ಬದುಕಿನ ಅತ್ಯಂತ ಧನ್ಯತೆ ವೃತ್ತಿಯಲ್ಲಿ ತಮ್ಮ ಬದುಕಿನ ತಪೋವನದಲ್ಲಿ ಜ್ಞಾನದ ವಿಸ್ತಾರದಲಿ ಬಾಳಿದ ಗುರುವೃಂದದ ಗುರುತರ ಗುರುಗಳಿಗೆ ನನ್ನ ಹಾರ್ದಿಕ ಶುಭಾಶಯಗಳು…
ಅರಿವಿನ ಸ್ಪರ್ಶದಲಿ
ಮಣ್ಣ ಕಾಯಕೆ ದಿವ್ಯತೆಯ
ಪ್ರಸಾದಿಸುವ ಪ್ರತ್ಯಕ್ಷ
ದೇವರು ನೀವು
ಜ್ಞಾನಶಕ್ತಿಯ ನೀಡಿ
ಕ್ಷುಲ್ಲಕತೆಯನು ನೀಗಿ
ಜಗಕೆ ಸಲ್ಲುವ ಪರಿಯ
ಕಲಿಸಿದವರು ನೀವು
ಅಜ್ಞಾನ ತಿಮಿರವನು
ಜ್ಞಾನಜ್ಯೋತಿಯ ಬಲದಿ
ಉಜ್ವಲಗೊಳಿಸಿದ
ಬಾಳದೀಪ ನೀವು
ನಿಮ್ಮ ಚರಣಕಮಲದ
ಭೃಂಗವಾಗಿರುವೆ ನಾನು
ನಿಮ್ಮರಿವಿನ ಮಧುವನೀಂಟಿ
ಧನ್ಯಳಾಗುವೆ ನಾನು
ನನ್ನದೆಯ ಪೀಠದಲಿ
ನಿತ್ಯಪೂಜಿತರು ನೀವು
ಹರಕೆಯಕ್ಷತೆಯ ಸುರಿದು
ಬೀರಿ ಕೃಪಾವರ್ಷವ ನೀವು
- ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಕವಿಯತ್ರಿ, ಕೊಡಗು.
