ಹೇ…ಹನುಮಂತಣ್ಣ ಹುಷಾರು !

‘ಶಿವ ಧ್ಯಾನ ಮಾಡಣ್ಣ…’ಈ ಹಾಡು ಹಾಡಿದ್ದೇ ತಡ ನಾಡಿನ ತುಂಬೆಲ್ಲ ಹನುಮಂತನ ಧ್ಯಾನ ಮಾಡಲು ಶುರು ಮಾಡಿದರು. ಆ ಕಂಚಿನ ಕಂಠದ ಮಹಿಮೆಯೇ ಹಾಗಿದೆ.

ಸದ್ದಿಲ್ಲದೇ ತಾಂಡಾದಿಂದ ಬಂದು ಸರಿಗಮಪ ವೇದಿಕೆಯ ಮೇಲೆ ನಿಂತು ಹಾಡಿದ್ದೇ ಹಾಡಿದ್ದು. ಇತ್ತ ಕಡೆ ಏಳು ಕೋಟಿ ಕನ್ನಡಿಗರ ಹೃದಯವನ್ನು ಗೆದ್ದಿದ್ದಷ್ಟೇ ಅಲ್ಲ. ಸರಿಗಮಪ ಮುಖ್ಯ ತೀರ್ಪುಗಾರರಾದ ಅರ್ಜುನ ಜನ್ಯ, ವಿಜಯ ಪ್ರಕಾಶ, ರಾಜೇಶ ಕೃಷ್ಣ ಮತ್ತು ಮಹಾ ಗುರುಗಳಾದ ಹಂಸಲೇಖ ಅವರಂತಹ ಮಹಾ ದಿಗ್ಗಜರ ಮನಸ್ಸನ್ನೇ ಗೆದ್ದ ಈ ಹೃದಯ ಚೋರ್ .

ಸರಿಗಮಪ ಸೀಸನ್ ೧೫ರ ರನ್ನರ್ ಆಫ್ ಆದ ಮೇಲೆ ನಮ್ಮ ಹನುಮಂತಣ್ಣ ಹಾವೇರಿ ಜಿಲ್ಲೆಯ ಚುನಾವಣಾ ರಾಯಭಾರಿಯಾದ. ಜೋಗಿ ಪ್ರೇಮ್ ನಿರ್ದೇಶನದ ಹೊಸ ಚಿತ್ರವೊಂದಕ್ಕೆ ಸಹಿ ಹಾಕೆಯೇ ಬಿಟ್ಟ. ಒಂದರ ಮೇಲೊಂದು ಸಿಹಿ ಸಿಹಿ ಸುದ್ದಿಗಳು ಹನುಮನ ಪಾಲಿಗೆ ಬರುತ್ತಲೇ ಹೋದವು. ಇದರಿಂದಾಗಿ ನನಗೇನು ಹೊಟ್ಟೆ ಕಿಚ್ಚು ಆಗಿಲ್ಲ. ಬದಲಾಗಿ ಹನುಮಂತನ ಬೆಳವಣಿಗೆಯ ಮೇಲೆ ಸಾಕಷ್ಟು ಖುಷಿ ಇದೆ. ಮತ್ತು ನಮ್ಮ ಹನುಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮನಸ್ಸು ಪೂರ್ತಿಯಾಗಿ ಹಾರೈಸುತ್ತೇನೆ.

ನನ್ನಲ್ಲಿ ಒಂದು ಅಸಮಾಧಾನ ನನ್ನನ್ನು ಕಾಡುತ್ತಿದೆ. ಆ ಅಸಮಾಧಾನವಿರುವುದು ಮಾಧ್ಯಮದವರ ಮೇಲೆ. ಸರಿಗಮಪ ಮುಗಿದು ತಿಂಗಳುಗಳೇ ಕಳೆದು ಹೋಗಿವೆ. ಆದರೆ ನ್ಯೂಸ್ ಚಾನೆಲ್ ಮತ್ತು ಇತರೆ ಚಾನೆಲ್ ಗಳಲ್ಲಿ ಹನುಮಂತಣ್ಣನ ಹವಾ ಮಾತ್ರ ನಿಂತಿಲ್ಲ. ಸರಿಗಮಪ ವಿಜೇತ ಕೀರ್ತನ ಹೊಳ್ಳಗೆ ಇಲ್ಲದ ಹೊಗಳಿಕೆ ರನ್ನರ್ ಆಫ್ ಗೆ ಏಕೆ? ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.

‘ಹೊಗಳಿ… ಹೊಗಳಿ… ಎನ್ನ ಶೂಲ ಕಂಬಕ್ಕೆ ಏರಿಸಿದರಯ್ಯಾ?’ ಎನ್ನುವ ಬಸವಣ್ಣವರ ವಚನ ಇಲ್ಲಿ ನೆನಪಿಗೆ ಬರುತ್ತದೆ. ಹೊಗಳಿಕೆ ಎನ್ನುವುದು ಶೂಲಕ್ಕೆ ಸಮಾನ. ಮಾಧ್ಯಮದವರು ಪ್ರತಿಭೆಗಳಿಗೆ ಪ್ರೋತ್ಸಾಹಿಸಲಿ. ಅವರ ದಾರಿಗೆ ನೆರವಾಗಲಿ. ಅದನ್ನು ಬಿಟ್ಟು ಹೊಗಳಿ ಹೊಗಳಿ ಅವರನ್ನು ಅಟ್ಟದಿಂದ ತಳ್ಳುವುದು ಬೇಡ.

ಮಾಧ್ಯಮದವರು ತಮ್ಮ TRP ಗಾಗಿ ಮುಗ್ಧ ಮನಸ್ಸಿನ ಜೊತೆ ಆಟವಾಡುವುದನ್ನು ನಿಲ್ಲಿಸಬೇಕಿದೆ. ಈ ಹಿಂದೆ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದ ರಾಕೇಶ್ ನ ಕತೆ ಹಳೆಯದಾದರೂ ಅವನನ್ನು ಮರೆಯುವಂತಿಲ್ಲ. ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋನಲ್ಲಿ ಗೆದ್ದು ಹೊರಗೆ ಬಂದ. ಆ ಮೇಲೆ ಅವನನ್ನು ಹೀಗೆ ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿದ್ದರು. ರಾಕೇಶನಿಗೆ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ಅನಂತರ ಅವನಲ್ಲಿದ್ದ ನೂರೆಂಟು ಕನಸ್ಸುಗಳು ಚಿಗುರೊಡೆದವು. ಮುಂದೆ ಅವನ ಕನಸ್ಸುಗಳು ಹೆಮ್ಮರವಾದವು. ಉಜ್ವಲ ಭವಿಷ್ಯವನ್ನು ಕಾಣಬೇಕಿದ್ದ ರಾಕೇಶನ ಬದುಕು ಕತ್ತಲಲ್ಲಿ ಮುಳುಗಿ ಹೋಯಿತು.ಕೊನೆಗೆ ಅವನ ಬದುಕಿನ ಅಂತ್ಯವನ್ನು ಅವನೇ ಕಂಡು ಕೊಂಡ. ಮುಗ್ಧ ರಾಕೇಶ ತನ್ನ ಹಳ್ಳಿಯಲ್ಲಿ ಏನೋ ಒಂದು ಕೆಲಸವನ್ನು ಮಾಡಿಕೊಂಡು ಹಾಯಾಗಿದ್ದ. ಅವನಿಗೆ ಆಸೆ ಹುಟ್ಟಿಸಿ, ಹೊಗಳಿ ಅಟ್ಟಕ್ಕೆ ಏರಿಸಿದ್ದು ಇದೇ ಮಾಧ್ಯಮದವರು.

ಹನುಮಂತನ ತಾಯಿ ಕೂಡ ಹನುಮಂತನಿಗೆ ಸರಿಗಮಪಗೆ ಕಳುಹಿಸಲು ನಿರಾಕರಿಸಿದ್ದರಂತೆ. ಏಕೆಂದರೆ ತಮ್ಮ ಹಿರಿಯ ಮಗ ಇದೇ ರೀತಿ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋಗೆ ಹೋಗಿ ಬಂದ ಮೇಲೆ ಸರಿಯಾದ ದುಡಿಮೆ ಇಲ್ಲದೆ ಬದುಕನ್ನು ಅದ್ವಾನ ಮಾಡಿಕೊಂಡಿದ್ದನಂತೆ. ಆ ತಪ್ಪು ಇನ್ನೊಬ್ಬ ಮಗನಿಗೂ ಆಗಬಾರದು ಎಂದು ಸರಿಗಮಪಗೆ ಹೋಗದಂತೆ ತಡೆದಿದ್ದರಂತೆ. ಇದನ್ನು ಮಾಧ್ಯಮದಲ್ಲೇ ಬಿತ್ತರಿಸಲಾಗಿತ್ತು. ಇವುಗಳನ್ನೆಲ್ಲ ನೋಡುವಾಗ ಆ ಮುಗ್ಧ ಜನರ ಮೇಲೆ ಮಾಧ್ಯಮದ ಪ್ರಭಾವ ಎಷ್ಟರ ಮಟ್ಟಿಗೆ ಬೀರಿರಬಹುದು ಎಂದು ತಿಳಿದುಕೊಳ್ಳಬೇಕು.

ಅಷ್ಟಾಗ್ಯೂ ಸರಿಗಮಪ ಸೀಸನ್ ೧೫ರ ವಿಜೇತ ಕೀರ್ತನ ಹೊಳ್ಳ. ರನ್ನರ್ ಆಫ್ ಆದ ಹನುಮಂತನನ್ನು ಹೆಜ್ಜೆ ಹೆಜ್ಜೆಗೂ ಎಲ್ಲಿ ಹೋದ? ಏನು ಮಾಡುತ್ತಿದ್ದಾನೆ? ಎಂದು ಹಿಂಬಾಲಿಸುವ ಮಾಧ್ಯಮದವರು ಹೀಗೆ ಸದಾ ಕಾಲ ಹನುಮನಿಗೆ ಬೆಂಬಲ ನೀಡುತ್ತಾರೆಯೇ ಅಥವಾ ನಡು ನೀರಲ್ಲಿ ಕೈ ಬಿಡುತ್ತಾರೋ ಗೊತ್ತಿಲ್ಲ. ಆದರೆ ಗೆದ್ದ ಕೀರ್ತನ ಹೊಳ್ಳ ನತ್ತ ಸ್ವಲ್ಪ ಮಟ್ಟಿಗಾದರೂ ಕಣ್ಣಾಡಿಸಲಿ, ಏಕೆಂದರೆ ಕೀರ್ತನನಿಗೆ ಹನುಮಂತನ ಅರ್ಧದಷ್ಟು ಪ್ರಚಾರ ಸಿಗಲಿಲ್ಲ.ಕೊನೆ ಪಕ್ಷ ಕೀರ್ತನ ಪಾಲಿಗೆ ಗೆಲುವು ಎಷ್ಟರ ಮಟ್ಟಿಗೆ ಯಶಸ್ಸು ತಂದಿತು ಎಂದು ಕೂಡ ಜನರಿಗೆ ಗೊತ್ತಾಗಲೇ ಇಲ್ಲ.

ಅಷ್ಟೇ ಅಲ್ಲ ಸರಿಗಮಪದಲ್ಲಿ ಭಾಗವಹಿಸಿದಂತಹ ಇತರೆ ಸ್ಪರ್ಧಿಗಳಿಗೆ ಗೆಲುವು ಸಿಗದಿದ್ದರೂ, ದೊಡ್ಡ ವೇದಿಕೆಯಲ್ಲಿ ಹಾಡಿ ಶೋತೃಗಳ ಮನಸ್ಸನ್ನು ಗೆದ್ದವರು. ಅವರ ಬದುಕಿನಲ್ಲಿ ಸರಿಗಮಪ ವೇದಿಕೆಯಿಂದ ಏನೆಲ್ಲ ಬದಲಾವಣೆಗಳಾದವು ಎಂದು ನೋಡುವ ಕುತೂಹಲ ಎಲ್ಲ ಪ್ರೇಕ್ಷಕರಿಗೂ ಇರುತ್ತದೆ. ಆದರೆ ಮಾಧ್ಯಮದವರಿಗೆ ಹನುಮಂತ ಬಿಟ್ಟರೆ ಬೇರೆ ಯಾರು ಕಾಣುತ್ತಿಲ್ಲವೋ ಏನೋ? ಗೊತ್ತಿಲ್ಲ. ‘ಪ್ರತಿಭೆ’ ಎನ್ನುವ ಮಾತು ಬಂದಾಗ ಮಾಧ್ಯಮದವರು ಎಲ್ಲರನ್ನು ಸರಿ ಸಮಾನರನ್ನಾಗಿ ನೋಡಬೇಕು ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಮುಂಬರುವ ಯುವ ಗಾಯಕರಿಗೆ ಸ್ಪೂರ್ತಿಯ ಸೆಲೆಯಾಗಬೇಕೇ ವಿನಃಹ ನಿರಾಸೆಯಾಗಬಾರದು.

ಲೇಖನ : ಶಾಲಿನಿ ಪ್ರದೀಪ್

ak.shalini@outlook.com

 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW