ಜನುಮ ಜನುಮಕೂ – ಭಾಗ ೮ಸುಮಾಳಿಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆಗೆ ಸಿನಿಮಾ ಶೂಟಿಂಗ್ ನಡೆಯುತ್ತದ್ದ ಜಾಗಕ್ಕೆ ಹೋಗುತ್ತಾಳೆ. ಆಕೆಯ ರೂಪಕ್ಕೆ ಯುನಿಟ್ ಹುಡುಗರು ಮರುಳಾಗುತ್ತಾರೆ. ಸಿನಿಮಾ ನಿರ್ದೇಶಕ ರಾಣಾ ಊಟ ಮಾಡುತ್ತಿದ್ದಾರೆ. ಅಲ್ಲಿ ಸುಮಾಳ ಮುಖಾಮುಖಿ ಭೇಟಿಯಾಗುತ್ತದೆ… ಜನುಮ ಜನುಮಗಳ ಪ್ರೀತಿಯ ಕತೆ ಮುಂದೆ ಏನಾಯಿತು ಮುಂದೆ ಓದಿ… 

ನಮಗೆ ಊಟ ಬೇಡ. ಮನೇಲಿ ಊಟ ಮಾಡ್ಕೊಂಡು ಬಂದಿದ್ದೀವಿ’. ಸುಮಾ ಹೇಳಿದಳು. ಸಿನಿಮಾದವರ ಊಟ. ಎದುರು ಬಂದ ಎಡೆಯನ್ನು ಒಲ್ಲೆ ಅನಬಾರದು ಸುಮ್ಮನೆ ತೆಗೆದುಕೋ’ ಎಂದು ಪೂವಯ್ಯ ಅಕ್ಕನಿಗೆ ಸನ್ನೆ ಮಾಡಿದ. ಸುಮಾ ಯೋಚಿಸುತ್ತಾ ತಟ್ಟೆ ತೆಗೆದುಕೊಂಡಳು.

ಫೋಟೋ ಕೃಪೆ : youtube

‘ರೈಸ್ ಗೆ ಅಲ್ಲಿಗೆ ಬನ್ನಿ. ಸಾಂಬಾರ್,ರಸಂ,ಮಜ್ಜಿಗೆ ಅಲ್ಲೇ ಇರುತ್ತೆ.’

ಅಷ್ಟು ಹೇಳಿದವನೇ ಅಲ್ಲಿ ನಿಲ್ಲಲಿಲ್ಲ. ಅವನಿಗೆ ಎಲ್ಲರಿಗೂ ಬಡಿಸುವ ಕೆಲಸವಿತ್ತು. ಇಡೀ ತಂಡದವರು ಕೈಯಲ್ಲಿ ತಟ್ಟೆ ಹಿಡಿದು ಜಾಗ ಸಿಕ್ಕೆಡೆಗೆ ಕೂತು ಊಟ ಮಾಡತೊಡಗಿದರು. ಇವರಿಬ್ಬರಿಗೂ ಅಚ್ಚರಿ. ಎಲ್ಲರೂ ಇದ್ದಾರೆ. ಆದರೆ ನಿರ್ದೇಶಕ ರಾಣಾ,ಹೀರೊ ಶಯನಕುಮಾರ್,ನಾಯಕಿ ಅನುಷ್ ಚಾವ್ಲಾ ಮಾತ್ರ ಕಾಣುತ್ತಿಲ್ಲ. ಪೂವಯ್ಯ ಅಲ್ಲಿದ್ದ ಲೈಟ್ಸ್ ಹುಡುಗನನ್ನು ಕೇಳಿಯೇ ಬಿಟ್ಟ.

ಅವ್ರು ಒಳಗೆ ಊಟ ಮಾಡ್ತಿದ್ದಾರೆ. ಡೈರೆಕ್ಟರು, ಹೀರೊ, ಹೀರೋಯಿನ್ ಬೇರೆ ಯಾರ ಜೊತೇನೂ ಕೂತು ಊಟ ಮಾಡೋಲ್ಲ’ ಅಂದ.

