ಬೆಳೆಯುವುದು ಎಲ್ಲಿ… ಅಲೆಯುವುದು ಎಲ್ಲಿ…ವಿಹರಿಸುವುದೆಲ್ಲಿ..?…ಶಿಕ್ಷಕರು, ಲೇಖಕರಾದ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಅವನು ಕೇಳಿದ ಇವನನ್ನು
ನೀನಿನ್ನೂ ಅಪ್ಪ ಕಟ್ಟಿದ ಮನೆಯಲ್ಲೇ ಇದ್ದೀಯಾ….?
ಇವನಿಗೋ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ
ಹೌದು ಎಂದಷ್ಟೇ ಹೇಳಿ ಮಾತು ಮುಗಿಸಿದ ಈ ವಿಚಾರ ತಿಳಿದಾಗ ನನಗನಿಸಿದ್ದು ಹೀಗೆ…
ಕೇಳಬೇಕಿತ್ತು ನೀನು….
ನೀನಿನ್ನೂ ಅಪ್ಪ ಕೊಟ್ಟ ದೇಹದಲ್ಲಿಯೇ ಬದುಕಿದ್ದೀಯಲ್ಲಾ…?
ಎಂದು
ಅಂದುಕೊಳ್ಳುತ್ತೇನೆ
ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ
ಅಪ್ಪ, ಅವರಪ್ಪ ಕಟ್ಟಿದ ಮನೆಯಲ್ಲಿ
ಇರುವುದಿಲ್ಲವೆಂದಾದರೆ
ಕಟ್ಟಲು ಸ್ಥಳವಾದರೂ ಉಳಿಯುವುದೆ
ಬೆಳೆಯುವುದು ಎಲ್ಲಿ… ಅಲೆಯುವುದು ಎಲ್ಲಿ…ವಿಹರಿಸುವುದೆಲ್ಲಿ..?
ಇತರ ಜೀವಿಗಳಿಗೆ ಆವಾಸವಾದರೂ ಎಲ್ಲಿ…
ಕಾಡೆಲ್ಲಿ, ಪರ್ವತಗಳೆಲ್ಲಿ ನದಿ ಹರಿವುದೆಲ್ಲಿ
ಎಲ್ಲಿ ಎಲ್ಲಿ …ದನಕರುಗಳಿಗೆ
ಮೇಯಲು ಬಯಲೆಲ್ಲಿ…
ನಿರ್ಗತಿಕರಿಗಾದರೂ ಆವಾಸವೆಲ್ಲಿ…
ಎಲ್ಲೋ ಮೇಯ್ದು ಕಾಂಚಾಣದ ಹಮ್ಮಿನಲ್ಲಿ ಮನೆಕಟ್ಟಿಸುವುದನ್ನೇ ಶೋಕಿಯಾಗಿಸಿಕೊಂಡ…ಕುರುಡು ಕಾಂಚಾಣಪ್ರಿಯರು ಹರಿ ಬಿಡುವ ನಾಲಗೆಗಳು ಇರಿಯುವ ಶೂಲಗಳಾಗುತ್ತವೆ…ಮಾನವತೆಗೆ ಕುಠಾರವಾಗುತ್ತವೆ….ಮನುಜರ ನಡುವೆ
ಬೆಸೆಯುವ ಹಗ್ಗವಾಗದೆ ಬಂಧಿಸುವ ಸರಪಳಿಗಳಾಗುತ್ತವೆ.ಬೃಹತ್ ಕಂದರಗಳನ್ನು ನಿರ್ಮಿಸುತ್ತವೆ.
ಆಚಾರವಿಲ್ಲದ ನಾಲಗೆಯಲ್ಲಿ ಪ್ರಕೃತಿಯ ವಿನಾಶದ ಛಾಯೆಯಿದೆ
ಅವರ ಅಟ್ಟಹಾಸದ ಕುಣಿತದ ಪದತಲದಲ್ಲಿ
ನಿಷ್ಪಾಪಿಗಳ ಭಗ್ನಕನಸಿನ
ಗೋರಿಗಳಿವೆ….
- ಶಿವದೇವಿ ಅವನೀಶಚಂದ್ರ
