕಲಾಸೇವೆಗೆಂದೆ ಕಲಾದೇವಿ ಅವರಿಗೆ ನೀಡಿದ ವರದಾನವಾಗಿರಬಹುದು.
ಫೋಟೋ ಕೃಪೆ : twitter
ರಂಗಭೂಮಿಯಲ್ಲಿ ನಿರತರಾಗಿರುವಾಗಲೆ, ಇವರಿಗೆ ಬೆಳ್ಳಿತೆರೆಯ ಮೇಲೆ ಸೆಳೆತ ಹೆಚ್ಚಾಗಿದ್ದು. ಆದರೆ, ಇವರಲ್ಲಿ ಅಗಾಧ ಪ್ರತಿಭೆಯಿದ್ದರು ಬೆಳ್ಳಿತೆರೆಯಲ್ಲಿ ಅವಕಾಶಗಳು ಮಾತ್ರ ಹುಡುಕಿ ಬರಲಿಲ್ಲ. ಕೊನೆಗೆ ಸುಂದರ ಕೃಷ್ಣ ಅರಸರೆ ತಮ್ಮ ೨೮ನೇ ವಯಸ್ಸಿನಲ್ಲಿ ಸ್ವ-ಪ್ರಯತ್ನದಿಂದ ೧೯೬೯ ರಲ್ಲಿ ʼಪುಟ್ಟಣ ಕಣಗಾಲ್ʼ ನಿರ್ದೇಶನದ ʼಮಲ್ಲಮ್ಮನ ಪವಾಡʼ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಬೆಳ್ಳಿತೆರೆಯನ್ನು ಪ್ರವೇಶಿಸುತ್ತಾರೆ. ಹೀಗೆ ಪುಟ್ಟಣ್ಣ ಕಣಗಾಲ್‌ರವರೊಂದಿಗೆ, ಕಪ್ಪು-ಬಿಳುಪು,ಕರುಳಿನ ಕರೆ, ಗೆಜ್ಜೆಪೂಜೆ,ಸಾಕ್ಷಾತ್ಕಾರದಂತಹ ಅದ್ಭುತ ಚಿತ್ರಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ. ನಂತರ ೧೯೭೩ ರಲ್ಲಿ ‘ಪಿ.ವಿ ನಂಜರಾಜ ಅರಸ್ʼರವರು ನಿರ್ದೇಶನದ. ಅನಂತ್ ನಾಗ್ ರವರ ಮೊದಲ ಚಿತ್ರ “ಸಂಕಲ್ಪ” ಚಿತ್ರದಲ್ಲಿ ಪುಟ್ಟ ಪಾತ್ರದ ಮೂಲಕ ನಟನೆಗೂ ಇಳಿದರು. ಆ ಚಿತ್ರದಲ್ಲಿನ ಅವರ ವಾಕ್ಚಾತುರ್ಯ, ಅಭಿನಯ, ಭಾಷಾಶೈಲಿ, ಕಂಚಿನ ಕಂಠ ಕಂಡಂತಹ ಗಿರೀಶ್ ಕಾರ್ನಾಡರವರು ತಮ್ಮ ʼಕಾಡುʼ ಎಂಬ ಚಿತ್ರದಲ್ಲಿ ʼಅಮರೀಶ್ ಪುರಿʼ ಯವರಿಗೆ ಕಂಠದಾನ ಕಲಾವಿದರಾಗಿ ಸುಂದರ ಕೃಷ್ಣ ಅರಸರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆಮೇಲೆ ಒಂದರ ಮೇಲೊಂದರಂತೆ ಅರಸರವರನ್ನು ಅವಕಾಶಗಳು ಅರಸಿ ಬಂದವು. ಖಳನಾಯಕರಾಗಿ,ಕಂಠದಾನ ಕಲಾವಿದರಾಗಿ ಬಹುಬೇಡಿಕೆಯ ನಟರಾದರು. ೮೦ ರ ದಶಕದಲ್ಲಿ ಸುಂದರ್ ಕೃಷ್ಣ ಅರಸರು ಎಷ್ಟೊಂದು ಬೇಡಿಕೆಯ ಖಳನಟರಾಗಿದ್ದರೆಂದರೆ. ನಾಯಕನಿಗಿಂತ ಮೊದಲು ಸುಂದರ ಕೃಷ್ಣರವರನ್ನೆ ನಿರ್ಮಾಪಕರು ಭೇಟಿ ಮಾಡಿ ಕಥೆ ಒಪ್ಪಿಸಿ, ಚಿತ್ರಕ್ಕೆ ಡೇಟ್ ಫಿಕ್ಸ್ ಮಾಡುತ್ತಿದ್ದರಂತೆ.
ಕೆಲವು ಚಿತ್ರಗಳಲ್ಲಿ ನಾಯಕನಿಗಿಂತ ಹೆಚ್ಚಾಗಿ ಖಳನಾಯಕನಾಗಿ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದಾರೆ. ಕುಳ್ಳ-ಕುಳ್ಳಿ, ಪೆದ್ದ-ಗೆದ್ದ,ಇಬ್ಬನಿ ಕರಗಿತು, ಗೆದ್ದ-ಮಗ ಚಿತ್ರಗಳನ್ನೆಲ್ಲಾ ನೋಡಿದಾಗ ನಮಗೆ ತಿಳಿಯುತ್ತದೆ. ೧೯೭೯ರಲ್ಲಿ ಬಂದಂತಹ ಶಂಕ್ರಣ್ಣರವರ ಮೊದಲ ಚಿತ್ರ ʼಒಂದಾನೊಂದು ಕಾಲದಲ್ಲಿʼ ಅದರಲ್ಲಿನ ʼಪೆರ್ಮಾಡಿʼ ಎಂಬ ಪಾತ್ರದ ಅದ್ಭುತ ಅಭಿನಯಕ್ಕೆ ಅರಸರಿಗೆ ʼಸ್ಟೇಟ್ ಫಿಲ್ಮ್ ಅವಾರ್ಡ್ʼ ಬಂದಿದೆ. ಬರೀ ಧ್ವನಿಯಲ್ಲಷ್ಟೆ ಅಲ್ಲದೆ, ನಟನೆಯಲ್ಲು ಸುಂದರ ಕೃಷ್ಣರು ಅರಸರೆ ಆಗಿದ್ದರು. ಖಳನಾಯಕನ ಪಾತ್ರವೊಂದಕ್ಕೆ ಹೊಂದಿ ಕೊಂಡವರಲ್ಲ.
ಫೋಟೋ ಕೃಪೆ : times of India
ಹಾಸ್ಯ ಪಾತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರ ‘ಮೂಗನ ಸೇಡು’ ,’ನೆಂಟರೊ ಗಂಟೊ ಕಳ್ಳರೊ’, ‘ಆಟೋ ರಾಜ’ ಚಿತ್ರದಲ್ಲಿನ ಅವರ ಹಾಸ್ಯ ಎಲ್ಲರ ಮನಸ್ಸು ಗೆಲ್ಲುತ್ತದೆ.
ಕೆಲವು ಚಿತ್ರಗಳಲ್ಲಿ ನಾಯಕರಾಗಿಯೂ, ದ್ವಿ-ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ನಿರ್ಮಾಪಕರಾಗಿ, ನಿರ್ದೇಶನವನ್ನು ಸಹ ಮಾಡಿದ್ದಾರೆ. ೮೦ ದಶಕದಲ್ಲಿ ಬಂದ ‘ನಮ್ಮಮ್ಮ ತಾಯಿ ಅಣ್ಣಮ್ಮʼ ಚಿತ್ರದಲ್ಲಿ ನಾಯಕರಾಗಿ ಅವರ ಅಭಿನಯ ನೋಡಬಹುದು. ನಮ್ಮ ಕನ್ನಡ ಚಿತ್ರರಂಗ ಕಂಡಂತಹ ಅತೀ ಅಪರೂಪದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿದ್ದರು ಸುಂದರ ಕೃಷ್ಣ ಅರಸ್. ಅಂದಿನ ದಿಗ್ಗಜ ನಟರಾದ ಅಣ್ಣಾವ್ರು, ವಿಷ್ಣುದಾದ, ರೆಬೆಲ್ ಸ್ಟಾರ್ ಅಂಬರೀಶ್,ಟೈಗರ್ ಪ್ರಭಾಕರ್, ಕರಾಟೆ ಕಿಂಗ್ ಶಂಕರ್ ನಾಗ್ , ಶಶಿ ಕುಮಾರ್, ಎಲ್ಲರೊಂದಿಗೂ ಖಳನಟರಾಗಿ, ಕಂಠದಾನ ಕಲಾವಿದರಾಗಿ, ಹಾಸ್ಯ ನಟರಾಗಿ ಎಲ್ಲಾ ಥರದ ಪಾತ್ರಗಳಲ್ಲು ನಾಯಕನಿಗೆ ಸರಿ ಸಮಾನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಗೂಂಡಾಗುರು, ಖದೀಮ ಕಳ್ಳರು, ಅಜೀತ್, ಅಂತ, ಏಟು ಎದುರೇಟು ಚಿತ್ರಗಳು ಇವರ ಉತ್ತಮ ಅಭಿನಯಕ್ಕೆ ಸಾಕ್ಷಿಯಾಗಿವೆ. ಸುಂದರ್ ಕೃಷ್ಣ ಅರಸರು ಇಂದು ನಮ್ಮೊಂದಿಗೆ ಇದ್ದಿದ್ದರೆ ಹಿರಿಯ ಕಲಾವಿದರಾಗಿ ೭೯ನೇ ವರ್ಷದ ಸಂಭ್ರಮದಲ್ಲಿರುತ್ತಿದ್ದರು.
ಆದರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ೧೯೯೩ರಲ್ಲಿ ತಮ್ಮ ೫೩ನೇ ವಯಸ್ಸಿನಲ್ಲಿಯೆ ಅರಸರಂತಿದ್ದ ಸುಂದರ ಕೃಷ್ಣರು ತಮ್ಮ ಅಪಾರ ಕಲಾ ಬಂಧುಗಳನ್ನು, ಅಭಿಮಾನಿ ಬಳಗವನ್ನು, ಬಿಟ್ಟು ಮತ್ತೆ ಬಾರದಂಥ ಲೋಕಕ್ಕೆ ಹೊರಟು ಹೋದರು.ಇಂದು ಅವರ ಕಂಚಿನ ಕಂಠ, ಅಭಿನಯವಷ್ಟೆ ನೋಡಿ ನೆನಪಿಸಿ ಕೊಳ್ಳುವ ಭಾಗ್ಯ ನಮ್ಮದು ಅಷ್ಟೆ. ಅವರ ತಮ್ಮ ಸುರೇಶ್ ಅರಸರವರು ಕೂಡ ಅಣ್ಣನಂತೆ ಚಿತ್ರರಂಗದಲ್ಲಿ ಉತ್ತಮ ಸಂಕಲನಕಾರರಾಗಿ ಹೆಸರುವಾಸಿಯಾಗಿದ್ದಾರೆ. ಹಾಗೂ ಸುಂದರ್ ಕೃಷ್ಣ ರವರ ಮಗ ನಾಗೇಂದ್ರ ಅರಸ್ ಕೂಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಕಲನಕಾರರಾಗಿ ಗುರುತಿಸಿಕೊಂಡಿದ್ದಾರೆ.
ಫೋಟೋ ಕೃಪೆ : times of India
ʼರಾಕಿʼ ಚಿತ್ರದ ಮೂಲಕ ಯಶ್ ರವರನ್ನು ʼರಾಕಿಂಗ್ ಸ್ಟಾರ್ʼ ಮಾಡಿ ಪರಿಚಯಿಸಿದ ಕೀರ್ತಿ, ಸುಂದರ್ ಕೃಷ್ಣ ಅರಸ್ ರವರ ಮಗ ನಾಗೇಂದ್ರ ಅರಸ್‌ರವರಿಗೆ ಸಲ್ಲುತ್ತದೆ. ದಶಕಗಳ ಕಾಲ ತಮ್ಮ ವಿಶಿಷ್ಠ ಅಭಿನಯ, ವಿಶೇಷ ಕಂಠದಿಂದ ಕಲಾಭಿಮಾನಿಗಳನ್ನು ರಂಜಿಸಿ. ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ನೆನಪಾಗುವ ʼಸುಂದರ್ ಕೃಷ್ಣ ಅರಸ್ʼರವರಿಗೆ ನಮ್ಮ ಆಕೃತಿ ಕನ್ನಡ ಬಳಗದಿಂದ ಸವಿನೆನಪಿನ ನಮನ.
- ನಾಗರಾಜ್ ಲೇಖನ್