ಸುಮಾಳಿಗೆ ವಿಚಿತ್ರ ಅನ್ನಿಸಿತು. ಸಿನಿಮಾದವರಲ್ಲಿ ಎರಡು ರೀತಿಯ ಊಟದ ಪಂಕ್ತಿ ಇರುತ್ತಾ ಅಂದುಕೊಂಡಳು. ಇದು ಸರಿಯಲ್ಲ ಎಂದೂ ಅನ್ನಿಸಿತು.
***ಎಲ್ಲರ ಊಟ ಮುಗಿಯಿತು. ಸಿಗರೇಟು ಚಟವಿದ್ದವರು ಗಿಡ- ಪೊದೆಯ ಮರೆಗೆ ಹೋದರು. ಕೆಲವು ಜ್ಯೂನಿಯರ್ ಹುಡುಗಿಯರು ಕಾಫಿ ತೋಟದಲ್ಲಿದ್ದ ಯಾಲಕ್ಕಿ ಬಳ್ಳಿ ಹುಡುಕಿಕೊಂಡು ಆಚೆ ಹೋದರು.

ಈಗ ಸುಮಾಳ ಬಳಿ ಬಂದ ಮ್ಯಾನೇಜರ್ ಹೊಗೆರಾಮ- ಏಳಿ, ಡೈರೆಕ್ಟ್ರು ಫ್ರೀ ಆಗವ್ರೆ. ನಿಮ್ಮನ್ನ ನೋಡ್ಬೇಕಂತೆ,ಬನ್ನಿ.’

ಅದನ್ನೇ ಕಾಯುತ್ತಿದ್ದ ಸುಮಾ ಮತ್ತು ಪೂವಯ್ಯ ಮೇಲಕ್ಕೆದ್ದರು. ಮುಖದಲ್ಲಿ ಸ್ವಲ್ಪ ಆತಂಕವೂ ಇತ್ತು.

ಫೋಟೋ ಕೃಪೆ : netTV4u

ಮೇಡಂ…ನೀವೊಬ್ಬರೇ ಬನ್ನಿ. ಆಡಿಷನ್ ಅಲ್ವ?’ ಹೊಗೆರಾಮ ಹಾಗಂದಾಗ ಇಬ್ಬರೂ ಪೆಚ್ಚಾದರು. ಪೂವಯ್ಯನಿಗೆ ನಿರಾಸೆಯಾಯಿತು. ಡೈರೆಕ್ಟರ್ ಜತೆ ಮಾತಾಡಬೇಕೆಂದಿದ್ದ. ತನ್ನ ಅಕ್ಕನ ಬಗ್ಗೆ ಹೇಳುವುದು ಅವನಿಗೆ ಸಾಕಷ್ಟಿತ್ತು.

‘ಪೂ…ನೀನಿಲ್ಲೇ ಕೂತಿರು. ನಾನು ಹೋಗಿ ಬಂದುಬಿಡ್ತೀನೆ.’ಸುಮಾ ಹಾಗಂದಾಗ ಪೂವಯ್ಯ ಸುಮ್ಮನೇ ತಲೆಯಾಡಿಸಿದ. ಸುಮಾ ಮುಜುಗರದಿಂದಲೇ ಹೊಗೆರಾಮನ ಹಿಂದೆ ಹೋದಳು.

ಒಳಗೆ ನಾಯಕಿ ಅನುಷ್ ಚಾವ್ಲಾ ಕೂತಿದ್ದಳು. ಮೇಕಪ್ ಹುಡುಗರು ಅವಳ ಕೂದಲು ಬಾಚುವುದು,ಮುಖಕ್ಕೆ ಸ್ಪ್ರೇ ಮಾಡುವುದು, ಬೆನ್ನು ಕುತ್ತಿಗೆಯ ಕಡೆ ಪೌಡರ್ ಹಾಕುವುದು ಮಾಡುತ್ತಿದ್ದರು. ಅನುಷ್ ತನ್ನ ಬಾಡಿಯನ್ನ ಅವರಿಗೊಪ್ಪಿಸಿ ಸಣ್ಣ ಚೊಂಪು ತೆಗೆದಿದ್ದಳು.

ಸುಮಾ ಅವರನ್ನು ವಿಚಿತ್ರವಾಗಿ ನೋಡಿ ಮಹಡಿ ಹತ್ತಿ ಮೇಲೆ ಹೋದಳು.

ವಿಶಾಲವಾದ ಕೋಣೆ. ಅಲ್ಲಿ ಈಜಿ ಚೇರ್ ನಲ್ಲಿ ಕೂತು ರಾಣಾ ದಣಿವಾರಿಸಿಕೊಳ್ಳುತ್ತಿದ್ದರು.

‘ಸಾರ್…ನಾನು ಹೇಳಿದ್ನೇಲ್ಲ ಕೂರ್ಗಿ ಹುಡುಗಿ. ಸುಮಾ ಅಪ್ಪಚ್ಚು.ಬಂದಿದ್ದಾರೆ.’

ರಾಣಾರಿಗೆ ದಿಗ್ಭ್ರಮೆ !

ಫೋಟೋ ಕೃಪೆ : The indian Express

ನಿರ್ದೇಶಕ ರಾಣಾ ಕಣ್ಣು ತೆರೆದು ನೋಡಿದರು. ಸುಮಾಳನ್ನು ನೋಡಿದ್ದೇ ತಡ, ತಲೆಯಲ್ಲಿ ದೊಡ್ಡ ಸ್ಪೋಟವಾದ ಹಾಗೆ. ಸುತ್ತಲಿನ ಗೋಡೆಗಳು ಗಿರಗಿರ ತಿರುಗಿದಂತೆ. ಇಡೀ ಬೆಟ್ಟ ಕುಸಿದು ಬಿದ್ದಂತೆ. ಅಷ್ಟೇ ಅಲ್ಲ, ಈ ಲೋಕವೇ ಅಂತ್ಯವಾಗಿ ತಾವು ಇನ್ನಾವುದೇ ಲೋಕದಲ್ಲಿದ್ದಂತೆ ಕಣ್ಣಿಗೆ ಕತ್ತಲ ಕವಿಯಿತು. ಕ್ಷಣಾರ್ಧದಲ್ಲಿ ಎಲ್ಲವೂ ಅದೃಶ್ಯವಾಗಿ ಆ ಹುಡುಗಿಯೊಂದೇ ಎದುರು ನಿಂತಂತೆ ಆಯಿತು.

ತೆರೆದ ಕಣ್ಣುಗಳು ತೆರೆದಂತೆ…
ತೆರೆದ ಬಾಯಿ ತೆರೆದಂತೆ…
ಕೂತುಬಿಟ್ಟರು ರಾಣಾ …
ಆಕೆಯನ್ನು ನೋಡುತ್ತಾ…

ಸುಮಾಳಿಗೆ ಅಷ್ಟೇ. ರಾಣಾರ ಮುಖ ಕಂಡದ್ದೇ ತಡ. ತಾನೆಲ್ಲಿದ್ದೇನೆ ಎಂಬುದನ್ನೇ ಮರೆತುಬಿಟ್ಟಳು. ಕಣ್ಣುಗಳು ಕಿರಿದಾಗಿ ರೆಪ್ಪೆಗಳು ತನ್ನಷ್ಟಕ್ಕೆ ತಾನೇ ಮುಚ್ಚಿಕೊಂಡವು. ಮೈಯಲ್ಲಿ ನಡುಕ. ಎದೆಯಲ್ಲೇನೋ ಕಂಪನ, ಕಾಲ ಕೆಳಗಿನ ಭೂಮಿ ನಡುಗಿದಂತಾಯಿತು.
ರೋಜಿ…!ರಾಣಾರ ಗಂಟಲಿನಿಂದ ದನಿ ನಿಧಾನವಾಗಿ ಉಸಿರಿನೊಂದಿಗೆ ಹೊರಟಿತು. ಸುಮಾ ರೆಪ್ಪೆ ಮುಚ್ಚದೆ ರಾಣಾರಿಗೆ ಕಣ್ಣುಗಳನ್ನೇ ಎವೆಯಿಕ್ಕದೆ ನೋಡುತ್ತಿದ್ದಳು.

ಐವತ್ತೆಂಟು ವರ್ಷದ ರಾಣಾರಿಗೆ ಸುಮಾಳ ವಯಸ್ಸಿನವಳೇ ಆದ ಮಗಳಿದ್ದಾಳೆ. ಆದರೆ ಇದ್ಯಾವುದು ಅವ್ಯಕ್ತ ಸಂಬಂಧದ ನೋಟ? ಇವಳನ್ನು ನೋಡಿದ ತಕ್ಷಣ ಏನಾಯಿತು ರಾಣಾರಿಗೆ?

ಹೊಗೆರಾಮನಿಗೆ ಅಚ್ಚರಿಯಾಯಿತು. ‘ಸಾರ್… ಇವರ ಹೆಸರು ಸುಮಾ ಅಪ್ಪಚ್ಚು ಅಂತ, ರೋಜಿ ಅಲ್ಲ, ಕೂರ್ಗಿ ಹುಡುಗಿ.’

ರಾಣಾ ದೃಷ್ಟಿ ಬದಲಿಸದೆ ಮೆಲ್ಲಗೆ ಹೇಳಿದರು. ‘ರಘುರಾಮ ನೀನು ಆಚೆ ಹೋಗು, ಒಳಗೆ ಯಾರನ್ನು ಬಿಡಬೇಡ. ನಾನು ಕರೆದಾಗ ಬಾ…’ತಲೆಯಾಡಿಸಿದ ಹೊಗೆರಾಮ ಒಮ್ಮೆ ವಿಚಿತ್ರವಾಗಿ ನೋಡಿ ಬಾಗಿಲೆಳೆದುಕೊಂಡು ಹೋದ.ದೃಷ್ಟಿ ಕದಲಿಸದೆ ಸುಮಾ,ರಾಣಾರ ಮುಖ ನೋಡುತ್ತಿದ್ದಳು. ಕಣ್ಣುಗಳಲ್ಲೇನೋ ಸೆಳೆತ. ಕಣ್ಣು ಕಣ್ಣುಗಳು ಸೇರುತ್ತಿದ್ದಂತೆ ಮಹಾಸಾಗರವೊಂದು ಉಕ್ಕಿ ಹರಿದಂತಾಯಿತು. ಸ್ಫೋಟ…ಆಸ್ಪೋಟಗಳು.

ನೀನು…ನೀನು…ಪಪ್ಪು..!’

ಸುಮಾಳ ಗಂಟಲಿನಿಂದ ದನಿಯೊಂದು ಮೆಲ್ಲಗೆ ಹೊರಬಂದಿತು. ಅವಳಿಗರಿವಿಲ್ಲದೆ ಅಷ್ಟೇ ಅದ್ರ೯ವಾಗಿ ರಾಣಾರು ಉತ್ತರಿಸಿದರು.
‘ಯೆಸ್ ..ಯೆಸ್…ನಾನೇ. ಪಪ್ಪು ರಾಣಾ..’ನೀನು ಇಲ್ಲಿಗೆ ಹ್ಯಾಗ್ ಬಂದೆ ರೋಜಿ..?’

‘ಆ೦? ನಾನು ಹ್ಯಾಗ್ ಬಂದೆ ಅಂದ್ರೆ? ಇದು ಜನ್ಮ ಜನ್ಮಾಂತರದ ಸೆಳೆತ ಪಪ್ಪು… ನಲವತ್ತು ವರ್ಷದ ಹಿಂದೆ ನೀನು ನನಗೆ ಹೇಳದೆ ಮದ್ವೆಯಾಗಿಬಿಟ್ಟೆ.ಅದು ನಿನಗೆ ಈಗ ಮರೆತೇ ಹೋಗಿರಬೇಕು.’ ಸುಮಾಳ ಮುಖದಲ್ಲಿ ಬೆವರು ಮಡುಗಟ್ಟಿತ್ತು.

‘ಇಲ್ಲ ರೋಜಿ…ನಾನು ಮರೆತಿಲ್ಲ. ನೀನು ಇನ್ನೂ ನನ್ನ ಹೃದಯದಲ್ಲಿದ್ದೀಯಾ…ನೋಡು..ನೋಡಿಲ್ಲಿ?’

ಫೋಟೋ ಕೃಪೆ : youtube

ರಾಣಾರ ತಮ್ಮ ಶರ್ಟಿನ ಗುಂಡಿಯೊಂದನ್ನು ಬಿಚ್ಚಿದರು. ಕೂಡಲೇ ಸುಮಾಳಿಗೆ ಅದೆಲ್ಲಿತ್ತೋ ಕೋಪ. ಮುಖ ಗಂಟಿಕ್ಕಿತು. ರಪ್ಪನೆ ಅವರ ಕೆನ್ನೆಗೆ ಹೊಡೆದುಬಿಟ್ಟಳು.
ರಾಣಾ… ವಾಸ್ತವಕ್ಕೆ ಬಂದರು. ತಲೆಯೆತ್ತಿ ನೋಡಿದಾಗ ಸುಮಾಳ ಕಣ್ಣಲ್ಲಿ ನೀರಿಯುತ್ತಿತ್ತು. ಮಾತುಗಳು ಇಂಗಿ ಹೋಗಿದ್ದವು. ಕ್ಷಣ ಹೊತ್ತು ಇಬ್ಬರೂ ಹಾಗೆ ಕುಳಿತರು. ಇಬ್ಬರ ದನಿಯೂ ಸತ್ತು ಹೋಗಿತ್ತು.

ಕಟ್ ಕಟ್ ‘ ಬಾಗಿಲು ಬಡಿದ ಸದ್ದು. ಸಾವರಿಸಿಕೊಂಡರು ಇಬ್ಬರೂ. ರಾಣಾ ಗಡಿಬಿಡಿಯಿಂದ ಯಾರದು? ಅನ್ನುತ್ತಿರುವಾಗಲೇ ಒಳಗೆ ಕಾಲಿಟ್ಟ ಪ್ರೊಡ್ಯೂಸರ್ ಚಂದೂ ಪಾಟೀಲ್. ಆತ ಒಮ್ಮೆ ಸುಮಾಳತ್ತ ನೋಡಿ ಅವಳ ಸೌಂದರ್ಯಕ್ಕೆ ಕ್ಷಣದಲ್ಲೇ ಮಾರು ಹೋದ.

ಯಾರೀಪಾ ಈ ಹೆಣ್ಣು ಮಗಳು? ಚಾನ್ಸು ಕೇಳಾಕ ಬಂದಾಳೇನು?ಅಡ್ಡಿ ಇಲ್ಲ ಬಿಡ್ರಿ. ನೋಡಾಕ ಪುರುಮಾಸಿ ಐತಿ ಹುಡುಗಿ. ಈ ಸಿನಿಮಾದಾಗ ಏನರ ಒಂದು ಪಾರ್ಟು ಕೊಡ್ರಿ.’

ಉಡಾಫೆಯ ದನಿ ತಗೆದ ಚಂದೂ ಪಾಟೀಲ. ಓರೆ ಗಣ್ಣಲ್ಲಿ ಸುಮಾಳತ್ತ ನೋಡಿ ನಕ್ಕ. ರಾಣಾರಿಗೆ ಅದನ್ನು ಸಹಿಸಲಾಗಲಿಲ್ಲ ಪಾಟೀಲನ ಮಾತು ಸಹಜವೆನಿಸಲಿಲ್ಲ.

ಫೋಟೋ ಕೃಪೆ : stockvault

‘ದಯವಿಟ್ಟು ನೀವು ಏನೂ ಮಾತಾಡ್ಬೇಡಿ ಪಾಟೀಲರೇ…ಈಗಾಗ್ಲೇ ನೀವು ಹಿಂದಿ ಹುಡುಗಿನ್ನ ತಂದು ನಮಗೆಲ್ಲ ತಲೆನೋವು ತಂದಿದ್ದೀರಿ. ಇನ್ಮುಂದೆ ಹಾಗ್ ಮಾಡ್ಬೇಡಿ..ಪ್ಲೀಸ್.’

ಪಾಟೀಲರಿಗೆ ಅವಮಾನ ಅನಿಸಿತು. ಹೊಸ ಹುಡುಗಿಯ ಮುಂದೆ, ಅದೂ ನಿರ್ಮಾಕನಿಗೆ ಹೀಗೆ ಅವಮಾನ ಮಾಡೋದ ಈ ಡೈರೆಕ್ಟರು? ಪ್ರೊಡ್ಯೂಸರ್ ಅಂದ್ರೆ ಈ ಮನುಷ್ಯನಿಗೆ ಇಷ್ಟೊಂದು ಅಸಡ್ದೆನಾ?

ಸುಮಾ ಗಾಬರಿಯಾಗಿ ನಿಂತಳು. ನಿಜ ಈ ಧ್ವನಿ. ಈ ಕೋಪ ಅಸಮಾಧಾನ. ತಾನು ಹಿಂದೆಲ್ಲೋ ಕಂಡಿದ್ದಿದೆ. ಕೇಳಿದ್ದಿದೆ… ಎಲ್ಲಿ ಅಂತ ಗೊತ್ತಾಗ್ತ ಇಲ್ಲ. ಸುಮಾ ಸಂಕಟಪಟ್ಟರು. ಪ್ರಶ್ನೆಗಳು ಸುಂಟರಗಾಳಿಯಂತಾದವು.

ರಾಣಾರ ಕಣ್ಣು ತನ್ನವು! ಮೂಗು -ಬಾಯಿ…ಎಲ್ಲ ತನ್ನವೇ ಅನಿಸತೊಡಗಿ ಮೆಲ್ಲನೆ ಒಳಗೆ ಬೆವರಿಸಿದಳು.

ಅಷ್ಟರಲ್ಲಿ ಪ್ರೊಡ್ಯೂಸರ್ ಚಂದೂ ಪಾಟೀಲ ಕೆಂಜಗದ ಗೂಡಿನಂತೆ ಮುಖ ಮಾಡಿಕೊಂಡು ಕೋಣೆಯಿಂದ ಹೊರ ಹೋಗಿಬಿಟ್ಟಿದ್ದ. ರಾಣಾರ ತಲೆ ತಗ್ಗಿಸಿಕೊಂಡು ಕೂತಿದ್ದರು. ಹತ್ತಿರ ಬಂದ ಸುಮಾ.

ನೀವು ನಂಗೆ ರೋಜಿ ಅಂದ್ರಿ…’

ಈಗ ಮೆಲ್ಲಗೆ ತಲೆ ಎತ್ತಿ ನೋಡಿದ ರಾಣಾ ಅವಳ ಮುಖ ನೋಡಿದರು. ಕಣ್ಣಲ್ಲಿ ಕಣ್ಣುಗಳು ಸೇರಿದವು.ಹೌದು ಅದೇ ಮುಖ ಅದೇ ದನಿ… ಅದೇ ಕಣ್ಣೋಟ… ಅದೇ ಸೆಳೆತ ಏನಾಯಿತೋ ಇಬ್ಬರೂ ಪರಸ್ಪರ ಮತ್ತೆ ನೋಡಿದರು.

ಪಪ್ಪು…ಅಲ್ವ?’ ಸುಮಾಳ ದನಿಯಲ್ಲಿ ಆತಂಕವಿತ್ತು.

ಈಗ ರಾಣಾರ ಕಣ್ಣುಗಳು ತುಂಬಿ ಬಂದವು. ಎದ್ದು ಬಂದವರೇ ಸುಮಾಳ ತಲೆ ನೇವರಿಸಿ ಹಣೆಗೆ ಮುತ್ತಿಕ್ಕಿಬಿಟ್ಟರು. ಅಬ್ಬಾ! ಯುಗ ಯುಗಗಳು ಸರಿದು ಹೋದ ನಂತರದ ಸ್ಪರ್ಷವಿದು.

ಯೆಸ್…ನಾನೇ ಪಪ್ಪು…ರಾಣಾ…ಆಗ ಇಬ್ಬರೂ ಬೆಳಗಾವಿಯಲ್ಲಿ ಎಂಟನೇ ಕ್ಲಾಸ್ ನಲ್ಲಿದ್ವಿ. ಹೈಸ್ಕೂಲ್ ಮುಗಿಯುವದ್ರೋಳಗೆ ನಾವಿಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ವಿ.ನಿನಗೆ ಎಲ್ಲ ನೆನಪಾಗ್ತಿದೆಯಾ ರೋಜಿ?

ರಾಣಾ ಸುಮಾಳ ಕೆನ್ನೆಯನ್ನು ಬೊಗಸೆಯಲ್ಲಿ ಹಿಡಿದು ಆದ್ರ೯ತೆಯಿಂದ ಕೇಳಿದರು. ಸುಮಾಳ ಹಣೆ ಬೆವರಿತು.ರಾಣಾರ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಹೌದು… ಅದೇ ಕಣ್ಣುಗಳು, ಈಗ ನೆನಪಾಗುತ್ತಿದೆ.

‘ಪಪ್ಪು…’

(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)

ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]


  • ಹೂಲಿಶೇಖರ್  (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು) 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW