‘ಪುಟ್ಟಜ್ಜನ ನೆನಪಿನ ಡೈರಿ’ ಕೃತಿ ಪರಿಚಯ

ತಮ್ಮಣ್ಣ ಬೀಗಾರ ಅವರ ‘ಪುಟ್ಟಜ್ಜನ ನೆನಪಿನ ಡೈರಿ’ ಕೃತಿಯ ಕುರಿತು ನಾಗರಾಜ ಬಿ.ನಾಯ್ಕ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು: ಪುಟ್ಟಜ್ಜನ ನೆನಪಿನ ಡೈರಿ
ಲೇಖಕರು: ತಮ್ಮಣ್ಣ ಬೀಗಾರ
ಪ್ರಕಾಶಕರು: ಗೋಮಿನಿ ಪ್ರಕಾಶನ

ಓದಲು ಬಹು ಆಪ್ತತೆಯಿಂದ ಈ ಪುಸ್ತಕ ಕೈಗೆತ್ತಿಕೊಂಡು ಕುಳಿತಾಗ ಒಂದು ಸಂಭ್ರಮ ಮನಸ್ಸಿಗೆ. ತಮ್ಮಣ್ಣ ಬೀಗಾರ ಸರ್ ಚಿತ್ರಿಸುವ ಮಕ್ಕಳ ಲೋಕವೇ ಹಾಗೆ. ಅಲ್ಲೊಂದು ಪುಟ್ಟ ಕೌತುಕ ಸದಾ ನಿಂತು ಮಕ್ಕಳ ಮಾತನಾಡಿಸುತ್ತದೆ. ಆ ಕೌತುಕದ ಪ್ರತಿರೂಪವಾಗಿ ನಿಂತು ತಾನು ಕಂಡ ಬದುಕಿನ ಕಥೆಯನ್ನು ಹೇಳುತ್ತಾ ಸಾಗುವವನು ಪುಟ್ಟಜ್ಜ. ಪುಟ್ಟಜ್ಜ ಎಂದರೆ ಒಂದು ಆಪ್ತತೆಯ ಅನುಬಂಧ‌. ಬಾಲ್ಯದ ದಿನಗಳನ್ನು ನೆನಪ ಪೋಣಿಸಿ ಕುತೂಹಲದ ಸಾಲುಗಳಲ್ಲಿ ಸಾಗುವವ. ಅವನ ಡೈರಿ ಎಂದರೆ ಹಳ್ಳಿ ಸುತ್ತಿ ಬರುವ ನೆನಪುಗಳು. ಈ ಪ್ರಬಂಧದ ಲೇಖನಗಳು ಇಂದು ಮಕ್ಕಳು ಕಾಣದ ಲೋಕವನ್ನು ತೋರುತ್ತಾ ಖುಷಿಯ ನೀಡುತ್ತಾ ಸಾಗುತ್ತದೆ.

ಸಣ್ಣ ಪುಟ್ಟ ಎನಿಸುವ ಕೆಲಸಗಳು ಮಕ್ಕಳ ಕಣ್ಣಲ್ಲಿ ನಿಂತು ದೊಡ್ಡದಾಗಿ ಉಳಿದು ಬಿಡುತ್ತದೆ. ಪುಸ್ತಕ ಓದಿದ ಪ್ರತಿ ಪುಟಾಣಿಗೂ ಪುಟ್ಟಜ್ಜನ ನೆನಪಿನ ಡೈರಿಯಿಂದ ಕಥೆಗಳು ಕೇಳಿದಂತೆ ಅನಿಸುತ್ತದೆ. ಇದರಲ್ಲಿ ಹದಿನಾಲ್ಕು ಪ್ರಬಂಧಗಳು ಇವೆ. ಪ್ರತಿ ಪ್ರಬಂಧವೂ ತೆರೆಯುವ ಕಥೆ ಮನ ಮುಟ್ಟುತ್ತದೆ. ಬಾಲ್ಯದ ದಿನಗಳನ್ನು ಮೆಲುಕು ಹಾಕಿ ನೆನಪಿಗೆ ಕರೆಯುತ್ತದೆ. ಹಾಲು ಕರೆಯುವ ಕೆಲಸದ ನಡುವೆ ಇರುವ ವಿಶೇಷತೆಗಳು ಬದುಕಿಗೆ ಬೇಕಾದ ಗಟ್ಟಿಯಾದ ಒಂದು ಅನುಭವ ಕಟ್ಟಿ ಕೊಡುತ್ತದೆ.

ಆಲೆಮನೆ ಇಂದಿಗೂ ಕಾಣುವ ಬದುಕು ಪ್ರೀತಿಸುವ ದಿನಗಳದ್ದು. ಅದು ಖುಷಿಯ ಆರಂಭ. ಅಲ್ಲಿ ಕಳೆದ ಬಾಲ್ಯದ ಜೀವಂತಿಕೆ ಸದಾ ಉಳಿದು ಸಿಹಿ ಕಬ್ಬಿನ ಹಾಲು. ಬೆಲ್ಲದ ಪಪ್ಪಾಯಿ, ಸಿಹಿ ದೋಸೆ ಎಳೆ ತೆಂಗಿನಕಾಯಿ ರುಚಿ ಹಾಗೆ ನಾಲಿಗೆಯಲ್ಲಿ ಉಳಿದಂತೆ ಕಾಣಿಸುತ್ತದೆ.

ಗ್ರಹಣ ಮಾತ್ರ ಬೇಡ ಎಂಬ ಪ್ರಬಂಧದಲ್ಲಿ ಗ್ರಹಣದ ಪ್ರಕ್ರಿಯೆ ವಾಸ್ತವ ವಿಜ್ಞಾನದೊಳಗೆ ಕುಳಿತು ಮಾತನಾಡಿದಂತೆ ಕೇಳಿಸುತ್ತದೆ. ಅದರೊಟ್ಟಿಗೆ ತಿಳುವಳಿಕೆ ತೋರಿ ಸಾಗುವ ದಾರಿ ಸರಿ ಎನಿಸುತ್ತದೆ. ಕಾಲುವೆಯ ನೀರು ಕುಡಿಯೋದು ಪ್ರಬಂಧವು ಬಾಲ್ಯದ ದಿನಗಳನ್ನು ಆಟಗಳಲ್ಲೇ ಕಳೆದರೂ ಅದು ಅನುಭವಕ್ಕೆ ಬಂದ ನೋಟ. ಅದರೊಳಗಿನ ಅರಿವು ಒಳಿತಿನ ಸಂಕೇತ. ಕುಡಿವ ನೀರು ಹಾಳಾದಾಗ ನೋವ ತುಂಬಿಕೊಂಡ ಹೊರಟ ಪುಟ್ಟಜ್ಜ ಕಾಣುತ್ತಾನೆ. ಹಳೆಯ ಜನರ ಸಣ್ಣ ಸಣ್ಣ ಯೋಚನೆಯೂ ಇಲ್ಲಿ ದೊಡ್ಡ ಅನ್ವೇಷಣೆಯಾಗಿ ಕಾಣುತ್ತದೆ. ಉಪಕಾರಿಯಾಗಿ ನಿಲ್ಲುತ್ತದೆ.

ಸೈರೋಬನ ಕತ್ತರಿ ಮತ್ತು ಪುಟ್ಟನ ಕಿವಿ ಪ್ರಬಂಧದಲ್ಲಿ ತಲೆಯ ಕೂದಲನ್ನು ಕತ್ತರಿಸುವ ಸುತ್ತ ಹೆಣೆದ ಕುತೂಹಲದ ಸಂಗತಿಗಳಿವೆ. ಅದೊಂದು ಪುಟ್ಟಜ್ಜನ ನೆನಪಿನ ಕಥೆ. ಒಂದು ಸನ್ನಿವೇಶದಲ್ಲಿ ಹೇಗೆ ಬಾಲ್ಯದ ಖುಷಿಯ ವಿಚಾರ ಇರುತ್ತದೆ ಎನ್ನುವುದು ಇದೆ ಇದರಲ್ಲಿ. ಇಂತಹ ಎಳೆಯ ಮನಸಿನ ಸೂಕ್ಷ್ಮಗಳನ್ನು ತಮ್ಮಣ್ಣ ಬೀಗಾರ ಸರ್ ಈ ಪುಸ್ತಕದ ಉದ್ದಕ್ಕೂ ಚಿತ್ರಿಸಿದ್ದಾರೆ. ಇಂದಿನ ಮಕ್ಕಳು ಕಾಣದ ಬದುಕಿನ ಸಂವೇದನೆಗಳಿವೆ.

ಬಸ್ಸಿನಲ್ಲಿ ವಾಂತಿ ಪ್ರಬಂಧದಲ್ಲಿ ಪರಿಸರದ ಚಿತ್ರಣವಿದೆ. ಮಲೆನಾಡಿನ ಮಳೆಹಾಡಿನ ಕಥೆಯಿದೆ. ಬೇಸಿಗೆ ಮಳೆಗಾಲದ ಸಿದ್ದತೆಯ ಕಥೆಯೂ ರಸ್ತೆಗೆ ಅಂಟಿಕೊಂಡು ನಮ್ಮ ಕರೆದುಕೊಂಡು ಹೋಗುತ್ತದೆ. ಬಸ್ಸಿನಲ್ಲಿ ಉಂಟಾದ ಸನ್ನಿವೇಶ ಮನ ಕಲಕುತ್ತದೆ.

ಈ ಪುಸ್ತಕದಲ್ಲಿ ಹೀಗೆ ಇನ್ನೂ ಅನೇಕ ಪ್ರಬಂಧಗಳಿವೆ. ನಾಟಾ ಗಾಡಿ ಬಂತು, ಬಣ್ಣ ಬಣ್ಣದ ಲೋಕ, ಪುಟ್ಟನ ತಿಂಡಿಗಳು, ಹಳ್ಳದ ಮಕ್ಕಳು, ಹಕ್ಕಿಗಳೊಂದಿಗೆ ಹಾರಾಡುತ್ತಾ, ತಿಮ್ಮತ್ತೆ ಮತ್ತು ಲಡ್ಡು ಉಂಡೆ, ಕುಚ್ಚ ಎನ್ನುವ ನಾಯಿ ಎಲ್ಲವೂ ಓದಲು ಸಿಗುತ್ತವೆ. ಒಂದೊಂದು ಪ್ರಬಂಧವೂ ಬಾಲ್ಯದ ನೂರಾರು ಎಳೆಗಳ ತಂದು ಜೋಡಿಸುತ್ತದೆ. ಸಣ್ಣ ಪುಟ್ಟ ಘಟನೆಗಳನ್ನು ಹಾಸ್ಯವಾಗಿ ಬದಲಿಸಿ ಖುಷಿ ಕೊಡುತ್ತದೆ. ವಾಸ್ತವದ ಒಳ ಹರಿವು ಒಳಿತಾಗಿ ಎಲ್ಲಾ ಲೇಖನಗಳಲ್ಲೂ ಕಾಣಿಸುತ್ತದೆ. ಹಳ್ಳಿಯ ಸುತ್ತ ಹೆಣೆದಿರುವ ಪ್ರಬಂಧಗಳು ಮಲೆನಾಡಿನ ಸನ್ನಿವೇಶದಲ್ಲಿ ಒಂದು ಚಿತ್ರವಾಗಿ ನಿಂತು ಮಾರ್ಗದರ್ಶನ ನೀಡುವ ಮೂಲಕ ಎಳೆಯ ಮನಸ್ಸುಗಳಿಗೆ ಮಾದರಿಯಾಗುತ್ತದೆ.

