ಅಡಿಗರಿಗೆ ನೂರರ ಶತಮಾನೋತ್ಸವ

ಪ್ರಸಿದ್ಧ ನವ್ಯಕಾವ್ಯದ ಕವಿಗಳೂ, ವಿಮರ್ಶಕರೂ ಆಗಿದ್ದ ಮೊಗೇರಿ ಗೋಪಾಲಕೃಷ್ಣ ಅಡಿಗರಿಗೆ ನೂರರ ಶತಮಾನೋತ್ಸವದ ಸಂದರ್ಭ ಈ ವಿಶೇಷ ದಿನದ ಸ್ಮರಣಾರ್ಥವಾಗಿ ಕವಿ ಮೇಗರವಳ್ಳಿ ರಮೇಶ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಅನ್ಯರೊರೆದುದನೆ, ಬರೆದುದನೆ ನಾ ಬರೆ ಬರೆದು
ಬಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದು
ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ
ಪನ್ನತಿಕೆ ಬರುವನಕ ನನ್ನ ಬಾಳಿದು ನರಕ”

ತಮ್ಮ ಮೊದಲ ಸಂಕಲನ “ಭಾವತರಂಗ” (೧೯೪೬) ದಲ್ಲೇ , ಚರ್ವಿತ ಚರ್ವಣ ವಾಗುತ್ತಿದ್ದ ಹಳೆಯ ಕಾವ್ಯದ ಜಾಡನ್ನು ಬಿಟ್ಟು ಹೊಸಹಾದಿಯೆಡೆಗೆ ಹೊರಳುವ ತುಡಿತವನ್ನು ವ್ಯಕ್ತ ಪಡಿಸಿದ, ನಮ್ಮ ದೇಶದ ಮಹಾನ್ ಕವಿಗಳಲ್ಲಿ ಒಬ್ಬರಾದ ಅಡಿಗರು ಕನ್ನಡ ಕಾವ್ಯದ ಹೊಸ ಯುಗದ ಪ್ರವರ್ತಕರೆಂದರೆ ತಪ್ಪಾಗಲಾರದು.

ಟಿ.ಏಸ್.ಏಲಿಯಟ್ ನ ಕಾವ್ಯಗಳ ಆಳವಾದ ಅಧ್ಯಯನದಿಂದ ಮೊಗೇರಿ ಗೋಪಾಲಕೃಷ್ಣ ಅಡಿಗರು ಮುಕ್ತಛಂದ, ಬೆರಗು ಹುಟ್ಟಿಸುವ ಪ್ರತಿಮಾ ವಿಧಾನ, ಹೊಸಹೊಸ ನುಡಿಗಟ್ಟುಗಳು , ಮುಂತಾದವನ್ನು ಗಳಿಸಿಕೊಂಡರು. ನಿಸರ್ಗ ಕೇಂದ್ರಿತ ನವೋದಯ ಕವಿತೆಗಳಿಗಿಂತ ಭಿನ್ನವಾಗಿ  ಬದುಕನ್ನು, ಸಮಾಜವನ್ನು ಒಳಗೊಳ್ಳುತ್ತಲೇ, ಇಪ್ಪತ್ತನೇ ಶತಮಾನದ, ಸಾಮಾಜಿಕ, ರಾಜಕೀಯ ಭ್ರಮೆನಿರಸನಗಳನ್ನ ವ್ಯಂಗ್ಯದ ಮೊನಚಿನೊಂದಿಗೆ ಕಾವ್ಯವಾಗಿಸಿದರು. ಅವರ “ಚಂಡೆ ಮದ್ದಳೆ”  ಮತ್ತು ” ಭೂಮಿ ಗೀತ” ಸಂಕಲನಗಳು ಕನ್ನಡ ಕಾವ್ಯವನ್ನು ಹೊಸ ದಿಕ್ಕಿಗೆ ಹೊರಳಿಸಿದವು.

ಕೇಂದ್ರ ಸಾಹಿತ್ಯ ಅಕಾಡೆಮಿ , ಕಬೀರ್ ಸಮ್ಮಾನ್ ಮುಂತಾದ ಹಲವು ಹತ್ತು ಪ್ರಶಸ್ತಿಗಳಿಗೆ ಭಾಜನರಾದ ಟಿ.ಎಸ್.ಏಲಿಯಟ್ ನ ಸಮ ಸಮಕ್ಕೂ ಬೆಳೆದು ನಿಂತ, ನೋಬೆಲ್ ಪ್ರಶಸ್ತಿಯನ್ನು ಗಳಿಸುವ ಎಲ್ಲ ಅರ್ಹತೆಗಳನ್ನೂ ಪಡೆದಿದ್ದ ಅಡಿಗರಿಗೆ ನಮ್ಮ ದೇಶದ ಅತ್ಯುನ್ನತ ಸಾಹಿತ್ಯಿಕ ಪ್ರಶಸ್ತಿಯಾದ “ಜ್ಞಾನಪೀಠ ಪ್ರಶಸ್ತಿ” ಕೊಡದೇ ಹೋದದ್ದು ಒಂದು ದುರಂತವೇ ಸರಿ.

ಸಾಗರದ ಲಾಲ್ ಬಹಾದುರ್ ಕಾಲೇಜಿನಲ್ಲಿ ನಾನು ಅಡಿಗರ ಶಿಷ್ಯನಾಗಿದ್ದೆ ಎನ್ನುವುದು ನನಗೆ ಹೆಮ್ಮೆಯ ವಿಚಾರ. ನನಗೆ ಜ್ಞಾನದ ದೀಪವನ್ನು ನೀಡಿ. ಬದುಕಿನ ಹಾದಿಯನ್ನು ತೊರಿಸಿದ ಮಹಾನ್ ಗುರುವನ್ನು ನೆನೆದು ನಾನು ರಚಿಸಿದ ಕವನ ಇಲ್ಲಿದೆ ( ನನ್ನ “ಕಾಲ ಕಾಯುವುದಿಲ್ಲ ಸಂಕಲದಿಂದ. ಅಡಿಗರ ಜನ್ಮ ಶತಾಬ್ದಿಯ ಈ ಸಂದರ್ಭದಲ್ಲಿ ಈ ಕವಿತೆ ಪ್ರಸ್ತುತವಾಗಬಹುದೆಂಬ ನಂಬಿಕೆಯಿಂದ)

ಗೋಪಾಲಕ್ರಿಷ್ಣ ಅಡಿಗರ ನೆನಪು
ಮೊನ್ನೆ ರಾಮನವಮಿಯ ದಿವಸ
ಪಾನಕ, ಕೋಸ೦ಬರಿ, ಕರಬೂಜ ಸಿದ್ದೋಟು ಹೋಳುಗಳ ನಡುವೆ
ಕಡಲ ಕುದಿತದ ಎಣ್ಣೆ ಕೊಪ್ಪರಿಗೆಯಿ೦ದೆದ್ದು ಬ೦ದ
ಅಡಿಗರ ನೆನಪು!
ಹುತ್ತಗಟ್ಟಿದ ಚಿತ್ತ ಕೆತ್ತಿದ
ಕಾವ್ಯ ಪ್ರತಿಮೆಗಳ ನೆನಪು!

ಕ್ಷಣ ಭ೦ಗುರ “ಪರ”ದ ತುಡಿತಗಳ ಶ್ರುತಿ ಹಿಡಿದು
ಮೋಹನ ಮುರಳಿಯ ನುಡಿಸಿ ಕುಣಿಸಿದಿರಿ
ಮೈಮನಸುಗಳನಾಧ್ಯಾತ್ಮ ಲಯದಲ್ಲಿ.
ಅವಕು೦ಠನವ ಕಿತ್ತೆಸೆದು ರ೦ಗಸ್ಥಳವನೇರಿ ೧೦
ತಕಿಟ ತೋ೦ ಚ೦ಡೆಮದ್ದಲೆಯ ತಾಳಕ್ಕೆ
ಹೊಸ ಗೆಜ್ಜೆ, ಹೊಸ ಹೆಜ್ಜೆ.
ಹೆರುವ, ಹೆತ್ತಮಕ್ಕಳನ್ನೇ ಕತ್ತು ಹಿಸುಕಿ ಕೊಲುವ
ಹಕ್ಕಿಗೊರಳನು ಹಿಚುಕಿ ಲಾಲಿ ಹಾಡುವ
ಸಸಿಕೊರಳ ಕೊಯ್ದು ತಿ೦ಡಿ ತಿನಿಸುವ
ನೆಲತಾಯ ಮಾಯಕದ ಅರಗಿನರಮನೆಯಲ್ಲಿ
ಕರ್ಣನನು ಸಾಯಿಸಲಿಕಲ್ಲದೇ ಬರದ ಕು೦ತಿಯ
ಚಿತ್ರ ತೂಗು ಹಾಕಿದಿರಿ.
ಅಜ್ಜನೆಟ್ಟಾಲಕ್ಕೆ ಜೋತುಬೀಳದೆ ಕಡಿಸಿ
ನೆಲವನ್ನಗೆದು ಗೆರೆಮಿರಿವ ಚಿನ್ನದದಿರನು ತೆಗೆದು ೨೦
ಸೋಸುವಪರ೦ಜಿ ವಿದ್ಯೆಗಳ ಕಲಿಸಿದಿರಿ.
ಆ ಸಸಿಯ ಕೀಳಿಸಿ, ಈ ಚಿಗುರ ಚಿವುಟಿಸಿ
ಏನಾದರೂ ಮಾಡುತಿರಬೇಕೆ೦ಬ
ಚಟುವಟಿಕೆಯ ಪಾಠ ಹೇಳಿದಿರಿ.

ಆ ಹಳೆಯ ಗಾಳಿ ಬೆಳಕಿಗವಕಾಶವೇ ಇರದ
ಮಹಲನು ಕೆಡವಿ, ಅಡಿಗರೆ,
ಅಡಿಗಲ್ಲಾದಿರಿ ಹೊಚ್ಚಹೊಸ ಸೌಧಕ್ಕೆ
ಹಳೆಯ ಸೈಜುಗಲ್ಲುಗಳನಿಟ್ಟರೂ ಪಾಯಕ್ಕೆ
ಹೊಚ್ಚ ಹೊಸ ವಿನ್ಯಾಸದಲಿ ದೊಡ್ಡ ಕಿಟಕಿ, ಬಾಗಿಲುಗಳನಿರಿಸಿ
ನಿರ್ಮಿಸಿದಿರಿ ಹೊಚ್ಚ ಹೊಸ ಮಹಲು. ೩೦
ಒಳಗೆ ಗಾಳಿ ಬೆಳಕು ಧಾರಾಳ
ಉಸಿರಾಟ ನಿರಾಳ.
ಯೇಟ್ಸ್, ಏಲಿಯಟ್, ಆಡೆನ್, ಫ್ರಾಸ್ಟ್,ಕಮಿ೦ಗ್ಸ್, ಪೌ೦ಡ್
ಕಾಫ್ಕ, ಕಮೂ, ಸಾರ್ತ್ರ, ಬೋದಿಲೇರ್,ರಿಲ್ಕ ರೆಲ್ಲರೂ
ಓಡಾಡಿದರು ಸಲೀಸು ಈ ಮಹಲಿನೊಳಗೆ.
ನಿಮ್ಮ ಜತೆಗೇ ಬೆಳೆದರಿಲ್ಲಿ ಅನ೦ತಮೂರ್ತಿ, ಲ೦ಕೇಶ, ಕ೦ಬಾರ,
ನಾಡಿಗ, ರಾಮಾನುಜನ್, ಕಾರ್ನಾಡ, ಪಾಟೀಲ ಮು೦ತಾದ ದಿಗ್ಗಜರು.

ಅಲ್ಲಿ, ಸಾಗರದ ಎಲ್.ಬಿ. ಕಾಲೇಜಿನಲ್ಲಿ
ಸ್ವಿಚ್ಚೊತ್ತಿ ಬೆಳಗಿದಿರಿ ದೀಪವನೊ೦ದ ನನ್ನೊಳಕೋಣೆಯಲಿ.
ಆ ಬೆಳಕಿನಲಿ ಓದಿದ್ದೇನೆ ೪೦
ಆ ಬೆಳಕಿನಲಿ ಬರೆದಿದ್ದೇನೆ
ಆ ಬೆಳಕಿನಲೇ ಬೆಳೆದಿದ್ದೇನೆ.
ಗುರುವೆ, ಮನಸು ತಳ ಮಳದ ಬೀಡಾದಾಗಲೆಲ್ಲ
ಮುಚ್ಚಿರುವ ನಿಮ್ಮ ಆ ಮಹಲಿನ ಬಾಗಿಲು ಕಿಟಕಿಗಳ ತೆರೆದು
ಪರದೆಗಳ ಸರಿಸಿ, ನೀವಿಟ್ಟ ಸೋಫಾದಲ್ಲಿ ಕುಳಿತು ಚಿ೦ತಿಸುತ್ತೇನೆ.
ಆ ಮಹಲಿನೊಳ ಹೊರಗೆಲ್ಲ ಓಡಾಡುತ್ತೇನೆ.
ಹೊರ ನಡೆದು ಹಾಕುತ್ತೇನೆ
ನೀವೇ ನಿರ್ಮಿಸಿದ ಹಾದಿಯಲಿ
ನನ್ನದೇ ಕಾವ್ಯ ಹೆಜ್ಜೆಗಳ.


  • ಮೇಗರವಳ್ಳಿ ರಮೇಶ್  – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW