ಮಾನಸ….ಇದು ಮನಸಿನ ಮಾತು (ಭಾಗ-೩೧)

ಮಕ್ಕಳ ಮನಸ್ಸು ಬೆಣ್ಣೆಯಂತೆ ಅವರಿಗೆ ಹತ್ತಿರವಾದವರು ಮಾದರಿಯಾಗಿರುತ್ತಾರೆ, ಅವರು ಹೇಳಿದ್ದೇ ವೇದವಾಕ್ಯವಾಗಿರುತ್ತದೆ. ಆದಷ್ಟು ಅವರ ಜೊತೆ ಅಪ್ಪ ಅಮ್ಮ  ಸಮಯ ಕಳೆದರೆ ಮಕ್ಕಳು ಸಂತೋಷವಾಗಿರುತ್ತಾರೆ. ಮಕ್ಕಳಿಗೆ ಪ್ರೀತಿಯ ಕೊರತೆಯಾದಾಗ ತಮ್ಮ ಸಿಟ್ಟನ್ನು ಒಂದೊಂದು ರೀತಿಯಲ್ಲಿ ಹೊರಕ್ಕೆ ಹಾಕುತ್ತಾರೆ, ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಮುಂದೆ ಓದಿ…

ತಂದೆ ತಾಯಿಯ ಪ್ರೀತಿ ಮಕ್ಕಳಿಗೆ ಖಂಡಿತ ಬೇಕು. ಅದರಿಂದ ವಂಚಿತರಾದ ಮಕ್ಕಳ ಕಥೆ ವ್ಯಥೆ ಹೇಳತೀರದು. ಕೆಲಸಕ್ಕೆ ಹೋಗುವ ತಾಯಿಯಂದಿರು ಮಗುವನ್ನು ಬೇಬಿ ಕೇರ್ ಸೆಂಟರ್ ನಲ್ಲಿಯೋ ಅಥವಾ ಮನೆಯಲ್ಲಿ ಆಯಾ ಜೊತೆಯೋ ಬಿಟ್ಟು ಹೋದಾಗ ಮಕ್ಕಳು ಯಾರಿಗಾದರೂ ಹೊಂದಿಕೊಂಡು ಬಿಡುತ್ತಾರೆ ಆದರೆ ಅವರ ಮನಸಿನಲ್ಲಿ ಆಗುವ ಘರ್ಷಣೆ, ರೋಷ, ಹತಾಶೆ, ನಿರಾಸೆ, ದುಃಖ ಬಹಳ ಆತಂಕಕ್ಕೆ ಎಡೆ ಮಾಡಿಕೊಡುತ್ತದೆ.

ನಾಲ್ಕು ವರ್ಷದ ಮಗುವನ್ನು ಅದರ ತಾಯಿ ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗುತಿದ್ದರು. ಒಟ್ಟು ಕುಟುಂಬ ಆದ್ದರಿಂದ ಎಲ್ಲರೂ ಮಗುವನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತಿದ್ದರು. ಆದರೂ ಆ ಮಗುವಿಗೆ ತಾಯಿಯಿಲ್ಲದ ಕೊರತೆ ಕಾಡುತಿತ್ತು. ಕೆಲಸ ಮುಗಿಸಿ ಮನೆಗೆ ಬಂದರೆ ಆ ಮಗು ಎಷ್ಟು ಹೊತ್ತಾದರೂ ಅದರ ಅಮ್ಮನ ಬಳಿ ಹೋಗುತ್ತಿರಲಿಲ್ಲ. ಏನೂ ಕಾರಣವಿಲ್ಲದೆ ಹಠ ಮಾಡಿ ಅಳುತ್ತಾ ತನ್ನ ಕೋಪವನ್ನು ತೀರಿಸಿಕೊಳ್ಳುತಿತ್ತು.

ಬೆಳಿಗ್ಗೆ ಎದ್ದ ನಂತರ ಮತ್ತೆ ತನ್ನ ತಾಯಿ ಕೆಲಸಕ್ಕೆ ಹೊರಡಲು ಮತ್ತೆ ಅದರ ಹಠ ಶುರುವಾಗುತಿತ್ತು. ತನ್ನ ತಂದೆ, ಅದರ ತಾಯಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಕೆಲಸದ ಸ್ಥಳದ ಬಳಿ ದಿನವೂ ಬಿಟ್ಟು ಬರುತಿದ್ದರು. ಇದನ್ನು ದಿನಾ ನೋಡುತ್ತಿದ್ದ ಆ ಮಗು ಕಲ್ಲನ್ನು ತೆಗೆದುಕೊಂಡು ಜೋರಾಗಿ ಬೈಕಿಗೆ ತಾಕುವ ರೀತಿ ಎಸೆಯುತಿತ್ತು. ಇದೇ ರೀತಿ ದಿನಾ ಪುನಾವರ್ತನೆ ಆಗುತಿತ್ತು.

ಫೋಟೋ ಕೃಪೆ : google

ಮತ್ತೊಂದು ಸಂದರ್ಭದಲ್ಲಿ ಮತ್ತೊಂದು ಒಟ್ಟು ಕುಟುಂಬದಲ್ಲಿ ಆರು ತಿಂಗಳು ಮಗುವನ್ನು ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಆ ಮಗು ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪರ ಜೊತೆ, ಮನೆಯ ಮಕ್ಕಳ ಜೊತೆ ಬಹಳ ಚೆನ್ನಾಗಿ ಹೊಂದಿಕೊಂಡಿತ್ತು. ಆ ಮಗುವಿಗೆ ಅಜ್ಜಿ, ಅಜ್ಜ, ಅಪ್ಪ ಅಮ್ಮ ಹಾಗು ಮನೆಯ ಇತರ ಸದಸ್ಯರುಗಳನ್ನು ಗುರುತಿಸುವಷ್ಟು ಬುದ್ಧಿ ಬೆಳೆದಿತ್ತು.

ಆ ಮಗುವನ್ನು ಅದರ ದೊಡ್ಡಮ್ಮ ಸಂಜೆಯ ವೇಳೆ ಅದರ ಅಮ್ಮ ಬರುವುದಕ್ಕೂ ಮುಂಚೆ ಒಂದು ಸುತ್ತು ಹೊರಗೆ ಸುತ್ತಾಡಿಸಿಕೊಂಡು ಬರುವ ರೂಢಿ ಇತ್ತು. ಹೀಗೆ ಒಮ್ಮೆ ಮಗುವನ್ನು ಹೊರಗಡೆ ಕರೆದುಕೊಂಡು ಹೋದಾಗ ಮಗುವಿನ ತಾಯಿಯೂ ಸಹ ಎದುರಿಗೆ ಬಂದರು, ಅಲ್ಲೇ ಇದ್ದ ಪರಿಚಯದವರೊಬ್ಬರು ಮಗುವಿಗೆ ಅಮ್ಮ ಎಲ್ಲಿ ನೋಡು ಎಂದಾಗ ಆ ಮಗು ಅದರ ದೊಡ್ಡಮ್ಮನ ಕಡೆ ತಿರುಗಿ ಅದರ ಪುಟ್ಟ ಕೈಯಿಂದ ದೊಡ್ಡಮ್ಮನ ಮುಖ ಮುಟ್ಟುತ್ತಾ ಅಮ್ಮ ಎಂದು ತೋರಿಸಿತು.

ಹೆತ್ತ ತಾಯಿಗೆ ಸ್ವಾಭಾವಿಕವಾಗಿ ಮನಸು ಬೇಸರಗೊಂಡಿತು. ಕೆಲಸದ ಅನಿವಾರ್ಯ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ಈ ಪರಿಸ್ಥಿತಿ ಎದುರಾಗಿತ್ತು. ಅಂದಿನಿಂದ ತಾನೇ ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿ ಸ್ವಲ್ಪ ದಿನ ಕೆಲಸಕ್ಕೆ ರಜೆ ತೆಗೆದುಕೊಂಡು ಇದ್ದಾಗ ಆ ಮಗುವಿಗೆ ತನ್ನ ಅಮ್ಮನೇ ಅಪರಿಚಿತಳಾಗಿ ಕಂಡಿತು. ತನ್ನ ದೊಡ್ಡಮ್ಮನೇ ಬೇಕೆಂದು ಹಠ ಮಾಡುತಿತ್ತು.

ಹೀಗೆ ಮಕ್ಕಳ ಮನಸು ಬೆಣ್ಣೆಯಂತೆ, ನೀರಿನಲ್ಲೂ, ಮಜ್ಜಿಗೆಯಲ್ಲೂ ತೇಲುತ್ತದೆ. ತೇಲುವಾಗ ಅದರ ಸ್ವಲ್ಪ ಭಾಗ ನಮಗೆ ಗೋಚರವಾಗುತ್ತದೆ ಆದರೆ ಉಳಿದ ನೀರಿನಲ್ಲಿ/ ಮಜ್ಜಿಗೆಯಲ್ಲಿ ಮುಳುಗಿರುತ್ತಿದ್ದರೆ. ಮುಳುಗಿದ ಭಾಗದ ಅದರ ಮನಸನ್ನು ಪಕ್ವ ಮಾಡಬೇಕೆಂದರೆ ಅದಕ್ಕೆ ಸಂಪೂರ್ಣ ಸಂತೋಷಕರವಾದ ಪೋಷಣೆ ಅಗತ್ಯ.

ಫೋಟೋ ಕೃಪೆ :

ಸಣ್ಣ ಮಕ್ಕಳಿದ್ದಾಗ ಅವರಿಗೆ ಯಾರೇ ಹತ್ತಿರವಾದವರು ಮಾದರಿಯಾಗಿರುತ್ತಾರೆ ಅವರು ಹೇಳಿದ್ದೇ ವೇದವಾಕ್ಯ ಅವರ ಮೇಲೆ ಪೂರ್ಣ ಪ್ರಮಾಣದ ನಂಬಿಕೆ ಇರುತ್ತದೆ. ಬೆಳಿತಾ ಬೆಳಿತಾ ಅವರಿಗೆ ಕುತೂಹಲ ಇರುತ್ತದೆ ಅದನ್ನು ಪ್ರಶ್ನಿಸಲು ಶುರು ಮಾಡುತ್ತಾರೆ ಪೋಷಕರು ಅವರಿಗೆ ಸಂಯಮದಿಂದ ಉತ್ತರಿಸಬೇಕು. ಅದರ ಬದಲು ಅವನ್ನು ತಲೆಹರಟೆ ಏನೇನೊ ಕೇಳ್ತಿಯ ಅಂತ ಬೈದು ಸುಮ್ಮನಾಗಿಬಿಡುತ್ತಾರೆ ಅದು ಮಹಾ ತಪ್ಪು. ಅವರ ಕುತೂಹಲ ವಯಸ್ಸಿನಲ್ಲಿ ತಂದೆ ತಾಯಿ ಉತ್ತಮವಾದ ಪರಿಸರ ಸೃಷ್ಟಿಸುವುದು ಬಹಳ ಮುಖ್ಯ. ಮಕ್ಕಳ ಎದುರಿಗೆ ಜಗಳ ಆಡಬಾರದು, ಕೋಪ ಬಂದಾಗ ಪದಾರ್ಥಗಳನ್ನು ಎಸೆಯಬಾರದು, ಯಾವುದೇ ತರಹದ ಕೆಟ್ಟ ಮಾತುಗಳನ್ನು ಆಡಬಾರದು. ಮಕ್ಕಳು ಇದನ್ನೆಲ್ಲಾ ಗಮನಿಸುತ್ತಿರುತ್ತಾರೆ.

ಪೋಷಕರು ಇಲ್ಲೇ ಎಡವೋದು ಮಕ್ಕಳಿಗೆ ಆದಷ್ಟು ಹೊರಗಡೆ ಪರಿಸರದ ಮಹತ್ವ ತಿಳಿಸಬೇಕು. ಹಾರುವ ಬಣ್ಣಬಣ್ಣದ ಚಿಟ್ಟೆಗಳು, ಹೂಬಿಡುವ ಮರಗಿಡಗಳು, ಎಲೆಗಳ ವೈಶಿಷ್ಟ್ಯತೆ, ಸಮುದ್ರ, ನದಿ ಬೆಟ್ಟ ಇವುಗಳ ಪರಿಚಯ ಮಾಡಿಕೊಡಬೇಕು. ಮಕ್ಕಳಿಗೆ ಒಂಬತ್ತು ವರ್ಷವಾಗುವವರೆಗು ಅವರ ಕೈಗೆ ಮೊಬೈಲ್ ಕೊಡಬಾರದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದಾಗುವ ಹಾನಿಯ ಬಗ್ಗೆ ಯೋಚಿಸದೆ ಮಗು ಸುಮ್ಮನಿದ್ದರಾಯಿತು ಎಂಬುದು ಅವರ ಅಭಿಪ್ರಾಯ. ಇದರ ಬದಲಿಗೆ ಯಾವುದಾದರೂ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಬೇಕು. ಚಿತ್ರ ಬಿಡಿಸುವುದು, ಬಿಲ್ಡಿಂಗ್ ಬ್ಲಾಕ್ಸ್ ಜೋಡಣೆ ಹೀಗೆ ಅನೇಕ ಚಟುವಟಿಕೆಗಳಿಂದ ಮಕ್ಕಳನ್ನು ತೊಡಗಿಸಿಬಹುದು.

ಫೋಟೋ ಕೃಪೆ :

ಮಕ್ಕಳನ್ನು ಎಲ್ಲರ ಮುಂದೆ ಬೈಯ್ಯುವುದು, ಹೊಡೆಯುವುದಾಗಲಿ ಮಾಡಿದಾಗ ಅವರು ಮುಂದೆ ಬೆಳೆದು ದೊಡ್ಡವರಾದಾಗಲೂ ಅದು ಅವರ ಮನಸನ್ನು ಘಾಸಿ ಮಾಡುತ್ತದೆ. ಅದರಿಂದ ಹೊರ ಬರಲು ಅವರಿಗೆ ಸಾಧ್ಯವಾಗದೇ ಇರಬಹುದು. ಹಾಗಾಗಿ ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಜೀವನದ ಮಹತ್ವ ಹಾಗು ಜೀವನದ ಗುರಿ ಎಲ್ಲವನ್ನೂ ಸಣ್ಣ ವಯಸಿನಲ್ಲಿಯೇ ತಿಳಿಸಿಕೊಡಬೇಕು.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading