‘ಹಾಳು ಮನೆಯ ಅತಿಥಿ!’ ಸಣ್ಣಕತೆ

ಗಂಗಣ್ಣ ಮನೆ ಬಿಟ್ಟು ಹೋದ ಮೇಲೆ ಸಹಜವಾಗಿ ಮನೆ ಖಾಲಿ ಬಿದ್ದಿತು. ದೀಪ ಹಚ್ಚುವವರಿಲ್ಲದೆ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿತು. ಕಸಕಡ್ಡಿ ಸಂಗ್ರಹವಾಗಿ ತಿಪ್ಪೆಯಂತಾಯಿತು. ಪಾಳು ಬಿದ್ದ ಮನೆಯನ್ನು ನೋಡಿ ಜನ ಭಯ ಬೀಳುತ್ತಿದ್ದರು. ಮುಂದೇನಾಯಿತು ಶರಣಗೌಡ ಬಿ.ಪಾಟೀಲ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…

ಸುಮಾರು ಇಪ್ಪತ್ತು ವರ್ಷಗಳಿಂದಲೂ ಆ ಮನೆ ಹಾಳು ಬಿದ್ದಿತ್ತು ಅಲ್ಲಿ ಯಾರೂ ವಾಸ ಮಾಡುತ್ತಿರಲಿಲ್ಲ ಸಹಜವಾಗಿ ಮನೆಯ ಸುತ್ತಲೂ ಗಿಡಗಂಟಿ ಹುಲ್ಲು, ಬೆಳೆದು ಮನೆ ಸಂಪೂರ್ಣ ಮುಚ್ಚಿ ಹೋಗಿತ್ತು. ಬಾಗಿಲು ಕಿಟಕಿ ಅಲ್ಲಲ್ಲಿ ಮುರಿದು ಅಸ್ತವ್ಯಸ್ತವಾಗಿದ್ದವು. ಆ ಕಡೆ ಸುಳಿಯಲು ಕೂಡ ಜನ ಹೆದರುತಿದ್ದರು. ಕತ್ತಲೆ ಮನೆಯಲ್ಲಿ ಹಾವು ಚೇಳು ಹುಳ, ಹುಪ್ಪಟೆ ಸೇರಿಕೊಂಡು ವಿಚಿತ್ರವಾದ ಸದ್ದು ಮಾಡುತ್ತಿದ್ದವು ಬೀದಿ ನಾಯಿಗಳಿಗೆ ಆಶ್ರಯ ತಾಣವಾಗಿಯೂ ಮಾರ್ಪಟ್ಟಿತ್ತು .

“ಆ ಮನೆ ಕಡೆ ಹೋಗಬೇಡಿ ಅಂತ ಜನ ತಮ್ಮ ಮಕ್ಕಳಿಗೆ ಅನೇಕರು ತಾಕೀತು ಮಾಡಿ ಎಚ್ಚರಿಸುತಿದ್ದರು. ಇದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ ಜನರ ಓಡಾಟವಿಲ್ಲದೆ ಮನೆಯ ಮುಂದಿನ ರಸ್ತೆ ಕೂಡ ಬಿಕೋ ಅನ್ನುತಿತ್ತು.

ಅದು ಗಂಗಣ್ಣನ ಮನೆ ಮೊದಲು ಆ ಮನೆ ಸರಿಯಾಗೇ ಇತ್ತು ಒಂದು ಕೋಣೆಯಿದ್ದರು ಮಜಬೂತಾಗಿತ್ತು ಸುಣ್ಣ ಬಣ್ಣ ಬಳಿದುಕೊಂಡು ಆಕರ್ಷಕವಾಗಿ ಕಾಣುತಿತ್ತು. ಗಂಗಣ್ಣ ಆ ಮನೆ ಕಟ್ಟಲು ಬಹಳ ಶ್ರಮವಹಿಸಿದ್ದ “ಕೂಲಿ ಮ್ಯಾಲ ಮನೆ ಕಟ್ಟಿಸಿದ್ದಾನೆ” ಅಂತ ಜನ ಕೂಡ ಹೇಳುತ್ತಿದ್ದರು. ಮನೆ ಸಣ್ಣದಾಗಿದ್ದರು ಪರವಾಗಿಲ್ಲ ಊರಾಗೇ ನಿನ್ನ ಮನೆ ಛೊಲೊ ಕಾಣಸ್ತಾದೆ ಅಂತ ಕೆಲವರು ತಾರೀಫ ಮಾಡುತ್ತಿದ್ದರು ಅವರ ಮಾತು ಗಂಗಣ್ಣನಿಗೆ ಖುಷಿ ಕೊಡುತಿತ್ತು.

ಗಂಗಣ್ಣ ಕೂಲಿ ಕೆಲಸ ಮಾಡುವವನು, ಮುಂಜಾನೆ ಹೊಲದ ಕಡೆ ಹೋದರೆ ಸಾಯಂಕಾಲವೇ ಮನೆಗೆ ಬರುತಿದ್ದ. ಹೆಂಡತಿ ಕೂಡ ಮನೆಗೆಲಸ ಮಾಡಿ ಗಂಡನ ಜೊತೆ ಕೂಲಿ ಕೆಲಸಕ್ಕೆ ಹೋಗುತಿದ್ದಳು. ಇಬ್ಬರೂ ಶ್ರಮಜೀವಿಗಳು. ಒಂದಿನ ಕೂಡ ಕೈಕಟ್ಟಿ ಮನೆಯಲ್ಲಿ ಕೂಡುತ್ತಿರಲಿಲ್ಲ ಅವರ ಕೆಲಸ ಕಾರ್ಯ ಎಲ್ಲರಿಗೂ ಹಿಡಿಸುತ್ತಿತ್ತು ಯಾವುದೇ ಕೆಲಸವಿದ್ದರೂ ಜನ ಮೊದಲು ಇವರನ್ನೇ ಕರೆಯುತ್ತಿದ್ದರು.

ಸ್ವಲ ದಿನಗಳ ನಂತರ ಊರಲ್ಲಿ ಕೂಲಿ ಕೆಲಸ ಕಡಿಮೆಯಾದವು. ಹೊಲಗದ್ದೆ ಇದ್ದವರು ಸ್ವತಃ ತಾವೇ ಕೆಲಸ ಮಾಡಿಕೊಳ್ಳತೊಡಗಿದರು ಆಗ ಗಂಗಣ್ಣನಿಗೆ ಚಿಂತೆ ಶುರುವಾಯಿತು. ದಿನಾಲೂ ಕೆಲಸ ದೊರೆಯದೆ ವಾರದಲ್ಲಿ ಒಂದೆರಡು ಬಾರಿ ದೊರೆಯತೊಡಗಿತು. ಇದರಿಂದ ಸಂಸಾರಕ್ಕೆ ಅಡಚಣೆಯಾಗಿ ಮುಂದೇನು ಅಂತ ಯೋಚಿಸತೊಡಗಿದ.

“ಕೆಲಸಾ ಇಲ್ಲ ಅಂತ ಯಾಕೆ ಚಿಂತೆ ಮಾಡೋದು ಸ್ವಲ್ಪ ದಿನ ಪಟ್ಟಣದ ಕಡೆ ಹೋಗಿ ಕೆಲಸ ಮಾಡಿದರಾಯಿತು ರೊಕ್ಕದ ಅಡಚಣೆ ದೂರಾಗ್ತದೆ ಒಂದೆರಡು ವರ್ಷದ ನಂತರ ಮತ್ತೆ ವಾಪಸ್ ಬಂದರಾಯಿತು ಅಂತ ಹೆಂಡತಿ ಸಲಹೆ ನೀಡಿದಳು. ಅವಳ ಮಾತಿಗೆ ಗಂಗಣ್ಣ ತಲೆಯಾಡಿಸಿದ.

ಒಂದಿನ ಅಗತ್ಯವಿರುವ ಸಾಮಾನು ಸರಂಜಾಮು ತೆಗೆದುಕೊಂಡು ಮನೆಗೆ ಹೊರಗೀಲಿ ಹಾಕಿ ಹೆಂಡತಿ ಮಗನ ಜೊತೆ ಗಂಗಣ್ಣ ಮುಂಬೈ ನಗರದ ಕಡೆ ಗುಳೆ ಹೋದ ಅಲ್ಲಿ ಒಂದು ಕಟ್ಟಡ ಕೆಲಸದಲ್ಲಿ ಸೇರಿಕೊಂಡು ದುಡಿಯತೊಡಗಿದ ಯಾವುದೇ ಬಾಡಿಗೆ ಇಲ್ಲದೆ ಒಂದು ಶೆಡ್ ಕೂಡ ಅವರೇ ಹಾಕಿಕೊಟ್ಟರು. ದಿನಗಳು ಉರುಳತೊಡಗಿದವು .ಮಗನಿಗೆ ಸಮೀಪದ ಸರಕಾರಿ ಶಾಲೆಗೆ ಸೇರಿಸಿ ಶಿಕ್ಷಣ ಮುಂದುವರಿಸಿದ.

ಗಂಗಣ್ಣ ಮನೆ ಬಿಟ್ಟು ಹೋದ ಮೇಲೆ ಸಹಜವಾಗಿ ಮನೆ ಖಾಲಿ ಬಿದ್ದಿತು. ದೀಪ ಹಚ್ಚುವವರಿಲ್ಲದೆ ಕತ್ತಲೆ ಕೋಣೆಯಾಗಿ ಮಾರ್ಪಟ್ಟಿತು. ಕಸಕಡ್ಡಿ ಸಂಗ್ರಹವಾಗಿ ತಿಪ್ಪೆಯಂತಾಯಿತು. ಮಳೆ ಬಂದಾಗ ಮೇಲ್ಛಾವಣಿ ಅಲ್ಲಲ್ಲಿ ಸೋರಿ ವಿಚಿತ್ರವಾಗಿ ಕಾಣತೊಡಗಿತು. “ಮನೆಗೆ ಲಕ್ಷಣವೇ ಇಲ್ಲದಂತಾಗಿದೆ ಹ್ಯಾಂಗ ಇದ್ದ ಮನೆ ಹ್ಯಾಂಗಾಯಿತು ಅಂತ ಜನ ಆಗಾಗ ಮಾತಾಡುತಿದ್ದರು.

“ಊರಲ್ಲಿ ಜಾತ್ರೆ ಉತ್ಸವ ಮದುವೆ ಮುಂಜಿ ಇದ್ದಾಗಾದ್ರು ಗಂಗಣ್ಣ ಬಂದು ಹೋಗಬಾರದಾ? ಎಂಥಹ ಮನುಷ್ಯ ? ಆಗಾಗ ಬಂದು ಹೋದರೆ ಮನೆ ಕೂಡ ಸ್ವಚ್ಛವಾಗಿರ್ತಾದೆ , ಜನ ಕೂಡ ಗುರುತು ಹಿಡೀತಾರೆ , ಇಲ್ಲದಿದ್ದರೆ ಯಾರು

ಗುರುತು ಹಿಡೀತಾರೆ ? ಅವನ ಮನ್ಯಾಗ ಯಾವುದೇ ಶುಭ ಅಶುಭ ಕಾರ್ಯಗಳಿದ್ದರೆ ಯಾರು ಬರ್ತಾರೆ? ಆಗ ಅವನೇ ತೊಂದರೆ ಪಡಬೇಕಾಗುತ್ತದೆ ಅಂತ ಗುಂಡಪ್ಪ ನಡು ಊರ ಕಟ್ಟೆಗೆ ಕುಳಿತು ಹೇಳಿದ.

” ದೂರದ ದಾರಿ, ಪಾಪ ಆತ ಕೆಲಸ ಬಿಟ್ಟು ಎಲ್ಲಿ ಬರ್ತಾನೆ? ಬರಲು ಒಂದಿನ , ಹೋಗಲು ಒಂದಿನ ಬೇಕು. ಸಮೀಪಿದ್ದರೆ ಬಂದು ಹೋಗುತಿದ್ದ ಅಲ್ಲಿಂದ ಬರಬೇಕಾದರೆ ಸುಮ್ಮನೆನಾ ? ಸಾವಿರಾರು ರುಪಾಯಿ ಖರ್ಚಾಗ್ತವೆ, ಆತ ಹೋಗಿದ್ದೇ ಕೂಲಿ ಮಾಡಿ ನಾಲ್ಕು ದುಡ್ಡು ಸಂಪಾದನೆ ಮಾಡಲು, ಅಂತ ನಾಗಪ್ಪ ಆತನ ಪರ ವಹಿಸಿ ಮಾತನಾಡಿದ.

” ಗಂಗಣ್ಣನ ಮಗ ಸಧ್ಯ ದೊಡ್ಡವನಾಗಿರಬೇಕು ಹೋಗುವಾಗ ಒಂದು ವರ್ಷದವನಿದ್ದ ಈಗ ಆತ ಏನು ಮಾಡ್ತಾನೋ ಏನೋ ಗೊತ್ತಿಲ್ಲ ಅಂತ ಶೇಖಪ್ಪ ಅನುಮಾನ ಹೊರ ಹಾಕಿದ.

” ಅವನು ನನ್ನ ಮಗನ ವಾರಿಗೆಯವನು, ಮದುವೆ ವಯಸ್ಸಿಗೆ ಬಂದಿರಬೇಕು , ನಾನು ನನ್ನ ಮಗನ ಮದುವೆ ಮಾಡಿಲ್ಲವೇ?” ಅಂತ ಗುಂಡಪ್ಪ ಉದಾಹರಣೆ ನೀಡಿ ಪ್ರಶ್ನಿಸಿದ.

” ಗಂಗಣ್ಣ ಇನ್ನೂ ತನ್ನ ಮಗನ ಮದುವೆ ಮಾಡಿರ್ಲಿಕ್ಕಿಲ್ಲ , ನಮಗೆಲ್ಲ ಬಿಟ್ಟು ಹ್ಯಾಂಗ ಮಾಡ್ತಾನೆ? ಅವನಿಗಾದರು ಯಾರಿದ್ದಾರೆ ? ಬಂಧು ಬಳಗ ಸಂಬಂಧಿಕರು ಎಲ್ಲಾ ನಾವೇ ಇದ್ದೀವಿ , ಎಲ್ಲಿಗೆ ಹೋದರೂ ಇಲ್ಲಿಗೆ ಬರಲೇಬೇಕು ಅಂತ ನಾಗಪ್ಪ ಮಾತು ಮುಂದುವರಿಸಿ ಹೇಳಿದ.

“ದೂರಿದ್ದವನ ಸುದ್ದಿ ದೇವರೇ ಬಲ್ಲ , ಆತನ ಬಗ್ಗೆ ಯಾವದೂ ಹೇಳಲು ಬರೋದಿಲ್ಲ. ಆತನ ಜೊತೆ ಮಾತಾಡಬೇಕು ಕೆಲಸ ಕಾರ್ಯದ ಬಗ್ಗೆ ವಿಚಾರಿಸಬೇಕೆಂದರೆ ಆತನ ಬಳಿ ಮೋಬೈಲೂ ಇಲ್ಲ. ಮುದ್ದಾಮ ಹೋದರೂ ಆತ ಮುಂಬೈದಾಗ ಯಾವ ಏರಿಯಾದಲ್ಲಿದ್ದಾನೋ ಗೊತ್ತಿಲ್ಲ, ಅಂತ ರಾಮಣ್ಣ ಹೇಳಿದ.

“ನಾವು ರಾತ್ರಿ ಗಾಡೀಗಿ ಮುಂಬೈಗೆ ಹೋಗ್ತೀವಿ ನಮ್ಮ ಮನೆ ಕಡೆ ಸ್ವಲ್ಪ ನಿಗಾ ಇರಲಿ ಅಂತ ಹೋಗುವಾಗ ಆತ ಹೇಳಿ ಹೋಗಿದ್ದು ಬಿಟ್ಟರೆ ಆತನ ಬಗ್ಗೆ ಯಾವದೇ ವಿಷಯ ಗೊತ್ತಿಲ್ಲ ಅಂತ ಮಲ್ಲಿಕಾರ್ಜುನ ವಾಸ್ತವ ಹೊರ ಹಾಕಿದ.

“ಆತ ಹೋದ ಮೇಲೆ ಇಲ್ಲಿಯ ತನಕ ಯಾರಿಗೂ ಫೋನೇ ಮಾಡಿಲ್ಲ ಯಾರ ಬಗ್ಗೆಯೂ ವಿಚಾರಿಸಿಲ್ಲ ನಾವೇ ಆತನ ಬಗ್ಗೆ ಯೋಚನೆ ಮಾಡ್ತೀವಿ , ನಮ್ಮ ನೆನಪಾದರು ಆತನಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ? ಅಂತ ರಾಮಣ್ಣ ಕೋಪ ತಾಪ ಹೊರ ಹಾಕಿದಾಗ

“ಕೈಯಾಗ ಹಣ ಓಡಾಡಿದರ ಹಂಗೇ ಆಗೋದು, ನಮ್ಮ ನೆನಪ ಹ್ಯಾಂಗ ಬರ್ತಾದೆ? ಹಣ ಎಲ್ಲವನ್ನೂ ಮರೆಸಿ ಬಿಡ್ತಾದೆ ಹಣಕ್ಕೆ ಸೋಲದವರು ಯಾರಿದ್ದಾರೆ ? ಅಂತ ರಾಚಪ್ಪ ಪ್ರಶ್ನಿಸಿದ.

“ಗಂಗಣ್ಣ ಅಂಥಹ ಮನುಷ್ಯ ಅಲ್ಲವೇ ಅಲ್ಲ, ಆತನ ಸ್ವಭಾವ ನಮಗೆ ಸರಿಯಾಗಿ ಗೊತ್ತು ಆದರೆ ಯಾಕೋ ಏನೋ ಯಾರಿಗೂ ಸಂಪರ್ಕ ಮಾಡ್ತಿಲ್ಲ ಅಂತ ನಾಗಪ್ಪ ಹೇಳಿದಾಗ ಆತನ ಮಾತಿಗೆ ಕೆಲವರು ಸಹಮತ ವ್ಯಕ್ತಪಡಿಸಿದರು.

‘ಗಂಗಣ್ಣನ ಮನೆಯಲ್ಲಿ ಯಾರೋ ಅಪರಿಚ ವ್ಯಕ್ತಿ ಬಂದು ಸೇರಿದ್ದಾನೆ ಅಂತ ಅದೇ ಸಮಯ ಫಕೀರಪ್ಪ ಅವಸರವಾಗಿ ಬಂದು ಹೇಳಿದ. ವಿಷಯ ಕೇಳಿ ಎಲ್ಲರಿಗೂ ಆಶ್ಚರ್ಯವಾಗಿ ಪರಸ್ಪರ ಒಬ್ಬರ ಮುಖ ಒಬ್ಬರು ಗಾಬರಿಯಿಂದ ನೋಡಿಕೊಂಡರು.

” ಆತ ಯಾರಿರಬಹುದು ? ಗಂಗಣ್ಣನ ಮನೆಯಲ್ಲಿ ಯಾಕೆ ಸೇರಿಕೊಂಡಿದ್ದಾನೆ ಏನಾದರು ಕೆಟ್ಟ ಕೆಲಸ ಮಾಡಿ ಬಚಾವ

ಆಗಲು ಬಂದಿದ್ದಾನಾ ? ಅಂತ ನಾಗಪ್ಪ ಶೂನ್ಯ ದಿಟ್ಟಿಸಿ ಗಂಭೀರವಾಗಿ ಯೋಚಿಸದ.

“ಅತ್ತ ಕಡೆ ಹೋಗಲು ನಾವು ಕೂಡ ಭಯ ಪಡುತ್ತೇವೆ ಆದರೆ ಆತನಿಗೆ ಎಷ್ಟು ಧೈರ್ಯ ಇರಬೇಕು? ಅಂತ ಗುಂಡಪ್ಪನೂ ಗರಂ ಆಗಿ ಧನಿಗೂಡಿಸಿದ.

ಈ ವಿಷಯ ಗಂಗಣ್ಣನಿಗೆ ತಿಳಿಸಲು ಆಗೋದಿಲ್ಲ ನಾವೇ ಏನಾದರು ಪರಿಹಾರ ಹುಡುಕಬೇಕು, ಸುಮ್ಮನೆ ಕುಳಿತುಕೊಂಡರೆ ಆಗೋದಿಲ್ಲ, ಆತ ಯಾರು? ಯಾಕೆ ಬಂದಿದ್ದಾನೆ ಅಂತ ಮೊದಲು ತಿಳಿಯಬೇಕು ಆತನಿಂದ ಸರಿಯಾದ ಉತ್ತರ ಬರದಿದ್ದರೆ ಪೋಲೀಸರಿಗೆ ತಿಳಿಸಬೇಕು ಅಂತ ಹಿರಿಯ ವ್ಯಕ್ತಿ ಸೋಮಣ್ಣ ಸಲಹೆ ನೀಡಿದ ಆತನ ಮಾತಿಗೆ ಎಲ್ಲರೂ ಸಮ್ಮತಿಸಿದರು.

” ಸಧ್ಯ ಆತ ಆ ಮನೆಯಲ್ಲಿಲ್ಲ ರಾತ್ರಿ ಬಂದು ನಸುಕಿನಲ್ಲೇ ಹೊರಟು ಹೋಗಿದ್ದಾನೆ. ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ ಇವತ್ತು ರಾತ್ರಿ ಮತ್ತೆ ಬಂದ್ರು ಬರಬಹುದು ಅಂತ ಫಕೀರಪ್ಪ ಅನುಮಾನ ಹೊರ ಹಾಕಿದ.

ಇವತ್ತು ನಾವ್ಯಾರೂ ಮಲಗೋದೇ ಬೇಡ ಆತನ ಬಗ್ಗೆ ಮೊದಲು ತಿಳಿಯಲೇಬೇಕು ಅಂತ ಸೋಮಣ್ಣ ಹೇಳಿದಾಗ ಎಲ್ಲರೂ ತಲೆಯಾಡಿಸಿ ಆತನಿಗಾಗಿ ದಾರಿ ಕಾಯತೊಡಗಿದರು.

ಆಗಲು ಬಂದಿದ್ದಾನಾ ? ಅಂತ ನಾಗಪ್ಪ ಶೂನ್ಯ ದಿಟ್ಟಿಸಿ ಗಂಭೀರವಾಗಿ ಯೋಚಿಸದ.

“ಅತ್ತ ಕಡೆ ಹೋಗಲು ನಾವು ಕೂಡ ಭಯ ಪಡುತ್ತೇವೆ ಆದರೆ ಆತನಿಗೆ ಎಷ್ಟು ಧೈರ್ಯ ಇರಬೇಕು? ಅಂತ ಗುಂಡಪ್ಪನೂ ಗರಂ ಆಗಿ ಧನಿಗೂಡಿಸಿದ.

ಈ ವಿಷಯ ಗಂಗಣ್ಣನಿಗೆ ತಿಳಿಸಲು ಆಗೋದಿಲ್ಲ ನಾವೇ ಏನಾದರು ಪರಿಹಾರ ಹುಡುಕಬೇಕು, ಸುಮ್ಮನೆ ಕುಳಿತುಕೊಂಡರೆ ಆಗೋದಿಲ್ಲ, ಆತ ಯಾರು? ಯಾಕೆ ಬಂದಿದ್ದಾನೆ ಅಂತ ಮೊದಲು ತಿಳಿಯಬೇಕು ಆತನಿಂದ ಸರಿಯಾದ ಉತ್ತರ ಬರದಿದ್ದರೆ ಪೋಲೀಸರಿಗೆ ತಿಳಿಸಬೇಕು ಅಂತ ಹಿರಿಯ ವ್ಯಕ್ತಿ ಸೋಮಣ್ಣ ಸಲಹೆ ನೀಡಿದ ಆತನ ಮಾತಿಗೆ ಎಲ್ಲರೂ ಸಮ್ಮತಿಸಿದರು.

” ಸಧ್ಯ ಆತ ಆ ಮನೆಯಲ್ಲಿಲ್ಲ ರಾತ್ರಿ ಬಂದು ನಸುಕಿನಲ್ಲೇ ಹೊರಟು ಹೋಗಿದ್ದಾನೆ. ಎಲ್ಲಿಗೆ ಹೋಗಿದ್ದಾನೆ ಅಂತ ಗೊತ್ತಿಲ್ಲ ಇವತ್ತು ರಾತ್ರಿ ಮತ್ತೆ ಬಂದ್ರು ಬರಬಹುದು ಅಂತ ಫಕೀರಪ್ಪ ಅನುಮಾನ ಹೊರ ಹಾಕಿದ.

ಇವತ್ತು ನಾವ್ಯಾರೂ ಮಲಗೋದೇ ಬೇಡ ಆತನ ಬಗ್ಗೆ ಮೊದಲು ತಿಳಿಯಲೇಬೇಕು ಅಂತ ಸೋಮಣ್ಣ ಹೇಳಿದಾಗ ಎಲ್ಲರೂ ತಲೆಯಾಡಿಸಿ ಆತನಿಗಾಗಿ ದಾರಿ ಕಾಯತೊಡಗಿದರು.

ರಾತ್ರಿ ಹನ್ನೊಂದು ಗಂಟೆಗೆ ಆ ಅಪರಿಚಿತ ವ್ಯಕ್ತಿ ಹಾಳು ಮನೆ ಪ್ರವೇಶಿಸಿದ, ಎಲ್ಲರೂ ಒಟ್ಟುಗೂಡಿ ಆ ಮನೆಗೆ ಸುತ್ತುವರೆದು ಆತನ ಬಗ್ಗೆ ತಿಳಿಯಲು ಉತ್ಸುಕರಾದರು. ಕೆಲವರು ಜೋರಾಗಿ ಕೂಗಲು ಆರಂಭಿಸಿದರು. ಜನರ ಕೂಗಾಟ ಗದ್ದಲ ಕೇಳಿ ಆತ ಹೊರ ಬಂದು ದಿಕ್ಕು ತೋಚದೆ ನಿಂತುಕೊಂಡ.

“ನೀನು ಯಾರು? ಇಲ್ಲಿಗೆ ಯಾಕೆ ಬಂದಿದ್ದಿಯಾ ? ನಿನಗೆ ನಾವು ಒಮ್ಮೆಯೂ ನೋಡಿಲ್ಲ ಅಂತ ಸೋಮಣ್ಣ ಖಡಕ್ಕಾಗಿ ಪ್ರಶ್ನಿಸಿದ. ಆತ ಸ್ವಲ್ಪ ಸುಧಾರಿಸಿಕೊಂಡು

“ನಾನು ಗಂಗಣ್ಣನ ಮಗ ಚಿನ್ನಣ್ಣ ಸಧ್ಯ ಅಪ್ಪನಿಗೆ ವಯಸ್ಸಾಗಿದೆ ಮುಂಬೈಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಊರಿಗೆ ಹೋಗೋಣ ಅಂತ ಹಠ ಹಿಡಿದಿದ್ದಾನೆ. ಸುಮಾರು ವರ್ಷಗಳಿಂದ ಬಿಟ್ಟು ಬಂದ ಈ ಮನೆಗೆ ಹಾಗೇ ಬರೋದು ಸರಿಯಲ್ಲ , ಸ್ವಚ್ಛಗೊಳಿಸಿ ಆಮೇಲೆ ಅಪ್ಪನಿಗೆ ಕರೆದುಕೊಂಡ ಬಂದರಾಯಿತು ಅಂತ ಯೋಚಿಸಿ ನಾನೇ ಬಂದೆ ಅಂತ ಹೇಳಿದ. ವಾಸ್ತವ ಅರಿತು ಎಲ್ಲರೂ ಪರಸ್ಪರ ಒಬ್ಬರ ಮುಖ ನೋಡುತ್ತಾ ಗಾಬರಿಯಿಂದ ಯೋಚಿಸತೊಡಗಿದರು.


  • ಶರಣಗೌಡ ಬಿ.ಪಾಟೀಲ,  ತಿಳಗೂಳ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW