ಕುವೆಂಪು ಅವರ ವೈಚಾರಿಕತೆ ನಮ್ಮ ಒಳಗಣ್ಣಿಗೆ ಕಾಣಿಸುವಂತಾಗಬೇಕು. ಸರ್ವೋದಯ ಸಮಾಜಕ್ಕಾಗಿ ನಮ್ಮ ಅರಿವಿನ ಬಾಗಿಲು ತೆರೆಯಬೇಕು.
ವಿಶ್ವಮಾನವ ತತ್ವದ ಸೋಪಾನದಿಂದ ನಾವು ಇಂದು ಹಿಂದೆ ಸರಿಯುತ್ತಿದ್ದೇವೆ. ವಿಜ್ಞಾನ ತಂತ್ರಜ್ಞಾನ ವಿರೂಪತೆಯಿಂದ ಕೂಡಿರುವಲ್ಲಿ ನಾವಿದ್ದೇವೆ. ಮನುಷ್ಯ ಸಂಸ್ಕೃತಿಯನ್ನು ಯಂತ್ರ ಸಂಸ್ಕೃತಿ ಮೀರುವ ಅಪಾಯವಿದೆ. ವಿಜ್ಞಾನ ನಮ್ಮ ಅರಿವಿನ ಅಧೀನದಲ್ಲಿ ಇರಬೇಕು. ಆದರೆ ಅದು ಇಂದು ವಿಸಂಗತಿಯ ರೂಪದಲ್ಲಿದೆ. ಅಧ್ಯಾತ್ಮ, ವಿಜ್ಞಾನ, ಕಲೆ ಎಲ್ಲವೂ ವಾಣಿಜ್ಯೀಕರಣಗೊಂಡಿವೆ.
ಅಧ್ಯಾತ್ಮ, ಸಾಹಿತ್ಯ, ಕಲೆಯ ಭಿನ್ನ ಮಾರ್ಗಗಳು ಒಂದೆಡೆ ಸೇರಬೇಕು. ನಾವು ಈಗ ಅವುಗಳನ್ನು ಬಿಡಿ ಬಿಡಿಯಾಗಿ ನೋಡುತ್ತಿದ್ದೇವೆ. ವಿಜ್ಞಾನ ಕಲೆಯ ಜೊತೆ ಸಮನ್ವಯವಾಗಬೇಕು. ಸಮನ್ವಯದ ದೃಷ್ಟಿ ಬಹಳ ಮುಖ್ಯ ಎಂಬುದು ಕುವೆಂಪು ಅವರ ಆಶಯವಾಗಿತ್ತು. ವಿಜ್ಞಾನ ದೀವಿಗೆಯಾದಾಗ ಸಮಾಜವನ್ನು ಬದುಕಿಸುತ್ತದೆ. ಬೆಳಕು ಬೆಂಕಿ ಆಗಬಾರದು. ಈಗ ನಾವು ಬೆಂಕಿ ಹಿಡಿದು ನಿಂತಿದ್ದೇವೆ. ವೈರುಧ್ಯಗಳ ಕೋಡಿಯಲ್ಲಿ ನಾವು ಬದುಕುತ್ತಿದ್ದೇವೆ. ಕುವೆಂಪು ಪ್ರತಿಪಾದಿಸಿದ ಸಮನ್ವಯ, ಪೂರ್ಣದೃಷ್ಟಿ, ಸರ್ವೋದಯ ಇಂದಿನ ಅಗತ್ಯವಾಗಿದೆ.
ಹತ್ತನೇ ಶತಮಾನದ ಪಂಪ, ಇಪ್ಪತ್ತನೇ ಶತಮಾನದ ಕುವೆಂಪು ನಡುವೆ ಸಾದೃಶ್ಯಗಳಿವೆ. ಕುವೆಂಪು ನಮ್ಮ ಕಾಲದ ಬಹುದೊಡ್ಡ ದ್ರಷ್ಟಾರ.
‘ಮಲೆನಾಡಿನ ಚಿತ್ರಗಳು’ ನಾನು ಓದಿದ ಅವರ ಮೊದಲ ಕೃತಿ. ಮಲೆಗಳಲ್ಲಿ ಮದುಮಗಳು ಇತ್ತೀಚೆಗೆ ಓದಿದ್ದು ‘ ‘ವಿಮರ್ಶೆಯ ವಿಮರ್ಶೆ’ ಕೃತಿಯಲ್ಲಿ ಕುವೆಂಪು-ತೇಜಸ್ವಿಯವರ ನಡುವಿನ ಮಾತುಕತೆಯ ಅಧ್ಯಾಯದಲ್ಲಿ ಕುವೆಂಪುರವರ ವ್ಯಕ್ತಿ ಚಿತ್ರಣ ಸ್ವಲ್ಪ ಅರ್ಥವಾಗಿತ್ತು. ‘ಅಣ್ಣನ ನೆನಪು’ ಕೃತಿಯ ಮುಖಾಂತರ ಕುವೆಂಪುರವರಿಗಿದ್ದು ವಿಭಿನ್ನ ದೃಷ್ಟಿಕೋನಗಳು ಸಿಕ್ಕಿದಂತಾಯಿತು.
ಫೋಟೋ ಕೃಪೆ : Facebook (ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಅಪರೂಪದ ಚಿತ್ರ)
ಅಣ್ಣನ ನೆನಪು, ತೇಜಸ್ವಿಯವರು ತಂದೆ ಕುವೆಂಪು ಅವರೊಂದಿಗಿನ ಒಡನಾಟದ ಅನೇಕ ನೆನಪುಗಳನ್ನು ಸರಳವಾಗಿ ನಿರೂಪಿಸಿರುವ ಕೃತಿ.
ಸಾಹಿತ್ಯ, ರಾಜಕೀಯ, ತತ್ತ್ವಜ್ಞಾನ, ಕನ್ನಡ ಮತ್ತು ಕರ್ನಾಟಕ, ದೈವ ಭಕ್ತಿ, ಸಂಪ್ರದಾಯಗಳು, ಸಾಮಾಜಿಕ ವಿಷಯಗಳ ಬಗ್ಗೆ ಕುವೆಂಪುರವರಿಗೆ ಇದ್ದ ಅನಿಸಿಕೆಗಳನ್ನು ಕೆಲವು ಅಧ್ಯಾಯಗಳಲ್ಲಿ ತೆರೆದಿಟ್ಟಿದ್ದಾರೆ.
ಕುಟುಂಬಕ್ಕೆ ಸಂಬಂಧಪಟ್ಟ ವಿಚಾರಗಳು, ತೇಜಸ್ವಿ ಮತ್ತು ಅವರ ಗೆಳೆಯರು ಮಾಡಿದ ಮತ್ತು ಮಾಡಿಕೊಂಡ ತರ್ಲೆಗಳು, ಅವಾಂತರಗಳು ಮತ್ತು ಅವುಗಳಿಗೆ ಕುವೆಂಪುರವರ ಪ್ರತಿಕ್ರಿಯೆಗಳು ಎಲ್ಲವೂ ನವಿರಾದ ಹಾಸ್ಯದಲ್ಲಿದೆ.
ಇಷ್ಟೇ ಅಲ್ಲದೆ, ಕುವೆಂಪುರವರನ್ನು ಸಂಕಟಕ್ಕೆ ಒಡ್ಡಿದ ಪ್ರಸಂಗಗಳು, ಜನರು ಅವರನ್ನು ಕಾಣುತ್ತಿದ್ದ ರೀತಿ ಮತ್ತು ಜನರಿಂದಾಗುತ್ತಿದ್ದ ತೊಂದರೆಗಳು.. ಹೀಗೆ ಬೇರೆ-ಬೇರೆ ವಿಚಾರಗಳು ಕೂಡ ಇವೆ.
ಸಾಮಾನ್ಯ ಜನರ ದೃಷ್ಟಿಯಲ್ಲಿ ಕಾಣುತ್ತಿದ್ದ ಕುವೆಂಪುರವರ ಜೀವನ ಮತ್ತು ವಿಶಿಷ್ಟ ಮತ್ತು ವೈವಿಧ್ಯಪೂರ್ಣ ವ್ಯಕ್ತಿತ್ವ ಹೊಂದಿದ್ದ ಕುವೆಂಪು ರವರ ಜೀವನ.. ಎರಡನ್ನೂ ತೇಜಸ್ವಿರವರ ಕಣ್ಣಿನ ಮೂಲಕ ನಾವು ಓದಿ ಸವಿಯಬಹುದು. ಉತ್ತಮ ಕೃತಿ.
- ಶಿವಕುಮಾರ್ ಬಾಣಾವರ