ರಂಗಕರ್ಮಿ ಹಾಲಯ್ಯ ಶಾಸ್ತ್ರಿ – ವ್ಯಕ್ತಿಚಿತ್ರ

ಬದುಕನ್ನು ಕಲೆಯನ್ನಾಗಿಸಿಕೊಂಡವರು, ಕಲೆಯನ್ನೇ ಬದುಕಾಗಿಸಿಕೊಂಡವರು ವಿರಳವೆಂದು ಹೇಳಬಹುದು, ಇಂತವರ ಸಾಲಿನಲ್ಲಿ ಮೊದಲಲ್ಲಿ ಅಲ್ಲವಾದರೂ ಕೊನೆಯಲ್ಲಾದರೂ ಕಾಣಿಸಿಕೊಳ್ಳಬಹುದಾದವರೆಂದರೆ ರಂಗಕರ್ಮಿ ಹಾಲಯ್ಯ ಶಾಸ್ತ್ರಿಯವರು. ಡಾ. ಯಲ್ಲಮ್ಮ ಕೆ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

“All the world’s a stage, and all the men and women merely players. They have
their exits and their entrances; And one man in his time plays many parts.”

-Williams Shakespeare

ಇಡೀ ಜಗತ್ತನ್ನೇ ರಂಗಸ್ಥಲವನ್ನಾಗಿ ಮಾಡಿಕೊಂಡು, ಸಕಲಜೀವರಾಶಿಗಳನ್ನು ಸೃಷ್ಟಿಸಿ, ಬಗೆಬಗೆಯ ಪಾತ್ರಗಳನ್ನು ನೀಡಿ ಸೂತ್ರವಿಡಿದು ತನ್ನ ಮನದಿಂಗಿತಕ್ಕೆ ತಕ್ಕಂತೆ ರಾಗ-ತಾಳವ ಮೇಳೈಸಿ – ‘ತಾ…ಥೈ… ತಾ… ಥೈ… ತಾ… ಥೈ… ತತಹ… ತಾ… ಥೈ… ಥೈ… ತಕ’ ಎಂದು ಕುಣಿಸುತ್ತಾನೆ, ಎಲ್ಲ ಪಾತ್ರಗಳಿಗೂ ಪ್ರವೇಶ ಇರುವಂತೆ ನಿರ್ಗಮನವೂ ಇದೆ, ಅಂತೆಯೇ ಬಾಳ ನಾಟಕಕ್ಕೆ ತೆರೆಬಿದ್ದಮೇಲೆ ಬಣ್ಣತೊಳೆದು ಹೊರ ನಡೆಯಬೇಕಷ್ಟೇ!

ಬದುಕು ಒಂದು ಸುಂದರವಾದ ಕಲೆಯೂ ಹೌದು, ನಾಟಕವೂ ಹೌದು; ಈ ಕಲೆಯನ್ನು ಕರಗತ ಮಾಡಿಕೊಂಡವರನ್ನು ನಾವು ಕಲಾವಿದರು ಎಂದು ಕರೆಯಬಹುದು. ಇಂತಹ ಕಲಾವಿದರನ್ನು ನಾವು ವೃತ್ತಿರಂಗಭೂಮಿ, ಹವ್ಯಾಸಿ ಕಲಾವಿದರು ಎಂದು ಗುರುತಿಸಬಹುದು. ಅಂತೆಯೇ ಬದುಕನ್ನು ಕಲೆಯನ್ನಾಗಿಸಿಕೊಂಡವರು, ಕಲೆಯನ್ನೇ ಬದುಕಾಗಿಸಿಕೊಂಡವರು ವಿರಳವೆಂದು ಹೇಳಬಹುದು, ಇಂತವರ ಸಾಲಿನಲ್ಲಿ ಮೊದಲಲ್ಲಿ ಅಲ್ಲವಾದರೂ ಕೊನೆಯಲ್ಲಾದರೂ ಕಾಣಿಸಿಕೊಳ್ಳಬಹುದಾದವರೆಂದರೆ ರಂಗಕರ್ಮಿ ಹಾಲಯ್ಯ ಶಾಸ್ತ್ರಿಯವರು.

ಐಗುಳ ಮನೆತನದಿ ಹುಟ್ಟಿಬೆಳೆದ ಹಾಲಯ್ಯನವರು ಅಯ್ಯಾಚಾರದೊಂದಿಗೆ ವೈದಿಕ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿ ಪಂಡಿತರೆನಿಸಿದ್ದಾಗ್ಯೂ ಜನಪದ ರಂಗಭೂಮಿಯ ಗೀಳನ್ನು ಬಾಲ್ಯದಿಂದಲೇ ಹಚ್ಚಿಕೊಂಡು ನಟನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ವಿಭಿನ್ನ ಪಾತ್ರಗಳನ್ನು ಮಾಡುತ್ತ ರಂಗಭೂಮಿಯ ಆಳ ಮತ್ತು ಅಗಲವನ್ನು ಅರಿಯುವ ಪ್ರಯತ್ನದಿ ತಮ್ಮ ವಿಭಿನ್ನ ಆಲೋಚನೆಗಳನ್ನು ಪ್ರಯೋಗಗಳ ಮೂಲಕ ಹೊರಗೆಡವಿದರು. ರಂಗಭೂಮಿಯಲ್ಲಿ ಸ್ತ್ರೀಯರಿಗೂ ಪಾತ್ರಾಭಿನಯ ಮಾಡಲು ಅವಕಾಶ ಮಾಡಿಕೊಟ್ಟು ಸಮಾನತೆಯನ್ನು ಮೆರೆದರು, ಎಂಬತ್ತಾರರ ಇಳಿವಯದಲ್ಲೂ ಕಲೆಗಾಗಿ ಜೀವಮಿಡಿಯುತ್ತಿರುವುದು ಅವರಲ್ಲಿನ ಅಪಾರವಾದ ಕಲಾಪ್ರೇಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಹಾಲಯ್ಯ ಶಾಸ್ತ್ರಿಗಳ ಕುರಿತಾಗಿ ಬರೆಯುತ್ತಿರುವಾಗಲೇ ನಮ್ಮ ಪಕ್ಕದೂರಿನ ರಂಗಭೂಮಿಯ ಹಿರಿಯ ಕಲಾವಿದರ ಬಗ್ಗೆ ಅವರಿವರಿಂದ ಕೇಳಿ ತಿಳಿದಿದ್ದೆ. ಒಮ್ಮೆ ಮುಖತಃ ಭೇಟಿಯ ಸಂದರ್ಭದಿ ರಂಗಭೂಮಿಯ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಮಾತಿಗೆಳೆದೆ, ಅವರು ತಮ್ಮ ಬಾಳ ನಾಟಕದ ಬುತ್ತಿಯ ಬಿಚ್ಚಿ ಉಣಬಡಿಸಿದರು, ಅದೆಲ್ಲವನ್ನೂ ಇಲ್ಲಿ ಹಂಚಿಕೊಳ್ಳುವುದು ತರವಲ್ಲ ಆದರೆ ಹೇಳಲೇಬೇಕಿರುವ ಒಂದು ಸಂಗತಿಯನ್ನು ಉಲ್ಲೇಖಿಸುವುದು ಹೆಚ್ಚು ಸೂಕ್ತ ಎಂದು ನನಗನಿಸುತ್ತದೆ.

ಸುತ್ತ ಮೂವತ್ತು ಹಳ್ಳಿಗಳಿಗೂ ನಿಮ್ಮ ಹೆಸರು ಚಿರಪರಿಚಿತ, ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಹೆಸರುವಾಸಿಯಾದವರು, ನಾಯಕ ನಟ, ಪೋಷಕ ನಟ ಇದಕ್ಕೂ ಮಿಗಿಲಾಗಿ ಸ್ತ್ರೀ ಪಾತ್ರಧಾರಿಯಾಗಿ ಹೆಚ್ಚು ಜನಮನ್ನಣೆಯನ್ನು ಗಳಿಸಿದ್ದಾಗ್ಯೂ ಧಿಡೀರನೇ ಅರ್ಧದಲ್ಲೇ ರಂಗಭೂಮಿಯ ನಂಟು ಕಡಿದುಕೊಂದ್ದು ಏಕೆ? ಅದಕ್ಕೆ ಬಲವಾದ ಕಾರಣವಿದೆಯಾ? ಎಂದು ಪ್ರಶ್ನಿಸಿದೆ ; ಒಂದರೆಕ್ಷಣ ಕಣ್ಮುಚ್ಚಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು, ಕಣ್ತೆರೆದು ಮಾತಿಗಿಳಿದರು ; ಯಶಸ್ಸಿನ ಉತ್ತುಂಗ ಶಿಖರವನ್ನೇರಿದ ಮನುಷ್ಯ ಅರಗಳಿಗೆ ಎಚ್ಚರ ತಪ್ಪಿದರೆ ಸಾಕು ಮರುಕ್ಷಣವೇ ಪ್ರಪಾತಕ್ಕೆ ಜಾರಿಬಿದ್ದು ಬಿಡುತ್ತಾನೆ!

ನಾಯಕ ನಟನಾಗಿ ಅಭಿನಯಿಸಲ್ಪಡುವ ನಾಟಕ ಊರ ಜಾತ್ರೆಯ ನಿಮಿತ್ತ ಎರಡು ಪ್ರಯೋಗಗಳನ್ನು ನಡೆಸಲು ತೀರ್ಮಾನಿಸಲಾಗಿ, ಅಂತೆಯೇ ಭವ್ಯರಂಗಸಜ್ಜಿಕೆಯನ್ನು ಹಾಕಲಾಗಿತ್ತು, ಸುತ್ತು ಮುತ್ತಲಿನ ಮೂವತ್ತಾರು ಹಳ್ಳಿಜನ ನಾಟಕ ನೋಡಲಿಕ್ಕೆಂದು ಜಮಾಯಿಸಿದ್ದರು, ಆ ನಾಟಕದ ಕೇಂದ್ರಬಿಂದುವೂ ನಾನೇ ಆಗಿದ್ದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಇಂತಹ ನೂರಾರು ಪ್ರಯೋಗಗಳಲ್ಲಿ ಜನ ನನ್ನನ್ನು ಮೆಚ್ಚಿದ್ದರು, ಹುಚ್ಚೆದ್ದು ಕುಣಿದು, ಸಿಳ್ಳೆ ಚಪ್ಪಾಳೆ ತಟ್ಟಿದ್ದರು, ಅವರ ನಿರೀಕ್ಷೆ ಹುಸಿಯಾಗಬಾರದು ಎಂಬುದು ನನ್ನ ಮನದ ಇಂಗಿತ, ಅದು ಒತ್ತಡವನ್ನು ನನ್ನ ಮೇಲೆ ಏರಿತ್ತು ಅನ್ನಿ, ನಿಭಾಯಿಸಬಲ್ಲ ಛಾತಿ ನನ್ನಲ್ಲಿ ಇತ್ತಾದರೂ, ಒಂದಿನಿತು ಅಳುಕು ಇತ್ತು, ಇಲ್ಲ ಎನ್ನಲಾರೆ, ಹಾರ ತುರಾಯೀ, ಪೂಜೆ ಪುನಸ್ಕಾರ ವೇದಿಕೆ ಕಾರ್ಯಕ್ರಮ ಮುಗಿಸಿ, ನಾಂದಿಗೀತೆ ಹಾಡಿ ನಾಟಕ ಶುರುವಾಯ್ತು, ನನ್ನೆರೆಡು ಪ್ರವೇಶಗಳೂ ಮೂರನೇ ಪ್ರವೇಶದಿ ಒಂದು ಮಾತು ತಪ್ಪಿಹೋಯ್ತು ಅದು ಜನರ ಗಮನಕ್ಕೆ ಬರುವ ಮುನ್ನವೇ ಕಥಾಸಂಚಾಲಕರು ಮಾತು ಎತ್ತಿಕೊಟ್ಟರು ಮಾತು ಮುಂದುವರೆಯಿತು, ನಾಟಕ ಅದ್ಭುತ ಯಶಸ್ಸು ಕಂಡಿತು, ನಿರೀಕ್ಷಿತಕ್ಕಿಂತ ಹೆಚ್ಚು ಕಲೆಕ್ಷನ್ ಆಯ್ತು, ಅಂದು ಬಣ್ಣ ತೊಳೆದವನು ಮತ್ತೆಂದೂ ಬಣ್ಣ ಹಚ್ಚಬಾರದು ಎಂದು ತೀರ್ಮಾನಿಸಿದೆ, ಹಾಗೆಯೇ ನಡೆದೇ, ಆದರೆ ರಂಗಭೂಮಿಯ ನಂಟು ಕಡೆದುಕೊಳ್ಳಲಿಲ್ಲ, ಇಂದಿಗೂ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ನಾಟಕ ಮಾಸ್ತಾರ ಎಂದೇ ಜನ ನನ್ನನ್ನು ಮೆಚ್ಚಿದ್ದಾರೆ.

ರಂಗಸ್ಥಳ ಎಂಬುದು ದೇವಿಯ ಗರ್ಭಗುಡಿ ಇದ್ದಹಾಗೆ ಅಲ್ಲಿ ಅಪವಾರವೆಸಗಬಾರದು, ಮುಖ್ಯವಾಗಿ ಪಾತ್ರದಾರಿ ಹೆಣ್ಣುಮಗಳನ್ನು ತಾಯಿಯಂತೆ ಕಾಣಬೇಕು, ಕುಡಿತದಿಂದ ದೂರವಿರಬೇಕು, ವೃತ್ತಿ ಬದ್ಧತೆಯನ್ನು ಕಾಣಬೇಕು, ‘ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು’ ಎಂಬ ಮಾತು ರಂಗಭೂಮಿಗೆ ಅನ್ವಯಿಸುತ್ತದೆ, ಮಾತು ತಪ್ಪಿದವ ಒಳ್ಳೆಯ ಮಗನೂ ಆಗಲಾರ, ಒಳ್ಳೆಯ ಕಲಾವಿದನೂ ಆಗಲಾರ, ಹಾಗಾಗಿ ನಾನು ಮತ್ತೆ ಬಣ್ಣ ಹಚ್ಚಲ್ಲಿಲ್ಲ, ಆದರೆ ನೂರಾರು ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ, ನನ್ನ ಬದ್ಧತೆಯೇ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ ಎಂದರು.

ಮತ್ತೊಂದು ಸಂಗತಿಯನ್ನು ತೆರೆದಿಟ್ಟರು ; ನಮ್ಮ ಊರಿನ ಗ್ರಾಮದೇವತೆಯ ಜಾತ್ರೆ ನಿಮಿತ್ತ ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕ ಪ್ರಯೋಗದಿ
ವೃತ್ತಿ ರಂಗಭೂಮಿಯ ಕಲಾವಿದರ ತಂಡವನ್ನು ಕರೆಸಿದ್ದೆವು ಅವರಲ್ಲಿ ಶ್ರೀಕೃಷ್ಣನ ಪಾತ್ರಧಾರಿ ಅತ್ಯದ್ಭುತವಾಗಿಯೇ ಅಭಿನಯಿಸಿ ಸೈ ಎನಿಸಿಕೊಂಡ, ವೈಯಕ್ತಿಕ ಆಯಿರಾ ಕೈತುಂಬಾ ಬಂದಿತು, ಇನ್ನೇನೂ ನಾಟಕಕ್ಕೆ ತೆರೆಬಿದ್ದಿತು ಪಾತ್ರದಾರಿಗಳೆಲ್ಲ ಬಣ್ಣತೊಳೆದುಕೊಂಡು ತಮ್ತಮ್ಮ ಊರಿಗೆ ಹೋಗುವ ಧಾವಂತ, ಆಯಾಸ ನಿದ್ದೆ ಕಳೆಯಲೆಂದು ಅಲ್ಲೇ ಇದ್ದ ಹೋಟಲ್ ನಲ್ಲಿ ಚಹಾ ಕುಡಿಯುತ್ತಿದ್ದರೂ ಶ್ರೀ ಕೃಷ್ಣ ಪಾತ್ರಧಾರಿ ಸಿಗರೇಟ್ ಹೊತ್ತಿಸಿ ಸೇದುತ್ತಾ ನಿಂತಿದ್ದ, ನಾಟಕ ನೋಡಿದ್ದ ಕೆಲವರು ಅಲ್ನೋಡು ಶ್ರೀ ಕೃಷ್ಣ ಸಿಗರೇಟ್ ಸೇದುತ್ತಿದ್ದಾನೆ ಎಂದು ನಗೆಯಾಡಿದರು, ಇದನ್ನು ಕಂಡು ಸ್ವಲ್ಪ ಕಸಿವಿಸಿ ಆಯ್ತು, ಅಂದಿನಿಂದಲೇ ಅವರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದಾಗಿ ಮಾತಿತ್ತರು, ಅಂತೆಯೇ ಬಾಳಿದರು ಕೂಡ.

ಪ್ರಯೋಗದೀ ಯಾವುದೇ ಪಾತ್ರಗಳಿರಲಿ ಪರಕಾಯ ಪ್ರವೇಶ ಮಾಡಿ ಆ ಪಾತ್ರಕ್ಕೆ ಜೀವ ತುಂಬುವುದು ಅಥವಾ ನ್ಯಾಯ ಒದಗಿಸುವುದು ಎಷ್ಟು ಮುಖ್ಯವೋ, ಆ ಪಾತ್ರದ ಮುಖೇನ ಜನಮಾನಸದಲ್ಲಿ ನೆಲೆಸಿದ ಕಲಾವಿದ ತನ್ನ ಚಾರಿತ್ರ್ಯವನ್ನು ಕಾಪಿಟ್ಟುಕೊಳ್ಳುವುದು, ಸಾತ್ವಿಕ ಜೀವನ ನಡೆಸುವುದು ಅಷ್ಟೇ ಮುಖ್ಯವಾಗುತ್ತದೆ, ಇದು ವೃತ್ತಿರಂಗಭೂಮಿಗೆ ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಿದೆ. ಕವಿ ಸಾಹಿತಿ, ಕಲಾವಿದ ನೆನಿಸಿದ ಮೇಲೆ ಅವರುಗಳ ಮೇಲೆ ಸಾಮಾಜಿಕ ಜವಾಬ್ದಾರಿ ಎನ್ನುವುದು ಇದ್ದೇ ಇರುತ್ತದೆ, ಅರೆಕ್ಷಣವೂ ಮೈಮರೆಯುವಂತಿಲ್ಲ.

ಈ ಹಿನ್ನೆಲೆಯಲ್ಲಿ ನೋಡುವುದಾದರೆ ವೃತ್ತಿ ಮತ್ತು ಪ್ರವೃತ್ತಿ, ಸಾಮಾಜಿಕ ಮತ್ತು ಧಾರ್ಮಿಕ ಜೀವನದಲ್ಲಿ ಬದ್ಧತೆಯನ್ನು ಕಾಯ್ದುಕೊಂಡ ಬಂದರವರು ಹಾಲಯ್ಯ ಶಾಸ್ತ್ರಿಗಳು ಎಂದರೆ ತಪ್ಪಾಗಲಿಕ್ಕಿಲ್ಲ.

ದೊಡ್ಡಾಟದ ದೊಡ್ಡಣ್ಣ, ದಣಿವರಿಯದ ಕಲಾವಿದ, ಭಾಗವತ ಭಾಸ್ಕರನೆಂದು ಜನಮಾನಸದಲ್ಲಿ ನೆಲೆಗೊಂಡಿರುವ ಹಿರಿಯ ಜೀವವದು. ಕಳೆದ ಅರ್ಧಶತಮಾನಕ್ಕೂ ಹೆಚ್ಚುಕಾಲ ತಮ್ಮ ಜೀವನವನ್ನು ಕಲಾಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಬದುಕಿನ ಏಳು-ಬೀಳಿನ ಹಾದಿಯಲ್ಲಿ ಕಂಡುಂಡ ಸಿಹಿ-ಕಹಿ ಅನುಭವಗಳನ್ನು ರಂಗಭೂಮಿಕಲೆಯೊಂದಿಗೆ ಮೇಳೈಸಿ, ಅಪಾರ ಜ್ಞಾನದೊಂದಿಗೆ ರಂಗನಟರಾಗಿ, ಹಿಮ್ಮೇಳನಕಾರರಾಗಿ, ನಿರ್ದೇಶಕರಾಗಿ, ಸಂಘಟಕ ಶಕ್ತಿಯಾಗಿ, ಕಲಾಸಂಘ ಕಟ್ಟಿಬೆಳೆಸಿ, ಸಮಾಜೋಧಾರ್ಮಿಕ ಸುಧಾರಕರಾಗಿ ಸಲ್ಲಿಸಿದ ಸೇವೆ, ಜನಪದ ಕಲಾಪ್ರಕಾರವಾದ ದೊಡ್ಡಾಟ – ಬಯಲಾಟದ ಉಳಿವಿಗಾಗಿ ಅಪಾರ ಶ್ರಮವಹಿಸಿದ ಶ್ರೀಯುತರ ಕಾರ್ಯ ಶ್ಲಾಘನೀಯ.


  • ಡಾ. ಯಲ್ಲಮ್ಮ ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಜಿ.ವಿ.ಪಿ.ಪಿ. ಸ.ಪ್ರ.ದ.ಕಾಲೇಜು, ರಾಮನಗರ ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW