ಗೌರೀಶ ಕಾಯ್ಕಿಣಿಯವರ ನಿಜವಾದ ಅಮೂಲ್ಯ ಕೊಡುಗೆ ಎಂದರೆ ಜಯಂತ ಕಾಯ್ಕಿಣಿ” ಎಂದು ಶಾಂತಿನಾಥ ದೇಸಾಯಿ ಒಂದು ಕಡೆ ಬರೆದಿದ್ದಾರೆ. ನನ್ನ ಶಿಷ್ಯೆ ಶಾರದಾ ಶೆಟ್ಟಿಯವರ ಗುರುಗಳು, ಆದ ಅವರನ್ನು, ನಾನು ಭೇಟಿಯಾಗಿದ್ದು ,ಮುಂಬೈನಲ್ಲಿ ಜಯಂತ ಕಾಯ್ಕಿಣಿ ಮನೆಯಲ್ಲಿ. ಮುಂದೆ ಓದಿ …
ಜಯಂತ ಕಾಯ್ಕಿಣಿ ಅವರ ಪ್ರಕಾರ ” ವಿಚಾರಗಳೇ ಇಲ್ಲದ ಗೋಕರ್ಣದಲ್ಲಿ ವೈಚಾರಿಕತೆಯ ಬೀಜಗಳನ್ನು ಬಿತ್ತಿದವರು ನನ್ನ ತಂದೆ ಗೌರೀಶ್ ಕಾಯ್ಕಿಣಿ”( ತಮ್ಮ ವಾಲ್ಮೀಕಿ ತೂಕಡಿಸಿದಾಗ, ನಾಸ್ತಿಕ ಮತ್ತು ದೇವರು ಇತ್ಯಾದಿ ಕೃತಿಗಳ ಮೂಲಕ)ಅದರ ಸಮೃದ್ಧ ಫಸಲು ಜಯಂತ್ ಕಾಯ್ಕಿಣಿ.

ಗೌರೀಶ ಕಾಯ್ಕಿಣಿ ಅವರ, ಬದುಕು ಮತ್ತು ಬರಹಗಳ ಅವಿಭಾಜ್ಯ ಅಂಗವಾಗಿ, ಗೋಕರ್ಣ ಅವರಲ್ಲಿ ಹಾಸುಹೊಕ್ಕಾಗಿದೆ. ಅವರು ಇಂದು ಅಲ್ಲಿ ಭೌತಿಕವಾಗಿ ಇಲ್ಲದಿದ್ದರೂ, ಗೋಕರ್ಣದ ಗಾಳಿಯಲ್ಲಿ ಅವರ ಹೆಸರು ಉಸಿರಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ, ಅವರ ವಾಸವಾಗಿದ್ದ ಮನೆ, ಅವರ ಹೆಸರನ್ನು ಹೊಂದಿದ ನಾಮಫಲಕಗಳು.
ಗೋವಿಂದ ಪೈ ಇಲ್ಲವಾದಾಗ, ಬನ್ನಂಜೆಯವರು ” ಕಾಸರಗೋಡಿನಲ್ಲಿ ಗೋವಿಂದ ಪೈಗಳು ಇಲ್ಲ,ಇನ್ನು ಅಲ್ಲಿ ಕನ್ನಡಿಗರಿಗೆ ಕೆಲಸವಿಲ್ಲ” ಎಂದರು. ಅದೇ ಮಾತನ್ನು ಗೋಕರ್ಣದ ಗೌರೀಶ ಕಾಯ್ಕಿಣಿ ಅವರ ಕುರಿತು ಕೂಡ ಹೇಳಬಹುದು. ಅವರಿದ್ದಾಗ ಇಲ್ಲಿಗೆ ಬಂದು ಹೋದ ಕನ್ನಡ ಸಾಹಿತಿಗಳಿಗೆ ಲೆಕ್ಕವಿಲ್ಲ. ಬಂದವರಿಗೆಲ್ಲ ಸಮುದ್ರ ತೋರಿಸುವುದೇ ಅವರಿಗೆ ಸಂಭ್ರಮದ ಕೆಲಸ. ಗೋಕರ್ಣದ ಸಮುದ್ರ ಮತ್ತು ಗೌರೀಶ ಕಾಯ್ಕಿಣಿಯವರು ಒಟ್ಟಿಗೆ ನೆನಪಾಗುತ್ತಾರೆ. ಆಗ ಬಂದವರಿಗೆಲ್ಲ ತಾನು “ಗಿಂಡಿ ಮಾಣಿಯಾಗಿದ್ದೆ” ಎಂದು ,ಜಯಂತ ಕಾಯ್ಕಿಣಿ ತಮ್ಮ ಅಂದಿನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ಈ ಅಪ್ಪ ಮಕ್ಕಳ ಜೋಡಿ ಆಧುನಿಕ ಕನ್ನಡ ಸಾಹಿತ್ಯದ ವಿಸ್ಮಯಗಳಲ್ಲಿ ಒಂದು. ಆಗ ಗೌರೀಶ ಕಾಯ್ಕಿಣಿ ಅವರ ಮೂಲಕ ಜಯಂತರನ್ನು ಗುರುತಿಸುತ್ತಿದ್ದರೆ, ಈಗ ಜಯಂತರ ಮೂಲಕ ಗೌರೀಶ ಕಾಯ್ಕಿಣಿ ನೆನಪು ಚಿರಂತನ.
ಗೌರೀಶ ಕಾಯ್ಕಿಣಿ ಗೋಕರ್ಣದ ಮೆದುಳಾದರೆ ಜಯಂತ್ ಕಾಯ್ಕಿಣಿ ಅದರ ಹೃದಯ ( ಕಡಲು ಮತ್ತು ಅಲೆ) ಇವರಿಲ್ಲದ ಆಧುನಿಕ ಕನ್ನಡ ಸಾಹಿತ್ಯವನ್ನು ಕಲ್ಪಿಸಿಕೊಳ್ಳುವುದೇ ಸಾಧ್ಯವಿಲ್ಲ. ಅಲ್ಲವೇ ?
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