ಪುಟ್ಟಜ್ಜ ಹೇಳುವ ಈ ಕಥೆಗಳೆಲ್ಲಾ ಪ್ರಬುದ್ಧವಾಗಿ ಪ್ರಬಂಧವಾಗಿದೆ. ಪುಟ್ಟಜ್ಜನ ನೆನಪಿನ ಶಕ್ತಿ ಪ್ರಬಂಧವಾಗಿ, ಮಕ್ಕಳ ಆಶಯವಾಗಿ ನಿಂತು ಬಾಲ್ಯದ ದಿನಗಳನ್ನು ಮೆಲುಕು ಹಾಕಿದೆ. ಅಲ್ಲೆಲ್ಲಾ ಪರಿಸರದ ಅನುಭೂತಿ ಇದೆ. ಹರಿವ ನೀರ ಲಹರಿ ಇದೆ. ಪ್ರಾಣಿ ಜಗದ ಕುತೂಹಲ ಇದೆ. ಮಣ್ಣ ಋಣದ ಸಾಹಿತ್ಯ ಇದೆ. ಬಳುವಳಿಯಾಗಬೇಕಾದ ಸಹಜ ಗುಣವಿದೆ. ಮೋಜಿನ ಕಥೆಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಬಾಲ್ಯ ಕನಸುಗಳ ಜಗತ್ತು. ಅಲ್ಲಿ ಹಾರುವ ಹಕ್ಕಿಗೆ ನೂರಾರು ಬಣ್ಣಗಳಿವೆ. ಕಲ್ಪನೆಗಳಿವೆ. ಆ ಕಲ್ಪನೆಗೆ ತಕ್ಕಂತೆ ಗೆಳೆಯನಾಗುವ ಪುಟ್ಟಜ್ಜ ಮಕ್ಕಳ ಇಷ್ಟದ ಅಜ್ಜನಾಗುತ್ತಾನೆ. ತಾನು ಕಾಣುವ ಪರಿಸರದಲ್ಲಿ ಪುಟ್ಟಜ್ಜನ ಪ್ರತಿರೂಪಗಳನ್ನು ಹುಡುಕುವಂತೆ ಮಾಡುತ್ತದೆ. ಮಕ್ಕಳ ಮನಸ್ಸು ತುಂಬುವ ಈ ಪ್ರಬಂಧಗಳು ಎಲ್ಲರೂ ಓದಬಹುದಾದ ಅಪರೂಪದ ಮಕ್ಕಳ ಸಾಹಿತ್ಯ. ಓದುವಾಗಿನ ಖುಷಿ ಓದು ಮುಗಿದ ಮೇಲೂ ನಿಂತು ಮತ್ತೆ ಮತ್ತೆ ಓದಿಗೆ ಕರೆಯುತ್ತದೆ. ತಮ್ಮಣ್ಣ ಬೀಗಾರ ಸರ್ ಅವರ ಈ ಪ್ರಯತ್ನ ಮಕ್ಕಳಿಗೆ ಅಪರೂಪದ ಸಂಗ್ರಹ. ಅವರು ತುಂಬಿರುವ ನೂರಾರು ಒಳಿತಿನ ಭಾವಗಳು ಅದರ ದೂರದೃಷ್ಟಿ. ಖುಷಿಯ ಜೊತೆ ಬಾಲ್ಯದ ಹುಡುಕಾಟ ಅದರ ಕುತೂಹಲ. ಚೆಂದದ ಮುಖಪುಟ. ಒಳಗಡೆ ವಿನ್ಯಾಸದ ಪ್ರಬಂಧಗಳು ಎಲ್ಲವೂ ಇಲ್ಲಿ ಓದಿಗೆ ಸಿಗುತ್ತದೆ. ದೊಡ್ಡವರೂ ಮಕ್ಕಳಾಗಿ ಓದಬಹುದಾದ ಅಪರೂಪದ ಕೃತಿ ಇದು.


  • ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ, ಕುಮಟಾ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading