ನೆಲ್ಲಿಕಾಯಿಯ ಮಹಿಮೆ : ಸೌಮ್ಯಾ ಸನತ್

ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ಬಾಯಲ್ಲಿ ನೀರೂರುವುದು ಪಕ್ಕಾ. ನಮ್ಮ ಬಾಯಲ್ಲಿ ನೀರು ಬರಲಿಲ್ಲ ಅಂದ್ರೆ ನಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ ಅಲ್ವಾ…ಉಪ್ಪು – ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸಿ, ಹಲ್ಲನ್ನು ಚುಳ್ ಎನ್ನಿಸುತ್ತದೆ. ಅದೇ ಈ ಬೆಟ್ಟದ ನೆಲ್ಲಿಕಾಯಿಯ ಮಹಿಮೆ.

ಕಾರ್ತೀಕ ಮಾಸದಲ್ಲಿ ಸಿಗುವ ದುಂಡಗಿನ ಹಸಿರು-ಹಳದಿ ಮಿಶ್ರಿತ ಬಣ್ಣ ಹುಳಿ-ಸಿಹಿ ಮಿಶ್ರಿತ ರುಚಿಯಿಂದ ಕೂಡಿದ್ದು ಇದೊಂದು ಬಹಳ ಪ್ರಾಚೀನ ಕಾಲದಿಂದಲೂ ಸಿಗುವ ಹಣ್ಣು. ಆಯುರ್ವೇದದ ಸುಪ್ರಸಿದ್ಧ ಪೌಷ್ಠಿಕ ಔಷಧಿಯಾದ ‘ಚ್ಯವನಪ್ರಾಶ’ ಎಂಬ ಲೇಹ್ಯವನ್ನು ಮೊಟ್ಟ ಮೊದಲಿಗೆ ಘೋರ ತಪಸ್ಸಿನಿಂದ ಉಂಟಾದ ಮುಪ್ಪನ್ನು ಹೋಗಲಾಡಿಸಲು `ಚ್ಯವನ ಋಷಿಗೆ’ ಅಶ್ವಿನಿ ದೇವತೆಗಳು ನೀಡಿದ ಉತ್ತಮ ಔಷಧಿ ಎನ್ನುತ್ತಾರೆ ಹಿರಿಯರು. ಆದ್ದರಿಂದಲೇ ಅದಕ್ಕೆ ‘ಚ್ಯವನ ಪ್ರಾಶ’ವೆಂಬ ಹೆಸರು ಬಂದಿತು. ಚ್ಯವನ ಪ್ರಾಶದಲ್ಲಿ ಬಹಳ ಪ್ರಮುಖವಾದ ವಸ್ತುವಾಗಿ ನಲ್ಲಿಕಾಯಿಯನ್ನು ಬಳಸಲಾಗುತ್ತದೆ.

ಫೋಟೋ ಕೃಪೆ : google

ಇದರಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ದೊರಕುತ್ತದೆ. ಈ ಹಣ್ಣು ಬಹಳ ಶ್ರೇಷ್ಠವಾದ ಶಕ್ತಿವರ್ಧಕ (ನಿರೋಧಕ ಶಕ್ತಿ) ಹಾಗೂ ವಯಸ್ಸಾದ ಅಂದರೆ ಮುಪ್ಪನ್ನು ಮುಂದೂಡುವ ಶಕ್ತಿಯುಳ್ಳದ್ದು. ಅದಲ್ಲದೇ ನೆಲ್ಲಿಕಾಯಿಯನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ಹಚ್ಚುವ ನೆಲ್ಲಿಕಾಯಿ ದೀಪಕ್ಕೆ ತುಂಬಾ ಮಹತ್ವವಿದೆ.

ಸಣ್ಣದಾಗಿ ಹೆಚ್ಚಿ ಉಪ್ಪು, ಮೊಸರು, ಇಂಗು ಹಾಕಿದ ಮಿಶ್ರಣದಲ್ಲಿ ನೆನೆಸಿ ಬಿಸಿಲಲ್ಲಿ ಒಣಗಿಸಲು ಇಟ್ಟ ಹಸಿ ನೆಲ್ಲಿಕಾಯಿ ತುಂಬಾ ರುಚಿಯಾಗಿರುತ್ತದೆ. ಉಪ್ಪು, ಹುಳಿಯ ನೆಲ್ಲಿಕಾಯಿಯನ್ನು ಚಪ್ಪರಿಸಿ ಇನ್ನುವ ಮಜವೇ ಬೇರೆ. ಮತ್ತಷ್ಟು ತಿನ್ನಬೇಕೆಂಬ ಬಯಕೆ ಹೆಚ್ಚಾಗುತ್ತೆ. ಹಸಿಯಾಗಿ ಸಿಗದೆ ಇರುವ ಕಾಲದಲ್ಲಿ ನೆರಳಲ್ಲಿ ಒಣಗಿಸಿ ಇಟ್ಟುಕೊಂಡು ಅದರ ಪುಡಿಯನ್ನು ಉಪಯೋಗಿಸಬಹುದು. ಇಷ್ಟೆಲ್ಲ ಖ್ಯಾತಿ ಇರೋ ಬೆಟ್ಟದ ನೆಲ್ಲಿಕಾಯಿಯಲ್ಲಿ ಅಸ್ತಮಾ, ಮಲಬದ್ಧತೆ, ಜೀರ್ಣಶಕ್ತಿ ಸೇರಿದಂತೆ ಹಲವು ರೋಗಗಳಿಗೆ ಈ ಬೆಟ್ಟದ ನೆಲ್ಲಿಕಾಯಿ ರಾಮಬಾಣ.

ಫೋಟೋ ಕೃಪೆ : google

ಬೆಟ್ಟದ ನೆಲ್ಲಿಕಾಯಿಯ ಔಷಧೀಯ ಗುಣಗಳು:

1) ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ, ತಲೆಕೂದಲಿನ ಆರೈಕೆಗೆ ಇದು ರಾಮಬಾಣ.

2) ಇದರಲ್ಲಿ ವಿಟಮಿನ್-ಎ ಹಾಗೂ ಕ್ಯಾರೋಟಿನ್‌ ಇರುವುದರಿಂದ ಕಣ್ಣಿನ ಆರೈಕೆಗೆ ಸಹಕಾರಿ.

3) ದೇಹವು ಕ್ಯಾಲ್ಸಿಯಂ ಅಂಶವನ್ನು ಸಹಕಾರಿ ರೀತಿಯಲ್ಲಿ ಹೀರಿಕೊಳ್ಳಲು ಬೆಟ್ಟದ ನೆಲ್ಲಿಕಾಯಿ ಸಹಾಯ ಮಾಡುತ್ತದೆ. ಇದರಿಂದ ಎಲುಬುಗಳು, ಹಲ್ಲುಗಳು ಹಾಗೂ ಉಗುರುಗಳ ಆರೋಗ್ಯ ಉತ್ತಮವಾಗಿರುತ್ತದೆ.

4) ಬೆಟ್ಟದ ನಲ್ಲಿಕಾಯಿಯಲ್ಲಿರೋ ಪ್ರೋಟೀನ್ ಅಂಶ ನಮ್ಮ ದೇಹದ ಚಯಾಪಚಯ ಚಟುವಟಿಕೆಯನ್ನು ಸುಧಾರಿಸುತ್ತದೆ.

5) ಇದರಲ್ಲಿರುವ ಖನಿಜಗಳು ಹಾಗೂ ಜೀವಸತ್ವಗಳು ಮುಟ್ಟಿನ ಸಮಯದಲ್ಲಿ ಆಗುವ ಸೆಳೆತವನ್ನು ತಡೆಯುತ್ತದೆ.

6) ಮಧುಮೇಹವನ್ನು ನಿಯಂತ್ರಣಗೊಳಿಸಲು ಬೆಟ್ಟದ ನೆಲ್ಲಿಕಾಯಿ ಉತ್ತಮ ಸಹಕಾರಿ.

7) ದೇಹದಲ್ಲಿನ ಎಲ್‌ಡಿಎಲ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

8) ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಹಾಗೂ ಗರ್ಭಾಶಯದ ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ.

9) ಆಹಾರ ಪರಿಣಾಮಕಾರಿಯಾಗಿ ಜೀರ್ಣವಾಗಲು ಸಹಕಾರಿಯಾಗುತ್ತೆ. ಜೊತೆಗೆ ಗ್ಯಾಸ್ಟ್ರಿಕ್ ಮತ್ತು ಜೀರ್ಣಕಾರಿ ರಸ ಸ್ರವಿಸುವಂತೆ ಉತ್ತೇಜಿಸುತ್ತದೆ.

10) ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

11) ಇದರಲ್ಲಿನ ಕಬ್ಬಿಣದ ಅಂಶ ಹೊಸ ಕೆಂಪು ರಕ್ತಕಣಗಳು ಹಾಗೂ ಬಿಳಿರಕ್ತಕಣಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ.

12) ಅತಿಸಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಇದು ಉಪಯುಕ್ತವಾಗಿದೆ.

13) ಅಪೆಟೈಟ್ ಸಮಸ್ಯೆಯನ್ನು ಸುಧಾರಿಸುತ್ತದೆ.

14) ಚರ್ಮದಲ್ಲಿನ ಸುಕ್ಕುಗಳನ್ನು ತಡೆಯುವಲ್ಲಿ ಸಹಕಾರಿ.

ಫೋಟೋ ಕೃಪೆ : google

ನಲ್ಲಿಕಾಯಿ ಚಟ್ನಿ :

ಬೇಕಾಗುವ ಪದಾರ್ಥಗಳು…

•ಎಣ್ಣೆ- 3 ಚಮಚ
•ಸಾಸಿವೆ- 1 ಚಮಚ
•ಇಂಗು- ಚಿಟಿಕೆ
•ಜೀರಿಗೆ- 1 ಚಮಚ
•ಮೆಂತ್ಯೆ- ಕಾಲು ಚಮಚ
•ಕಡಲೆಬೇಳೆ- 1 ಚಮಚ
•ಉದ್ದಿನ ಬೇಳೆ- 1 ಚಮಚ
•ಖಾರದ ಮೆಣಸಿನ ಕಾಯಿ- 5-6
•ಹಸಿ ಮೆಣಸಿನ ಕಾಯಿ -3
•ಕರಿಬೇವು- ಸ್ವಲ್ಪ
•ನೆಲ್ಲಿಕಾಯಿ- ಕಾಲು ಕೆಜಿ
•ಉಪ್ಪು- ರುಚಿಗೆ ತಕ್ಕಷ್ಟು
•ಅರಿಶಿಣದ ಪುಡಿ- ಸ್ವಲ್ಪ
•ಕೊತ್ತಂಬರಿ ಸೊಪ್ಪು- ಸ್ವಲ್ಪ
•ಬೆಲ್ಲ- ಸ್ವಲ್ಪ

ಫೋಟೋ ಕೃಪೆ : google

ಮಾಡುವ ವಿಧಾನ :

ಮೊದಲಿಗೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ ಹಾಕಿ. ಇದು ಕೆಂಪಗಾದ ಬಳಿಕ ಜೀರಿಗೆ, ಮೆಂತ್ಯೆ, ಇಂಗು, ಕಡಲೆಬೇಳೆ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿದುಕೊಳ್ಳಿ.

ನಂತರ ಖಾರದ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಚೆನ್ನಾಗಿ ತೊಳೆದು, ಬೀಜ ತೆಗೆದು ಕತ್ತರಿಸಿಕೊಂಡ ನೆಲ್ಲಿಕಾಯಿ, ಉಪ್ಪು, ಅರಿಶಿಣದ ಪುಡಿ ಹಾಕಿ 8-10 ನಿಮಿಷ ಸಣ್ಣ ಉರಿಯಲ್ಲಿ ನೆಲ್ಲಿಕಾಯಿ ಬೇಯಲು ಬಿಡಿ. ಆಗಾಗೆ ಕೈಯಾಡಿಸುತ್ತಿರಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್’ಗೆ ಹಾಕಿ, ನಂತರ ಸ್ವಲ್ಪ ಬೆಲ್ಲವನ್ನೂ ಸೇರಿಸಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಂಡರೆ ರುಚಿಕರವಾದ ಬೆಟ್ಟದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.

ಹೀಗೆ ಬೆಟ್ಟದ ನೆಲ್ಲಿಕಾಯಿ ಆಧ್ಯಾತ್ಮಿಕ ಹಾಗೂ ಆಯುರ್ವೇದದ ಮಹತ್ವವನ್ನು ಹೊಂದಿದೆ. ಇಂತಹ ಬಹುಪಯೋಗಿ ನೆಲ್ಲಿಕಾಯಿಯನ್ನು ದಿನಕ್ಕೊಂದರಂತೆ ಸೇವಿಸಿದರೆ ಆರೋಗ್ಯ ಸುಧಾರಿಸುತ್ತೆ ಅಂತಾ ಸಂಶೋಧನೆಗಳಿಂದ ದೃಢಪಟ್ಟಿದೆ.


  • ಸೌಮ್ಯಾ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW