ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ. ಅನಾದಿ ಕಾಲದಿಂದಲೂ ನಾವು ಗುರುವರ್ಯರನ್ನು ದೇವರ ಸ್ಥಾನದಲ್ಲಿ ಆರಾಧಿಸುತ್ತ ಬಂದಿದ್ದೇವೆ. ಇಂದು ಗುರುಪೂರ್ಣಿಮೆಯ ದಿನ ಅದರ ವಿಶೇಷತೆಯನ್ನು ಲೇಖಕರಾದ ಡಾ. ಎಂ.ಎಸ್.ಆಲಮೇಲ ಯಡ್ರಾಮಿ ಅವರು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಗುರುಬ್ರಹ್ಮ: ಇಲ್ಲಿ ಗುರುವನ್ನು ಬ್ರಹ್ಮದೇವನಿಗೆ ಹೋಲಿಸಲಾಗಿದೆ. ಕಾರಣ,ಬ್ರಹ್ಮದೇವ ಹೇಗೆ ಜಗದ ಸೃಷ್ಠಿಕರ್ತನೋ ಹಾಗೆ ಗುರುವು, ಜ್ಞಾನದ ಸೃಷ್ಟಿಕರ್ತ, ಅಂದರೆ ಹೊಸತನ್ನು ಕಲಿಸಿಕೊಡುವವನು.
ಗುರುವಿಷ್ಣು: ಇಲ್ಲಿ ಗುರುವಿಷ್ಣು ಕಲಿತ ವಿದ್ಯೆಯನ್ನುಪಾಲಿಸುವಂತೆ ಅಂದ್ರೆ ಸಮರ್ಪಕವಾಗಿ ಉಪಯೋಗಿಸಲು ದಾರಿ ತೋರುವನು. ಗುರುದೇವೋ ಮಹೇಶ್ವರಃ ಮಹಾದೇವ ಶಿವನು ಅಧರ್ಮ, ಅಂಧಕಾರ,ಅಜ್ಞಾನದ ಸಂಹಾರಕ ಲಯಕಾರನು, ಅಲ್ಪಮತಿಯನು ಅಳಿಸಿಹಾಕಿ ಜ್ಞಾನದ ಜ್ಯೋತಿ ಬೆಳಗಿಸುವ ಮಹಾಜ್ಞಾನಿ.
ಗುರುಸಾಕ್ಷಾತ್ ಪರಬ್ರಹ್ಮ : ಗುರುವೇ ಪರಬ್ರಹ್ಮನಿಗೆ ಸಮಾನವಾಗಿ ದೈವಸ್ಥಾನದಲ್ಲಿ ನಿಲ್ಲುವರೆಂದು ಹೇಳಲಾಗುತ್ತದೆ. ಅಂದ್ರೆ ನಮಗೆ ವಿದ್ಯೆ, ಬುದ್ಧಿ, ಸಿದ್ದಿ ಕಲಿಸಿಕೊಟ್ಟು ಅಜ್ಞಾನದಿಂದ ಸುಜ್ಞಾನದ ಕಡೆಗೆ ನಡೆಸುವ ಮಹಾಶಕ್ತಿ.
ಗುರುವೆಂದರೆ ಥಟ್ಟಂತ ನೆನಪಿಗೆ ಬರುವವರು, ಆದಿಜಗದ್ಗುರು ಶ್ರೀ ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು ವೀರಸಂತ ಸ್ವಾಮಿ ವಿವೇಕಾನಂದರು, ಕರುನಾಡ ಮಹಾಜ್ಯೋತಿ, ಸಿದ್ದಗಂಗೆಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು,ಭಾರತ ರತ್ನ ಸರ್ವೆಪಲ್ಲಿ ಶ್ರೀ ರಾಧಾಕೃಷ್ಣನ್, ಶ್ರೀಮತಿ ಸಾವಿತ್ರಿ ಪುಲೆಯವರು.

ಗುರುವೆಂದರೆ ಯಾರು ?
ಕಾವಿ ಹಾಕಿದ ಮಾತ್ರಕ್ಕೆ ಗುರುವೇ ? ಅಥವಾ ಭೋದನೆಗೆ ಶೈಕ್ಷಣಿಕ ಅರ್ಹತೆ ಪಡೆದವರೆ ಗುರುವಾ.? ಯಾಕೀ ಪ್ರಶ್ನೆ ಉದ್ಭವಿಸುತ್ತದೆಯಂದ್ರೆ, ದೈವತ್ವದಲ್ಲಿದ್ದ ಗುರುವಿನ ಸ್ಥಾನಕ್ಕಿಂದು, ಗುರುಸ್ಥಾನದಲ್ಲಿರುವ ಕೆಲವು ವಿಲಕ್ಷಣ, ವಿಕೃತ ಮನಸ್ಥಿಯ ದುರ್ವ್ಯಕ್ತಿಗಳಿಂದ ಪರಮ ಪವಿತ್ರ ಸ್ಥಾನಕ್ಕೆಚ್ಯುತಿ ಬರುತ್ತಿದೆ ವೇದ,ಮಂತ್ರ,ಪೂಜೆ,ಪುನಸ್ಕಾರ, ಪುರಾಣ, ಪ್ರವಚನ ಸತ್ಸಂಗ , ದೂಪ ದೀಪದ ಪ್ರಜ್ವಲತೆಯಿಂದ ಸಮಾಜವನ್ನು ಮುನ್ನಡೆಸಬೇಕಾದ ಪೂಜ್ಯನೀಯ ಸ್ಥಳದಲ್ಲಿ ಕಾಮದ ಕಮಟು ವಾಸನೆಯ ದುರ್ಗಂಧ ಬೀರುತ್ತಿದೆ. ಶಾಲೆ – ಕಾಲೇಜುಗಳಲ್ಲಿ, ಹಸುಗೂಸಿನಿಂದ ಹಿಡಿದು ವಯಸ್ಕ ಹೆಂಗಳಿಯರ ಮೇಲೆ, ವಿಕೃತಕಾಮ ಪಿಶಾಚಿ ಶಿಕ್ಷಕರಿಂದ ಲೈಂಗಿಕ ದೌರ್ಜನ್ಯದ ಸುದ್ದಿ ಕಣ್ಮುಂದೆ ನಡೆಯುತ್ತಿವೆ, ದಿನಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಅತ್ಯಾಚಾರದ ಸುದ್ದಿಯು ರಾರಾಜಿಸುತ್ತಿದೆ.ಅಷ್ಟೇಯಲ್ಲದೆ ಮಾದಕ ವ್ಯಸನಿಗಳಾಗಿ, ದುಶ್ಚಟಗಳ ದಾಸರಾಗಿ ಭವ್ಯ ಭಾರತದ ಮುಂದಿನ ಸತ್ಪ್ರಜೆಗಳ ಭವಿಷ್ಯವನ್ನು ದಹಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ, ನಮ್ಮಯ ಮಕ್ಕಳ ಗತಿಯೇನು ?ಇದಕ್ಕಾಗಿ ಸರಕಾರ,ಕಠಿಣಕ್ರಮ ಕೈಗೊಳ್ಳುವದು ಅನಿವಾರ್ಯವಾಗಿದೆ, ಶ್ರೇಷ್ಠ ಸಂತ, ಗುರು ಮಹಾಂತರಿಂದ ಮಾತ್ರ ಸ್ವಾಸ್ಥ್ಯ ಸಮಾಜ, ಸತ್ಪ್ರಜೆಗಳ ನಿರ್ಮಾಣ ಸಾಧ್ಯವಿದೆ. ಮೇಲಿನ ಗುರುವರ್ಯರ ಹೆಸರುಗಳು ಏಕೆ ತಟ್ಟನೆ ನಮ್ಮ ಬಾಯಿಂದ ಬರುತ್ತವೆಯಂದ್ರೆ, ಆ ಪೂಜ್ಯನಿಯರು ಬಿತ್ತಿದ ಬೌಧಿಕ, ಭೌತಿಕ, ಅಧ್ಯಾತ್ಮಿಕ, ಶೈಕ್ಷಣಿಕ ಬೀಜಗಳು, ನಮ್ಮ ನೆಲದಲ್ಲಿ ಇಂದಿಗೂ ಚಿರಸ್ಥಾಯಿಯಾಗಿರುವದು. ಅವರ ತತ್ವಾದರ್ಶಗಳು ನಮಗೆಲ್ಲ ದಾರಿದೀಪವಾಗಬೇಕಿದೆ, ಮತ್ತೆ ಹೇಳುವೆ ಶ್ರೇಷ್ಠ ಗುರುಗಳಿಂದ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯವಿದೆ,ಅದೆ ಒಬ್ಬ ಕೆಟ್ಟ ಗುರುವಿನಿಂದ ಹಾಳು ಮಾಡುವ ಸಾಧ್ಯತೆಯು ದಟ್ಟವಾಗಿದೆ, ಆದರಿಂದ ಅಡ್ಡ ದಾರಿಯಲ್ಲಿರುವ ಗುರುವರ್ಯರಲ್ಲಿ ನಾನು ವಿನಮ್ರ ತೆಯಿಂದ ವಿನಂತಿಸುವೆ, ತಮಗಿರುವ ಘನತೆಯನ್ನು ಕೊಚ್ಚೆಯ ಬೆನ್ನುಹತ್ತಿ ಕಳೆದುಕೊಳ್ಳದೆ, ಗುರುಸ್ಥಾನಕಿರುವ ಘನತೆ, ಗೌರವ, ಪೂಜ್ಯನೀಯ ಭಾವನೆ ಉಳಿಸಿ.
- ಡಾ. ಎಂ.ಎಸ್.ಆಲಮೇಲ ಯಡ್ರಾಮಿ.
