ಭಾವನಾ ಬೆಳೆಗೆರೆ ಸಾರಥ್ಯದಲ್ಲಿ ಮತ್ತೆ ‘ಹಾಯ್ ಬೆಂಗಳೂರು’ ಶುರುವಾಗಿದ್ದು, ಈಗ ಅದು Magzter ನಲ್ಲಿ ಸಿಗಲಿದೆ. ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ…
ಎನ್ಎಂ ಕೆ ಆರ್ ವಿ ಕಾಲೇಜಿನಲ್ಲಿ ಬಿಎ ಎರಡನೆಯ ವರ್ಷ ಓದುತ್ತಿದ್ದ ಸಂದರ್ಭ,
ನನ್ನ ನೆಚ್ಚಿನ ಶಿಕ್ಷಕಿ, ಖ್ಯಾತ ನಟಿ ಲಕ್ಷ್ಮಿ ಚಂದ್ರಶೇಖರ್ ಅವರ ಕೃಪೆಯಿಂದ ಆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುವ ಅವಕಾಶ ಸಿಕ್ಕಿತು. ಬೆಂಗಳೂರಿಗೆ ಆಗತಾನೆ ಪಾದಾರ್ಪಣೆ ಮಾಡಿದ್ದೆ, ಎಲ್ಲವೂ ಹೊಸದು. ಯಾರು ನನ್ನವರೂ,ಯಾರು ಹೊರಗಿನವರು ಎಂದು ತಿಳಿಯಲು ಸಮಯಬೇಕಿತ್ತು.
ಲಕ್ಷ್ಮಿ ಮೇಡಂ ಅವರಿಗೆ ನನ್ನ ಅಪ್ಪ ಹೂಲಿಶೇಖರ್ ಒಳ್ಳೆಯ ನಾಟಕಕಾರ ಎಂದು ತಿಳಿದಿತ್ತು. ಅವರ ಮಗಳೆಂದ ಮೇಲೆ ನನ್ನಲ್ಲೂ ನಾಟಕ ರಕ್ತಗತವಾಗಿ ಬಂದಿರುತ್ತೆ ಎನ್ನುವ ತಪ್ಪು ಕಲ್ಪನೆಯಲ್ಲಿ ನನ್ನನ್ನು ಕಾಲೇಜ್ ನ ನಾಟಕದಲ್ಲಿ ಸೇರಿಸಿದ್ದರು. ಡಾಕ್ಟರ್ ಮಕ್ಳು, ಡಾಕ್ಟರ್, ಇಂಜಿನಿಯರ್ ಮಕ್ಳು ಇಂಜಿನಿಯರ್ ಆಗಬಹುದು. ಆದರೆ ನಾಟಕಕಾರರ ಮಕ್ಳು ನಾಟಕಕಾರರಾಗುತ್ತಾರೆ ಅನ್ನೋದನ್ನ ಸುಳ್ಳು ಮಾಡಿದ್ದು ನಾನು. ನನಗೆ ನಾಟಕದಲ್ಲಿ ಅಭಿನಯಿಸುವುದೆಂದರೆ ಚಳಿ ಜ್ವರ ಬಂದಂತೆ. ಅದೆಲ್ಲ ಪಾಪ, ಲಕ್ಷ್ಮಿ ಮೇಡಂ ಗೆ ಗೊತ್ತಿರಲಿಲ್ಲ. ಅವರ ಪ್ರೀತಿ ಹಾಗು ನಂಬಿಕೆಗೆ ಕಟ್ಟು ಬಿದ್ದು ‘ನೆನಪಾದಳು ಶಕುಂತಲೆ’ ನಾಟಕಕ್ಕೆ ಸೇರಿಕೊಂಡಿದ್ದೆ. ಆ ನಾಟಕದ ನಿರ್ದೇಶನ ಸುರೇಶ ಆನಗಳ್ಳಿಯವರು ಮಾಡಿದ್ದರು.
ಪ್ರತಿದಿನ ಕಾಲೇಜ್ ಮುಗಿದ ಮೇಲೆ ನಾಟಕದ ತಾಲೀಮು ನಡೆಸಲಾಗುತ್ತಿತ್ತು. ಆಗ ಪರಿಚಯವಾಗಿದ್ದೆ ಭಾವನಾ ಹಾಗು ಚೇತನ. ಭಾವನಾ ಬಿಎ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದರೆ, ಚೇತನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಚೇತನಾಳಿಗಿಂತಲೂ ಭಾವನಾ ನನಗೆ ಆತ್ಮೀಯಳಾಗಿದ್ದಳು. ಭಾವನಾ ಲವಲವಿಕೆ, ನಗು ಮುಖದಿಂದ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಂತ ಹುಡುಗಿ. ನಾವಿಬ್ಬರೂ ಒಂದೇ ದೋಣಿಯ ಎರಡು ಪ್ರಯಾಣಿಕರಾಗಿದ್ದೆವು. ಅವಳಿಗೂ ನಾಟಕದಲ್ಲಿ ಅಷ್ಟಾಗಿಯೂ ಗಂಧವೇನು ಇರಲ್ಲಿಲ್ಲ. ನನ್ನಂತೆಯೇ ಅಪ್ಪನ ಹೆಸರಿಗೆ ಕಟ್ಟುಬಿದ್ದು ನಾಟಕದಲ್ಲಿ ಬಂದಿಳಿದಿದ್ದಳು.

ನಾಟಕದಲ್ಲಿ ನಮ್ಮಿಬ್ಬರ ಪಾತ್ರ ತುಂಬಾ ಮಜಾವಾಗಿತ್ತು. ಶಕುಂತಲೆ, ದುಶ್ಯಾಸನ ದೃಶ್ಯ ಬಂದಾಗ ನಾನು, ಭಾವನಾ ಹೂವು ಹಿಡಿಯುವ ಪಾತ್ರ. ಯಾವುದೇ ಸಂಭಾಷಣೆ ಇಲ್ಲದೆ ಧೈರ್ಯವಾಗಿ ವೇದಿಕೆಯ ಮೇಲೆ ನಿಲ್ಲುವಂತಹ ಪಾತ್ರ. ದುಶ್ಯಾಸನ, ಶಕುಂತಲೆ ವೇದಿಕೆ ಮುಂದೆ ಸಂಭಾಷಣೆ ನಡೆಸುತ್ತಿದ್ದರೇ, ನನ್ನದು ಭಾವನಾಳದು ವೇದಿಕೆಯ ಹಿಂದೆ ಸಂಭಾಷಣೆ ಜೋರಾಗಿರುತ್ತಿತ್ತು. ಕಾಲೇಜ್ ಮುಗಿದ ಮೇಲೆ ದಿನಾಲೂ ನಾಟಕದ ತಾಲೀಮು ನಡೆಯುತ್ತಿತ್ತು. ಒಂದು ದಿನ ಸುರೇಶ ಸರ್ ಬರುವುದು ತಡವಾಯಿತು…ನಾನು, ಭಾವನಾ, ಆಶಿತಾ ತಾಲೀಮಿನ ಕೋಣೆಯಲ್ಲಿ ಹರಟುತ್ತಿದ್ದೆವು. ಆ ಸಮಯದಲ್ಲಿ ಭಾವನಾಗೆ ಒಂದು ಕರೆ ಬಂತು ‘ಲೇ ಲೋಫರ್, ಧಮ್ ಇದ್ದರೇ ಬಾರೋ …ಹೇಗೆ ಕಿಡ್ನಾಪ್ ಮಾಡ್ತೀಯಾ, ನೋಡೋಣಾ…’ ಅಂದ್ಲು. ಒಂದು ಕ್ಷಣ ನನ್ನ ಮೈ ನಡುಗಿ ಹೋಯಿತು. ಫೋನ್ ಇಟ್ಟಮೇಲೆ ಭಾವನಾ, ಆಶಿತಾ ಕಿಸಿ ಕಿಸಿ ನಗ ತೊಡಗಿದರು. ‘ ಏನು ಭಾವನಾ ಇದು, ಕಿಡ್ನಾಪ್ ಅಂತಿದ್ದೀಯಲ್ಲೇ …ಏನು ಕತೆ ಇದು” ಅಂದೆ. ಅದಕ್ಕೆ ಆಶಿತಾ ನಗುತ್ತಾ ‘ಶಾಲಿನಿ… ಭಾವನಾಳಿಗೆ ಇದು common ವಿಷಯ. ಈ ತರ ಎಷ್ಟೋ call ಗಳು ಅವರ ಕುಟುಂಬಕ್ಕೆ ಬರುತ್ತೆ. ಅವರ ಕುಟುಂಬ ನಡೀತಿರೋದೇ ಮುಳ್ಳಿನ ಮೇಲೆ” ಎಂದಳು. ನನಗೆ ಅರ್ಥಅರ್ಥವಾಗಲಿಲ್ಲ, ನೇರವಾಗಿ ಹೇಳು ಆಶಿತಾ ಎಂದೆ. ”ಭಾವನಾ, ಚೇತನ ಯಾರು ಗೊತ್ತಾ? ರವಿಬೆಳೆಗೆರೆ ಮುದ್ದಿನ ಮಕ್ಳು” ಅಂದ್ಲು. ನನಗೆ ಅಚ್ಚರಿಯಾಯಿತು. ಸುಮಾರು ಎರಡು ತಿಂಗಳು ಅವರೊಂದಿಗೆ ಓಡಾಡಿಕೊಂಡಿದ್ದರು ಅವರು ಯಾರ ಮಕ್ಕಳು ಎಂದು ನನಗೆ ತಿಳಿದಿರಲಿಲ್ಲ. ಯಾವಾಗಲೂ ಡಕೋಟ್ಟಾ ಆಕ್ಟಿವ್ ಹೋಂಡಾ ದ್ವಿಚಕ್ರವಾಹನದಲ್ಲಿ ಭಾವನಾ ಓಡಾಡುತ್ತಿದ್ದರೇ, ಚೇತನಾ ಸೆಕೆಂಡ್ ಹ್ಯಾಂಡ್ ಕಾರ್ ನಲ್ಲಿ ಓಡಾಡುತ್ತಿದ್ದಳು. ಎಲ್ಲರೊಂದಿಗೆ ಮಾತು, ಹರಟೆ ಇರುತ್ತಿತ್ತು. ಒಂದು ದಿನಾನೂ ತಾವು ಬೆಳೆಗೆರೆ ಮಕ್ಳು ಎಂದೂ ತೋರಿಸಿಕೊಂಡವರೇ ಅಲ್ಲ. ಸರಳ ಬದುಕು ಅವರದಾಗಿತ್ತು.
ಏಕೆ ಈ ಕತೆ ಹೇಳುತ್ತಿದ್ದೇನೆ ಎಂದರೆ ತೆರೆಯ ಮುಂದಿನ ಪಾತ್ರ ಭಾವನಾಳದು ಅಲ್ಲದೆಯಿರಬಹುದು. ಆದರೆ ತೆರೆಯ ಹಿಂದೆ ಅಂದರೆ ಅಪ್ಪನ ಯಶಸ್ಸಿನ ಜೊತೆಗೆ ಎದುರಾಗುತ್ತಿದ್ದ ವೈರಿಗಳನ್ನು ಮಕ್ಕಳು ಧೈರ್ಯವಾಗಿ ಎದುರಿಸಿದ್ದ ರೀತಿ ನಿಜಕ್ಕೂ ಮೆಚ್ಚಲೇಬೇಕು. ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆಯುವುದೇ ಕಷ್ಟ, ಅಂತದರಲ್ಲಿ ಆಕೆ ಮನರಂಜನಾಗಾರ್ತಿ ಅಲ್ಲದಿದ್ದರೂ ಕನಿಷ್ಠವೆಂದರೂ ೭೬ ದಿನ ಭಾವನಾ ಕಳೆದಿದ್ದಾಳೆ. ತನ್ನತನವನ್ನು ಬಿಟ್ಟುಕೊಡದೆ ಎಲ್ಲರ ಪ್ರೀತಿಗೂ ಪಾತ್ರವಾದವಳು. ಅದೇ ಭಾವನಾ ಈಗ ‘ಹಾಯ್ ಬೆಂಗಳೂರು’ ಪತ್ರಿಕೆ ಶುರು ಮಾಡಿದ್ದಾಳೆ. ಆದರೆ ಹಲವರಿಗೆ ಅಪ್ಪನಂತೆ ಹಾಯ್ ಬೆಂಗಳೂರು ಪತ್ರಿಕೆಯನ್ನು ಮಗಳು ಮುನ್ನಡೆಸುತ್ತಾಳಾ? ಇಲ್ಲವೋ? ಎನ್ನುವ ಅನುಮಾನದ ಜೊತೆಗೆ ನಿಮ್ಮಿಂದ ಸಾಧ್ಯವೇ?ಎನ್ನುವ ಪ್ರಶ್ನೆಗಳಿವೆ.
ಭಾವನಾಳ ಸಾಮರ್ಥ್ಯ ಎಷ್ಟೋ ಜನರಿಗೆ ತಿಳಿದಿಲ್ಲ. ಈ ಹೆಣ್ಣು ಮಗಳು ಅಪ್ಪನಂತೆ ಧೈರ್ಯವಂತೆ. ‘ಹಾಯ್ ಬೆಂಗಳೂರು’ ಪತ್ರಿಕೆಯ ಉಸ್ತುವಾರಿಯನ್ನು ಕೈಗೆ ಎತ್ತಿಕೊಂಡಿರುವುದಷ್ಟೇ ಅಲ್ಲ, ರವಿ ಬೆಳೆಗೆರೆಯವರೊಂದಿಗೆ ಪತ್ರಿಕೆಯ ಆಯಸ್ಸು ಮುಗಿಯಿತು ಎಂದುಕೊಂಡವರಿಗೆ ಉತ್ತರವಾಗಿದ್ದಾಳೆ. ಟ್ಯಾಬ್ಲಾಯ್ಡ್ ಪತ್ರಿಕೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಸಾಕಷ್ಟು ದೊಡ್ಡ ಜವಾಬ್ದಾರಿಯನ್ನು ಆಕೆ ಹೊತ್ತಿದ್ದಾಳೆ ಎಂದರೆ ಅದರ ಪೂರ್ವ ಸಿದ್ಧತೆಯು ಹಾಗೆಯೇ ಮಾಡಿಕೊಂಡಿರುತ್ತಾಳೆ. ಆದರೆ ಸ್ವಲ್ಪ ಕಾಲಾವಕಾಶ, ಪ್ರೋತ್ಸಾಹ ಭಾವನಾಳಿಗೆ ಬೇಕು.
ಒಟ್ಟಿನಲ್ಲಿ ಭಾನಿ ‘ಹಾಯ್ ಬೆಂಗಳೂರು’ ನ್ನು ಆನ್ಲೈನ್ ನಲ್ಲಿ ಶುರು ಮಾಡಿರುವುದು ನಿಜಕ್ಕೂ ಸಂತೋಷವಾಯಿತು. ಆದಷ್ಟು ಬೇಗ ಈ ಕೃಷ್ಣ ಸುಂದರಿ ಪ್ರಿಂಟ್ ಮಾಧ್ಯಮದಲ್ಲೂ ಶುರುವಾಗಲಿ ಮತ್ತು ‘ಓ ಮನಸೇ’ ಕೂಡಾ ಶುರುವಾಗಲಿ ಎನ್ನುತ್ತಾ
ಶುಭವಾಗಲಿ ಭಾನಿ…
- ಶಾಲಿನಿ ಹೂಲಿ ಪ್ರದೀಪ್
