ಯತಿರಾಜ್ ವೀರಾಂಬುಧಿ ಅವರ ಹಾಸುಹೊಕ್ಕು ಕೃತಿಯು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಡೆದ ಸತ್ಯಘಟನೆ ಆಧರಿಸಿ ಬರೆದ ಕಾದಂಬರಿ ಎಂದು ಲೇಖಕರು ಕಾದಂಬರಿಯ ಮೊದಲ ಪುಟಗಳಲ್ಲೇ ಉಲ್ಲೇಖಿಸಿದ್ದು, ಈ ಕೃತಿಯ ರೋಚಕತೆಯ ಕುರಿತು ಸುಮಾ ಭಟ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹಾಸುಹೊಕ್ಕು
ಲೇಖಕರು : ಯತಿರಾಜ್ ವೀರಾಂಬುಧಿ
ಮುದ್ರಣ: ೨೦೦೧
ಪ್ರಕಾಶಕರು: ಪಾಂಚಜನ್ಯ ಪ್ರಕಾಶನ
ಪುಟಗಳು: ೧೮೮
ಬೆಲೆ: ೮೫
ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನಡೆದ ಸತ್ಯಘಟನೆ ಆಧರಿಸಿ ಬರೆದ ಕಾದಂಬರಿ ಎಂದು ಲೇಖಕರು ಕಾದಂಬರಿಯ ಮೊದಲ ಪುಟಗಳಲ್ಲೇ ಉಲ್ಲೇಖಿಸಿದ್ದಾರೆ. ಇನ್ನು ಅರಿಷಡ್ವರ್ಗಗಳಲ್ಲಿ ಒಂದಾದ ಕಾಮದ ವಿಜೃಂಭಣೆಯ ಬಗ್ಗೆ ಸಹಾ ಈ ಕಾದಂಬರಿಯಲ್ಲಿದೆ ಎಂಬ ಲೇಖಕರು ಹೇಳಿರುವ ನುಡಿಗಳಿಗೆ ಸಾಕ್ಷಿ ಕಾದಂಬರಿಯ ಪುಟಗಳನ್ನು ತೆರೆಯುತ್ತಾ ಹೋದಂತೆ ಸ್ಪಷ್ಟವಾಗುತ್ತದೆ.
ಮಹಾವೀರನಗರ ಮತ್ತು ಗೌತಮಪುರದ ಮಧ್ಯದಲ್ಲಿರುವ ಮಾಲೂರು ಎಂಬ ಸಣ್ಣ ಊರಿನ ಕೆರೆಯ ಬಳಿ ಒಂದೆಡೆ ಮಹಿಳೆಯ ಶವ ಮತ್ತೊಂದೆಡೆ ನಗ್ನವಾದ ಸ್ಥಿತಿಯಲ್ಲಿ ಗಂಡು ಶವ ಕಂಡ ನಾಗರೀಕನೊಬ್ಬ ತಕ್ಷಣ ಆರಕ್ಷಕ ಠಾಣಿಗೆ ವಿಷಯ ತಿಳಿಸುತ್ತಾನೆ. ಪೋಲಿಸರು ಹೆಣಗಳನ್ನು ಶವ ಪರೀಕ್ಷೆಗೆ ಕಳಿಸಿದ ನಂತರ ತನಿಖೆ ನಡೆಸಲಾರಂಭಿಸುತ್ತಾರೆ, ತನಿಖೆ ನಡೆಸುತ್ತಿದ್ದಾಗಲೇ ಮತ್ತಿಬ್ಬರು ವ್ಯಕ್ತಿಗಳ ನಾಪತ್ತೆಯ ದೂರು ದಾಖಲಾಯಿತು. ಇಂತಹ ನಾಲ್ಕು ಪ್ರಕರಣಗಳು ಒಂದಕ್ಕೊಂದು ಬೆಸೆದುಕೊಂಡಿತ್ತಾ ಇಲ್ಲಾ ಕೊಲೆ ಪ್ರಕರಣ ಮತ್ತು ನಾಪತ್ತೆ ಪ್ರಕರಣಗಳು ಬೇರೆ ಬೇರೆಯಾ ಎಂಬ ಈ ಗೊಂದಲಗಳ ನಿವಾರಣೆಗೆ ಈ ಹಾಸು ಹೊಕ್ಕು ಎಂಬ ಪತ್ತೇದಾರಿ ಕಾದಂಬರಿ ಓದಿ ನೋಡಿ.
ಮಾಲೂರು ಎಂಬ ಊರಿನ ಹೊರಭಾಗದಲ್ಲಿರುವ ಕೆರೆಯ ಬಳಿ ಹೆಣ್ಣಿನ ಶವ ನಗ್ನ ಸ್ಥಿತಿಯಲ್ಲಿ ಪೋಲಿಸರಿಗೆ ಟೀ ತಯಾರಿಸಿ ಮಾರೋ ವ್ಯಕ್ತಿ ತಿಮ್ಮರಾಯಿ ಎಂಬಾತನಿಗೆ ಕಾಣಿಸಿತು. ಹೆಣ ಕಂಡಾಕ್ಷಣ ಪ್ರಜ್ಞಾವಂತ ನಾಗರೀಕನಂತೆ ಅಲ್ಲಿ ಕಂಡ ಕೆಂಪಣ್ಣ ಎಂಬ ಪರಿಚಯದವನ ಸಹಾಯದಿಂದ ಪೊಲೀಸರಿಗೆ ವಿಚಾರ ತಿಳಿಸುತ್ತಾನೆ. ದೂರನ್ನಾಧರಿಸಿ ಕೆರೆ ಹತ್ತಿರ ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತು ಕಾನ್ಸ್ಟೇಬಲ್ ಶ್ರೀಹರಿ ಅಲ್ಲಿಗೆ ತಲುಪುತ್ತಾರೆ. ಈ ವಿಕ್ಷಿಪ್ತ ಸಾವಿನ ಪ್ರಕರಣದ ಮುಂದಿನ ಹೆಜ್ಜೆಯೆಂಬಂತೆ ಛಾಯಾಚಿತ್ರಗ್ರಾಹಕ ಮತ್ತು ವೈದ್ಯರನ್ನು ಪೊಲೀಸರು ಕರೆಸುತ್ತಾರೆ. ಈ ಪ್ರಕರಣದ ಮೊದಲ ಸುತ್ತಿನ ಕೆಲಸ ಮುಗಿಸಿ ಸ್ಟೇಷನ್ ಗೆ ತಲುಪುವುದರೊಳಗೆ ಮತ್ತೊಮ್ಮೆ ತಿಮ್ಮರಾಯಿ ಕರೆ ಮಾಡಿ ಸರ್ ಕೆರೆಯ ಇನ್ನೊಂದು ಭಾಗದಲ್ಲಿ ನಗ್ನ ಸ್ಥಿತಿಯಲ್ಲಿ ಮತ್ತೊಬ್ಬ ಪುರುಷನೊಬ್ಬನ ಹೆಣ ಕಾಣುತ್ತಿದೆ ಎಂಬ ವಿಷಯ ತಿಳಿಸುತ್ತಾನೆ. ಈ ಮೊದಲು ಯಾವುದೇ ಕೊಲೆ ಪ್ರಕರಣ ತಾನು ಬಂದ ನಂತರ ಮಾಲೂರಿನಲ್ಲಿ ಆಗದಿದ್ದರ ಬಗ್ಗೆ ಕಾನ್ಸ್ಟೇಬಲ್ ಬಳಿ ಚರ್ಚಿಸುತ್ತಾ ಇನ್ಸ್ಪೆಕ್ಟರ್ ಪ್ರಶಾಂತ್ ಇನ್ನೊಂದು ಕೊಲೆ ನಡೆದ ಜಾಗ ತಲುಪುತ್ತಾನೆ. ಪ್ರಶಾಂತ್ ಆ ಜಾಗಕ್ಕೆ ತಲುಪಿದ ನಂತರ ಹೆಣದ ಹತ್ತಿರ ಪ್ರಶಾಂತ್ ಜೊತೆ ನೋಡಲು ಹೋದಾಗ ತಿಮ್ಮರಾಯಿ ಅವನನ್ನು ತನ್ನ ದೂರದ ಸಂಬಂಧಿ ರಾಯಣ್ಣ ಎಂದು ಗುರುತಿಸುತ್ತಾನೆ.

ಅಲ್ಲದೆ ಆ ಮಹಿಳಾ ಶವ ಸಂಪರ್ಕ್ ಎಂಬ ಟೆಲಿಫೋನ್ ಬೂತಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಮತಿ ಎಂಬುವಳದೆಂದು ಅನುಮಾನ ಬರುತ್ತದೆ. ಶ್ರೀಮತಿ ಮತ್ತು ರಾಯಣ್ಣನ ಮಧ್ಯೆ ಸಂಪರ್ಕವಿತ್ತೆಂಬ ಕುತೂಹಲಕಾರಿ ವಿಷಯವನ್ನು ತಿಮ್ಮರಾಯಿ ಪೊಲೀಸರ ಮುಂದೆ ಹೇಳುತ್ತಾನೆ.ನಂತರ ಪೊಲೀಸರು ತಿಮ್ಮರಾಯಿ ಬಳಿ ಕೂಲಂಕುಷವಾಗಿ ರಾಯಣ್ಣನ ಬಗ್ಗೆ ವಿಚಾರಿಸುತ್ತಾ ಹೋದಾಗ ರಾಯಣ್ಣ ಮಹಾನ್ ರಸಿಕನಾಗಿದ್ದು ಹೆಣ್ಣಿನ ಹಿಂದೆ ಬೀಳುವಂತಹ ವ್ಯಕ್ತಿತ್ವದವನು ಎಂಬುದು ಹೊರಗೆ ಬರುತ್ತದೆ. ಸವಾಲ್ ಎಂದರೆ ಆ ಎರಡು ಕೊಲೆಗಳನ್ನು ಒಬ್ಬರೆ ಮಾಡಿದ್ದಾರೆ ಇಲ್ಲಾ.. ಬೇರೆ ಬೇರೆಯಾಗಿ ಮಾಡಿದ್ದಾರೆ ಇಲ್ಲಾ…ರಾಯಣ್ಣನೇ ಶ್ರೀಮತಿಯ ಸಂಗ ಸುಖ ಬಯಸಿದಾಗ ಅವಳ ನಿರಾಕರಣೆಯಿಂದ ಬೇಸತ್ತು ಅವಳನ್ನು ಅತ್ಯಾಚಾರ ಮಾಡಿ, ನಂತರ ಸಾಯಿಸಿ ಆ ಹೆದರಿಕೆಯಲ್ಲೇ ಆತ್ಮಹತ್ಯೆ ಮಾಡಿಕೊಂಡನಾ??? ಹೀಗೆ ಹಲವಾರು ಆಲೋಚನೆಗಳಲ್ಲಿ ಇನ್ಸ್ಪೆಕ್ಟರ್ ಪ್ರಶಾಂತ್ ಮುಳುಗಿರುತ್ತಾನೆ. ಇದಲ್ಲದೆ ತಿಮ್ಮರಾಯಿ ೨೮ರ ಶ್ರೀಮತಿ ಮತ್ತು ೩೫ರ ರಾಯಣ್ಣನ ಮಧ್ಯೆ ಇರುವ ಅನೈತಿಕ ಸಂಬಂಧದ ಬಗ್ಗೆ ಸಹ ಇನ್ಸ್ಪೆಕ್ಟರ್ ಪ್ರಶಾಂತ್ ಬಳಿ ಹೇಳಿರುತ್ತಾನೆ.
ರಾಯಣ್ಣನಿಗೆ ಮದುವೆಯಾಗಿದ್ದು, ದೂರದ ಶಿಕಾರಿಪುರದಲ್ಲಿ ಹೆಂಡತಿ ಮಕ್ಕಳಿದ್ದು, ಗೌತಮಪುರದ ಲಾರಿ ಆಫೀಸಿನಲ್ಲಿ ರಾಯಣ್ಣ ಕೆಲಸಕ್ಕಿರುವ ವಿಷಯ ಸಹಾ ತನಿಖೆಯಲ್ಲಿ ತಿಳಿದು ಬರುತ್ತದೆ. ಇದೇ ವೇಳೆಯಲ್ಲಿ ಪ್ರಶಾಂತ್ ಗೆಳೆಯ ಗೌತಮಪುರ ಠಾಣೆ ಎಸ್ಪಿ ಆಗಿದ್ದ ದಿನೇಶ್ ಗೆಳೆಯನಿಗೆ ಫೋನ್ ಮಾಡಿ ಗೌತಮಪುರ ನಿವಾಸಿ ವಾಮನ್ ಎಂಬಾತನ ಮಗಳು ಶ್ರೀಮತಿ ಎಂಬ ಹುಡುಗಿ ಕಾಣೆಯಾಗಿದ್ದು ಅದರ ಬಗ್ಗೆ ದೂರು ನೀಡಲು ಅವರ ತಂದೆ ಬಂದಿದ್ದ ವಿಷಯ ತಿಳಿಸುತ್ತಾನೆ. ಪ್ರಶಾಂತ್ ಮತ್ತು ದಿನೇಶ್ ಈ ಎರಡು ಜೋಡಿ ಕೊಲೆಗಳ ರಹಸ್ಯ ಭೇದಿಸಲು ಹೊರಟಾಗ ಇನ್ಸ್ಪೆಕ್ಟರ್ ಪ್ರಶಾಂತನ ಮಗಳು ಕೇಳುವ ಕೆಲವೆರಡು ಪ್ರಶ್ನೆಗಳು ಕಾದಂಬರಿಯ ಮುಂದಿನ ತಿರುವಿಗೆ ಕಾರಣವಾಗುವುದನ್ನು ಅಸ್ಪಷ್ಟವಾಗಿ ಓದುಗರಿಗೆ ನೀಡುತ್ತದೆ. ಇಲ್ಲಿ ಶ್ರೀಮತಿಯ ಹಿನ್ನೆಲೆ ಹುಡುಕಿ ಹೊರಟಾಗ ಆಕೆ ಮಾಲೂರಿನ ಮಗ್ಗದ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ವಾಮನ್ ಎಂಬುವನ ಮಗಳಾಗಿದ್ದು ಅವಳಿಗೆ ಇಬ್ಬರು ತಂಗಿಯರು ಮತ್ತು ಇಬ್ಬರು ತಮ್ಮಂದಿರು ಇದ್ದು ಕಾಯಿಲೆ ಬಿದ್ದಿರುವ ತಾಯಿಯ ಸಲುವಾಗಿ ರಿಚರ್ಡ್ ಎಂಬ ವ್ಯಕ್ತಿಯ ಸಂಪರ್ಕ ದೂರವಾಣಿ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದ್ದಳು. ರಾತ್ರಿ ವೇಳೆ ಹೆಚ್ಚಿನ ಸಮಯ ಕೆಲಸ ಮಾಡಬೇಕಾದ ಕಾರಣದಿಂದ ರಿಚರ್ಡ್ ಅವಳಿಗೆ ಗೌತಮಪುರದ ಮನೆಯೊಂದರಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಟ್ಟಿದ್ದ ಎಂಬ ವಿಷಯ ತಿಳಿಯುತ್ತದೆ.
ಈ ತನಿಖೆಗಳ ವಿಷಯದಲ್ಲಿ ಮುಳುಗಿದ್ದಾಗ ಶ್ರೀಮತಿ ಕೆಲಸಕ್ಕೆ ಸೇರಲು ಕಾರಣನಾದ ಸರ್ಪಳ್ಳಿಯ ಸರಪಂಚ ಧರಣಿಂದ್ರ ಕಾಣೆಯಾಗಿದ್ದಾನೆಂಬ ದೂರನ್ನು ಅವನ ಹೆಂಡತಿ ಸುಭದ್ರ ಇನ್ಸ್ಪೆಕ್ಟರ್ ದಿನೇಶ್ ಬಳಿ ತಂದಿದ್ದಳು. ಅದೇ ಸಮಯಕ್ಕೆ ಹದಿನಾರರ ಹುಡುಗ ಅರ್ಜುನ್ ತನ್ನ ತಾಯಿ ಕುಮಾರಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಮನೆ ಕೆಲಸದ ಬಿಂಧು ಮಾಧವನೊಂದಿಗೆ ತಂದಿದ್ದ. ದೂರು ತಂದವರಿಬ್ಬರು ಬೇರೆ ಬೇರೆ ಕಡೆ ಮುಖ ಮಾಡಿ ಹೋಗಿದ್ದು ಇನ್ಸ್ಪೆಕ್ಟರ್ ದಿನೇಶನ ಗಮನಕ್ಕೆ ಬಂದಿತ್ತು . ಇಲ್ಲಿಂದಲೇ ಧರಣೇಂದ್ರ ಎಂಬ ವ್ಯಕ್ತಿಯ ಬಗ್ಗೆ ಓದುಗರಿಗೆ ಸಂಕ್ಷಿಪ್ತವಾಗಿ ಲೇಖಕರು ವಿವರಣೆ ನೀಡುತ್ತಾ ಹೋಗುತ್ತಾರೆ.
ಕುಮಾರಿ ತಂದೆಯ ಸಾಲಕ್ಕಾಗಿ ಅಧಿಕ ವಯಸ್ಸಿನ ಫಣಿಶಾಯಿ ಎಂಬ ವ್ಯಕ್ತಿಯೊಂದಿಗೆ ಒಲ್ಲದ ಮದುವೆಯಾಗಿರುತ್ತಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಅವಳ ಗಂಡನ ಮೊದಲ ಹೆಂಡತಿಯ ಮಗನಾದ ಚಿನ್ನು ತನ್ನ ದಾರಿಗಡ್ಡವೆಂದು ತಾನೇ ಅವನ ಮೇಲೆ ತನ್ನನ್ನು ಅತ್ಯಾಚಾರ ಮಾಡಲು ಪ್ರಯತ್ನಪಟ್ಪನೆಂಬ ಸನ್ನಿವೇಶ ಸೃಷ್ಟಿಸಿ, ಅದನ್ನು ಪಕ್ಕದ ಮನೆ ಚಂದ್ರಮ್ಮ ಆ ಸಮಯದಲ್ಲಿ ಬರುವಂತೆ ಮಾಡುತ್ತಾಳೆ. ಹದಿನೈದು ವರ್ಷದ ಚಿನ್ನುವನ್ನು ಹೆದರಿಸಿ ಅವನೇ ಮಲತಾಯಿ ಹೊರಿಸಿದ ಆರೋಪದಿಂದ ರಾತ್ರಿ ವೇಳೆ ಮನೆ ತೊರೆದು ಹೋಗುವಂತಾ ಸನ್ನಿವೇಶ ಸೃಷ್ಟಿಸುತ್ತಾಳೆ. ಮದುವೆಯಾದ ಕುಮಾರಿ ತನ್ನ ಪ್ರಿಯಕರನಿಂದ ಗರ್ಭವತಿಯಾಗಿದ್ದು ತಿಳಿದು, ನಂತರ ಗೆಳತಿ ವೖದ್ಯೆ ಶಶಿಕಲಾಳ ಸಹಾಯದಿಂದ ಫಣಿಶಾಯಿಯ ಮಗು ಎಂದು ನಂಬಿಸುವಲ್ಲಿ ಯಶಸ್ವಿಯಾಗುತ್ತಾಳೆ. ಕೆಲವೇ ದಿನಗಳಲ್ಲಿ ಅರ್ಜುನ್ ಎಂಬ ಮಗನನ್ನು ಹೆತ್ತು ಅದು ಫಣಿಶಾಯಿಯ ಮಗುವೆಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದಳು.
ಈ ಬೆಳವಣಿಗೆಯ ನಂತರ ತನಗಿರುವ ಗುಪ್ತ ಖಾಯಿಲೆ ಮುಚ್ಚಿಟ್ಟಿದ್ದ ಮತ್ತು ಕುಮಾರಿಯ ಮಗು ತನ್ನದೆಂದು ಅಂದುಕೊಂಡ ಅವಳ ಗಂಡ ತನ್ನದೇ ವೈಯುಕ್ತಿಕ ಕಾರಣಗಳಿಂದ ತನ್ನೆಲ್ಲ ಆಸ್ತಿಯನ್ನು ಹೆಂಡತಿಯ ಹೆಸರಿಗೆ ಮಾಡಿದ್ದ. ಈ ಸಮಯದಲ್ಲಿ ಅರ್ಜುನ ನಿಜವಾದ ತಂದೆ ಕುಮಾರಿಯ ಪ್ರಿಯಕರ ಅವಳ ಬಾಳಿನಲ್ಲಿ ಮತ್ತೆ ಬರುತ್ತಾನೆ. ಪ್ರಿಯಕರನಿಂದ ದೂರಾಗಿದ್ದರೂ ದೈಹಿಕ ಸುಖದಿಂದ ವಂಚಿತಳಾದ ಕಾರಣದಿಂದ ಅವಳು ಮತ್ತೆ ಆ ಸುಖವನ್ನು ಪ್ರಿಯಕರನೊಂದಿಗೆ ಪಡೆಯಲಾರಂಭಿಸಿದಳು. ಪ್ರಿಯಕರನೊಂದಿಗಿನ ಸಂಬಂಧ ಮುಂದುವರೆಸಲು, ಆಸ್ತಿಯ ಸಂಪೂರ್ಣ ಲಾಭ ಪಡೆಯುವ ಉದ್ದೇಶದಿಂದ ಅದಕ್ಕೆ ತೊಡಕಾದ ಗಂಡ ಫಣಿಶಾಯಿಯನ್ನು ದಾರಿಯಿಂದ ಹೊರ ಹಾಕಲು ಯೋಜನೆ ತಯಾರಿಸಿದಳು. ಗಂಡನ ವಿಶ್ವಾಸ, ಪ್ರೀತಿ ಗಳಿಸಿದ್ದ ಕುಮಾರಿ ಉಪಾಯವಾಗಿ ತನ್ನ ಗಂಡನಿಂದಲೇ ಆತ್ಮಹತ್ಯೆ ಪತ್ರ ಬರೆಸಿ ಅವನನ್ನು ತನ್ನ ಯೋಜನೆಯಂತೆ ಸಾಯಿಸುವಲ್ಲಿ ಯಶಸ್ವಿಯಾಗಿದ್ದಳು. ನಂತರ ಅವಳ ತನ್ನ ಪ್ರೇಮಿಯೊಂದಿಗೆ ಗುಟ್ಟಾಗಿ ಮದುವೆಯಾಗಿ ದೂರದ ಚಿದಂಬರ ಪುರದಲ್ಲಿ ವಾಸವಾಗಿದ್ದಳು.
ಇಲ್ಲಿಂದ ಮತ್ತೆ ಶ್ರೀಮತಿ ಮತ್ತು ರಾಯಣ್ಣನು ಕೊಲೆಗೆ ಕಾರಣವೇನು ಆ ಎರಡು ಕೊಲೆಗಳನ್ನು ಯಾರು ಮಾಡಿರಬಹುದು ಆ ಎರಡು ಕೊಲೆಗಳಿಗೂ ಮತ್ತು ಸರ್ಪಳ್ಳಿ ಧರಣೇಂದ್ರನ ಮರೆಯಾಗುವಿಕೆ ಮತ್ತು ಕುಮಾರಿಯ ನಾಪತ್ತೆ ಇವುಗಳಿಗೆ ಏನಾದರೂ ಸಂಬಂಧ ಇದೆಯಾ ಎಂಬ ಜಾಡನ್ನು ಹಿಡಿದು ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತು ದಿನೇಶ್ ಹೊರಡುತ್ತಾರೆ. ಕೊಲೆ ಪ್ರಕರಣದ ತನಿಖೆಗೆ ಮೊದಲ ಹೆಜ್ಜೆ ಎಂಬಂತೆ ಸಂಪರ್ಕ ದೂರವಾಣಿ ಕೇಂದ್ರಕ್ಕೆ ಹೋದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಅಂಧ ಹುಡುಗಿ ಸುನಯನಾ ಮತ್ತು ಮಗದೊಂದು ಬೂತನ್ನು ನಿರ್ವಹಿಸುತ್ತಿದ್ದ ಮಾಲೀಕ ರಿಚರ್ಡ್ ಸಂಬಂಧಿ ಮಾರ್ಟಿನ್ ಭೇಟಿಯಾಗುತ್ತಾನೆ. ಸುನಯನಾ ಮತ್ತು ಮಾರ್ಟಿನ್ ನಿಂದ ಕೆಲ ವಿಷಯಗಳನ್ನು ಕಲೆ ಹಾಕುವಲ್ಲಿ ಇನ್ಸ್ಪೆಕ್ಟರ್ ಪ್ರಶಾಂತ್ ಯಶಸ್ವಿಯಾಗುತ್ತಾನೆ.

ಈ ಬೆಳವಣಿಗೆಗಳ ಮಧ್ಯೆ ರಘು ಮತ್ತು ಸುಮೀತ್ ಎಂಬ ಇಬ್ಬರು ಪೊಲೀಸ್ ಪೇದೆಗಳು ಹೊಸದಾಗಿ ಮಾಲೂರಿನ ಠಾಣೆಗೆ ಕೆಲಸಕ್ಕೆ ನಿಯಕ್ತರಾಗುತ್ತಾರೆ. ಪ್ರಶಾಂತ್ ಮತ್ತು ದಿನೇಶ್ ತನಿಖೆಯಿಂದ ಈ ಎರಡು ಕೊಲೆ ಪ್ರಕರಣ ಮತ್ತು ಎರಡು ನಾಪತ್ತೆ ಪ್ರಕರಣ ಹಲವಾರು ತಿರುವು ತೆಗೆದುಕೊಳ್ಳುತ್ತದೆ. ಶ್ರೀಮತಿ ಮತ್ತು ರಾಯಣ್ಣನಗಿದ್ದ ಅನೈತಿಕ ಸಂಬಂಧದ ಪ್ರಾರಂಭ ಅಲ್ಲದೇ ಅದರ ನಂತರ ನಡೆದ ನಡೆದ ಹಲವಾರು ವಿಷಯಗಳ ಬಗ್ಗೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ ವಿಷಯಗಳ ಅನಾವರಣದಿಂದ ಇನ್ಸ್ಪೆಕ್ಟರ್ ಪ್ರಶಾಂತ್ ಸರಪಳ್ಳಿ ಸರಪಂಚ ಧರಣೇಂದ್ರನ ಕಾಣೆಯಾಗುವಿಕೆಗೂ ಮತ್ತು ಕುಮಾರಿಯ ಕಾಣೆಯಾಗುವಿಕೆಗೂ ಏನಾದರೂ ಸಂಬಂಧವಿರಬಹುದಾ ಎಂಬ ಕುತೂಹಲ ಮೂಡುತ್ತದೆ. ಈ ವಿಷಯಗಳ ಜಾಡು ಹತ್ತಿದ ಪ್ರಶಾಂತ್ ಮತ್ತು ದಿನೇಶ್ ಇಬ್ಬರಿಗೂ ಉತ್ತರ ಸಿಗುವ ಸಮಯವು ಸಹ ಬರುತ್ತದೆ ಅದು ಹೇಗೆ ಎಂಬುದನ್ನು ಹಾಸು ಹೊಕ್ಕಿನ ಒಳಗೆ ಇಳಿದು ತಿಳಿದುಕೊಳ್ಳಿ.
ರಾಯಣ್ಣನ ರಸಿಕತನದ ಬಗ್ಗೆ ತಿಮ್ಮರಾಯಿ ಹೇಳಿದ ಮಾತುಗಳಾವುವು??? ರಾಯಣ್ಣ ಮತ್ತು ಶ್ರೀಮತಿ ಭೇಟಿ, ಪರಿಚಯ ಹೇಗೆಲ್ಲಾ ಆಯಿತು??? ಕುಮಾರಿ ಯಾವ ರೀತಿ ಫಣಿಶಾಯಿಯ ಮೊದಲ ಮಗ ಚಿನ್ನುವನ್ನು ತನ್ನ ಮೋಸದ ಬಲೆಯಲ್ಲಿ ಸಿಲುಕಿಸಿ ತನ್ನ ಮೇಲೆ ದೈಹಿಕ ಶೋಷಣೆ ಮಾಡಿದ ಎಂಬುದನ್ನು ಸಾಬೀತುಗೊಳಿಸಿದಳು???
ಫಣಿಶಾಯಿಯನ್ನು ಕೊಲ್ಲಲು ಕುಮಾರಿ ಹೊರಟಾಗ ಅರ್ಜುನ್ ಆರೋಗ್ಯದಲ್ಲಿ ಏರುಪೇರಾಗಿದ್ದಾದರೂ ಏಕೆ??? ಫಣಿಶಾಯಿಯ ಕೊಲೆಯನ್ನು ಆತ್ಮಹತ್ಯೆ ಎಂದು ಸಾಬೀತು ಮಾಡುವಲ್ಲಿ ಕುಮಾರಿ ಯಶಸ್ವಿಯಾಗಿದ್ದಾದರೂ ಹೇಗೆ???
ರಾಯಣ್ಣ ಮತ್ತು ಶ್ರೀಮತಿಯರಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವೇನು??? ಶ್ರೀಮತಿ ಬಾಳಲ್ಲಿ ರಾಯಣ್ಣನ ನಂತರ ಬಂದ ನಂದೂ ಯಾರು??? ಶ್ರೀಮತಿ ಮತ್ತು ರಾಯಣ್ಣನ ಭೀಕರ ಸಾವಿಗೆ ಕಾರಣ ಯಾರು???ಅದು ಕೊಲೆಯಾ ಇಲ್ಲಾ ಆತ್ಮಹತ್ಯೆಯಾಗಿರಬಹುದಾ???
ಶ್ರೀಮತಿಗೆ ಕೆಲಸ ಕೊಡಿಸಿದ ಸರ್ಪಂಚ ಧರಣೇಂದ್ರ ನಾಪತ್ತೆಯಾಗಿದ್ದು ಯಾಕೆ??? ಕುಮಾರಿ ಗಂಡನ ಸಾವಿನ ನಂತರ ಗುಟ್ಟಾಗಿ ಮದುವೆ ಮಾಡಿಕೊಂಡ ಪ್ರಿಯಕರ ಯಾರು??? ಪ್ರಿಯಕರನ ಕಣ್ತಪ್ಪಿಸಿ ಯಾರೊಂದಿಗೆ ಕುಮಾರಿ ಅನೈತಿಕ ಸಂಬಂಧ ಹೊಂದಿದ್ದಳು???
ಕುಮಾರಿ ಶ್ರೀಮತಿಯನ್ನು ಭೇಟಿಯಾದಾಗ ತನ್ನ ಮನೆಗೆ ಆಹ್ವಾನಿಸಿದ್ದೇಕೆ???ಕುಮಾರಿ ನಾಪತ್ತೆಯಾಗಲು ಕಾರಣವಾದರೂ ಏನು??? ಕುಮಾರಿಯ ಮೊದಲ ಗಂಡ ಫಣಿಶಾಯಿಯ ಮಗ ಚಿನ್ನುವಿನ ಕಥೆ ಏನಾಯಿತು???
ರಾಯಣ್ಣ ಮತ್ತು ಶ್ರೀಮತಿ ಸಾವಿನ ತನಿಖೆ ಪ್ರಕರಣ ಮತ್ತು ಧರಣೇಂದ್ರ ಮತ್ತು ಕುಮಾರಿ ನಾಪತ್ತೆ ಪ್ರಕರಣಗಳ ಬೆನ್ನು ಹತ್ತಿ ಹೋದ ಇನ್ಸ್ ಪೆಕ್ಟರ್ ಪ್ರಶಾಂತ್ ಮತ್ತು ದಿನೇಶ್ ಇಬ್ಬರಿಗೂ ಸಿಕ್ಕ ಸುಳಿವುಗಳೇನು??? ಒಂದೇ ಸಮಯದಲ್ಲಿ ನಡೆದ ಈ ನಾಲ್ಕು ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿ ಬೆಸೆದು ಕೊಂಡಿತ್ತಾ ಇಲ್ಲಾ ಅದು ಬರಿ ಕಾಕತಾಳೀಯವಾ???ಯತಿರಾಜ್ ವೀರಾಂಬುಧಿಯವರ “ಹಾಸುಹೊಕ್ಕು” ಕಾದಂಬರಿ ನೀವೇ ಓದಿ ನಿರ್ಧರಿಸಿ.
ಹೆಣ್ಣು, ಹೊನ್ನು, ಮಣ್ಣು ಈ ಮೂರು ಕಾರಣಗಳಿಗೆ ಯುದ್ಧ, ಹೋರಾಟಗಳೇ ನಡೆದು ಹೋಗಿದೆ ಎಂಬ ಹಿರಿಯರ ನುಡಿಗೆ ಸಾಕ್ಷಿ ಎಂಬಂತಿದೆ ಈ ಕಾದಂಬರಿಯ ಕಥನ. ಇಲ್ಲಿ ಕಾಮ ಎಲ್ಲಾ ಪಾತ್ರಗಳ ಮೂಲಕ ವಿಜೃಂಭಿಸಿದೆ ಎಂಬುದು ಎಷ್ಟು ನಿಜವೋ ಅಷ್ಟೇ ಸೂಕ್ತವಾಗಿ ಅತಿಕಾಮದ ಪರಿಣಾಮವನ್ನು ಸೂಕ್ತವಾಗಿ ವಿವರಿಸಲಾಗಿರುವುದು ಈ ಕಾದಂಬರಿ ಓದಲು ಪ್ರೇರೆಪಿಸುತ್ತದೆ. ಕೆಲವೊಮ್ಮೆ ಹತ್ಯೆ ಮಾಡುವವರಾಗಲಿ… ಅನೈತಿಕ ಸಂಬಂಧದಲ್ಲಿ ತೊಡಗುವವರಾಗಲಿ ತಾವು ಮಾಡಿದ ಪಾಪ ಕೃತ್ಯ ಪ್ರಪಂಚಕ್ಕೆ ತಿಳಿಯುವುದೇ ಇಲ್ಲಾ ಎಂದೇ ನಂಬಿರುತ್ತಾರೆ. ಆದರೆ ಸತ್ಯ ಎಂಬುದು ಬೂದಿ ಮುಚ್ಚಿದ ಕೆಂಡದಂತೆ ಅದೊಂದು ದಿನ ಸ್ವಲ್ಪ ವೇಗವಾಗಿ ಗಾಳಿ ಬೀಸಿದಂತಾದರೆ ಅದು ಎಲ್ಲರಿಗೂ ಗೋಚರಿಸುವುದು ಸಹಜ. “ಕಾಮಾತುರಾಣಾಂ ನ ಲಜ್ಜಾ ನ ಭಯಂ” ಎಂಬ ಮಾತಿನಂತೆ ಇಲ್ಲಿನ ಕೆಲಪಾತ್ರಗಳು ವರ್ತಿಸಿದಾಗ ಅದರ ಭೀಕರ ಪರಿಣಾಮ ಹೇಗಿತ್ತೆದೆಂಬುದನ್ನು ಸತ್ಯ ಘಟನೆ ಆಧರಿಸಿದ ಈ ಕಥನದ ಮೂಲಕ ಲೇಖಕ ಸತ್ಯದ ಹಾದಿಯ ಮಹತ್ವ ತಿಳಿಸೋ ಗುರುತರ ಕಾರ್ಯ ಕಾದಂಬರಿಯಲ್ಲಿ ಮಾಡಿದ್ದಾರೆನ್ನಬಹುದು.
- ಸುಮಾ ಭಟ್
