ನಿರ್ದೇಶಕ ಜಯತೀರ್ಥ ಅವರೊಂದಿಗೆ ಮುಕ್ತ ಮಾತುಕತೆ- ಭಾಗ ೧
ಸಿನಿ ಪ್ರಿಯರಿಗೆ ರಸದೌತಣವನ್ನು ನೀಡುತ್ತಾ ಬಂದ ನಿರ್ದೇಶಕರಲ್ಲಿ ಜಯತೀರ್ಥ ಅವರು ಕೂಡಾ ಒಬ್ಬರು. ‘ಬೆಲ್ ಬಾಟಮ್’, ‘ಬುಲೆಟ್ ಬಸ್ಯಾ’, ‘ಬ್ಯೂಟಿಫುಲ್ ಮನಸ್ಸುಗಳು’ ಸೇರಿದಂತೆ ಸಾಕಷ್ಟು ಉತ್ತಮ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿ ಅವರ ಮನಸ್ಸನ್ನು ಗೆದ್ದವರು. ಅವರ ರಂಗಭೂಮಿಯ ಪಯಣದ ಎಷ್ಟೋ ವಿಚಾರಗಳು ಆಕೃತಿಕನ್ನಡದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಜಯತೀರ್ಥ ಈಗಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. “ಒಲವೇ ಮಂದಾರ” ಚಿತ್ರದ ಮೂಲಕ ನಿರ್ದೇಶಕರಾಗಿ ‘ಟೋನಿ’,’ ಬುಲೆಟ್ ಬಸ್ಯಾ’, ‘ಬ್ಯೂಟಿಫುಲ್ ಮನಸ್ಸುಗಳು’, ‘ಬೆಲ್ ಬಾಟಮ್’,’ ವನಿಲಾ’, ಸಿನಿಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿ ಚಿತ್ರಗಳನ್ನು ಗೆಲ್ಲಿಸಿ ಈಗ ಸದ್ಯಕ್ಕೆ ತಮ್ಮ ಹೊಸ ಚಿತ್ರ “ಬನಾರಸ್” ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಜಯತೀರ್ಥರವರು ಈಗಿನ ಜನರಿಗೆ ತಿಳಿದ ಮಟ್ಟಿಗೆ ಒಬ್ಬ ಚಲನಚಿತ್ರ ನಿರ್ದೇಶಕರು ಆದರೆ ಅವರು ಬೆಳದು ಬಂದದ್ದು, ಸಂಪೂರ್ಣ ರಂಗಭೂಮಿ ಹಿನ್ನೆಲೆಯಿಂದ ಹಾಗೂ ಊಹಿಸಲಾಗದಷ್ಟು ಅದ್ಬುತ ಕೆಲಸಗಳನ್ನು ರಂಗಭೂಮಿಯಲ್ಲಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಅವರ ರಂಗಭೂಮಿ ಅನುಭವ ಹಾಗೂ ಯಶಸ್ಸನ್ನು ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಆಕೃತಿ ಕನ್ನಡಕ್ಕಾಗಿ ನಮ್ಮ ಬರಹಗಾರರಾದ ಕು ಶಿ ಚಂದ್ರಶೇಖರ್ ಮಾಡಿರುವ ಸಂದರ್ಶನವನ್ನು ನಮ್ಮ ಪತ್ರಿಕೆಯಲ್ಲಿ ಎರಡು ಭಾಗಗಳಲ್ಲಿ ಮುಂದಿಡುತ್ತಿದ್ದೇವೆ.

ಕು ಶಿ : ನಿಮ್ಮ ತಂದೆ, ತಾಯಿ, ಬಾಲ್ಯ ಹಾಗೂ ಶಿಕ್ಷಣದ ಬಗ್ಗೆ ಪರಿಚಯ ಮಾಡಿಕೊಡಿ ?

ಜಯತೀರ್ಥ : ಮೇ ೮, ೧೯೭೭ ರಂದು ಬೆಂಗಳೂರಿನಲ್ಲಿ ನಾನು ಹುಟ್ಟಿದ್ದು. ನಮ್ಮ ತಾಯಿ ಟೈಲರಿಂಗ್ ಟೀಚರ್ ರಾಗಿದ್ದರು. ಅವರು ಹಲವಾರು ಜನರಿಗೆ ಹೊಲಿಗೆ ತರಬೇತಿಯ ಶಿಕ್ಷಣವನ್ನು ಕೊಡುತ್ತಿದ್ದರು. ಮತ್ತು ತಂದೆ ಕಂಟ್ರಾಕ್ಟರ್. ಓದಿದ್ದು ೮ ನೇಯ ತರಗತಿಯವರೆಗೂ ಮಾತ್ರ. ಯಾಕೋ ಏನೋ ವಿದ್ಯೆ ಕಲಿಬೇಕು ಎಂಬ ಆಸಕ್ತಿಯೇ ಕಡಿಮೆ ಇತ್ತು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಅಲ್ಪ ಮೊತ್ತ ಗಳಿಸುತ್ತಿದ್ದೆ.

ನನ್ನ ಹದಿನಾರನೇಯ ವಯಸ್ಸಿನಲ್ಲಿ ಹಿರಿಯ ರಂಗಭೂಮಿ ಕಲಾವಿದ ಎ.ಎಸ್.  ಮೂರ್ತಿ (ಜಿಗಿ ಜಿಗಿ ಗೊಂಬೆ ಆಟ) ಯವರ ಪರಿಚಯವಾಗಿ ಅವರ ‘ಅಭಿನಯ ತರಂಗ’ಕ್ಕೆ ಸೇರಿದೆ. ಎ ಎಸ್ ಮೂರ್ತಿಯವರು ‘ಆಕಾಶವಾಣಿ ಈರಣ್ಣ’ ಎಂದೇ ಪ್ರಸಿದ್ದರಾದವರು. ಹಾಗೂ ಬೀದಿ ನಾಟಕಗಳಲ್ಲಿ ಯಶಸ್ಸನ್ನು ಕಂಡವರು. ಅಭಿನಯ ತರಂಗದಲ್ಲಿ ಎಲ್ಲಾ ಬಗೆಯ ವಿಭಾಗಗಳಲ್ಲೂ ಕೆಲಸ ಮಾಡುತ್ತಾ ರಂಗಭೂಮಿಯ ವಿವಿಧ ಆಯಾಮಗಳು ಪರಿಚಯವಾಯಿತು.

ಕು ಶಿ : ಯಾವ ಬಗೆಯ ಕೆಲಸಗಳು ಇರುತ್ತಿತ್ತು?

ಜಯತೀರ್ಥ : ಕಥೆ ಸಂಭಾಷಣೆ ಬರೆಯುವುದು, ನಟರಿಗೆ ಬಣ್ಣ (ಮೇಕಪ್) ಹಚ್ಚುವುದು, ವಸ್ತ್ರವಿನ್ಯಾಸ ಇನ್ನು ಅನೇಕ ಬಗೆಯ ಕೆಲಸಗಳನ್ನು ಕಲಿಯುವ ಅನಿವಾರ್ಯತೆ ಇತ್ತು. ಒಂದು ಶಾಲೆಯಲ್ಲಿಹಲವಾರು ವಿಷಯಗಳನ್ನೊಳಗೊಂಡಿರುತ್ತದೆಯೋ ಹಾಗೆಯೇ ಈ ರಂಗಭೂಮಿಯಲ್ಲೂ ಈ ಎಲ್ಲ ವಿಷಯಗಳು ಒಳಗೊಂಡಿತ್ತು.ಈ ಎಲ್ಲ ಕೆಲಸಗಳಲ್ಲಿ ತೊಡಗುತ್ತಾ ಕ್ರಮೇಣ ಅಲ್ಲಿನ ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದೆ. ಅಭಿನಯಿಸುತ್ತಾ ಅಲ್ಲಿನ ಮಕ್ಕಳಿಗೆ ತರಬೇತಿಯನ್ನು ಕೊಡುತ್ತಾ, ಜೊತೆಗೆ ನಾನು ಒಬ್ಬ ವಿದ್ಯಾರ್ಥಿಯಾಗಿ ತೊಡಗಿಸಿಕೊಂಡೆ.

ಕು ಶಿ : ನಿಮ್ಮ ಪ್ರಕಾರ ರಂಗಭೂಮಿ ಒಂದು ಶಾಲೆ ಹೇಗೆ?

ಜಯತೀರ್ಥ : ಬರಿಯ ಶಾಲೆಯಲ್ಲ. ರಂಗಭೂಮಿ ಎಂದರೆ ಅದು ದೊಡ್ಡ ವಿಶ್ವವಿದ್ಯಾಲಯ. ಸಮಾಜದಲ್ಲಿ ಒಂದು ವ್ಯವಸ್ಥೆ ಇದೆ. ಅದು ಶಾಲೆಯ ಮೂಲಕ ಓದು, ಬರಹ, ಅದಕ್ಕೊಂದು ಸರ್ಟಿಫಿಕೇಟು, ಕೆಲಸ ಇದನ್ನೆಲ್ಲಾ ರಂಗಭೂಮಿ ಒಡೆದು ಹಾಕಿ ಬಿಡುತ್ತದೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಯಾರು ಎಲ್ಲಿ ಬೇಕಾದರೂ ಬದುಕಬಹುದು.

ಮಾಸ್ಟರ್ ಹಿರಣ್ಣಯ್ಯ, ರಮ, ದತ್ತಣ್ಣ, ಸೋಮಶೇಖರ್ ಈಗೆ ಅನೇಕ ಹಿರಿಯ ರಂಗಭೂಮಿ ಕಲಾವಿದರು ನಿರಂತರವಾಗಿ ಬಂದು ಪಾಠ ಮಾಡುತಿದ್ದರು . ಬಿ ಸಿ ಚಂದ್ರಶೇಖರ್ ನಮಗೆ ಇತಿಹಾಸ ಪಾಠ ಮಾಡುತ್ತಿದರು. ಗ್ರೀನ್ ರೂಮ್ ನಾಣಿ, ಜಿ ಕೆ ಗೋವಿಂದರಾವ್, ಆರ್ ನಾಗೇಶ್ ಈಗೆ ಎಲ್ಲರಿಂದಲೂ ನಮಗೆ ವಿವಿಧ ವಿಷಯಗಳ ಬಗ್ಗೆ ಪಾಠವಾಗುತ್ತಿತ್ತು. ಸಂತೋಷವೆಂದರೆ ಕೈಲಾಸಂ ನಾಟಕಗಳು, ಲಂಕೇಶರ ಬರಹ ಇನ್ನು ಅನೇಕ ರಂಗಕೃತಿಗಳನ್ನು ವ್ಯಾಖ್ಯಾನ ಮಾಡುತ್ತಾ ಜೊತೆಗೆ ಆ ಕೃತಿಕಾರರು ಆಯಾ ಘಟ್ಟದಲ್ಲಿ ಹೇಗೆ ಯೋಚಿಸುತ್ತಿದ್ದರು… ಅವರ ಬರಹಗಳಲ್ಲಿರುತ್ತಿದ್ದ ಉದ್ದೇಶ ಇವೆಲ್ಲವನ್ನು ತಿಳಿಸಿ ನಮ್ಮನ್ನು ಆಲೋಚನೆಗೆ ಹಚ್ಚುತ್ತಿದ್ದರು. ಕುವೆಂಪುರವರ “ಬಲಿದಾನ, ಸ್ಮಶಾನ ಕುರುಕ್ಷೇತ್ರ”, ಎಚ್ ಎಸ್ ಶಿವಪ್ರಕಾಶ್ ರವರ “ಮ್ಯಾಕ್ಬೇತ್” ಫ್ರೆಂಚ್ ಮೂಲದ “ಅಸಂಗತ ನಾಟಕಗಳು”, ಅಷ್ಟೇ ಯಾಕೆ ದ.ರ.ಬೇಂದ್ರೆಯವರ ಒಂದು ಕವನವನ್ನು ಕೂಡ ರಂಗಭೂಮಿಯಲ್ಲಿ ಪ್ರತಿನಿಧಿಸಿ ಪ್ರಾಯೋಗಿಕವಾಗಿ ನಾಟಕಗಳನ್ನು ಮಾಡುತ್ತಾ, ಕಲಿಯುತ್ತಾ ಅಗಾಧ ಜ್ಞಾನ ಸಂಪಾದನೆಯಾಯಿತು. ಕ್ರಮೇಣ ಎಸ್ ಮೂರ್ತಿಯವರು ಮಾಡುತ್ತಿದ್ದ ಬೀದಿ ನಾಟಕಗಳು ನನ್ನನ್ನುಆಕರ್ಷಸಿತು.

jayathirth-2-scaled-e1609172385983

ಫೋಟೋ ಕೃಪೆ : ಸುನಿಲ್ ಗುಂಡೂರಾವ್

ಕು ಶಿ : ಬೀದಿ ನಾಟಕಗಳ ಅನುಭವ ಹೇಗಿತ್ತು? ಅದರ ಮಹತ್ವ ಹಾಗೂ ಅದರ ಉದ್ದೇಶ?

ಜಯತೀರ್ಥ : 1998 ರಂದು ಅಭಿನಯ ತರಂಗದಿಂದ ಹೊರಬಂದು ನಾವಷ್ಟು ಹುಡುಗರು ಸೇರಿ ನನ್ನೆದೆಯ ಬೀದಿ ನಾಟಕ ಎಂದು ಶುರುಮಾಡಿದೆವು. ಅದು ನನ್ನನು ಹೊಸ ಪ್ರಪಂಚಕ್ಕೆ ಸೆಳೆಯಿತು. ಯಾವ್ಯಾವುದೋ ಊರು ಕೇರಿ ಎಲ್ಲೆಂದರಲ್ಲಿ ಬೀದಿ ನಾಟಕ ಶುರು ಮಾಡಿದೆವು. ನಮ್ಮ ಮುಖ್ಯ ಉದ್ದೇಶ ಸಾಮಾಜಿಕವಾಗಿ ಕೆಲವು ಉತ್ತಮ ಸಂದೇಶಗಳನ್ನು ತಲುಪಿಸುವುದೇ ಆಗಿತ್ತು. ಹೆಣ್ಣು ಬ್ರೂಣ ಹತ್ಯೆ, ಬಾಲಕಾರ್ಮಿಕತನ, ವರದಕ್ಷಿಣೆ ಪಿಡುಗು ಹೀಗೆ ಆ ಕಾಲದ ಅನೇಕ ಪಿಡುಗುಗಳ ವಿರುದ್ಧ ಜನರಿಗೆರಂಜನೆಯ ಮೂಲಕ ಸಂದೇಶವನ್ನು ತಲುಪಿಸುತ್ತಿದೆವು. ನಮ್ಮ ಈ ಚಟುವಟಿಕೆಯಿಂದ ಎಷ್ಟೋ ಕಡೆ ಒಡೆಯಲಿಕ್ಕೆ ಬಂದವರು ಇದ್ದಾರೆ ಹಾಗೆ ಕರೆದೋಯ್ದು ಸನ್ಮಾನ ಮಾಡಿದವರು ಇದ್ದಾರೆ. ಯಾರೋ ಕೆಲವರು ಹೊಡಿಯಲಿಕ್ಕೆ ಬಂದಾಗ ನಾವೆಲ್ಲಾ ಅವರಿಗೆ ತಿಳಿಹೇಳುತ್ತಿದ್ದೆವು, “ ನೋಡ್ರಪ್ಪಾ ನಾವಿಲ್ಲಿ ಬಂದಿರುವಿದು ನಿಮಗೋಸ್ಕರ ನಿಮ್ಮನ್ನು ರಂಜಿಸಿ ಒಳ್ಳೆಯ ವಿಚಾರಗಳನ್ನು ಹೇಳುವುದ್ದಕ್ಕೆ, ನಿಮ್ಮ ಪ್ರೋತ್ಸಾಹ ತುಂಬಾ ಮುಖ್ಯ” ಎಂದಾಗ ಸುಮ್ಮನಾದವರಿದ್ದಾರೆ ಹಾಗೆ ನಮ್ಮನ್ನು ಕೆಲವು ಚಿಕ್ಕ ಪುಟ್ಟ ಸಂಘಗಳು ಗುರುತಿಸಿ ಸನ್ಮಾನವನ್ನು ಮಾಡಿದ್ದಾರೆ.

ಬೀದಿ ನಾಟಕಗಳಲ್ಲಿ ನಾವು ಎಲ್ಲಾ ತರಹದ ಪ್ರೇಕ್ಷಕರನ್ನು ತಲುಪಲು ಯಶಸ್ವಿಯಾಗಿದ್ದೇವೆ, ಬಡ ಕಾರ್ಮಿಕ ಅಥವಾ ಕಛೇರಿಗೆ ಹೋಗುವ ಮಧ್ಯಮವರ್ಗದ ಜನರು ಅಥವಾ ಕೆಲವು ಸಲ ಶ್ರೀಮಂತರು ಏನೋ ಮಾಡುತ್ತಿದ್ದಾರೆ ನೋಡೋಣ ಎಂದು ನಿಲ್ಲುತ್ತಿದರು. ಹೀಗೆ ನಮ್ಮ ವಿಚಾರ, ಉದ್ದೇಶಗಳನ್ನು ಎಲ್ಲಾ ತರಹದ ಪ್ರೇಕ್ಷಕರಿಗೆ ತಲುಪಿಸುತ್ತಿದ್ದೆವು. ಅಲ್ಲಿ ಯಾವುದೇ ತರಹದ ಮೇಕಪ್ ಆಗಲಿ ಅಥವಾ ಸೆಟ್ಟುಗಳಾಗಲಿ ಇರುತ್ತಿರಲಿಲ್ಲ ಎಲ್ಲಾ ಕಲಾವಿದರು ತಮ್ಮ ದನಿಯನ್ನು ಉಪಯೋಗಿಸಿ ಹಾವ ಭಾವದಿಂದ ಪ್ರೇಕ್ಷಕರನ್ನು ಸೆಳೆಯಬೇಕಾಗಿತ್ತು ಅದು ನಿಜವಾಗಲೂ ಸವಾಲಿನ ವಿಚಾರ.

This slideshow requires JavaScript.

ಕು ಶಿ : ಬೀದಿ ನಾಟಕದ ಅವಧಿಯಲ್ಲಿ ಯಾವುದಾದರೂ ಒಂದು ಘಟನೆ?

ಸಾಕಷ್ಟಿವೆ… ಒಮ್ಮೆ ನಾನೊಬ್ಬನೇ ನನ್ನ ಬೈಸಿಕಲ್ ನಲ್ಲಿ ಎಲ್ಲೋ ಹೋಗುತ್ತಿದ್ದಾಗ ಒಂದು ಸಣ್ಣ ಶಾಲೆ, ಗೂಡ್ಸ್ ಶೆಡ್ ರಸ್ತೆಯಲ್ಲಿ ಇದ್ದಂತದ್ದು ಅಲ್ಲಿಗೆ ಹೋಗಿ ಅಲ್ಲಿನ ಶಾಲಾ ಹೆಡ್ ಮಿಸ್ ಒಬ್ಬರನ್ನು ಸಂಪರ್ಕಿಸಿ, ನಾನೊಬ್ಬ ಕಲಾವಿದ ಮಕ್ಕಳನ್ನು ಕೆಲವು ನಿಮಿಷ ರಂಜಿಸುವೆ ಅವಕಾಶ ಕೊಡಿ ಎಂದು ಕೇಳಿದೆ. ಅವರು ಏನ್ ಮಾಡ್ತೀರಿ? ಎಂದು ಕೇಳಿದಾಗ ನಾನು ಹಾಸ್ಯ ಮಾಡುತ್ತೇನೆ. ಹರಿಕಥೆ ಅಥವಾ ಏನೋ ಒಂದು ಅಭಿನಯಿಸಿ ಕೆಲವೇ ನಿಮಿಷದಲ್ಲಿ ಮುಗಿಸುವೆ ಎಂದು ಕೇಳಿದೆ.

ಆಗ ಅವರು ಮಕ್ಕಳನ್ನು ಮೈದಾನದಲ್ಲಿ ಒಟ್ಟು ಗೂಡಿಸಿದರು. ಅಲ್ಲೇ ಇದ್ದ ಮಹಾತ್ಮಾ ಗಾಂಧಿಯ ಫೋಟೋಗೆ ಹಾಕಿದ್ದ ಹಾರ ನನ್ನ ಕೊರಳಿಗೆ ಹಾಕಿಕೊಂಡು ಅಲ್ಲಿನ ಟೀಚರ್ ಒಬ್ಬರು ಹಾಕಿಕೊಂಡಿದ್ದ ವೇಲನ್ನು ಕೇಳಿ ಪಡೆದು ತಲೆಗೆ ಪೇಟದ ತರ ಸುತ್ತಿಕೊಂಡು ಹರಿಕಥೆಯ ದಾಸನಾಗಿ ತಯಾರಿ ಮಾಡಿಕೊಂಡೆ. “ಮಕ್ಕಳೇ ನೆರೆವ ಪುರದೊಳಗೆ ಹಿರಿಯವನೆನಿಸಿದ” ಅಂತ ಶುರು ಮಾಡಿ ಪಾರ್ವತಿ ಹಾಗೂ ಗಣೇಶನ ಕಥೆ ಹೇಳುತ್ತಾ ಹಾಗೆ ಹಾಸ್ಯಕ್ಕೆ ತಿರುಗಿಸಿ ಅಲ್ಲಿ ಕಾರು ಬಂದಂಗೆ ಧ್ವನಿ ಮೂಲಕ ತೋರಿಸಿ ಕಾರಿನಿಂದ ಇಳಿದಂಗೆ ಮಾಡಿ ಕಾಲಿಗೆ ಚುಯಿಂಗ್ ಗಮ್ ಅಂಟಿಕೊಂಡಂಗೆ ನಟಿಸುತ ಛೇ… ಯಾರೋ ನೋಡಿ ರಸ್ತೆಯಲ್ಲೇ ಹುಗಿದುಬಿಟ್ಟಿದ್ದಾರೆ ಅಂದು ಗೊಣಗುತ್ತಾ ಅದನ್ನು ತೆಗೆದು ಕಸದಬುಟ್ಟಿಗೆ ಹಾಕಿದಂಗೆ ನಟಿಸಿದೆ. ಈ ತರಹದ ಸಣ್ಣ ಪುಟ್ಟ ಅರಿವನ್ನು ಮೂಡಿಸಿದೆ. ಎಲ್ಲಾ ಮಕ್ಕಳು ಖುಷಿಯಾದರು. ಅಲ್ಲಿನ ಟೀಚರ್ ಗಳು ಊಟ ತರಸಿಕೊಟ್ಟು ನನ್ನ ವಿಳಾಸ ತೆಗೆದುಕೊಂಡು ಮತ್ತೆ ಮತ್ತೆ ಬರುತ್ತೀರಿ, ಇನ್ನು ಹಲವು ಶಾಲೆಗಳಲ್ಲಿ ಹೇಳುತ್ತೇವೆ ಎಂದು ಸಂತೋಷದಿಂದ ಬೀಳ್ಕೊಟ್ಟರು. ಇದು ನನ್ನ ಕಲೆಗೆ ಸಿಕ್ಕ ಆ ದಿನದ ಪ್ರೋತ್ಸಾಹ ಮತ್ತೆ ನನಗೆ ಬಹಳ ಕಾಲ ಉಳಿಯುವಂತ ಸುಮಧುರ ನೆನಪು.

jayathirth-1-scaled-e1609171920328

ಫೋಟೋ ಕೃಪೆ : ಸುನಿಲ್ ಗುಂಡೂರಾವ್

ಕು ಶಿ : ಆಗಿನ ನಿಮ್ಮ ಈ ತರಹದ ಪ್ರಯತ್ನ ಎಷ್ಟರಮಟ್ಟಿಗೆ ಗುರುತಿಸಲ್ಪಟ್ಟಿತು?

ಜಯತೀರ್ಥ : ಆನಂತರ ಈ ಶಾಲೆಯವರು ನನ್ನ ವಿಳಾಸವನ್ನು ಹಲವು ಶಾಲೆಗಳಿಗೆ ಕೊಟ್ಟು ಅವರು ನನ್ನನ್ನು ಸಂಪರ್ಕಿಸಿ ನಾನು ಮತ್ತೆ ಈ ಚಟುವಟಿಕೆಗಳಲ್ಲಿ ಬಾಗಿಯಾಗಿ ತುಂಬಾನೇ ಬ್ಯುಸಿಯಾದೆ. ನಂತರ ಕೊಲ್ಕತ್ತಾದಲ್ಲಿ ಅಖಿಲ ಭಾರತೀಯ ನಾಟಕ ಪ್ರದರ್ಶನದ ಕಾರ್ಯಕ್ರಮಕ್ಕಾಗಿ ಒಂದು ನಾಟಕ ನಿರ್ದೇಶಿಸಲು ಕೋರಿಕೆ ಬಂತು, ಮಾಡಿಕೊಟ್ಟೆ ಅದಕ್ಕೆ ಮೊದಲ ಬಹುಮಾನ ಕೂಡ ಬಂತು. ಅಲ್ಲಿನ ಪ್ರದರ್ಶನಕ್ಕೆ ಹೋಗಿದ್ದಾಗ ಬೆಂಗಳೂರಿನವರೇ ಆದ ಮಾಧ್ಯಮ ಸಂಸ್ಥೆಯ ನಿರ್ದೇಶಕರೊಬ್ಬರು ಸಿಕ್ಕಿ ನನಗೆ ಅವರ ಸಂಸ್ಥೆಯಲ್ಲಿ ಕೆಲಸಗಾರರಾಗಿ ಸೇರಲು ಕೋರಿದರು.ಸಂಸ್ಥೆಯ ದೇಣಿಗೆಯನ್ನು ಉಪಯೋಗಿಸಿ ಹಲವಾರು ಬೀದಿನಾಟಕಗಳನ್ನು ಮಾಡಿ ಸ್ಲಂ ಗಳಿಗೆ ಹೋಗಿ ಅರಿವನ್ನು ಮೂಡಿಸುವ ಜವಾಬ್ದಾರಿಯಾಗಿತ್ತು. ಆದರೆ ನನ್ನ ಕಲೆಗಾಗಿನ ಅಲೆಮಾರಿತನವನ್ನು ಅವರಿಗೆ ವಿವರಿಸಿ ಒಂದೇ ಕಡೆ ಸಂಬಳ ಮಾತ್ರಕ್ಕಾಗಿ ಕೆಲಸ ಮಾಡಲು ಕಷ್ಟ ಎಂದು ವಿವರಿಸಿದೆ. ಆಗ ಅವರು ಚಿಂತಿಸಬೇಡಿ ಬೇರೆಯ ತರ ಮಾಡೋಣ ಎಂದು ಹೇಳಿ ಹಲವು ರಾಜ್ಯಗಳ ಸಂಘ ಸಂಸ್ಥೆಗಳಿಗೆ ನಮ್ಮ ಹತ್ತಿರ ಒಂದು ಪ್ರಭಾವಶಾಲಿ ನಾಟಕ ತಂಡವಿದೆಯೆಂದು ವಿವರಿಸಿ ಪತ್ರ ಬರೆದರು. ಪ್ರತಿಯಾಗಿ ದೇಶಾದ್ಯಂತ ನಾಟಕ ಪ್ರದರ್ಶಿಸಲು ಅವಕಾಶ ಸಿಕ್ಕಿ ನನ್ನದೇ ಒಂದು ತಂಡ ಕಟ್ಟಿಕೊಂಡೆ. ಆ ತಂಡದಲ್ಲಿ ಮಂಜುನಾಥ್ ಬಡಿಗೇರ್ (ಜಿ ವಾಹಿನಿಯ ಡ್ರಾಮ ಜೂನಿಯರ್ ನಿರ್ದೇಶಕ) ಮುನೇಶ್ ಬಡಿಗೇರ್, ಬಿ ಎಮ್ ಗಿರಿರಾಜ್ (ಜಟ್ಟ ಸಿನಿಮಾ ನಿರ್ದೇಶಕ) ಹೀಗೆ ಅನೇಕ ಪ್ರಸಿದ್ದರು ನಾನು ಕಟ್ಟಿದ ತಂಡದಿಂದ ಬಂದಂತವರು.


  • ಚಂದ್ರಶೇಖರ ಕುಲಗಾಣ

3.7 3 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW