ಸಣ್ಣ ಗೌರಿ ಹುಣ್ಣುಮೆಯ ವಿಶೇಷವಾದ ಕೊಂತೆರೊಟ್ಟಿಈ ಹಬ್ಬದ ವಿಶೇಷತೆಯ ಕುರಿತು ಸಮಾಜಸೇವಕರಾದ ಪಾಂಡು ಸಿ ಎಸ್ ಪಿ ಯಾದವ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ಹಬ್ಬ, ಗೌರಿ ಮಕ್ಕಳು ಎಂದು ನಾಲ್ಕೈದು ಹೆಣ್ಣು ಮಕ್ಕಳು ಕೂಡಿಕೊಂಡು ಪ್ರತಿ ಮನೆಗು ಹೋಗಿ ಮನೆಮಂದಿಯ ಹೆಸರುಗಳಿಗೆ ಹೊಂದಿಕೊಳ್ಳುವಂತೆ ಸಾಹಿತ್ಯ ರಚಿಸಿ ಮನ ಮುಟ್ಟುವಂತೆ ಹಾಡುತ್ತಾರೆ. ಮತ್ತು ಅದಕ್ಕೆ ಉಡುಗೊರೆ ಎಂಬಂತೆ ಪ್ರತಿ ಮನೆಯವರು ಅವರಿಗೆ ತಮ್ಮ ಮನೆಯಲ್ಲಿ ಇರುವ ದವಸ ಧಾನ್ಯಗಳನ್ನು ಉಡುಗೊರೆಯಾಗಿ ಕೊಟ್ಟು ಅರಸುತ್ತಾರೆ, ಅವರ ಸಾಹಿತ್ಯ ಹೊಂದುಗೂಡಿಸುವಿಕೆಯ ಮುಂದೆ ಮಹಾನ್ ಕವಿತ್ವದ ಪಾಂಡಿತ್ಯ ಹೊಂದಿದವರು ತಲೆ ಕೆಳಗಾಗುವುದು ಸತ್ಯ ಎನಿಸುತ್ತದೆ.
ಸಕ್ಕರೆ ಆರತಿಯು ಈ ಹಬ್ಬದ ವಿಶೇಷವಾಗಿದೆ. ಸಕ್ಕರೆ ಪಾಕ ಮಾಡಿ ತಮಗಿಷ್ಟವಾದ ಗೊಂಬೆಗಳ ಅಚ್ಚನ್ನು ಮಾಡಿಕೊಂಡು ಗೌರಮ್ಮಳಿಗೆ ಹಬ್ಬದ ದಿನ ಬೆಳಗುತ್ತಾರೆ, ಹಿಂದಿನ ಕಾಲದಲ್ಲಿ ಈ ಅಚ್ಚುಗಳು ತಮ್ಮ ತಮ್ಮ ಮನೆಯಲ್ಲಿಯೆ ಇರುತ್ತಿದ್ದವು. ಅಚ್ಚುಗಳ ತಯಾರಿಕೆಯಲ್ಲಿ ಸಿಗುವ ಖಷಿಯೆ ಬೇರೆ ಮನೆ ಮಂದಿಯೆಲ್ಲಾ ಕೂಡಿ ಅಚ್ಚುಗಳ ಮಾಡುವುದಕ್ಕಾಗಿಯೆ ಜೊತೆಯಾಗುತ್ತಿದ್ದರು ಸಂಬಂಧಗಳಲ್ಲಿನ ಬಾಂಧವ್ಯ ಉಳಿದುಕೊಳ್ಳುತ್ತಿತ್ತು. ಬಹುಶಃ ಬಾಂಧವ್ಯವನ್ನು ಉಳಿಸುವುದಕ್ಕಾಗಿಯೆ ಹಬ್ಬ ಹರಿದಿನಗಳೆಂಬ ಆಚರಣೆಗಳನ್ನು ನಮ್ಮ ಪೂರ್ವಜರು ಮಾಡಿದ್ದಾರೆ ಎನಿಸುವುದರಲ್ಲಿ ಸಂಶಯವಿಲ್ಲ.
ಹೆಣ್ಣು ಮಕ್ಕಳ ಈ ಹಬ್ಬ ಚಿಕ್ಕವರಿಂದ ಹಿಡಿದು ಮುತ್ತೈದೆಯರೆಲ್ಲರು ಬಲು ಸಂಭ್ರಮದಿಂದ ಆಚರಿಸುತ್ತಾರೆ, ಸೀರೆ ಹುಟ್ಟ್ಕೊಂಡು ಮೈ ತುಂಬ ಒಡವೆಗಳನ್ನು ಹಾಕಿಕೊಂಡು ಸಾಕ್ಷಾತ್ ದೇವಲೋಕದವರೆಂಬಂತೆ ಕಂಗೊಳಿಸುತ್ತಾರೆ. ಎರಡು ದಿನಗಳ ಈ ಹಬ್ಬ ಒಂದು ಮೊದಲ ದಿನ ಗೌರಮ್ಮಳಿಗೆ ಆರತಿ ಬೆಳಗುವುದರಲ್ಲೆ ಆಗುತ್ತದೆ. ಅಂದಿನ ಊಟ ಗಾರಿಗೆ, ಕರ್ಜಿಕಾಯಿ, ಹಸಿಟ್ಟು, ಅಂತೆಲ್ಲಾ ಮಾಡಿ ಮುಗಿಸುತ್ತಾರೆ.
ಎರಡನೇ ದಿನ ಬೆಳಿಗ್ಗೆಯಿಂದಾನೆ ಸೌದೆ ಒಲೆ ಊದಿ ಜಿಬಿಲಿ ತುಂಬ ಐವತ್ತಕ್ಕಿಂತ ಜಾಸ್ತಿ ಸಜ್ಜೆ ರೊಟ್ಟಿ ಸುಟ್ಟು ಹಾಕುವಷ್ಟೊತ್ತಿಗೆ ದೇವಲೋಕದವರಂತೆ ಕಂಗೊಳಿಸುತ್ತಿದ್ದವರು ಏಕಾಏಕಿ ಚಂಡಿ ಚಾಮುಂಡಿ ಮೈಯಲ್ಲಿ ಬಂದವರಂತೆ ಆಡುತ್ತಾರೆ. ಆದರೂ ಸಜ್ಜೆ ರೊಟ್ಟಿಗೆ ಎಳ್ಳು ಉಪ್ಪು ಹಾಕಿ ಮಾಡಿರುತ್ತಾರೆ ರೊಟ್ಟಿಗೆ ತಕ್ಕಂತೆ ಪುಂಡೆಪಲ್ಲೆ ಮಾಡಿ ಸಂಜೆ ನಾಲ್ಕರ ಹೊತ್ತಿಗೆ ಮನೆ ಮಂದಿಯೆಲ್ಲಾ ತಮ್ಮ ತಮ್ಮ ಮನೆ ಮಾಳಿಗೆ ಏರಿ ಪಟಾಕಿ ಹಾರಿಸಿ ಎಲ್ಲರು ಒಟ್ಟಿಗೆ ಕುಳಿತು ಹಾಡು ಆಡುವುದು ಕೋಲಾಟ ಆಡುವುದು ಹೀಗೆ ಪ್ರತಿಯೊಬ್ಬರ ಮಾಳಿಗೆ ಮೇಲು ಎಲ್ಲರ ಸಂಭ್ರಮ ನೋಡುವುದಕ್ಕೆ ಎರಡು ಕಂಗಳು ಸಾಲದು ಕತ್ತಲಾಗುವ ತನಕ ಅಲ್ಲೆ ಇದ್ದು ಚಂದ್ರನ ಆಗಮನದವಾದ ನಂತರ ಅವನಿಗೂ ಆರತಿ ಬೆಳಗಿ ಒಟ್ಟಿಗೆ ಕುಳಿತು ಕೊಂತೆರೊಟ್ಟಿ ಊಟ ಮಾಡುತ್ತಾರೆ.
- ಪಾಂಡುರಂಗ ಕೆ ಎಸ್ – ಸಮಾಜಸೇವಾ ಕಾರ್ಯಕರ್ತರು, ಗುಂಡ್ಲವದ್ದಿಗೇರಿ.