ಲೇಖಕರಾದ ವಿಶ್ವೇಶ್ವರ್ ಭಟ್ ಅವರ ‘ವಿದೇಶ ಕಾಲ’ ಪ್ರವಾಸ ಕಥನದ ಕುರಿತು ವೈದ್ಯರು ಮತ್ತು ಲೇಖಕರಾದ ಸುವರ್ಣಿನಿ ಕೊಣಲೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ವಿದೇಶ ಕಾಲ
ಲೇಖಕರು : ವಿಶ್ವೇಶ್ವರ್ ಭಟ್
ಬೆಲೆ : 425.00
ಹೈಸ್ಕೂಲಿನಲ್ಲಿದ್ದಾಗ ಮನೆಗೆ ನಿತ್ಯವೂ ವಿಜಯಕರ್ನಾಟಕ ಪತ್ರಿಕೆ ಬರುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮದ ದಿಶೆ ಬದಲಿಸಿದ ಪತ್ರಿಕೆ ಅದು ಎಂದರೆ ತಪ್ಪಲ್ಲ ಎಂದುಕೊಳ್ಳುತ್ತೇನೆ. ಆಗ ಕೇಳಿದ ಹೆಸರು ವಿಶ್ವೇಶ್ವರ ಭಟ್ಟರದ್ದು. ಆಮೇಲಿಂದ ಸಾಮಾಜಿಕಮಾಧ್ಯಮ, ಪತ್ರಿಕೆ ಮೂಲಕ ಅವರ ಬರೆಹಗಳನ್ನು ಓದುತ್ತಲೇ ಬಂದಿದ್ದೇನೆ. ಅವರ ಬರೆಹದ ಕೃಷಿಯ ಫಲವನ್ನು ಸವಿದ ಲೆಕ್ಕವಿಲ್ಲದಷ್ಟು ಓದುಗರಲ್ಲಿ ನಾನೂ ಒಬ್ಬಳು.
ಅವರ ಬರವಣಿಗೆ ಸರಳ, ಆಕರ್ಷಕ, ಸ್ವಾರಸ್ಯಕರ, ಮಾಹಿತಿಪೂರ್ಣ. ಒಂದು ಲೇಖನವು ಈ ಎಲ್ಲವೂ ಆಗಿರುವಂತೆ ಬರೆಯುವುದು ಸುಲಭವಲ್ಲ. ಅದು ಕಲಿತು ಬರುವ ವಿದ್ಯೆಯೂ ಅಲ್ಲ. ಅದು ಸಹಜವಾಗಿ ವ್ಯಕ್ತಿಯೊಳಗೆ ಇರುವಂತಹ ಕಲೆ.
ಅವರು ವಾರಕ್ಕೊಮ್ಮೆ ಅಂಕಣ ಬರೆಯುವಂತೆ ತಿಂಗಳಿಗೆ ನಾಲ್ಕು ಬಾರಿ ವಿದೇಶಕ್ಕೆ ಹೋಗಿ ಬರುವುದು ಗೊತ್ತೇ ಇದೆ. ಹಾಗೆ ಹೋಗಿ ಬಂದವರು ಸುಮ್ಮನಿರುವುದುದಿಲ್ಲ. ತಮ್ಮ ಅನುಭವವನ್ನೆಲ್ಲ ಬರೆದಿಡುತ್ತಾರೆ. ಅದನ್ನು ಓದುವುದೇ ಒಂದು ಖುಷಿ.

ಅವರ ಇತ್ತೀಚಿನ ಕೃತಿ ವಿದೇಶ ಕಾಲ ಅಂತಹ ಹಲವು ಅನುಭವಗಳನ್ನು ಒಟ್ಟು ಸೇರಿಸಿದ ಮಿಠಾಯಿ ಡಬ್ಬಿ. ಅದನ್ನು ಸ್ವಲ್ಪ ಸ್ವಲ್ಪವೇ ಓದುತ್ತಾ ಇರುವುದರಿಂದ ನನ್ನ ಮೇಜಿನ ಮೇಲೆ, ಎದುರಿನಲ್ಲಿ ಇಟ್ಟಿದ್ದೆ. ಮೊನ್ನೆ ರಾತ್ರಿ ಒಂಬತ್ತೂವರೆಗೆ ಮಲಗೋ ಪುಟ್ಟ ಎಂದು ಅಮ್ಮ ಗೋಗರೆಯುವಾಗ, ನಿದ್ರೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಪುಟ್ಟ ಮೊರೆ ಹೋದದ್ದು ಈ ಪುಸ್ತಕಕ್ಕೆ.
ಹಾಗೆ ನಿದ್ರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪುಸ್ತಕ ಕೈಗೆತ್ತಿಕೊಂಡವನು ಒಂದು ಅಧ್ಯಾಯ… ಮತ್ತೆ ಎರಡು…ಮೂರು ಹೀಗೇ ಓದುತ್ತಾ ಕುಳಿತು ಬಿಟ್ಟ. ‘ಅಮ್ಮಾ ಈ ಪುಸ್ತಕ ತುಂಬಾ ಚೆನ್ನಾಗಿದೆ’ ಎನ್ನುತ್ತಾ ಲೇಖಕರ ಬಗ್ಗೆಯೂ ಒಂದಷ್ಟು ಕೇಳಿ ತಿಳಿದುಕೊಂಡ. ಹನ್ನೊಂದಾದರೂ ಅವನು ಪುಸ್ತಕ ಬಿಡುತ್ತಿಲ್ಲ. Young adults, pre teen ಮಕ್ಕಳು ಓದುವಂತಹ ಕೃತಿಗಳು ಇಂಗ್ಲಿಷಿನಲ್ಲಿ ಬಹಳ ಇವೆ. ಅವುಗಳು ಈ ವಯಸ್ಸಿನ ಮಕ್ಕಳನ್ನು ಸೆಳೆಯುತ್ತವೆ. ಹಾಗೆ ಮಕ್ಕಳನ್ನು ಸೆಳೆಯುವ ಕೃತಿಗಳು ಕನ್ನಡದಲ್ಲಿ ಇಲ್ಲ ಎನ್ನುವುದು ನನ್ನ ಕಂಪ್ಲೇಂಟು. ನಮ್ಮ ಕಾಲದಲ್ಲಿ ಇತ್ತೇ? ಎಂದರೆ ಆಗಲೂ ಇರಲಿಲ್ಲ. ಆದರೆ ನಾವು ಇದ್ದದ್ದರಲ್ಲಿ ಸರಳ ಕಾದಂಬರಿ ಕಥೆ ಲೇಖನಗಳನ್ನು ಓದುತ್ತಾ ಬೆಳೆದೆವು. ನಮಗಾಗಿ ಬೇರೆಯದೇ ಪುಸ್ತಕಗಳು ಇಲ್ಲವೆನ್ನುವುದು ಕೊರತೆ ಅನಿಸಲಿಲ್ಲ ಆಗ.
ಆದರೆ ಈ ಕಾಲದ ಜೀ಼ ಮತ್ತು ಆಲ್ಫಾ ಮಕ್ಕಳಿಗೆ ಇದೊಂದು ಸಮಸ್ಯೆ ಎಂದುಕೊಂಡಿದ್ದೆ. ಅದಕ್ಕೆ ಎರಡು ಕಾರಣ :
- ಈ ವಯಸ್ಸಿನ ಕನ್ನಡ ಓದಲು ಬರೆಯಲು ಕಷ್ಟಪಡುವುದು. ಬರೆದರೆ ಈ ವಿಷಯವೇ ಒಂದು ಪ್ರಬಂಧವಾಗುತ್ತದೆ.
- ನಾವು ಓದಿದ ಅಥವಾ ಓದುವ ಪುಸ್ತಕಗಳ ವಿಷಯಗಳು ಈಗಿನ ಕಾಲಕ್ಕೆ, ಅವರ ಬದುಕಿಗೆ ಕನೆಕ್ಟ್ ಆಗಲಾರದು.
ಇದರಲ್ಲಿ ಮೊದಲನೆಯ ಕಾರಣ ನಮ್ಮ ಮನೆಯ ಸಮಸ್ಯೆಯೇ ಅಲ್ಲ. ಆದರೆ ಹೆಚ್ಚಿನ ಮನೆಗಳಲ್ಲಿ ಈ ಸಮಸ್ಯೆ ಇದೆ ಎನ್ನುವುದನ್ನು ಬಲ್ಲೆ. ಮಕ್ಕಳಿಗೆ ಮಾತೃಭಾಷೆ ಕಲಿಸುವುದು ಕಷ್ಟ ಎನ್ನುವ ಕಾಲದಲ್ಲಿ ಮಕ್ಕಳು ಕನ್ನಡ ಪುಸ್ತಕಗಳನ್ನು ಓದುವಂತೆ, ಕನ್ನಡದಲ್ಲಿ ತಪ್ಪಿಲ್ಲದೇ ಪುಟಗಳಷ್ಟು ಬರೆಯುವಂತೆ, ತಪ್ಪಿಲ್ಲದೇ ಕನ್ನಡ ಮಾತನಾಡುವಂತೆ ಮಾಡುವುದು ಸುಲಭ, ಹಾಗೂ ಅದಕ್ಕೆ ಹೆಚ್ಚಿನ ಶ್ರಮದ ಅಗತ್ಯವೇ ಇಲ್ಲ. ಇದು ವೈಯಕ್ತಿಕ ಅನುಭವ.
ಅದಿರಲಿ…

ಎರಡನೆಯ ಕಾರಣ ಸ್ವಲ್ಪ ಯೋಚಿಸ ಬೇಕಾದಂಥದ್ದೇ. ಆದರೆ ಈಗಿನ ಕಾಲದ ವಿಷಯಗಳನ್ನು, ಅವರ ಬದುಕಿಗೆ ಹತ್ತಿರವೆನಿಸುವುದನ್ನು ಸ್ವಾರಸ್ಯಕರವಾಗಿ ಕೊಡುವ ಪುಸ್ತಕಗಳು ಇಲ್ಲವೇ? ವಿದೇಶ ಕಾಲ ಓದುತ್ತಿರುವ ಮಗನಿಗೆ ಪುಟ್ಟ ಪುಟ್ಟ ಅಧ್ಯಾಯಗಳು, ಸ್ವಾರಸ್ಯಕರ ನಿರೂಪಣಾ ಶೈಲಿ ಇಷ್ಟವಾಗಿವೆ. ಅದರಲ್ಲಿರುವ ಮಾಹಿತಿ ಅಚ್ಚರಿ ಮೂಡಿಸಿದೆ. ಹೀಗೆಯೇ ಸಣ್ಣ ಸಣ್ಣ ಅಧ್ಯಾಯಗಳ ಗುಚ್ಛ ಮಕ್ಕಳನ್ನು ಸೆಳೆಯಬಹುದು.
ಹೊಸ ಪ್ರಯೋಗಗಳೂ ಆಗಬೇಕಿದೆ ಎನ್ನುವುದು ಹೌದಾದರೂ, ಈಗಾಗಲೇ ಇರುವ ಇಂತಹ ಕೃತಿಗಳನ್ನು ನಾವೇಕೆ ಮಕ್ಕಳಿಗೆ ಕೊಡಬಾರದು? ಈ ಪುಸ್ತಕಗಳನ್ನು ಅವರು ಓದಲಾರರು ಎಂದೇನೂ ಇಲ್ಲ ಅನ್ನುವುದು ನನಗೀಗ ಸ್ಪಷ್ಟವಾಗಿದೆ. ಓದಲು ಗೊತ್ತಿರಬೇಕು ಮತ್ತು ಓದುವ ಆಸಕ್ತಿಯೂ ಬೇಕು ಅನ್ನುವುದಷ್ಟೇ ಇಲ್ಲಿನ ತೊಡಕು. ಎಲ್ಲ ಮಾಹಿತಿಯೂ ಅಂತರ್ಜಾಲದಲ್ಲಿ ಸಿಗುವಾಗ ಕನ್ನಡ ಪುಸ್ತಕಗಳನ್ನು ಓದುವುದು ಏಕೆ ಮುಖ್ಯ ಎಂದೂ ಕೆಲವರು ಕೇಳಬಹುದು.
ಭಾಷೆ ಸಂವಹನಕ್ಕೆ, ಆದರೆ ಅಷ್ಟಕ್ಕೇ ಸೀಮಿತವಲ್ಲ. ಸಂಸ್ಕೃತಿ, ಪರಂಪರೆ, ಪದ್ಧತಿ, ಆಹಾರ, ಆರೋಗ್ಯ ಎಲ್ಲವೂ ಭಾಷೆಯೊಂದಿಗೆ ಬೆಸೆದುಕೊಂಡಿವೆ. ಭಾಷೆಯ ಕೊಂಡಿಯೊಂದು ಕಳಚಿ ಬಿತ್ತು ಎಂದಾದರೆ ಇವೆಲ್ಲವೂ ನಿಧಾನಕ್ಕೆ ಮುರಿದುಬೀಳುತ್ತವೆ.
ಹೀಗೆ ಮೊನ್ನೆ ರಾತ್ರಿ ೫೦೦ ಪುಟಗಳ ವಿದೇಶ ಕಾಲ ಹಿಡಿದು ಕೂತ ಪುಟ್ಟ, ಪುಸ್ತಕವನ್ನು ಓದಿ ಮುಗಿಸುವೆ ಎಂದು ಹೇಳುತ್ತಿದ್ದಾನೆ. ಓದಿ ಮುಗಿಸಿದರೂ ಮುಗಿಸದಿದ್ದರೂ ಓದಿನ ಲೋಕದ ಈ ಪುಟ್ಟ ಪುಟ್ಟ ಹೆಜ್ಜೆಗಳು ಅವನಿಗೆ ಖುಷಿ ಕೊಡಲಿವೆ ಎನ್ನುವುದಂತೂ ಹೌದು…
- ಸುವರ್ಣಿನಿ ಕೊಣಲೆ
