ಅಕ್ಷರ ಗುಂಡುಗುಂಡಾಗಿ ಬರೆದರೆ ಹೆಣ್ಣು ಕೊಡ್ತಾರಾ..?

ನನಗೇ ಅಂತಲ್ಲ, ಎಲ್ಲರ ಜೀವನದಲ್ಲೂ ಯಾರ್ಯಾರ ಹುಡುಗಿ ಎಲ್ಲಿಹಳೋ ಎಂಬುದು ಮೊದಲೇ ‌ಡಿಸೈಡ್ ಆಗಿರೋದು. ಯಾರ ಕೈ ಬರಹ ಹೇಗಿದ್ದರೇನು. ಅವರವರ ಹಣೆಬರಹ ಮುಖ್ಯವಲ್ಲವೇ.? ಲೇಖಕರಾದ ಹಿರಿಯೂರು ಪ್ರಕಾಶ್ ಅವರ ಲೇಖನಿಯನ್ನು ತಪ್ಪದೆ ಮುಂದೆ ಓದಿ…

ಕಾಲೇಜು ಶಿಕ್ಷಣ ಮುಗಿಸಿದ ಕೂಡಲೇ ಉದ್ಯೋಗಕ್ಕೆ ಸೇರಿಕೊಂಡಿದ್ದ ಆರಂಭದ ದಿನಗಳವು. ನಮ್ಮ ಹಿರಿಯೂರಿನ ಹತ್ತಿರವೇ ಇದ್ದ ಆದಿವಾಲದಲ್ಲಿನ ಮೈಸೂರು ಬ್ಯಾಂಕ್ ಗೆ ಪೋಸ್ಟಿಂಗ್ ಆಗಿತ್ತು.‌ ಹಿರಿಯೂರಿನ ನಮ್ಮ ಮನೆಯಿಂದ ಆರೇಳು ಕಿ.ಮಿ ದೂರದ ಬ್ಯಾಂಕಿಗೆ ನಿತ್ಯವೂ ಸೈಕಲ್ ಮೇಲೆಯೇ ಹೋಗಿ ಬರುತ್ತಿದ್ದ ಜೋಷ್ ತುಂಬಿದ್ದ ವಯಸ್ಸು ಅದು. ಕಾಲೇಜಿನಲ್ಲಿರಲಿ ಉದ್ಯೋಗದಲ್ಲಿರಲಿ, ದಿನನಿತ್ಯ ಊಟ- ತಿಂಡಿ ಬಿಟ್ಟರೂ ಕ್ರಿಕೆಟ್ ಹಾಗೂ ಕೇರಂ ಪ್ರಾಕ್ಟೀಸ್ ಮಾತ್ರ ಬಿಡುತ್ತಿರಲಿಲ್ಲ. ಉದ್ಯೋಗವನ್ನು ಸಹಾ ಒಂದು ಕ್ರೀಡೆಯೆಂಬಂತೆ ಖುಷಿಯಿಂದ ಆಸ್ವಾದಿಸಿ ಕೆಲಸ ಮಾಡುತ್ತಿದ್ದುದರಿಂದ ನಾನೊಬ್ಬ ಉದ್ಯೋಗಿ ಎಂಬ ವಿಶೇಷವಾದ ಭಾವನೆ ನನ್ನಲ್ಲಿರಲಿಲ್ಲ ಅಥವಾ ನಾನು ಮಾಡುತ್ತಿರುವುದು ಕೆಲಸ ಎಂಬ ಒತ್ತಡದ ಅಥವಾ ಭಾರವಾದ ಭಾವನೆ ಎಂದೂ ಬರಲಿಲ್ಲ. ಬಹುಶಃ ಈ ಮನೋಭಾವನೆಯಿಂದ ಉದ್ಯೋಗ ಆರಂಭಿಸಿದ ಕಾರಣಕ್ಕೇ ಏನೋ ವೃತ್ತಿಯುದ್ದಕ್ಕೂ ಅದೇ ಕ್ರೀಡಾ ಮನೋಭಾವವನ್ನು ಹಾಗೆಯೇ ಉಳಿಸಿ ಬೆಳೆಸಿಕೊಂಡು ಬರಲು ಸಾಧ್ಯವಾಗಿದ್ದು. ಸುಸ್ತು ಎಂಬ‌ ಪದ ವೃತ್ತಿಯ ಡಿಕ್ಷನರಿಯಲ್ಲಿ ಇಲ್ಲದೇ ಹೋಗಿದ್ದು. ಅದಿರಲಿ. ಈಗ ವಿಷಯ ಅದಲ್ಲ.

ಅಂದು ನಾನು ಕೆಲಸ ಮಾಡುತ್ತಿದ್ದ ಆದಿವಾಲ ಶಾಖೆಯಲ್ಲಿ ತಿಪ್ಪೇಸ್ವಾಮಿ ಎಂಬುವರು ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರು ವಯಸ್ಸಿನಲ್ಲಿ ನಮಗಿಂತ ತುಂಬಾ ಹಿರಿಯರಾಗಿದ್ದರೂ ಪ್ರತೀ ವಿಷಯಕ್ಕೂ ಅವರನ್ನು ಸಕತ್ ತಮಾಷೆ ಮಾಡುತ್ತಾ ಕಾಲೆಳೆಯುತ್ತಿದ್ದೆ. ಅವರಿಗೂ ನನ್ನನ್ನು ಕಂಡರೆ ಬಹಳ ಪ್ರೀತಿ- ಅಭಿಮಾನ ಇತ್ತು. ಬ್ಯಾಂಕಿನ ಕೆಲಸವನ್ನು ಚಕಚಕ ಅಂತ ಯಾವುದೇ ಕಿರಿಕ್ ಇಲ್ಲದೇ ನಿರಾಯಾಸವಾಗಿ ಮುಗಿಸಿ ಸಂಜೆಯಾಗುತ್ತಲೇ ಹಿರಿಯೂರಿನ ಕ್ರಿಕೆಟ್ ಮೈದಾನಕ್ಕೆ ಓಡುತ್ತಿದ್ದ ನನ್ನನ್ನು ಆತ ಬಹಳ ಅಕ್ಕರೆಯಿಂದಲೇ ಮಾತನಾಡಿಸುತ್ತಿದ್ದರಲ್ಲದೇ ಒಮ್ಮೊಮ್ಮೆ ಮೈದಾನದಲ್ಲಿ ನಮ್ಮ ಆಟವನ್ನು ನೋಡಲು ಬರುತ್ತಿದ್ದರು.

ತಿಪ್ಪೇಸ್ವಾಮಿಯವರ ಹಿರಿಯೂರಿನ ಭಾಷೆ ಕೇಳಲು ಸಕತ್ ಮಜಾ ಇರುತ್ತಿತ್ತು. ಮೇಲಾಗಿ ನಾವೆಲ್ಲಾ ಆಗ ಸಿರ್ಫ಼್ ಕಚೇರಿಯ ಕೆಲಸ ಮಾತ್ರವಲ್ಲದೇ ಅದೂ ಇದೂ ಅಂತ ಕೆಲವು ಕ್ರಿಯಾತ್ಮಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹಾ ಹಮ್ಮಿಕೊಂಡು ಇಡೀ ತಂಡ ತುಂಬಾ ಕ್ರಿಯಾಶೀಲವಾಗಿದ್ದರಿಂದ ತಿಪ್ಪೇಸ್ವಾಮಿ ಗೆ ನನ್ನ ಕಂಡ್ರೆ ವಿಶೇಷ ಪ್ರೀತಿ.
ಅವರು ಯಾವಾಗಲೂ ” ಅಲ್ಲಪ್ಪಾ…. ಆಫ಼ೀಸ್ನಾಗೂ ಬಾಳಾ ಚುರುಕಾಗಿ ಕೆಲ್ಸ ಮಾಡ್ತೀಯಾ , ಒಬ್ಬನೇ‌ ಇದ್ರೂ ಎಲ್ಲಾ ಮ್ಯಾನೇಜ್ ಮಾಡ್ತೀಯಾ. ಅಲ್ಲಿ ಆಟನೂ ಪಸಂದಾಗಿ ಆಡ್ತೀಯಾ. ದಿನಾಲೂ ಒಂಚೂರು ಸುಸ್ತಾಗದಂತೆ ಬ್ಯಾಂಕ್ ಕೆಲಸ ಎಲ್ಲಾ ಮುಗ್ಸಿ ಬಿಡ್ತೀಯಾ. ಒಂಥರಾ ಪಾದ್ರಸಾ ಬಿಡಪ್ಪಾ ನೀನು ” ಎಂಬ ಕಾಂಪ್ಲಿಮೆಂಟ್ ಕೂಡ ನನಗೆ ಅವರಿಂದ ಆಗಾಗ್ಗೆ ಸಿಗ್ತಾ ಇತ್ತು.

ಹೀಗಿದ್ದಾಗ ಒಮ್ಮೆ ತಿಪ್ಪಣ್ಣ ” ಅಲ್ಲಪ್ಪ ಕೆಲ್ಸ ಸಿಕ್ಕಾಯ್ತು , ಒಂದು ಒಳ್ಳೆ ಹುಡ್ಗಿ ನೋಡಿ ಮದ್ವೆ ಆಗ್ಬೋದಲ್ವಾ.. ? ಎಂದು ಕಾಳಜಿ ತುಂಬಿದ ದನಿಯಲ್ಲಿ ವಿಚಾರಿಸುತ್ತಿದ್ದರು. ಆಗೆಲ್ಲಾ ನಾನು ” ಗಡ್ಡ ಬಿಟ್ಕೊಂಡ್ ಜೋಗಿ ಥರಾ ಇರೋ ನನಗೆ ಯಾರು ಹೆಣ್ಣು ಕೊಡ್ತಾರೆ ತಿಪ್ಪಣ್ಣ ” ಎಂದು ತಮಾಷೆಯಾಗಿಯೇ ಪ್ರಶ್ನಿಸುತ್ತಿದ್ದೆ. ಆಗೆಲ್ಲಾ ಹೆಚ್ಚಾಗಿ ಗಡ್ಡದಲ್ಲೇ ನನ್ ಗೆಟಪ್ಪು ಇರುತ್ತಿತ್ತು.
ಬಹುಶಃ ಅದನ್ನು ಆತ ಗಂಭೀರವಾಗಿಯೇ ತೆಗೆದುಕೊಂಡು ‘ ಪಾಪ ಈ ಹುಡ್ಗನಿಗೆ ಹೆಣ್ಣು ಸಿಕ್ಕಿಲ್ಲ ‘ ಅಂತ ಅಂದ್ಕೊಂಡಿದ್ದಿರಬಹುದು ಅನಿಸಿತ್ತು.

ಕೆಲ ದಿನಗಳ ತರುವಾಯ ಒಂದು ಮಧ್ಯಾಹ್ನ ಆಫ಼ೀಸಿನಲ್ಲಿ ಇನ್ನೇನು ಕೆಲಸ ಮುಗಿಸಿ ಹೊರಡಲು ತಯಾರಾಗಿದ್ದ ನನ್ನ ಬಳಿ ಅವಸರವಸರವಾಗಿ ಬಂದ ತಿಪ್ಪೇಸ್ವಾಮಿ ” ಪ್ರಕಾಶೂ ನಾನು ನಿನ್ನೆ ಬೆಂಗ್ಳೂರಿಗೆ ಹೋಗಿದ್ದೆ ಕಣಪ್ಪಾ . ಅಲ್ಲಿ ನಿನಗೆ‌ ಅಂತ ಒಂದು ಹುಡುಗಿ ನೋಡಿದೆ . ನೋಡೋಕೆ ಬಾಳಾ ಚನ್ನಾಗಿತ್ತು ಮಗ . ಅವರ ಅಪ್ಪ ತಾಶೀಲ್ದಾರ್ರು, ನನಗೆ ಗೊತ್ತಿರೋರೇ . ವಿಜಯನಗರದಲ್ಲಿ ದೊಡ್ಡ ಮನೆ ಇದೆ. ಆ ಮಗ ಇನ್ನೂ ಓದ್ತಾ ಇದೆಯಂತೆ. ಆಮೇಲೆ ಅವ್ರೂ ನಿಮ್ಮವ್ರೇ…! ನಿನ್ ಬಗ್ಗೆ ಎಲ್ಲಾ ಹೇಳಿದ್ನಪ್ಪಾ…. ಆದ್ರೆ ನಿನ್ ಬಗ್ಗೆ ಎಲ್ಲಾ ಕೇಳಿದ್ ಮೇಲೆ ಯಾಕೋ ಅವ್ರು ಒಪ್ಪಿದಂಗೆ ಕಾಣ್ಲಿಲ್ಲಪ್ಪಾ.

ಹೀಗೆ ಒಂದೇ ಉಸಿರಿಗೆ ಹೇಳುತ್ತಲೇ ಹೋದ ತಿಪ್ಪಣ್ಣನನ್ನು ಮಧ್ಯದಲ್ಲೇ ತಡೆದೆ. ” ಅಲ್ಲಾರೀ ಸ್ವಾಮಿ … ನನಗೆ ಹುಡುಗಿ ಬೇಕು ಅಂತ ನಿಮ್ಮತ್ರ ನಾನ್ಯಾವತ್ತಾದ್ರೂವೇ ಕೇಳಿದ್ನಾ…? ನನ್ನನ್ನು ಒಪ್ಪೋಕೆ ಬಿಡೋಕೆ ಅವರ್ ಯಾರ್ರೀ ? ನಾನೇನು ಅವರ ಮುಂದೆ ಹೋಗಿ ಹುಡುಗಿ ಕೊಡ್ರೀ ಅಂತಾ ಕೂತಿದ್ನಾ..? ನಾನು ಹಿಂಗೆ ಆರಾಮಾಗಿರೋದು ನಿಮಗೆ ಇಷ್ಟ ಇಲ್ವೇನಣ್ಣಾ ? ಎಂದು ಕಾಮಿಡಿಯಾಗಿಯೇ ಕೇಳಿದ್ದೆ.

ಅದಕ್ಕೆ ತಿಪ್ಪಣ್ಣ ” ಅಲ್ಲಪ್ಪಾ…‌ನೀನೆ‌ ಅಲ್ವಾ ಹೇಳಿದ್ದು ನನಗೆ ಯಾರು ಹೆಣ್ಣು ಕೊಡ್ತಾರೆ ಅಂತ ! ಅದನ್ನು ಮನ್ಸಾಗೆ ಇಟ್ಕೊಂಡೇ ಹುಡುಗೀನಾ ನೋಡಿದ್ದು. ಅವ್ರಿಗೆ ಹುಡುಗ ಎಂಗೇ ಅಂಬ್ತ ಹೇಳಿದ್‌ ಮೇಲೂ ಯಾಕೋ ಒಪ್ಪಿದಂಗೆ ಅನಿಸಲಿಲ್ಲಪ್ಪ.

ಯಾಕೋ ತಲೆ‌ ಕೆಟ್ಟೋಯ್ತು. ಈ ತಿಪ್ಪಣ್ಣ ಇಷ್ಟೆಲ್ಲಾ ಸೀರಿಯಸ್ಸಾಗಿ ನನ್‌ ಕೇಸು‌ ತಗೊಂಡು ಮುಂದುವರೆಯುತ್ತಾರೆಂದು ಕೊಂಡಿರಲಿಲ್ಲ. ಆದರೂ ಕುತೂಹಲಕ್ಕಾಗಿ ನನ್ ಬಗ್ಗೆ ಏನೆಲ್ಲಾ ಹೇಳಿರಬಹುದು ಎಂಬ ಯೋಚನೆಯಲ್ಲಿಯೇ ತಮಾಷೆಯಾಗಿ ” ಅಲ್ರೀ ತಿಪ್ಪಣ್ಣಾ… ಅವರತ್ರ ನನ್ ಬಗ್ಗೆ ಏನೆಲ್ಲಾ ಹೇಳಿದ್ದೀರ ಎಂದೆ.

ಅದಕ್ಕೆ ಆತ ತುಂಬು ಮುಗ್ಧತೆಯಿಂದ ” ನೋಡಿ ಸ್ವಾಮಿ ಹಿರಿಯೂರ್ನಾಗೆ ನಮ್ ಹುಡುಗ ಒಬ್ಬ ಇದಾನೆ. ನೋಡೋಕೆ ಬೆಳ್ಳಗೆ ಚಂದಾಗವ್ನೆ, ಅದೆಂಥದ್ದೋ ಬ್ಯಾಟ್ ಆಟ ಪಸಂದಾಗ್ ಆಡ್ತಾನೆ, ಕ್ಯಾರಂ ಬೋರ್ಡು ಚೆನ್ನಾಗ್ ಆಡ್ತಾನೆ’. ಆಮ್ಯಾಕೆ ಅಕ್ಷರ ಭಾಳಾ ಗುಂಡು ಗುಂಡುಗೆ ಬರೀತಾನೆ. ತುಂಬಾ ಚುರುಕು. ಹಿಂಗೆಲ್ಲಾ ಏನೇನೋ ಹೇಳ್ದೇ ಕಣಪ್ಪಾ. ಆದ್ರೂ ಯಾಕೋ ಅವ್ರು ಮನಸ್ಸು ಮಾಡಲಿಲ್ಲ. ಈ ವಿಚಾರಗಳ ನ್ನು ಹೇಳುವ ಭರದಲ್ಲಿ ನಾನು ಉದ್ಯೋಗ ಮಾಡುತ್ತಿರುವ ಮತ್ತು ನನ್ನ‌ ಹಿನ್ನೆಲೆಯ ವಿವರಗಳನ್ನೇ ಸರಿಯಾಗಿ ಹೇಳೋದನ್ನು ಬಿಟ್ಟಿದ್ದನಂತೆ.!
ಅದನ್ನು ಕೇಳಿ ನನ್ನ ತಲೆ ಚಿತ್ರಾನ್ನಾವಾಗೋಯ್ತು.”ಅಲ್ಲಾರೀ, ಹೆಣ್ಣು ಕೊಡೋರಿಗೆ ಬೇಕಾಗಿರೋದು ಹುಡುಗನ ಗುಣ, ಸ್ವಭಾವ, ಉದ್ಯೋಗ, ಸಂಪಾದನೆ ಹಾಗೂ ಅವನ ಮನೆ -ಮಠ ಹಿನ್ನೆಲೆ ಮುನ್ನೆಲೆ ಇತ್ಯಾದಿ. ಆದರೆ ಯಾವಾನಾದ್ರೂ ಹುಡುಗ ಚೆನ್ನಾಗಿ ಕ್ರಿಕೆಟ್ ಆಡ್ತಾನೆ ಅಂತಾನೋ ಇಲ್ಲವೇ ಅಕ್ಷರ ಗುಂಡಗೆ ಬರೀತಾನೆ ಅಂತಾನೋ ತಮ್ಮ ಮಗಳನ್ನ ಕೊಡ್ತಾರೇನ್ರೀ…? ಅಂತೂ ನನ್ನ ಮರ್ಯಾದೆನಾ ಸ್ವಲ್ಪಮಟ್ಟಿಗೆ ಹರಾಜು ಹಾಕಿ ಬಂದಿದ್ರೂ ಒಂದು‌ ಒಳ್ಳೇ ಕೆಲಸ ಮಾಡಿದ್ರಿ‌ ಬಿಡಿ ! ಯಾಕಂದ್ರೆ ನೀವು ಇದೆಲ್ಲಾ ಹೇಳಿ ಅವರು ಒಪ್ಪಿಕೊಂಡಿದ್ರೆ ನನಗೆ ಕಷ್ಟ ಆಗಿರೋದು. ! ಎನ್ನುತ್ತಲೇ ಹುಡುಗಿ ಕಡೆಯವರು ಒಪ್ಪಲಿಲ್ಲವೆಂಬ ವಿಷಯಕ್ಕೆ ಬೇಸರದಲ್ಲಿದ್ದಂತೆ‌ ಕಂಡ ತಿಪ್ಪಣ್ಣನನ್ನು‌ ಕುರಿತು “ಹೋಗ್ಲೀ ಬಿಡ್ರಿ ತಿಪ್ಪಣ್ಣ.

ಇದರಿಂದ ನನಗೇನೂ ಬೇಜಾರಿಲ್ಲ. ಅವರಾರೋ ನಾನ್ಯಾರೋ! ಅವ್ರು ತಹಶಿಲ್ದಾರ್ ಆಗಿರೋದ್ರಿಂದ ಮಗಳನ್ನು ಡಿಸಿ ಮಗನಿಗೆ‌ ಕೊಡಬೇಕೆಂದು ಕೊಂಡಿರ್ತಾರೆಯೇ ಹೊರತು ಬ್ಯಾಂಕಲ್ಲಿ ಸಾಧಾರಣ ಕೆಲಸದಲ್ಲಿರೋ ನನ್ನಂಥವನಿಗಲ್ಲ‌. ಇದು ಅಸಲೀಯತ್ತು . ಆದ್ರೆ ಇನ್ಮುಂದೆ ಹುಡುಗೀನ ಕೇಳೋವಾಗ ಹುಡುಗ ಅಕ್ಷರ ಚೆನ್ನಾಗಿ ಬರೀತಾನೆ. ಕೇರಂ- ಕ್ರಿಕೆಟ್ ಚೆನ್ನಾಗಿ ಆಡ್ತಾನೆ ಅಂತೆಲ್ಲಾ ಹೇಳ್ಬೇಡಿ. ಯಾಕಂದ್ರೆ ಬದುಕು ಚೆನ್ನಾಗಿರಬೇಕು ಅಂದ್ರೆ ಮುಖ್ಯವಾಗಿ ಕೈ ಬರಹಕ್ಕಿಂತಲೂ ಹಣೆಬರಹ ನೆಟ್ಟಗಿರಬೇಕು ಎಂದೆ.

ನಾನು ಹೇಳಿದ್ದನ್ನು ಆತ ಅದೇನು ಕೇಳಿಸಿಕೊಂಡು ಅರ್ಥಮಾಡಿಕೊಂಡರೋ ಗೊತ್ತಿಲ್ಲ. ಅಷ್ಟರಲ್ಲಿ ಮ್ಯಾನೇಜರ್ ” ರೀ ತಿಪ್ಪೇಸ್ವಾಮಿ ಬನ್ರೀ ಬೇಗ ” ಎಂದಾಗ ತಿಪ್ಪಣ್ಣ ನನ್ನಿಂದ ಕಾಲ್ಕಿತ್ತಿದ್ದ.
ಆದಿವಾಲದಲ್ಲಿನ ನಮ್ಮ ಹಳೆಯ ಬ್ಯಾಂಕ್ ಕಚೇರಿ ಈಗ ಆ‌ ಜಾಗದಲ್ಲಿಲ್ಲ.‌ಆದರೆ ‌ಯಾವಾಗಲಾದರೂ ಪ್ರಯಾಣದ ವೇಳೆ ಆ ಊರನ್ನು ದಾಟಿ ಹೋಗುವಾಗ ಸುಮಾರು ಮುವ್ವತ್ತೆಂಟು ವರ್ಷಗಳ ಹಿಂದಿನ ಇಂತಹ ನೂರಾರು ಸವಿ ಸವಿನೆನಪುಗಳು ಥಟ್ಟನೇ ಕಣ್ಮುಂದೆ ಹಸಿರಾಗಿ ಬಂದು ಮನವನ್ನು ಅದಾಗಿಯೇ ಪುಳಕಿಸುತ್ತವೆ.

** ಮರೆಯುವ ಮುನ್ನ **

ಅನ್ನದ ಋಣ, ನೀರಿನ ಋಣ , ಕೈ ಹಿಡಿಯುವವರ ಋಣ ಆ‌ ಬ್ರಹ್ಮ ಯಾರ್ಯಾರ ಹಣೆಯಲ್ಲಿ ಏನು‌ ಬರೆದಿರುತ್ತಾನೋ ಅದರಂತೆಯೇ ನಡೆವುದು. ಈ ತಿರುಗೋ ಭೂಮಿಯಲ್ಲಿ ಬದುಕಿನ ಪಯಣದಲ್ಲಿ ಯಾರು ಯಾವಾಗ ಎಲ್ಲಿ ಜೊತೆಯಾಗುತ್ತಾರೆ, ಯಾರು ಎಲ್ಲಿಯವರೆಗೆ ಜೊತೆಗಿದ್ದೂ ಕಾಣೆಯಾಗುತ್ತಾರೆಂಬುದೇ ಸೃಷ್ಟಿಯ‌ ವಿಸ್ಮಯ. ಹೀಗಾಗಿ ಅಂದು ನಮ್ಮ ತಿಪ್ಪಣ್ಣ ನನ್ನ ಬಗ್ಗೆ ಕೇವಲ ಕ್ರಿಕೆಟ್ ಮತ್ತು ಹ್ಯಾಂಡ್ ರೈಟಿಂಗ್ ಗಳನ್ನೇ ಹೇಳದೇ ನನ್ನ ಉದ್ಯೋಗದ ವಿಚಾರವೂ ಸೇರಿದಂತೆ ಮತ್ತೇನನ್ನೋ ಹೈಲೈಟ್ ಮಾಡಿ ವಿಷದವಾಗಿ ಹೇಳಿದ್ದಲ್ಲಿ ಅಂದು ಬೆಂಗಳೂರಿನ ವಿಜಯನಗರದ ಆ ತಹಶೀಲ್ದಾರರೂ ಮಗಳನ್ನು ಕೊಡಲು ಆಸಕ್ತಿ ತೋರುತ್ತಿದ್ದರೇನೋ ಗೊತ್ತಿಲ್ಲ. ಆದರೆ ನನ್ನ ಈ ಬದುಕಿನಲ್ಲಿ ನನಗೇ ಅಂತಾನೇ ಆಗಲೇ ಒಂದು ಹುಡುಗಿಯನ್ನು ಆ ಬ್ರಹ್ಮ ಫ಼ಿಕ್ಸ್ ಮಾಡಿರುವಾಗ, ಮಿಕ್ಕ ಯಾವ ವಿಚಾರಗಳೂ ಅಡೆತಡೆಗಳೂ ಅಲ್ಲಿ ಅಡ್ಡ ಬರೋದಕ್ಕೆ ಛಾನ್ಸೇ ಇರಲಿಲ್ಲ . ನನಗೇ ಅಂತಲ್ಲ, ಎಲ್ಲರ ಜೀವನದಲ್ಲೂ ಯಾರ್ಯಾರ ಹುಡುಗಿ ಎಲ್ಲಿಹಳೋ ಎಂಬುದು ಮೊದಲೇ ‌ಡಿಸೈಡ್ ಆಗಿರೋದು ಬಹುತೇಕ ನಿಜ ಅಲ್ವೇ…?

ಆದರೆ ನನಗೆ ಈ ಘಟನೆಯಿಂದ ಇಂದಿಗೂ ವಿಸ್ಮಯದ ಜೊತೆಗೆ ವಿನೋದವನ್ನೂ ಮೂಡಿಸುತ್ತಿರುವುದು ನಮ್ಮ ತಿಪ್ಪಣ್ಣನ ಅಸೀಮ ಮುಗ್ಧತೆ ಮತ್ತು ಆತ ನನ್ನ ಮಾತನ್ನು ಅರ್ಥೈಸಿಕೊಂಡಿದ್ದ ರೀತಿಯಿಂದಾಗಿ  ನನ್ನ‌ ಕ್ರಿಕೆಟ್ ಆಟ ಹಾಗೂ‌ ಗುಂಡುಗುಂಡಾದ ಚಂದದ ಹ್ಯಾಂಡ್ ರೈಟಿಂಗು ಒಂದು ‌ಹುಡುಗಿಯನ್ನು ಕೇಳುವಷ್ಟರಮಟ್ಟಿಗಿನ ಅರ್ಹತೆ ದೊರಕಿಸಿಕೊಡಬಲ್ಲವು ಎಂದು ನಂಬಿದ್ದ ಆತನ ಪ್ರಾಮಾಣಿಕ ಅಮಾಯಕತೆಗೆ ಈಗಲೂ ಮೆಚ್ಚುಗೆಯ ನಗು ಬಂದರೂ ಅವರಲ್ಲಿದ್ದ ನೈಜ ಕಾಳಜಿಗೆ ಹ್ಯಾಟ್ಸಾಫ಼್‌.

ಅಂತಿಮವಾಗಿ, ಯಾರ ಕೈ ಬರಹ ಹೇಗಿದ್ದರೇನು. ಅವರವರ ಹಣೆಬರಹ ಮುಖ್ಯವಲ್ಲವೇ?

ಪ್ರೀತಿಯಿಂದ..


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW